ಇಟಲಿಯಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಬುಧವಾರ ಧ್ವಂಸಗೊಳಿಸಿದ್ದು, ಹರ್ದೀಪ್ ಸಿಂಗ್ ನಿಜ್ಜರ್‌ಗೆ ಸಂಬಂಧಿಸಿದ ವಿವಾದಾತ್ಮಕ ಘೋಷಣೆಗಳನ್ನು ಪ್ರತಿಮೆಯ ಮೇಲೆ ಬರೆದಿದ್ದಾರೆ.
ಘಟನೆಯ ಬೆನ್ನಲ್ಲಿ ಈ ಪ್ರದೇಶದಲ್ಲಿ ನಿಗಾ ವಹಿಸಿದ್ದೇವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕೆ ಇಟಲಿಗೆ ತೆರಳುವ ಒಂದು ದಿನ ಮುನ್ನ ಈ ಘಟನೆ ನಡೆದಿದೆ.
50ನೇ ಜಿ7 ಶೃಂಗಸಭೆಯು ಇಟಲಿಯ ಅಪುಲಿಯಾ ಪ್ರದೇಶದ ಬೊರ್ಗೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್‌ನಲ್ಲಿ ಜೂನ್ 13ರಿಂದ 15ರವರೆಗೆ ನಡೆಯಲಿದೆ. ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಪ್ರಕಾರ, ಪ್ರಧಾನಿ ಮೋದಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಆಹ್ವಾನದ ಮೇರೆಗೆ ಶೃಂಗಸಭೆಯಲ್ಲಿ ಭಾಗವಹಿಸಲು ನಾಳೆ ಇಟಲಿಯ ಅಪುಲಿಯಾಕ್ಕೆ ಪ್ರಯಾಣಿಸಲಿದ್ದಾರೆ.
ಘಟನೆಯ ಕುರಿತು ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ, ಭಾರತೀಯ ಅಧಿಕಾರಿಗಳು ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿರುವ ವಿಷಯದ ಬಗ್ಗೆ ಇಟಲಿ ಅಧಿಕಾರಿಗಳ ಮುಂದೆ ಮಾತುಕತೆಯನ್ನು ನಡೆಸಿದ್ದಾರೆ. ಈ ಕುರಿತು ಅಗತ್ಯವಾದ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಕಳೆದ ವರ್ಷದ ಆರಂಭದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ಖಾಲಿಸ್ತಾನಿ ಬೆಂಬಲಿಗರು ಧ್ವಂಸಗೊಳಿಸಿದ್ದರು.
ಇದನ್ನು ಓದಿ: ದೇವಾಲಯದ ಹೆಸರಿನ ರಾಜಕೀಯ ಹೇಗೆ ಸರಿಪಡಿಸಬಹುದು ಎಂದು ಅಯೋಧ್ಯೆ ಜನ ತೋರಿಸಿಕೊಟ್ಟಿದ್ದಾರೆ: ಶರದ್ ಪವಾರ್


