ರಾಜ್ಯಾದ್ಯಂತ ಪ್ರತಿಭಟನೆಗಳ ನಂತರ ಮಹಾರಾಷ್ಟ್ರ ಸರ್ಕಾರ ಭಾನುವಾರ (ಜೂ.29) ಶಾಲೆಗಳಿಗೆ ತ್ರಿಭಾಷಾ ನೀತಿಯ ಕುರಿತ ತನ್ನ ವಿವಾದಾತ್ಮಕ ನಿರ್ಣಯಗಳನ್ನು ಹಿಂತೆಗೆದುಕೊಂಡಿದೆ.
ನೀತಿಯನ್ನು ಪರಿಶೀಲಿಸಲು ಮತ್ತು ಮುಂದಿನ ಹಂತಗಳನ್ನು ಶಿಫಾರಸು ಮಾಡಲು ಹೊಸ ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ವಿಜ್ಞಾನಿ ರಘುನಾಥ್ ಮಾಶೇಲ್ಕರ್ ಅವರ ಶಿಫಾರಸುಗಳ ಆಧಾರದ ಮೇಲೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತೃತೀಯ ಭಾಷಾ ನೀತಿಯ ನಿರ್ಧಾರವನ್ನು ಒಪ್ಪಿಕೊಂಡಿದ್ದರು ಎಂದು ಸಿಎಂ ಇದೇ ವೇಳೆ ಹೇಳಿದ್ದಾರೆ.
“ಶಿವಸೇನೆ (ಯುಬಿಟಿ) ಸದಸ್ಯರಲ್ಲಿ ಒಬ್ಬರು ಪ್ರಾಥಮಿಕ ಶಾಲೆಯಿಂದ ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸಲು ಶಿಫಾರಸು ಮಾಡಿದ್ದರು ಮತ್ತು ವಿದ್ಯಾರ್ಥಿಗಳು ಭಾಷೆಗಳನ್ನು ಸರಿಯಾಗಿ ಕಲಿಯಲು ಸಾಧ್ಯವಾಗುವಂತೆ ಪದವಿಯವರೆಗೆ ಮರಾಠಿ, ಇಂಗ್ಲಿಷ್ ಮತ್ತು ಹಿಂದಿಯನ್ನು ಕಡ್ಡಾಯಗೊಳಿಸಬೇಕು” ಎಂದು ಸೂಚಿಸಿದ್ದರು ಎಂದಿದ್ದಾರೆ.
ಆ ಸಮಯದಲ್ಲಿ ಉದ್ಧವ್ ಠಾಕ್ರೆ ಅವರೇ ವರದಿ ಮತ್ತು ಅದರ ಶಿಫಾರಸುಗಳನ್ನು ಜಾರಿಗೆ ತರಲು ಒಪ್ಪಿಕೊಂಡಿದ್ದರು ಎಂದು ಫಡ್ನವೀಸ್ ಹೇಳಿದ್ದಾರೆ.
“ಆದರೆ ಈಗ ಉದ್ಧವ್ ಠಾಕ್ರೆ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ ಮತ್ತು ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿಯನ್ನು ವಿರೋಧಿಸುತ್ತಿದ್ದಾರೆ” ಎಂದು ಫಡ್ನವೀಸ್ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಸರ್ಕಾರವು ವಾಸ್ತವವಾಗಿ ವಿದ್ಯಾರ್ಥಿಗಳು ಶಾಲೆಯಿಂದಲೇ ಮೂರನೇ ಭಾಷೆಯನ್ನು ಕಲಿಯಲು ಅವಕಾಶಗಳನ್ನು ಸೃಷ್ಟಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಹು ಭಾಷೆಗಳನ್ನು ಕಲಿಯಲು ಸರಿಯಾದ ವಯಸ್ಸು ಆಗಿರುವುದರಿಂದ, ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲಾ ಹಂತದಿಂದಲೇ ಬಹು ಭಾಷೆಗಳನ್ನು ಕಲಿಯುವುದನ್ನು ಪ್ರೋತ್ಸಾಹಿಸುತ್ತದೆ ಎಂದು ಫಡ್ನವೀಸ್ ಹೇಳಿದ್ದಾರೆ.
ಶಾಲೆಗಳಲ್ಲಿ ಯಾವುದೇ ಭಾಷೆಯನ್ನು ಹೇರುವ ಪರವಾಗಿ ಸರ್ಕಾರ ಇಲ್ಲ. ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸುವ ಬಗ್ಗೆ ಸಂಬಂಧಿತ ಎಲ್ಲರ ಜೊತೆ ಚರ್ಚೆ ಮತ್ತು ಸಮಾಲೋಚನೆ ನಡೆಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಸರ್ವಾನುಮತದ ನಿರ್ಧಾರವಾಗಿರುತ್ತದೆ” ಎಂದು ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ.
ಈ ವಿಷಯದ ಕುರಿತು ಸರ್ಕಾರದ ಜಾಗೃತಿ ಪ್ರಯತ್ನಗಳ ಭಾಗವಾಗಿ ಮಹಾರಾಷ್ಟ್ರ ಶಿಕ್ಷಣ ಸಚಿವ ದಾದಾ ಭೂಸೆ ಅವರು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಭೇಟಿಯಾಗಿದ್ದಾರೆ ಎಂದು ಸಿಎಂ ಫಡ್ನವಿಸ್ ತಿಳಿಸಿದ್ದಾರೆ.
ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ. ಹಾಗಾಗಿ, ಜುಲೈ 5 ರಂದು ಈ ಕ್ರಮದ ವಿರುದ್ಧ ನಡೆಸಲು ಉದ್ದೇಶಿಸಲಾದ ಮೆರವಣಿಗೆಯನ್ನು ರದ್ದುಗೊಳಿಸುವುದು ಈಗ ಠಾಕ್ರೆ ಸಹೋದರರ ಮೇಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಶನಿವಾರ ಹೇಳಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ಹಿಂದಿಯನ್ನು ಮೂರನೇ ಭಾಷೆಯಾಗಿ ಪರಿಚಯಿಸುವ ಸರ್ಕಾರದ ನಿರ್ಣಯವನ್ನು (ಜಿಆರ್) ರದ್ದುಗೊಳಿಸುವ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ‘ಬುದ್ಧಿವಂತ ನಿರ್ಧಾರ’ ತೆಗೆದುಕೊಂಡಿದ್ದಾರೆ. ಇದು ‘ಮರಾಠಿ ಏಕತೆಯ ವಿಜಯ’ ಎಂದಿದ್ದಾರೆ.
ಠಾಕ್ರೆ ಸಹೋದರರ ಹೆಚ್ಚುತ್ತಿರುವ ಪ್ರಭಾವ, ಅವರ ಹೊಸ ಏಕತೆ ಮತ್ತು ಜುಲೈ 5ರ ಮೆಗಾ ಮೆರವಣಿಗೆಯ ಸಂಭವನೀಯ ಪರಿಣಾಮವನ್ನು ರಾಜ್ಯ ಸರ್ಕಾರವು ಗ್ರಹಿಸಿದೆ. ಇದು ಮಹಾಯುತಿ ಸರ್ಕಾರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದೆ ಎಂದು ರಾವತ್ ಹೇಳಿಕೊಂಡಿದ್ದಾರೆ.
“ನಾವು ಜುಲೈ 5ರ ಮೆರವಣಿಗೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಠಾಕ್ರೆ ಬ್ರ್ಯಾಂಡ್ ಮತ್ತೊಮ್ಮೆ ದೃಢವಾಗಿ ಪುನಃ ಸ್ಥಾಪಿತವಾಗಿದೆ” ಎಂದಿದ್ದಾರೆ.
ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಶಿವಸೇನೆ (ಯುಬಿಟಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಜೂನ್ 17 ರ ನಿರ್ಣಯದ ಪ್ರತಿಗಳನ್ನು ಸುಟ್ಟುಹಾಕಲಾಗಿತ್ತು. ಪ್ರಾದೇಶಿಕ ಭಾಷೆಗಳ ವೆಚ್ಚದಲ್ಲಿ ಸರ್ಕಾರವು ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷ ಆರೋಪಿಸಿತ್ತು.
“ನಾವು ಸರ್ಕಾರದ ನಿರ್ಣಯದ ಪ್ರತಿಗಳನ್ನು ಸುಟ್ಟು ಹಾಕಿದ್ದೇವೆ. ಅಂದರೆ, ನಾವು ಅದನ್ನು ಸ್ವೀಕರಿಸುವುದಿಲ್ಲ. ನಾವು ಹಿಂದಿಯನ್ನು ವಿರೋಧಿಸುವುದಿಲ್ಲ, ಆದರೆ ಅದರ ಹೇರಿಕೆಯನ್ನು ನಾವು ಅನುಮತಿಸುವುದಿಲ್ಲ. ಸರ್ಕಾರಕ್ಕೆ ನಮ್ಮ ಪ್ರತಿಭಟನೆಯ ಹಿಂದಿನ ಕಾರಣ ಅರ್ಥವಾಗುತ್ತಿಲ್ಲ. ಮರಾಠಿಗೆ ಅನ್ಯಾಯವಾಗಿದೆ. ವಿದ್ಯಾರ್ಥಿಗಳ ಮೇಲೆ ನೀವು ಎಷ್ಟು ಒತ್ತಡ ಹೇರುತ್ತೀರಿ ಎಂಬುದು ಪ್ರಶ್ನೆ” ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ.
“ತ್ರಿಭಾಷಾ ನೀತಿಗೆ ಸಂಬಂಧಿಸಿದ ಎರಡೂ ಸರ್ಕಾರಿ ನಿರ್ಣಯಗಳನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ” ಎಂದು ಭಾನುವಾರ ಸಂಪುಟ ಸಭೆಯ ನಂತರ ಸಿಎಂ ಫಡ್ನವಿಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಈ ನೀತಿಯನ್ನು ಹೇಗೆ ಜಾರಿಗೆ ತರಬೇಕು ಎಂಬುದನ್ನು ಅಧ್ಯಯನ ಮಾಡಲು ಡಾ. ನರೇಂದ್ರ ಜಾಧವ್ ಅವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಲಾಗುವುದು. ಇದಕ್ಕೆ ಸಂಬಂಧಿತ ಎಲ್ಲರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ನಮಗೆ, ಈ ನೀತಿಯಲ್ಲಿ ಮರಾಠಿ ಕೇಂದ್ರಬಿಂದುವಾಗಿದೆ” ಎಂದು ಸಿಎಂ ಫಡ್ನವಿಸ್ ಹೇಳಿದ್ದಾರೆ.
ತ್ರಿಭಾಷಾ ನೀತಿ ನಿರ್ಣಯ ಮತ್ತು ಜನಾಕ್ರೋಶ
ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ 2020ರಲ್ಲಿ ಜಾರಿಗೆ ತಂದಿರುವ ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ಅಥವಾ ಹೊಸ ಶಿಕ್ಷಣ ನೀತಿಗೆ (ಎನ್‌ಇಪಿ) ಸಂಬಂಧಿಸಿದಂತೆ, ಮಹಾರಾಷ್ಟ್ರದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 1 ರಿಂದ 5ನೇ ತರಗತಿವರೆಗಿನ ಮಕ್ಕಳು ಮರಾಠಿ, ಇಂಗ್ಲಿಷ್ ಜೊತೆಗೆ ಮೂರನೇ ಭಾಷೆಯಾಗಿ ಹಿಂದಿ ಕಲಿಯುವುದನ್ನು ಸರ್ಕಾರ ಕಡ್ಡಾಯ ಮಾಡಿತ್ತು.
ಮೂರನೇ ಭಾಷೆಯಾಗಿ ಹಿಂದಿ ಕಡ್ಡಾಯಗೊಳಿಸಿ ಏಪ್ರಿಲ್ 16, 2025ರಂದು ಸರ್ಕಾರ ನಿರ್ಣಯ ತೆಗೆದುಕೊಂಡಿತ್ತು. ಇದಕ್ಕೆ ಮರಾಠಿ ಸಾಹಿತಿಗಳು, ಭಾಷಾಪರ ಸಂಘಟನೆಗಳು, ವಿರೋಧ ಪಕ್ಷಗಳು ಮತ್ತು ನಾಗರಿಕ ಗುಂಪುಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸರ್ಕಾರ ಮರಾಠಿ ಭಾಷೆ ಕಲಿಸು ಹಣದಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಭಟನೆಗೆ ಬೆದರಿದ ಸರ್ಕಾರ ಜೂನ್ 17ರಂದು ನಿರ್ಣಯಕ್ಕೆ ತಿದ್ದುಪಡಿ ತಂದು, ಹಿಂದಿ ಕಡ್ಡಾಯವಲ್ಲ ಮೂರನೇ ಸಾಮಾನ್ಯ ಭಾಷೆಯಾಗಿ ಕಲಿಯಬೇಕು ಎಂದಿತ್ತು. ಅಂದರೆ, ಹಿಂದಿ ಮೂರನೇ ಭಾಷೆಯಾಗಿ ಇರುತ್ತದೆ. ಮಕ್ಕಳು ಅದನ್ನು ಕಲಿಯಲು ಇಚ್ಚಿಸದಿದ್ದರೆ ಇತರ ಭಾಷೆಗಳನ್ನು ಕಲಿಯಬಹುದು ಎಂದು ಹೇಳಿತ್ತು. ಇತರ ಭಾಷೆಗಳ ಆಯ್ಕೆಗೆ ತರಗತಿಯಲ್ಲಿ ಕನಿಷ್ಠ 20 ಮಕ್ಕಳು ಇರಬೇಕು ಎಂದು ಷರತ್ತು ವಿಧಿಸಿತ್ತು. ಇದಕ್ಕೂ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಿಂದಿ ಹೇರಿಕೆಯನ್ನು ಆರೋಪಿಸಿ ಪ್ರತಿಪಕ್ಷ ಶಿವಸೇನೆ(ಯುಬಿಟಿ) ಜುಲೈ 5ರಂದು ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳುವುದಾಗಿ ಘೋಷಿಸಿತ್ತು.
ಎಲ್ಲೆಡೆಯಿಂದ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ ಜೂನ್ 29 ಭಾನುವಾರ ಸಂಪುಟ ಸಭೆ ನಡೆಸಿದ ಸಿಎಂ ದೇವೇಂದ್ರ ಫಡ್ನವಿಸ್ ವಿವಾದಾತ್ಮಕ ತ್ರಿಭಾಷಾ ನೀತಿ ನಿರ್ಣಯಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ.
ಸುಳ್ಳು ಸುದ್ದಿ ಪ್ರಸಾರ: ಎರಡು ನ್ಯೂಸ್ ಚಾನೆಲ್‌ಗಳ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್ ಆದೇಶ


