ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 39 ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಆದರೆ, ವಿಪಕ್ಷಗಳ ಮೈತ್ರಿಯಾದ ಮಹಾ ವಿಕಾಸ್ ಅಘಾಡಿಯ ಸೀಟು ಹಂಚಿಕೆ ಒಪ್ಪಂದದಂತೆ 85 ಸೀಟು ಕಾಂಗ್ರೆಸ್‌ಗೆ ಹಂಚಿಕೆಯಾಗಿದ್ದರೂ ಪಕ್ಷವೂ ಇಬ್ಬರು ಹೆಚ್ಚುವರಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಪಕ್ಷವು ಇದುವರೆಗೆ 87 ಅಭ್ಯರ್ಥಿಗಳನ್ನು ಘೋಷಿಸಿದೆ.
288 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್), ಮತ್ತು ಶಿವಸೇನೆ (ಉದ್ಧವ್ ಠಾಕ್ರೆ) ಒಳಗೊಂಡ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಪಕ್ಷಗಳು ತಲಾ 85 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಸೀಟು ಹಂಚಿಕೆ ಒಪ್ಪಂದವಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಶನಿವಾರ ಸಂಜೆ ಕಾಂಗ್ರೆಸ್ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ 16 ಅಭ್ಯರ್ಥಿಗಳಿದ್ದರೆ, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳಿದ್ದರು. ಈ ನಡುವೆ ನಾಗ್ಪುರ ದಕ್ಷಿಣ ಕ್ಷೇತ್ರಕ್ಕಾಗಿ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಹಕ್ಕು ಮಂಡಿಸುತ್ತಿದ್ದರೂ, ಈ ವಿವಾದಿತ ಕ್ಷೇತ್ರದಲ್ಲಿ ಕಾಂಗ್ರೆಸ್ ಗಿರೀಶ್ ಪಾಂಡವ್ ಅವರನ್ನು ಕಣಕ್ಕಿಳಿಸಿದೆ. ಪಕ್ಷವು 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.
ಶುಕ್ರವಾರ ಸಂಜೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಯಿತು. ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಮತ್ತು ರಾಜ್ಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಭಾಗವಾಗಿ ಎಲ್ಲಾ ಘಟಕ ಪಕ್ಷಗಳಿಗೆ ಪ್ರಾತಿನಿಧ್ಯ ನೀಡಲಾಗುವುದು ಎಂದು ಎಐಸಿಸಿ ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. “ಸಮಾಜವಾದಿ ಪಕ್ಷ, ಸಿಪಿಎಂ, ಸಿಪಿಐ ಮತ್ತು ಎಎಪಿ ಮಹಾ ವಿಕಾಸ್ ಅಘಾಡಿಯ ಭಾಗವಾಗಿದೆ. ಎಲ್ಲ ಪಕ್ಷಗಳಿಗೂ ಪ್ರಾತಿನಿಧ್ಯ ನೀಡುತ್ತಿದ್ದೇವೆ, ಆದರೆ ಸೀಟುಗಳು ಸೀಮಿತವಾಗಿವೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ, ಹಲವಾರು ಹಾಲಿ ಶಾಸಕರನ್ನು ಉಳಿಸಿಕೊಂಡಿದ್ದು, ನಾನಾ ಪಟೋಲೆ ಮತ್ತು ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ಸೇರಿದಂತೆ ಹಿರಿಯ ನಾಯಕರನ್ನು ಕಣಕ್ಕಿಳಿಸಿದೆ. ಪಕ್ಷವು ನಾಗ್ಪುರ ಉತ್ತರ ಮತ್ತು ಸಂಗಮ್ನೇರ್‌ನಿಂದ ಮಾಜಿ ಸಚಿವರಾದ ನಿತಿನ್ ರಾವತ್ ಮತ್ತು ಬಾಳಾಸಾಹೇಬ್ ಥೋರಟ್ ಅವರನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ: ಆಪ್ ಸರ್ಕಾರದ ವಿರುದ್ಧ ಪ್ರತಿಭಟಿಸಿ ಯಮುನಾ ನದಿಯಲ್ಲಿ ಮುಳುಗೆದ್ದಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ಆಸ್ಪತ್ರೆಗೆ ದಾಖಲು
ಆಪ್ ಸರ್ಕಾರದ ವಿರುದ್ಧ ಪ್ರತಿಭಟಿಸಿ ಯಮುನಾ ನದಿಯಲ್ಲಿ ಮುಳುಗೆದ್ದಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ಆಸ್ಪತ್ರೆಗೆ ದಾಖಲು


