ಮಹಾರಾಷ್ಟ್ರದ ಪ್ರಮುಖ ರಾಜಕೀಯ ವಿರೋಧಿ ಮೈತ್ರಿಗಳಾದ ವಿಪಕ್ಷ ಮಹಾ ವಿಕಾಸ್ ಅಘಾಡಿ ಮತ್ತು ಆಡಳಿತಾರೂಢ ಮಹಾಯುತಿ ಇದುವರೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ತಮ್ಮ ಪಾಳಯದಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ವಿಫಲವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಪಕ್ಷದ ನಾಯಕರು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೂಕ್ಷ್ಮವಾಗಿ ಹೊಂದಿಸುವಲ್ಲಿ ತಲ್ಲೀನರಾಗಿದ್ದಾರೆ. ಮಹಾರಾಷ್ಟ್ರ
ಮತ್ತೊಂದೆಡೆ, ಆಡಳಿತರೂಢ ಮಹಾಯುತಿ ಮೈತ್ರಿಯ ಪಕ್ಷಗಳು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಹೆಚ್ಚಿನ ಸ್ಥಾನಗಳಿಗಾಗಿ ಹರಸಾಹಸ ಮಾಡುತ್ತಿದ್ದಾರೆ. ಆದರೂ ಬಿಜೆಪಿ ತನ್ನ ಹಠ ಮುಂದುವರೆಸಿದೆ ಎಂದು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್), ಮತ್ತು ಶಿವಸೇನೆ (ಉದ್ಧವ್ ಠಾಕ್ರೆ) ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ತಲಾ 85 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರೂ, ಉಳಿದ 33 ಸ್ಥಾನಗಳ ಬಗ್ಗೆ ಇನ್ನೂ ಒಪ್ಪಂದಕ್ಕೆ ಬಂದಿಲ್ಲ. ಈ ನಡುವೆ, ಇಂಡಿಯಾ ಒಕ್ಕೂಟದ ಮಿತ್ರ ಪಕ್ಷ ಸಮಾಜವಾದಿ ಪಕ್ಷ ಕೂಡಾ ಐದು ಸ್ಥಾನಗಳಿಗೆ ಒತ್ತಾಯಿಸುತ್ತಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಚುನಾವಣಾ ಸಮಿತಿ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಅಭ್ಯರ್ಥಿಗಳ ಮೂರನೇ ಮತ್ತು ಅಂತಿಮ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗುವುದು. “ನಾವು ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಮತ್ತು ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸುತ್ತದೆ” ಎಂದು ಪಟೋಲೆ ಹೇಳಿದ್ದಾರೆ. ಮಹಾರಾಷ್ಟ್ರ
ಮಹಾ ವಿಕಾಸ್ ಅಘಾಡಿಯ ಪಕ್ಷಗಳ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳನ್ನು ಕಾಂಗ್ರೆಸ್‌ನ ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೆನ್ನಿತ್ತಲ ತಳ್ಳಿಹಾಕಿದ್ದಾರೆ. “ಕಾಂಗ್ರೆಸ್‌ನ ಚುನಾವಣಾ ಸಮಿತಿ ಮಹಾರಾಷ್ಟ್ರದ ಉಳಿದ ಸ್ಥಾನಗಳ ಬಗ್ಗೆ ಚರ್ಚಿಸಿದೆ. ನಾಳೆಯೊಳಗೆ ಸಂಪೂರ್ಣ ಪಟ್ಟಿ ಹೊರಬೀಳಲಿದೆ. ಮಹಾ ವಿಕಾಸ್ ಅಘಾಡಿ ಒಗ್ಗಟ್ಟಾಗಿದೆ,” ಎಂದು ಅವರು ಹೇಳಿದ್ದಾರೆ.
ಇತ್ತ ಆಡಳಿತರೂಢ ಮಹಾಯುತಿ ಮೈತ್ರಿಯಲ್ಲಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡದಿರಲು ಬಿಜೆಪಿ ನಿರ್ಧರಿಸಿದೆ. ದೆಹಲಿಯ ಸಭೆಯಲ್ಲಿ ಸಿಎಂ ಶಿಂಧೆ ಮಹಾಯುತಿ ಮೈತ್ರಿಗಾಗಿ ಮಹಾ ವಿಕಾಸ್ ಅಘಾಡಿ ಮೈತ್ರಿಯ ರೀತಿಯ ಸೂತ್ರವನ್ನು ಮಂಡಿಸಿದರು ಎಂದು ಮೂಲಗಳು ತಿಳಿಸಿವೆ. ಆದರೆ ಅದಕ್ಕೆ ಬಿಜೆಪಿ ನಾಯಕತ್ವ ಮಣಿಯಲು ನಿರಾಕರಿಸಿದೆ.
“ಶಿಂಧೆ ಅವರು 100 ಸ್ಥಾನಗಳನ್ನು ಕೇಳಿದ್ದಾರೆ. ಆದರೆ ಬಿಜೆಪಿ ಅವರಿಗೆ 80 ಸ್ಥಾನಗಳನ್ನು ನೀಡುವ ಆಫರ್ ನೀಡಿದೆ. ಅದೇ ರೀತಿ, ಅಜಿತ್ ಪವಾರ್ 60 ಸ್ಥಾನಗಳನ್ನು ಕೇಳಿದ್ದಾರೆ. ಆದರೆ ಬಿಜೆಪಿ ಅವರಿಗೆ ಗರಿಷ್ಠ 55 ಸ್ಥಾನಗಳನ್ನು ನೀಡುವ ಪ್ರಸ್ತಾಪ ಮಾಡಿದೆ” ಎಂದು ಬೆಳವಣಿಗೆಯ ಬಗ್ಗೆ ಶಿವಸೇನೆಯ ಹಿರಿಯ ನಾಯಕ ಹೇಳಿದ್ದಾರೆ.
“ಎನ್‌ಸಿಪಿ ಚಿಹ್ನೆಯಡಿ ಸ್ಪರ್ಧಿಸಲಿರುವ ಬಿಜೆಪಿ ನಾಯಕರಿಗೂ ಅಜಿತ್ ಅವಕಾಶ ಕಲ್ಪಿಸಬೇಕು. ಆದ್ದರಿಂದ, ಎನ್‌ಸಿಪಿ ನಾಯಕರಿಗೆ ಅವರ ಸ್ವಂತ ಪಕ್ಷದೊಳಗೆ ಜಾಗ ಕುಗ್ಗುತ್ತಿದೆ ಆದರೆ ಬಿಜೆಪಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುತ್ತಿದೆ” ಎಂದು ಶಿವಸೇನೆ ನಾಯಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗುತ್ತಿಗೆ ನೌಕರರು ಮಾತೃತ್ವ ರಜೆ, ಕಾಯ್ದೆಯ ಎಲ್ಲ ಪ್ರಯೋಜನಗಳಿಗೆ ಅರ್ಹರು: ಮದ್ರಾಸ್ ಹೈಕೋರ್ಟ್


