ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಮುಂಚೆ ರಾಜ್ಯದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಒಕ್ಕೂಟಕ್ಕಿಂತ ಸುಮಾರು ಏಳು ಪಟ್ಟು ಹೆಚ್ಚು ಹಣವನ್ನು ಸಾಮಾಜಿಕ ಮಾಧ್ಯಮದ ತಮ್ಮ ಅಧೀಕೃತ ಅಲ್ಲದ ಬೆಂಬಲಿಗ ಖಾತೆಗಳ (Shadow Account) ಮೂಲಕ ಜಾಹಿರಾತಿಗಾಗಿ ಖರ್ಚು ಮಾಡಿದೆ ಎಂದು ವರದಿಯೊಂದು ಹೇಳಿದೆ. ಮಹಾರಾಷ್ಟ್ರ
ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷಗಳು ಇದ್ದರೆ, ಪ್ರತಿಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ್ ಅಘಾಡಿಯಲ್ಲಿ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇವೆ. ಮಹಾರಾಷ್ಟ್ರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜಾರ್ಖಂಡ್ ಚುನಾವಣೆಯ ಜೊತೆಗೆ ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದೆ.
“ಮಹಾರಾಷ್ಟ್ರಾಸ್ ಶ್ಯಾಡೋ ಪಾಲಿಟಿಕ್ಸ್: ಹೌ ಮೆಟಾ ಪರ್ಮಿಟ್ಸ್, ಪ್ರಾಫಿಟ್ಸ್ ಫ್ರಂ ಆಂಡ್ ಪ್ರಮೋಟ್ ಶ್ಯಾಡೋ ಪೊಲಿಟಿಕಲ್ ಅಡ್ವಟೈಸ್‌ಮೆಂಟ್” ಎಂಬ ಶೀರ್ಷಿಕೆಯ ವರದಿಯನ್ನು ಟೆಕ್ ಜಸ್ಟಿಸ್ ಲಾ ಪ್ರಾಜೆಕ್ಟ್, ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್, ಇಂಡಿಯಾ ಸಿವಿಲ್ ವಾಚ್ ಇಂಟರ್‌ನ್ಯಾಶನಲ್, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ದಲಿತ ಐಕ್ಯತಾ ವೇದಿಕೆ ಜಂಟಿಯಾಗಿ ಪ್ರಕಟಿಸಿದೆ.
ಮಹಾಯುತಿ ಮೈತ್ರಿಕೂಟವು ತಮ್ಮ ಅಧೀಕೃತ ಅಲ್ಲದ ಬೆಂಬಲಿಗ ಖಾತೆಗಳ ಮೂಲಕ ಜಾಹೀರಾತಿಗಾಗಿ 3.32 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯು ಹೇಳಿದೆ. ಆದರೆ ಮಹಾ ವಿಕಾಸ್ ಅಘಾಡಿ ಆಗಸ್ಟ್ 5 ಮತ್ತು ನವೆಂಬರ್ 2 ರ ನಡುವೆ 50.47 ಲಕ್ಷ ರೂಪಾಯಿಗಳನ್ನು ಜಾಹಿರಾತಿಗಾಗಿ ಖರ್ಚು ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿನ ಜಾಹೀರಾತುಗಳು ಸೇರಿದಂತೆ ಎಲ್ಲಾ ಬೆಂಬಲಿಗ ರಾಜಕೀಯ ಜಾಹೀರಾತುಗಳು ಮತದಾನದ ಅವಧಿಯಲ್ಲಿ ಚುನಾವಣಾ ಆಯೋಗದಿಂದ ಪೂರ್ವ ಪ್ರಮಾಣೀಕರಣದ ಅಗತ್ಯವಿದೆ ಎಂದು ವರದಿಯು ಉಲ್ಲೇಖಿಸಿದೆ.
ಆಡಳಿತರೂಢ ಮಹಾಯುತಿ ಮೈತ್ರಿಯು ಕನಿಷ್ಠ ಐವತ್ತಾರು ಪೇಜ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸುತ್ತದೆ ಎಂದು ವರದಿ ಹೇಳಿದೆ. ಆದರೆ ಮಹಾ ವಿಕಾಸ್ ಅಘಾಡಿ ಕೇಲವ ನಾಲ್ಕು ಪೇಜ್‌ಗಳನ್ನು ನಡೆಸುತ್ತಿವೆ ಎಂದು ತಿಳಿಸಿದೆ. ಆಡಳಿತಾರೂಢ ಮಹಾಯುತಿ ಒಕ್ಕೂಟವು ತನ್ನ ಬೆಂಬಲಿಗ ಖಾತೆಗಳ ಮೂಲಕ ಸುಮಾರು 33,000 ಜಾಹೀರಾತುಗಳನ್ನು ಹಾಕಿದ್ದರೆ, ವಿಪಕ್ಷಗಳು ಮೈತ್ರಿಗೆ ಸಂಬಂಧಿಸಿದ ಪುಟಗಳಲ್ಲಿ ಆಗಸ್ಟ್ 5 ಮತ್ತು ನವೆಂಬರ್ 2 ರ ನಡುವೆ ಕೇವಲ 1,000 ಕ್ಕಿಂತ ಕಡಿಮೆ ಜಾಹೀರಾತುಗಳನ್ನು ನೀಡಿವೆ ಎಂದು ವರದಿ ಹೇಳಿದೆ.
ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 2.61 ಕೋಟಿ ರೂ. ಜಾಹಿರಾತಿಗಾಗಿ ಖರ್ಚು ಮಾಡಿದ್ದರೆ, ಶಿಂಧೆ ನೇತೃತ್ವದ ಶಿವಸೇನೆ 56.92 ಲಕ್ಷ ರೂ. ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ 35.86 ಲಕ್ಷ ರೂ.ಗಳನ್ನು ಜಾಹಿರಾತಿಗಾಗಿ ಖರ್ಚು ಮಾಡಿದೆ.
“ಬಿಜೆಪಿಯು ಒಂದೊಂದು ವಿಭಿನ್ನ ಥೀಮ್‌ನೊಂದಿಗೆ ಹಲವು ಬೆಂಬಲಿಗ ಖಾತೆಗಳನ್ನು ನಡೆಸುತ್ತಿದೆ” ಎಂದು ವರದಿ ಹೇಳಿದೆ.
“ಬಿಜೆಪಿಯ ಬೆಂಬಲಿಗ ಪುಟಗಳ ಮೂಲಕ ಹರಿಬಿಡಲಾದ ವಿಷಯವು ಇತರರಿಗಿಂತ ಭಿನ್ನವಾಗಿದ್ದು, ಅದು ಬಹಿರಂಗವಾಗಿ ಇಸ್ಲಾಮೋಫೋಬಿಕ್, ಭಯ ಹುಟ್ಟಿಸುವ ಮತ್ತು ದ್ವೇಷದ ಮಾತುಗಳಿಂದ ತುಂಬಿರುವ ಜಾಹಿರಾತುಗಳಿಂದ ತುಂಬಿದೆ. ಈ ಜಾಹೀರಾತುಗಳು ಮೆಟಾದ ನೀತಿಗಳನ್ನು ಉಲ್ಲಂಘಿಸುತ್ತಿವೆ ಎಂಬುದಕ್ಕೆ ಹಲವು ಪುರಾವೆಗಳ ಹೊರತಾಗಿಯೂ, ಮೆಟಾ ಅವುಗಳನ್ನು ತೆಗೆದುಹಾಕುವುದಿಲ್ಲ. ಜೊತೆಗೆ ಅಧಿಕೃತ ಜಾಹೀರಾತು ಪುಟಗಳಿಗಿಂತ ಹೆಚ್ಚಾಗಿ ಇದನ್ನು ಪ್ರಚಾರ ಮಾಡುತ್ತದೆ” ಎಂದು ವರದಿ ಹೇಳಿದೆ.
ಬಿಜೆಪಿಯ ಬೆಂಬಲಿಗ ಖಾತೆಗಳು ದ್ವೇಷಪೂರಿತ ಮತ್ತು ಕೋಮು ವಿಭಜಕ ವಿಷಯವನ್ನು ಮುಂದಿಡುತ್ತಿವೆ ಎಂದು ವರದಿ ಹೇಳಿದೆ.
“ಬಿಜೆಪಿಯ ಅಧಿಕೃತ ಪುಟವು ಪ್ರಾಥಮಿಕವಾಗಿ ಅಭಿವೃದ್ಧಿ ಮತ್ತು ಕೃಷಿಯ ಮೇಲೆ ಜಾಹೀರಾತುಗಳನ್ನು ಪ್ರಕಟಿಸುತ್ತದೆ. ಇದರಲ್ಲಿ ಮಹಾರಾಷ್ಟ್ರ ಸರ್ಕಾರದ ಅಧಿಕೃತ ಪುಟಗಳು ಹೇಳಿರುವ ವಿಷಯಗಳಿಗೆ ನಿಕಟ ಹೋಲಿಕೆಯನ್ನು ಹೊಂದಿರುತ್ತದೆ. ಆದರೆ, ಅವರ ಬೆಂಬಲಿಗ ಬಿಜೆಪಿ ಖಾತೆಗಳ ಜಾಲವು ಪ್ರಧಾನವಾಗಿ ಜಾತಿ ಕೋಟಾದ ಸುತ್ತ ನಿರೂಪಣೆಗಳನ್ನು ಹುಟ್ಟುಹಾಕುತ್ತದೆ. ವಿಪಕ್ಷಗಳು ಮರಾಠರ ಹಕ್ಕುಗಳನ್ನು ಎತ್ತಿಹಿಡಿಯುತ್ತಿಲ್ಲ ಎಂದು ದಾಳಿ ಮಾಡಲು ಅದನ್ನು ಬಳಸುತ್ತದೆ.” ಎಂದು ವರದಿ ಉಲ್ಲೇಖಿಸಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಮಹಾ ವಿಕಾಸ್ ಅಘಾಡಿ ನಡೆಸುತ್ತಿರುವ ಬೆಂಬಲಿಗ ಪುಟಗಳಲ್ಲಿ ಯಾವುದೇ ದ್ವೇಷ ಭಾಷಣ ಅಥವಾ ಕೋಮುವಾದದ ವಿಷಯಗಳು ಹೊಂದಿರುವುದಿಲ್ಲ ಎಂದು ಅದು ಹೇಳಿಕೊಂಡಿದೆ.
ಬಿಜೆಪಿಯ ಬೆಂಬಲಿಗ ಪುಟಗಳು ಬಿಜೆಪಿಯ ಅಧಿಕೃತ ಪುಟಕ್ಕಿಂತ ಹತ್ತು ಪಟ್ಟು ಹೆಚ್ಚಿನ ಕಾಮೆಂಟ್‌ಗಳನ್ನು ಪಡೆಯುತ್ತವೆ ಎಂದು ವರದಿ ಹೇಳಿದೆ. “ಇಂತದ್ದೆ ರಾಜಕೀಯ ಪಕ್ಷಗಳ ಪುಟ ಎಂದು ತಿಳಿಯದಂತೆ ರಾಜಕೀಯವಾಗಿ ಸೂಕ್ಷ್ಮ ವಿಷಯವನ್ನು ಪ್ರಸಾರ ಮಾಡಲು ಇಂತಹ ಬೆಂಬಲಿಗ ಖಾತೆಗಳನ್ನು ಬಳಸಲಾಗುತ್ತದೆ” ಎಂದು ವರದಿ ಹೇಳಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಚುನಾವಣೋತ್ತರ ಹಿಂಸಾಚಾರದಲ್ಲಿ ದಲಿತರ ಗ್ರಾಮಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಮಧ್ಯಪ್ರದೇಶ: ಚುನಾವಣೋತ್ತರ ಹಿಂಸಾಚಾರದಲ್ಲಿ ದಲಿತರ ಗ್ರಾಮಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು


