ನವೆಂಬರ್ 23ರಂದು ಪ್ರಕಟಗೊಂಡ ವಿಧಾನಸಭಾ ಚುನಾವಣೆಯ ಫಲಿತಾಂಶದ ಅಂಕಿ-ಅಂಶಗಳಿಂದ ಅಸಮಧಾನಗೊಂಡಿರುವ ಮಹಾರಾಷ್ಟ್ರದ ಗ್ರಾಮವೊಂದರ ಜನರು, ತಾವೇ ಖಾಸಗಿಯಾಗಿ ಇಂದು (ಡಿ.3) ಮರು ಮತದಾನ ಆಯೋಜಿಸಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದ ಮಾಲ್ಶಿರಾಸ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರ್ಕಡವಾಡಿ ಗ್ರಾಮದ ಜನರು ಬ್ಯಾಲೆಟ್ ಪೇಪರ್ (ಮತ ಪತ್ರ) ಬಳಸಿ ಮರು ಮತದಾನ ನಡೆಸಲಿದ್ದಾರೆ.
ಪರಿಶಿಷ್ಟ ಜಾತಿಗೆ (ಎಸ್‌ಟಿ) ಮೀಸಲಾದ ಮಾಲ್ಶಿರಾಸ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ಉತ್ತಮ್ ಜನ್ಕರ್ ಅವರು ಬಿಜೆಪಿ ಅಭ್ಯರ್ಥಿ ರಾಮ್ ಸತುಪ್ತೆ ವಿರುದ್ದ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋತರೂ ಅವರು ಮರ್ಕಡವಾಡಿ ಗ್ರಾಮದಲ್ಲಿ ಪಡೆದ ಮತಗಳ ಸಂಖ್ಯೆ ಗೆದ್ದ ಅಭ್ಯರ್ಥಿಗಿಂತ ಹೆಚ್ಚಿದೆ. ಇದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಹೆಚ್ಚಿನ ಮತದಾರರು ಗೆದ್ದ ಎನ್‌ಸಿಪಿ ಅಭ್ಯರ್ಥಿಯ ಬೆಂಬಲಿಗರಿದ್ದೇವೆ. ನಮ್ಮ ಮತಗಳೆಲ್ಲ ಅವರಿಗೇ ಹೋಗಿದೆ. ಹೀಗಿದ್ದರೂ, ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತ ಪಡೆಯಲು ಹೇಗೆ ಸಾಧ್ಯ? ಚುನಾವಣಾ ಆಯೋಗದ ಅಂಕಿ-ಅಂಶಗಳು ಸರಿಯಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರಾದ ರಂಜೀತ್ ಮರ್ಕಡ್ ಈ ಬಗ್ಗೆ ಹೇಳಿಕೆ ನೀಡಿ “ನವೆಂಬರ್ 20ರಂದು ನಡೆದ ಚುನಾವಣೆಯಲ್ಲಿ ಗ್ರಾಮದ 2000 ಮಂದಿ ಅರ್ಹ ಮತದಾರರ ಪೈಕಿ 1900ಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದರು. ನಮ್ಮ ಗ್ರಾಮದಲ್ಲಿ ಮತದಾರರು ಜನ್ಕರ್ ಮತ್ತು ಮೋಹಿತೆ ಪಾಟೀಲ್ ಕುಟುಂಬವನ್ನು ಬೆಂಬಲಿಸುತ್ತಾ ಬಂದಿದ್ದರು. ಆದರೆ, ಈ ಬಾರಿ ಜನ್ಕರ್‌ಗೆ 843 ಮತಗಳು ಬಂದಿದ್ದರೆ, ಸಾತ್ಪುತೆ 1003 ಮತಗಳನ್ನು ಪಡೆದಿದ್ದಾರೆ. ಚುನಾವಣಾ ಆಯೋಗದ ಅಂಕಿ ಅಂಶದ ಬಗ್ಗೆ ನಂಬಿಕೆ ಇಲ್ಲ. ಆದ್ದರಿಂದ ಡಿಸೆಂಬರ್ 3ರಂದು ಮತಪತ್ರಗಳ ಮೂಲಕ ಮರು ಮತದಾನ ಆಯೋಜಿಸಿ, ಮತ ಹಂಚಿಕೆ ಬಗ್ಗೆ ಪುರಾವೆ ತೋರಿಸಲಿದ್ದೇವೆ” ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಗ್ರಾಮಸ್ಥರೇ ಹಣ ಸಂಗ್ರಹಿಸಿ ಎಲ್ಲಾ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಹೆಸರನ್ನು ಒಳಗೊಂಡ ಮತಪತ್ರ ಮುದ್ರಿಸಿದ್ದಾರೆ. ಮತಪತ್ರದ ಮೂಲಕ ತಮ್ಮ ಹಕ್ಕು ಚಲಾಯಿಸುವಂತೆ ಬ್ಯಾನರ್‌ಗಳನ್ನೂ ಗ್ರಾಮದಲ್ಲಿ ಹಾಕಲಾಗಿದೆ. ಇಡೀ ಪ್ರಕ್ರಿಯೆಯನ್ನು ನಾವು ಅನುಸರಿಸಲಿದ್ದು, ಗ್ರಾಮಸ್ಥರೆಲ್ಲರೂ ಮತ ಚಲಾಯಿಸುವಂತೆ ಕೋರಿದ್ದೇವೆ ಎಂದು ಮತ್ತೋರ್ವ ಗ್ರಾಮಸ್ಥ ಅಮಿತ್ ವಾಘ್ಮೋರೆ ವಿವರಿಸಿದ್ದಾರೆ.
ಗ್ರಾಮಸ್ಥರ ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಲು ಸರ್ಕಾರಿ ಅಧಿಕಾರಿಯನ್ನು ನೇಮಿಸುವಂತೆ ಕೋರಲಾಗಿತ್ತು. ಅದನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ.
ಗ್ರಾಮಸ್ಥರ ನಡೆಗೆ ಸೊಲ್ಲಾಪುರ ಜಿಲ್ಲಾಡಳಿತ ಕಳವಳ ವ್ಯಕ್ತಪಡಿಸಿದ್ದು, ಇಂತಹ ಕ್ರಮಗಳು ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಖಾಸಗಿಯಾಗಿ ಮರು ಮತದಾನ ಮಾಡದಂತೆ ಸೂಚಿಸಿ ಹಲವು ಗ್ರಾಮಸ್ಥರಿಗೆ ಜಿಲ್ಲಾಡಳಿತ ನೋಟಿಸ್ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸೊಲ್ಲಾಪುರ ಎಸ್ಪಿ ಅತುಲ್ ಕುಲಕರ್ಣಿ ಮಾತನಾಡಿ, “ನಾವು ಮುಂಜಾಗ್ರತಾ ಸೂಚನೆಗಳನ್ನು ನೀಡಿದ್ದೇವೆ. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಗ್ರಾಮಸ್ಥರೊಂದಿಗೆ ಸಹಕರಿಸಲು ಮನವಿ ಮಾಡಿದ್ದೇವೆ. ಅನಧಿಕೃತ ಮರು ಮತದಾನ ಕೈಬಿಡುವಂತೆ ಜಿಲ್ಲಾಡಳಿತ ಮನವೊಲಿಸುವ ಪ್ರಯತ್ನ ಮಾಡುತ್ತಿದೆ” ಎಂದಿದ್ದಾರೆ.
ಎಚ್ಚರಿಕೆಗಳ ನಡುವೆಯೂ “ನಾವು ಮರು ಮತದಾನ ನಡೆಸಿಯೇ ತೀರುತ್ತೇವೆ” ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ನೂತನ ಶಾಸಕ ಉತ್ತಮ್ ಜನ್ಕರ್, ” ಗ್ರಾಮಸ್ಥರು ದೃಢ ಸಂಕಲ್ಪ ಮಾಡಿದ್ದಾರೆ. ಅವರು ಯಾವುದೇ ಸಮಸ್ಯೆಯಿಲ್ಲದೆ ಚುನಾವಣೆ ನಡೆಸಲಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ : ‘ಶೀಘ್ರದಲ್ಲೇ ಹೊಸ ವಕ್ಫ್ ಬೋರ್ಡ್ ರಚಿಸಲಾಗುವುದು..’; ಆಂಧ್ರಪ್ರದೇಶ ಸರ್ಕಾರದಿಂದ ಸ್ಪಷ್ಟನೆ


