Homeಕರ್ನಾಟಕಪ್ಲಾನ್ ಮಾಡಿ ಕೊಂದಿದ್ದಾನೆ; ವಯಸ್ಸಿನ ಕಾರಣಕ್ಕೆ ಆತನನ್ನು ಕ್ಷಮಿಸಲು ಸಾಧ್ಯವಾ..?: ಮೃತ ಯುವತಿ ಪ್ರಬುದ್ಧ ತಾಯಿ...

ಪ್ಲಾನ್ ಮಾಡಿ ಕೊಂದಿದ್ದಾನೆ; ವಯಸ್ಸಿನ ಕಾರಣಕ್ಕೆ ಆತನನ್ನು ಕ್ಷಮಿಸಲು ಸಾಧ್ಯವಾ..?: ಮೃತ ಯುವತಿ ಪ್ರಬುದ್ಧ ತಾಯಿ ಸೌಮ್ಯಾ

- Advertisement -
- Advertisement -

‘ಆತ ಪ್ಲಾನ್ ಮಾಡಿ ನನ್ನ ಮಗಳನ್ನು ಕೊಂದಿದ್ದಾನೆ; ವಯಸ್ಸಿನ ಕಾರಣಕ್ಕೆ ಅವನನ್ನು ಕ್ಷಮಿಸಲು ಸಾಧ್ಯವಾ..? ನಾವು ಏನೇ ಮಾತನಾಡಬೇಕೆಂದರೂ ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ-2000) ಕಾನೂನು ಅಡ್ಡಿ ಬರುತ್ತದೆ’ ಎಂದು ಕಳೆದ ತಿಂಗಳು ಅಮಾನವೀಯವಾಗಿ ಶಾಲಾ ಬಾಲಕನಿಂದ ಕೊಲೆಗೀಡಾದ ಮೃತ ಯುವತಿ ಪ್ರಬುದ್ಧ ಅವರ ತಾಯಿ, ಸಾಮಾಜಿಕ ಕಾರ್ಯಕರ್ತೆ ಕೆ.ಆರ್. ಸೌಮ್ಯಾ ತಮ್ಮ ನೋವು ತೋಡಿಕೊಂಡರು.

ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಕೊಲೆ, ಅತ್ಯಾಚಾರದಂತ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ, ರಾಜ್ಯದ ಪ್ರಮುಖ ಮಹಿಳಾ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದ ‘ಮೌನ ಮುರಿಯದಿದ್ದರೆ ಈ ದಮನ ನಿಲ್ಲದು, ಮಹಿಳೆಯ ಕಗ್ಗೊಲೆಗಳ ವಿರುದ್ಧ ಹಕ್ಕೊತ್ತಾಯ ಸಭೆ’ಯಲ್ಲಿ ಭಾಗವಹಿಸಿ ಮಾತನಾಡಿದ ಹೋರಾಟಗಾರ್ತಿ ಸೌಮ್ಯಾ, ತಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಪ್ರಬುದ್ಧ ತಾಯಿ ಕೆ.ಆರ್. ಸೌಮ್ಯಾ

ತಮ್ಮ ಮಗಳ ಸಾವಿನ ಕುರಿತು ನೋವಿನಲ್ಲೆ ಮಾತು ಆರಂಭಿಸಿದ ಅವರು, ‘ಕೊಲೆಗಾರ ನನ್ನ ಮಗಳನ್ನು ಪ್ಲಾನ್ ಮಾಡಿ ಸಾಯಿಸಿದ್ದಾನೆ, ಕೊಲೆಗಾರ ಮತ್ತು ಆತನ ಕುಟುಂಬದವರ ಹೆಸರು ಹೇಳಬಾರದು ಎಂದು ಜುವೆನೈಲ್ ಜಸ್ಟೀಸ್ ಕಾನೂನು ಹೇಳುತ್ತದೆ. ಸಿಂಗಲ್ ಪೇರೆಂಟ್ ಆಗಿದ್ದರೂ ಮಕ್ಕಳನ್ನು ಉತ್ತಮವಾಗಿ ಸಾಕಿದ್ದೀರಿ ಎಂದು ನನ್ನ ಆತ್ಮೀಯರು ಹೇಳುತ್ತಿದ್ದರು. ಸಾಯಿಸಿರುವವನು ಬಾಲಕ ಆಗಿರಬಹುದು; ಆದರೆ, ಆತನ ಮನಸ್ಥಿತಿ ಬಾಲಕನಾಗಿಲ್ಲ’ ಎಂದರು.

‘ಇಷ್ಟು ಚಿಕ್ಕ ವಯಸ್ಸಿಗೆ ಅವನಿಗೆ ಅಂತ ಮನಸ್ಥಿತಿ ಎಲ್ಲಿಂದ ಬಂತು ಎಂದು ತನಿಖೆ ಆಗಬೇಕು, ಕೇವಲ ಎರಡು ಸಾವಿರ ರೂಪಾಯಿಗೆ ಕೊಲೆ ಮಾಡಲು ಸಾಧ್ಯವಾ..? ಆತ ಈ ಹಿಂದೆ ಸಹ ಕಳ್ಳತನ ಮಾಡಿರುವ ಪ್ರಕರಣಗಳು ಈಗ ಬೆಳಕಿಗೆ ಬರುತ್ತಿವೆ. ನಾನು ಕಾನೂನು ಚೌಕಟ್ಟಿನಲ್ಲಿ ನ್ಯಾಯ ಕೇಳುತ್ತಿದ್ದೇನೆ; ಯಾವುದೇ ಕಾರಣಕ್ಕೂ ಆತ ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು’ ಎಂದು ಒತ್ತಾಯಿಸಿದರು.

‘ನಾನು ನನ್ನ ಮಗಳು ಹದಿನೈದು ದಿನಗಳ ಹಿಂದಷ್ಟೇ ಸೌಜನ್ಯ ಪ್ರಕಾರಣದ ಬಗ್ಗೆ ಮಾತಾಡಿದ್ದೇವೆ; ಇಂತ ಪ್ರಕರಣಗಳಲ್ಲಿ ಬೇರೆ ದೇಶದಲ್ಲಿ ಇರುವಷ್ಟು ಶಿಕ್ಷೆ ನಮ್ಮಲ್ಲಿ ಇಲ್ಲ ಎನ್ನುತ್ತಿದ್ದಳು, ನಮ್ಮ ದೇಶದ ಕಾನೂನು ಸಡಿಲ ಇದೆ ಎನ್ನುತ್ತಿದ್ದಳು. ಆಕೆ ಪ್ರತಿನಿತ್ಯ ಪೇಪರ್ ಓದುವ ಮೂಲಕ ಇಂತವನ್ನೆಲ್ಲಾ ತಿಳಿದುಕೊಳ್ಳುತ್ತಿದ್ದಳು’ ಎಂದು ಹೇಳಿದರು.

“ಉತ್ತರ ಕರ್ನಾಟಕದಿಂದ ಸ್ನೇಹಿತರು ನನಗೆ ಕಳುಹಿಸುತ್ತಿದ್ದ ಹೆಚ್ಚುವರಿ ಜೋಳದ ರೊಟ್ಟಿಯನ್ನು ಸುತ್ತಮುತ್ತಲಿನ ಕಟ್ಟಡ ಕಾರ್ಮಿಕ ಮಕ್ಕಳನ್ನು ಮನೆಗೆ ಕರೆದು ಕೊಡುತ್ತಿದ್ದಳು; ಮಗಳಿಗೆ ಬರವಣಿಗೆ, ಚಿತ್ರಕಲೆ ಸೇರಿದಂತೆ ಹಲವು ಪ್ರತಿಭೆ ಇತ್ತು. ಇನ್ನು ಎರಡು ವರ್ಷ ಕಷ್ಟ ಪಡು.. ನಂತರ ನಾನು ದುಡಿಯುತ್ತೇನೆ ಎಂದು ನನಗೆ ಧೈರ್ಯ ತುಂಬಿದ್ದಳು.. ಅಂತ ಮಗಳನ್ನು ನಾನು ಕಳೆದುಕೊಂಡಿದ್ದೇನೆ’ ಎಂದು ಸೌಮ್ಯಾ ಕಣ್ಣೀರಿಟ್ಟರು.

“ಆತ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸುವ ಮೂಲಕ ‘ದೊಡ್ಡವರ’ ಕೆಲಸ ಮಾಡಿದ್ದಾನೆ, ವಯಸ್ಸಿನ ಕಾರಣಕ್ಕೆ ಅವನು ಮಾಡಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಾ..? ಕೊಲೆ ಮಾಡಿದವನಿಗೆ 15 ದಿನಕ್ಕೆ ಜಾಮೀನು ಕೊಟ್ಟಿದ್ದಾರೆ. ಇದರಿಂದ, ಹೋರಾಟಗಾರ್ತಿಯಾದ ನಾನು ಒಬ್ಬಳು ತಾಯಿಯಾಗಿ ಗೊಂದಲಕ್ಕೆ ಒಳಗಾಗಿದ್ದೇನೆ. ಆತನಿಗೆ ಜಾಮೀನು ಸಿಕ್ಕಿದ್ದು, ನಮಗೆ ನ್ಯಾಯ ಸಿಕ್ಕಿಲ್ಲ. ಕೊಲೆಗಾರನನ್ನು ಕೊಲೆಗಾರ ಎನ್ನಬೇಕು. ಸಾಮಾನ್ಯವಾಗಿ ಮಕ್ಕಳಿಗೆ ಜಾತಿ ತಾರತಮ್ಯ, ಧರ್ಮದ ಬಗ್ಗೆ ಏನೂ ಗೊತ್ತಿರಲ್ಲ.  ಜುವೆನಲ್ ಕಾನೂನು ಮಕ್ಕಳಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎನ್ನುತ್ತದೆ. ಇದರಿಂದ ಇಂತಹ ಕೃತ್ಯಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಕಾನೂನು ವ್ಯವಸ್ಥೆಯಲ್ಲೆ ನಮಗೆ ನ್ಯಾಯ ಸಿಗಬೇಕು” ಎಂದು ಅವರು ಒತ್ತಾಯಿಸಿದರು.

ನಾನು ನಿಮ್ಮ ಜೊತೆಯಲ್ಲಿ ಇರ್ತೀನಿ: ನಾಗಲಕ್ಷ್ಮಿ ಚೌಧರಿ

“ಆರೋಪಿ ಬಾಲಕ ಸೌಮ್ಯಾ ಮಗಳ ಕೈ ಕುಯ್ದಿರುವುದನ್ನು ನೋಡಿದರೆ, 15 ವರ್ಷದ ಹುಡುಗ ಹೀಗೆ ಮಾಡಲು ಸಾಧ್ಯವಾ ಎನಿಸುತ್ತದೆ! ಪೋಷಕರು ತಮ್ಮ ಮಕ್ಕಳಿಂದ ಮೊಬೈಲ್ ದೂರ ಇಡಬೇಕು, ಸಾವಿಗೆ ನ್ಯಾಯ ಸಿಗುವವರೆಗೂ ನಾನು ನಿಮ್ಮ ಜೊತೆಯಲ್ಲೆ ಇರ್ತೀನಿ” ಎಂದು ಕರ್ನಾಟಕ ರಾಜ್ಯ ಮಹಿಳಾ ರಕ್ಷಣಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಪತ್ರ ಸ್ವೀಕರಿಸುವುದಕ್ಕೂ ಮುನ್ನ ಮಾತನಾಡಿದ ಅವರು, “ನಾನು ಆಯೋಗದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡು ಎರಡೂವರೆ ತಿಂಗಳಷ್ಟೇ ಆಗಿದೆ, ಅದು ಮುಳ್ಳಿನ ಖುರ್ಚಿ ಎಂದು ಗೊತ್ತಾಯ್ತು. ಜೊತೆಗೆ, ಅದಕ್ಕೆ ಸಾಕಷ್ಟು ಶಕ್ತಿ ಕೂಡ ಇದೆ ಎಂಬುದು ಗೊತ್ತಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ತೆಗೆದುಕೊಳ್ಳಬೇಡಿ ಎಂದು ನನಗೆ ಹಲವರು ಸಲಹೆ ನೀಡಿದರು. ನಲವತ್ತು ವರ್ಷಗಳಿಂದ ಅಲ್ಲಿನ ಮತದಾರರೇ ಸುಮ್ಮನಿದ್ದಾರೆ ಎಂದರು. ಆದರೆ, ನಾನು ಪತ್ರಿಕಾಗೋಷ್ಠಿ ನಡೆಸಿ, ಮುಖ್ಯಮಂತ್ರಿಗಳಿಗೆ ತನಿಖೆ ನಡೆಸುವಂತೆ ಪತ್ರ ಬರೆದೆ. ಹುಬ್ಬಳ್ಳಿಯ ನೇಹಾ ಪ್ರಕರಣದಲ್ಲೂ ಅಲ್ಲಿಗೆ ಭೇಟಿ ನೀಡಿ, ಸಿಎಂಗೆ ಪತ್ರ ಬರೆದೆ. ಪ್ರತಿ ಜಿಲ್ಲಾಧಿಕಾರಿಗೆ ಪತ್ರ ಬರೆದು, ಆಯಾ ಸಂಸ್ಥೆಗಳಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ವರದಿ ಕೇಳಿದ್ದೇನೆ” ಎಂದರು.

ಹೋರಾಟಗಾರರಿಂದ ಮನವಿ ಪತ್ರ ಸ್ವೀಕರಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ

“ಸೌಮ್ಯಾ ಅವರ ಮಗಳ ಪ್ರಕರಣವನ್ನು ನಾವು ಸುಲಭಕ್ಕೆ ಬಿಡುವುದಿಲ್ಲ.. ಕೃತ್ಯ ನಡೆದ ನಂತರ ನಾನು ಡಿಸಿಪಿ ಅವರಿಗೆ ಕರೆ ಮಾಡಿ ಕೇಳಿದ್ದೆ; ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದರು. ಆದರೆ, ತಾಯಿ ಮಾತ್ರ ಅದನ್ನು ಕೊಲೆ ಎಂದು ಹೇಳಿದ್ದರು. ತನಿಖೆ ನಂತರ ನಾನು ಡಿಸಿಪಿಗೆ ಕರೆ ಮಾಡಿದಾಗ, ಬಾಲಕ ಕೊಲೆ ಮಾಡಿದ್ದಾನೆ ಎಂದು ಹೇಳಿದರು. ಮಹಿಳೆಯರ ದೌರ್ಜನ್ಯದ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಸರಿಯಾಗಿ ವರ್ತಿಸಲ್ಲ.. ಇದಕ್ಕೆಲ್ಲ ಮೌನ ವಹಿಸಲು ಸಾಧ್ಯವಿಲ್ಲ. ಕಾನೂನು ವ್ಯವಸ್ಥೆ ದಾರಿ ತಪ್ಪಿದರೆ ಎಲ್ಲ ಪುರುಷರು ರಸ್ತೆಗೆ ಇಳಿಯಬೇಕು” ಎಂದು ಕರೆ ಕೊಟ್ಟರು.

“ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ 400 ಕೊಲೆ, 100ಕ್ಕೂ ಹೆಚ್ಚು ಅತ್ಯಾಚಾರ ಆಗಿದೆ. ಕಳೆದ ಮೂರು ವರ್ಷಗಳಲ್ಲಿ ದೇಶದಾದ್ಯಂತ 16 ಲಕ್ಷ ಹೆಣ್ಣು ಮಕ್ಕಳು ಕಾಣೆ ಆಗಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ಮತ್ತಷ್ಟು ಬಿಗಿ ಆಗಲೇಬೇಕು. ಪೊಲೀಸ್ ವ್ಯವಸ್ಥೆ ಸರಿಯಾಗಿದ್ದಿದ್ದರೆ, ಯಾರೂ ಕೂಡ ಮಹಿಳಾ ಆಯೋಗಕ್ಕೆ ಬರುವುದಿಲ್ಲ. ಅವರು ಬಂದಾಗ ನಾವು ಮೇಲಿನ ಅಧಿಕಾರಿಗಳನ್ನು ಕೇಳಬೇಕು. ಇಲ್ಲಿ ಹೋರಾಟ ಮಾಡುತ್ತಿರುವ ನಾವೆಲ್ಲರೂ ಮಹಿಳಾ ಆಯೋಗ, ಎಲ್ಲರೂ ಸೇರಿ ಹೋರಾಡೋಣ, ನಾನು ನಿಮ್ಮ ಜೊತೆಗೆ ಇರುತ್ತೇನೆ” ಎಂದರು.

ಹಕ್ಕೊತ್ತಾಯ ಪತ್ರದಲ್ಲಿ ಏನಿದೆ..?

ವಿಷಯ: ಪ್ರಬುದ್ಧಳ ಅಮಾನುಷ ಹತ್ಯೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು; ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಭೀಕರವಾದ ಹಿಂಸಾಚಾರವನ್ನು ನಿಯಂತ್ರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ.

ಈ ಕಳಗೆ ಸಹಿ ಮಾಡಿರುವ ಸಂಘಟನೆಗಳನ್ನು ಪ್ರತಿನಿಧಿಸುವ ಮತ್ತು ಸಮಾಜದ ಬಗ್ಗೆ ಕಳಕಳಿಯುಳ್ಳ ವ್ಯಕ್ತಿಗಳಾದ ನಾವೆಲ್ಲರೂ ಹಲವು ವರ್ಷಗಳಿಂದ ಲಿಂಗತ್ವ-ಆಧಾರಿತ ಹಿಂಸೆಯ ಕುರಿತಂತೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಈ ಸಂಬ೦ಧದ ಕಾಯ್ದೆಗಳು ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ತರಲಾಗಿರುವ ಸಕಾರಾತ್ಮಕ ಬದಲಾವಣೆಗಳ ಹೊರತಾಗಿಯೂ, ಕಳದ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಮಹಿಳೆಯರು, ಯುವತಿಯರು, ಮಕ್ಕಳು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಮೊದಲಾದ ದಮನಿತರು ಎದುರಿಸುತ್ತಿರುವ ಅಸುರಕೃತೆಯ ಸನ್ನಿವೇಶ ಮತ್ತು ಅವರುಗಳ ಮೇಲೆ ನಡೆಯುತ್ತಿರುವ ಭೀಕರವಾದ ದೌರ್ಜನ್ಯಗಳಿಂದ ಕಳವಳಗೊಂಡಿದ್ದೇವೆ. ಈ ಪ್ರಕರಣಗಳ ಸಾಲಿಗೆ ತೀರಾ ಈಚಿನ ಸೇರ್ಪಡೆ 19 ವರ್ಷದ ವಿದ್ಯಾರ್ಥಿನಿ ಪ್ರಬುದ್ಧಳ ಕೊಲೆ. ಈಕೆಯನ್ನು ಕೊಲೆ ಮಾಡಿದ್ದೇನೆಂದು ಒಪ್ಪಿಕೊ೦ಡಿರುವಾತ 15 ವರ್ಷಗಳ ಬಾಲಕ! ಶಿಕ್ಷೆಯ ಭಯವಿಲ್ಲದೆ ಕೊನೆಮೊದಲಿಲ್ಲದಂತೆ ಇಂಥವನ್ನು ಆಗುವುದಕ್ಕೆ ಅವಕಾಶ ಮಾಡಿಕೊಡುವಂತಹ ಬಿರುಕುಗಳು ಈ ವ್ಯವಸ್ಥೆಯಲ್ಲೇ ಇವೆಯಂಬ ವಾಸ್ತವ ಕೂಡಾ ನಮಗೆ ಇನ್ನಷ್ಟು ಆತಂಕ ಉಂಟುಮಾಡಿದೆ. ಪ್ರಬುದ್ದಳ ತಾಯಿ ಕೆ.ಆರ್‌. ಸೌಮ್ಯ ಅವರು ಸ್ವತಃ ಒಬ್ಬ ಪ್ರಮುಖ ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಅವರ ಬದುಕಿನಲ್ಲೇ ಉಂಟಾಗಿರುವ ಈ ಅವಘಡ ಇನ್ನೂ ದುರಂತದ್ದಾಗಿ ಕಾಣುತ್ತದೆ.

ಯುವಕರು ತಮ್ಮ ಗೆಳತಿಯರು ಸಂಬಂಧಗಳನ್ನು ಮುಂದುವರಿಸಲು ಇಚ್ಛಿಸದಿದ್ದಾಗ ಅದನ್ನು ಒಪ್ಪಿಕೊಳ್ಳಲು ನಿರಾಕರಿಸುವುದು ಮತ್ತು ಆ ಕಾರಣಕ್ಕಾಗಿ ಭೀಕರವಾದ ದಾಳಿಗಳನ್ನು ನಡೆಸುವುದು ಹೆಚ್ಚುತ್ತಿದೆ; ಇದನ್ನು ಈ ವರ್ಷದ ಆರಂಭದಲ್ಲಿ ನೇಹಾ-ಫಯಾಜ್‌, ಸುರೇಶ್‌-ಅನೂಷಾ, ಪ್ರದೀಪ್‌-ರುಕ್ಸಾನಾ, ಗಿರೀಶ್‌-ಫರೀದಾ, ಗಿರೀಶ್‌-ಅ೦ಜಲಿ… ಇ೦ತಹ ಪ್ರಕರಣಗಳಲ್ಲಿ ನಡೆದಿರುವ ಕೊಲೆಗಳು ತೋರಿಸುತ್ತಿವೆ. ಈ ಹಿ೦ಸಾತ್ಮಕ ಪ್ರಕರಣಗಳಲ್ಲಿ ಒಂದೊಂದರ ಸಂದರ್ಭವೂ ಭಿನ್ನವಾಗಿರುವುದು ನಿಜವಾದರೂ, ಅವುಗಳಲ್ಲಿ ಒಂದು ಸಮಾನ ಪ್ಯಾಟರ್ನ್‌ ಸಹ ಇದೆ: ಮುಂದೆ ಇದು ಇನ್ನಷ್ಟು ಯುವ ಮಹಿಳಯರನ್ನು ಬಲಿ ತೆಗೆದುಕೊಳ್ಳುವಂತಹ ಮಹಾವ್ಯಾಧಿಯಾಗಿ ಬೆಳೆಯದಂತೆ ಸರ್ಕಾರವು ತಕ್ಷಣವೇ ಈ ವಿಚಾರದಲ್ಲಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕಿದೆ.

ಇತ್ತೀಚಿನ ಎನ್‌ಸಿಆರ್‌ಬಿ ದತ್ತಾಂಶಗಳ ಪ್ರಕಾರ ಮಹಿಳೆಯರ ಎರುದ್ದದ ಅಪರಾಧಗಳು ತೀವ್ರವಾಗಿ ಏರಿಕೆ ಕಂಡಿವೆ: 2021ರಲ್ಲಿ 14,468 ಪ್ರಕರಣಗಳು ನಡೆದಿರುವುದು ಕರ್ನಾಟಕದ ಮಟ್ಟಿಗೆ ಸಾರ್ವಕಾಲಿಕ ದಾಖಲೆಯಾಗಿದೆ. ರಾಜ್ಯದಲ್ಲಿ ಕಳೆದ ನಾಲ್ಕು ತಿ೦ಗಳಲ್ಲಿ 430 ಕೊಲೆಗಳು ಮತ್ತು 198 ಅತ್ಯಾಚಾರ ಪ್ರಕರಣಗಳು ನಡೆದಿರುವುದಾಗಿ ಮಾಧ್ಯಮ ವರದಿಗಳು ಹೇಳುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿಯ ಪ್ರಕರಣಗಳು 2020ರಲ್ಲಿದ್ದ 9ರಿಂದ 2021ರಲ್ಲಿ 37ಕ್ಕೆ ಮತ್ತು 2022ರಲ್ಲಿ 41ಕ್ಕೆ ಹೆಚ್ಚಿವೆ. ಇತ್ತೀಚೆಗೆ ಮಂಡ್ಯ ಜಿಲ್ಲೆ ಪಾಂಡವಪುರದ ಸಮೀಪದ ತೋಟದ ಮನೆಯೊಂದರಲ್ಲಿ 900ಕ್ಕೂ ಹೆಚ್ಚು ಹೆಣ್ಣು ಭ್ರೂಣಗಳು ಪತ್ತೆಯಾದುದು ಲಿಂಗಪತ್ತೆ ಮತ್ತು ಗರ್ಭಪಾತದ ಈ ಘೋರ ಅಪರಾಧದಲ್ಲಿ ಆರೋಗ್ಯ ಇಲಾಖೆಯ ಕೆಲವು ಮಂದಿ ಅಧಿಕಾರಿ/ಸಿಬ್ಬಂದಿಗಳೇ ಶಾಮೀಲಾಗಿರುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ಈ ಹಿಂಸೆ ನಿರಂತರ ಮತ್ತು ಯಾವ ಭಯವೂ ಇಲ್ಲದೆ ನಡೆಯುತ್ತಿದೆ. ದುರದೃಷ್ಟವೆಂದರೆ, ಇಂತಹ ಹಿಂಸೆಗೆ ಬಲಿಪಶುಗಳಾಗುವ ಮಹಿಳೆಯರನ್ನೇ ಅದಕ್ಕೆ ಕಾರಣರಾದ ಅಪರಾಧಿಗಳಂತೆ ಪರಿಗಣಿಸುವುದನ್ನು ಬಹುತೇಕ ಸಂದರ್ಭಗಳಲ್ಲಿ ಕಾಣಬಹುದು. ಪ್ರಜ್ವಲ್‌ ರೇವಣ್ಣನ ಪ್ರಕರಣದಲ್ಲಿ ಕೂಡ ಬಲಿಪಶು ಮಹಿಳೆಯರೇ ಅಪಮಾನದಿಂದಾಗಿ ಸಮಾಜಕ್ಕೆ ಮುಖ ತೋರಿಸಲು ಆಗದಂತಾಗಿರುವುದು ಇಲ್ಲವೇ ಅವರ ಮೇಲೆಯೇ ಗಂಡಂದಿರಿರಿಂದ, ಕುಟುಂಬಗಳಿ೦ದ ಹಿಂಸೆ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ.

ಈ ರೀತಿಯ ಪುರುಷಾಧಿಪತ್ಯದ ಹಿ೦ಸೆಯು ಸರ್ವೇಸಾಮಾನ್ಯವೆಂಬಂತೆ ಆಗುತ್ತಿರುವುದು ಮತ್ತೊಂದು ಆತಂಕದ ವಿಚಾರ. ಮಹಿಳೆಯರು ಮತ್ತು ಹುಡುಗಿಯರ ಮೇಲೆ ಅವರದೇ ಕುಟುಂಬದ “ಭದ್ರತೆ’ಯ ಒಳಗಡೆಯೇ, ಅಥವಾ ರಸ್ತೆಗಳಲ್ಲಿ, ಕೆಲಸದ ತಾಣಗಳಲ್ಲಿ, ಹೀಗೆ ಸಾರ್ವಜನಿಕವಾಗಿ ಇಂತಹ ಹಿಂಸೆಗಳು ನಡೆಯುತ್ತಿರುವುದು… ಮತ್ತು ಇದು ಸಹಜವಾದದ್ದೇನೋ ಎಂಬಂತಹ ರೀತಿಯಲ್ಲಿ ಮಾನ್ಯತೆ ಪಡೆದುಕೊಳ್ಳುತ್ತಿರುವುದನ್ನು ನಾವು ಖಂಡಿತಾ ಒಪ್ಪಲು ಸಾಧ್ಯವಿಲ್ಲ.

ಇದನ್ನು ಗಂಭೀರವಾಗಿ ಪರಿಗಣಿಸಿ ವ್ಯವಸ್ಥಿತವಾಗಿ ಪರಿಹಾರ ಮಾರ್ಗ ರೂಪಿಸದಿದ್ದಲ್ಲಿ, ಕೇವಲ 15 ವರ್ಷದ ಬಾಲಕನಿಂದ, ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲದಂತಹ ಪೂರ್ವಯೋಜಿತ ರೀತಿಯಲ್ಲಿ ನಡೆದ ಪ್ರಬುದ್ಧಳ ಕ್ರೂರ ಕೊಲೆಯಂಥವು ಪ್ರತಿಯೊಂದು ಮನೆಯಲ್ಲೂ ನಡೆಯತೊಡಗುವ ದಿನಗಳು ದೂರವಿರಲಾರದು.

ಈ ಹಿನ್ನೆಲೆಯಲ್ಲಿ ನಾವು ಕರ್ನಾಟಕ ಸರ್ಕಾರದ ಮುಂದೆ. ಈ ಕೆಳಕಂಡ ಆಗ್ರಹಗಳನ್ನು ಮುಂದಿಡುತ್ತಿದ್ದೇವೆ:

ಹಕ್ಕೊತ್ತಾಯಗಳು:

ಪ್ರಬುದ್ಧ ಪ್ರಕರಣದಲ್ಲಿ ತನಿಖೆಯನ್ನು ಈವರೆಗೆ ಮುನ್ನಡೆಸಿಕೊಂಡು ಬ೦ದದ್ದಕ್ಕಾಗಿ ಪೊಲೀಸ್‌ ಇಲಾಖೆಯನ್ನೂ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಶ್ರಮವನ್ನೂ ನಾವು ಗುರುತಿಸುತ್ತೇವೆ. ಅದೇ ಸಂದರ್ಭದಲ್ಲಿ ಈ ಪ್ರಕರಣವು ಹಲವು ಕಾರಣಗಳಿಗಾಗಿ ಅಪರೂಪದ ವಿಶೇಷ ಪ್ರಕರಣವಾಗಿದೆ ಎಂಬುದನ್ನೂ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಗುರುತಿಸಬೇಕು. ತನಿಖೆಯು ಅತ್ಯಂತ ವೇಗವಾಗಿ, ಬಲಿಯಾದ ಯುವತಿ ಅಥವಾ ಆಕೆಯ ತಾಯಿಯ ಕುರಿತು ಯಾವುದೇ ಪೂರ್ವಾಗಹಗಳಿಲ್ಲದಂತೆ ನಿಷ್ಪಕ್ಪಪಾತವಾಗಿ ನಡೆಯದಿದ್ದರೆ, ಇದರಲ್ಲಿ ನ್ಯಾಯ ದೊರೆಯುವುದು ಕಷ್ಟಸಾಧ್ಯ. ಪ್ರಕರಣದ ಎಲ್ಲ ಸಾಂಧರ್ಭಿಕ ಸಂಗತಿಗಳೂ ಇದೊಂದು ಪೂರ್ವಯೋಜಿತ ಕೊಲೆಯೆಂದು ಸೂಚಿಸುತ್ತಿರುವ ಸಂದರ್ಭದಲ್ಲಿ ಇದು ಪ್ರತಿದಿನ ನಡೆಯುವ ಹತ್ತು ಘಟನೆಗಳಲ್ಲಿ ಹನ್ನೊ೦ಂದನೇಯದು ಎಂಬ ಮನೋಭಾವ ತೊರೆದು, ಘಟನೆಯ ಸೂಕ್ಷ್ಮ ಸನ್ನಿವೇಶವನ್ನು ಗಮನಿಸಿ ಅದಕ್ಕೆ ಪೂರಕವಾದ ರೀತಿಯಲ್ಲಿ ವಿಶೇಷ ಗಮನ ಮತ್ತು ಸಮಯ ಕೊಟ್ಟು ತನಿಖೆ ಮಾಡಬಲ್ಲ ಸಂಸ್ಥೆಯೇ ಇದನ್ನು ಸರಿಯಾಗಿ ನಡೆಸಲು ಸಾಧ್ಯ. ಆದ್ದರಿ೦ದ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ನಾವೆಲ್ಲರೂ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ.

ಕಳದ ಕೆಲವು ತಿ೦ಗಳುಗಳಲ್ಲಿ ನಡೆದಿರುವ ಇಂತಹ ಎಲ್ಲ ಕಗ್ಗೊಲೆಗಳ ಸಮಗ್ರ ಅಧ್ಯಯನಕ್ಕಾಗಿ ಕಾನೂನು ತಜ್ಞರು, ಜೆ೦ಡರ್‌ ಪರಿಣತರು, ಸಾಮಾಜಿಕ ಕಾರ್ಯಕರ್ತರು, ಮನೋವೈದ್ಯರು ಮತ್ತು ಸರ್ಕಾರಿ ಪ್ರತಿನಿಧಿಗಳನ್ನು ಒಳಗೊ೦ಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಅವರು ಮಹಿಳೆಯರು ಮತ್ತು ಬಾಲಕಿಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ವಿದ್ಯಮಾನಗಳನ್ನು ಸಮಗ್ರವಾಗಿ ಮತ್ತು ವಸ್ತುನಿಷ್ಟವಾಗಿ ಅಧ್ಯಯನ ಮಾಡಿ, ಶಿಕ್ಷೆ ಮತ್ತು ನ್ಯಾಯದಾನದ ಹೆಚ್ಚು ಸೂಕ್ತವಾದ ರೂಪಗಳನ್ನು ವಿಕಸನಗೊಳಿಸಲು ಪ್ರಯತ್ನಿಸುತ್ತಿವುದರೊಂದಿಗೆ ತತ್‌ಕ್ಷಣದಲ್ಲಿ ಹಿಂಸೆಯನ್ನು ತಡೆಗಟ್ಟಲು ಮತ್ತು ಪರಿಹರಿಸಲು ಸಮಗ್ರ ಶಿಫಾರಸುಗಳನ್ನು ನೀಡಬೇಕು.

ಇ೦ತಹ ದೂರುಗಳೊಂದಿಗೆ ಮುಂದೆ ಬರುವ ಮಹಿಳೆಯರು/ಬಾಲಕಿಯರು ಮತ್ತು ಕುಟುಂಬಗಳನ್ನು ಹೆಚ್ಚಿನ ಘನತೆ ಮತ್ತು ಸಹಾನುಭೂತಿಯಿಂದ ಪರಿಗಣಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಅವುಗಳನ್ನು ತನಿಖೆ ಮಾಡಬೇಕಾದ ಪೊಲೀಸರು ಮತ್ತು ಇತರ ಏಜೆನ್ಸಿಗಳು ಹೆಚ್ಚು ಸಂವೇದನಾಶೀಲವಾಗಿರಬೇಕು; ಇದಕ್ಕೆ ಅಗತ್ಯವಾದ ಎಲ್ಲ ಲಿಂಗಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುವ ಮತ್ತು ಅದನ್ನು ಅನುಸರಿಸುವ ಕ್ರಮಗಳನ್ನೂ ತುರ್ತಾಗಿ ಕೈಗೆತ್ತಿಕೊಳ್ಳಬೇಕು. ಇಂದಿಗೂ ಸಹ ಇಂತಹ ಸಾವಿನ ಪ್ರಕರಣಗಳನ್ನು ತಕ್ಷಣವೇ ಆತ್ಮಹತ್ಯೆ ಎಂದು ನೋಡಲಾಗುತ್ತದೆ ಅಥವಾ ಅಸ್ವಾಭಾವಿಕ ಸಾವುಗಳು ಎಂದು ನೋಂದಾಯಿಸಲಾಗುತ್ತದೆ, ಇದು ತನಿಖೆಯ ಗುಣಮಟ್ಟ ಮತ್ತು ವಿಚಾರಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.

ಮಹಿಳೆಯರು, ಯುವತಿಯರು, ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳಲ್ಲಿ ಶಿಕ್ಷೆಯಾಗುವ ದರ ಬಹಳ ಕಡಿಮೆ. ಹೀಗಾಗಿ ವೇಗವಾದ ನಿಷ್ಪಕ್ಷಪಾತವಾದ ತನಿಖೆ ನಡೆದು ಶಿಕ್ಷೆಯ ದರವನ್ನು ಹೆಚ್ಚಿಸುವುದು ಇಂತಹ ಪ್ರಕರಣಗಳನ್ನು ತಡೆಗಟ್ಟಲು ಬಹಳ ಅಗತ್ಯ. ಆದ್ದರಿ೦ದ ಈ ಪ್ರಕರಣಗಳ ತನಿಖೆಗಾಗಿ ಪ್ರತ್ಯೇಕವಾದ ವಿಶೇಷ ತನಿಖಾ ವ್ಯವಸ್ಥೆಯನ್ನು ರೂಪಿಸಬೇಕು. ಹಾಗೆಯೇ ವೇಗವಾದ ನ್ಯಾಯದಾನಕ್ಕೆ ಫಾಸ್ಟ್‌ಟ್ರಾಕ್‌ ಕೋರ್ಟುಗಳನ್ನು ಸ್ಥಾಪಿಸಿ, ಈ ಎರಡೂ ಜೊತೆಗೂಡಿ ಸಮನ್ವಯದಲ್ಲಿ ಕೆಲಸ ಮಾಡುವಂತಾಗಬೇಕು. ತುರ್ತಾಗಿ ಆರೋಪಿಗಳಿಗೆ ಶಿಕ್ಷೆಯಾಗುವುದನ್ನು ಖಾತ್ರಿಪಡಿಸಬೇಕು. ಅಗತ್ಯವಿದ್ದಲ್ಲಿ ಈ ವಿಚಾರದಲ್ಲಿ ಕೇಂದ್ರ ಕಾನೂನು ಇಲಾಖೆಗೂ ರಾಜ್ಯ ಸರ್ಕಾರ ಪತ್ರ ಬರೆದು ಒತ್ತಡ ಹೇರಬೇಕು.

ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ಸಾರ್ವಜನಿಕರು ಇಂತಹ ತೊಂದರೆಗಳಲ್ಲಿ ಸಿಲುಕಿದ್ದರೆ, ಅವುಗಳ ಬಗ್ಗೆ ಧೈರ್ಯವಾಗಿ ಬಂದು ಪೊಲೀಸ್‌ ಇಲಾಖೆಯನ್ನು ಮತ್ತು ಸಂಬಂಧಪಟ್ಟ ಇತರ ಸರ್ಕಾರದ ಘಟಕಗಳನ್ನು ಸಂಪರ್ಕಿಸಲು ಉತ್ತೇಜಿಸುತ್ತಾ, ವಿಸ್ಕೃತವಾಗಿ ಜನರಿಗೆ ಸ೦ದೇಶ ನೀಡಬೇಕು. ನೊಂದವರಿಂದ ಮುನ್ಸೂಚನೆ ದೊರೆತ ಕೂಡಲೇ ನಿರ್ಲಕ್ಷಿಸದೆ ಗಂಭೀರವಾದ ರೀತಿಯಲ್ಲಿ ತನಿಖೆ ಮತ್ತು ಸೂಕ್ತ ಕಾನೂನು ಕ್ರಮಗಳು ಜರುಗಬೇಕು.

ಹದಿಹರೆಯದ ಹುಡುಗರು, ವಿದ್ಯಾರ್ಥಿಗಳು ಮತ್ತು ಎಲ್ಲ ನಾಗರೀಕರಲ್ಲಿ ಮಹಿಳೆಯರ ಮೇಲಿನ ದಾಳಿಗಳನ್ನು ನಿಲ್ಲಿಸಲು ಬೇಕಾದ ರೀತಿಯಲ್ಲಿ ವ್ಯಾಪಕವಾದ ಅರಿವಿನ ಕಾರ್ಯಕ್ರಮಗಳನ್ನು ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಕೂಡಲೇ ಕೈಗೆತ್ತಿಕೊಳ್ಳಬೇಕು.

ಭೀಕರ ದಾಳಿಗಳು ಮತ್ತು ದೌರ್ಜನ್ಯ ಪ್ರಕರಣಗಳ ಸಂದರ್ಭಗಳಲ್ಲಿ ಜವಾಬ್ದಾರಿ ಸ್ಥಾನಗಳಲ್ಲಿರುವವರು ಹಗುರವಾದ ಹೇಳಿಕೆಗಳನ್ನು ನೀಡದೆ, ಇವುಗಳನ್ನು ಗ೦ಭೀರವಾಗಿ ಪರಿಗಣಿಸಬೇಕು. ಹಾಗೆ ಹೇಳಿಕೆ ನೀಡುವುದನ್ನು ತಡೆಯುವಂತಹ ಉತ್ತರದಾಯಿತ್ವದ ಕ್ರಮಗಳನ್ನು ಸರ್ಕಾರ ಘೋಷಿಸಬೇಕು.

ಶಿಕ್ಷಣ ಇಲಾಖೆಯು ಲಿಂಗ ಸಂವೇದನೆಯನ್ನು ಮೂಡಿಸುವಂತಹ, ಸಮಾಜದಲ್ಲಿ ಪುರುಷರು ಮೇಲಿನವರು ಮತ್ತು ಮಹಿಳೆಯರು ತುಳಿಯಬಹುದಾದ ದುರ್ಬಲರು ಎಂಬಂತಹ ಲಿಂಗಾಧಾರಿತ ತಪ್ಪುಕಲ್ಪನೆಗಳನ್ನು ಹೋಗಲಾಡಿಸುವಂತಹ ಸೂಕ್ಷ್ಮತೆಯುಳ್ಳ ಪಠ್ಯವನ್ನು ಕಲಿಕೆಯ ಭಾಗವಾಗಿಸಬೇಕು.

ಮಾಧ್ಯಮಿಕ ಶಿಕ್ಷಣದ ಹಂತದಿ೦ದ ಹಿಡಿದು ಉನ್ನತ ಶಿಕ್ಷಣದವರೆಗೂ, ವೃತ್ತಿಪರ ಶಿಕ್ಷಣವನ್ನೂ ಒಳಗೊಂಡಂತೆ ವಿದ್ಯಾರ್ಥಿ ಯುವಜನರು ಮಹಿಳೆಯರನ್ನು ತಮ್ಮ ಸಹಜೀವಿಗಳನ್ನಾಗಿ ಗೌರವಿಸುವ ಮನಸ್ಥಿತಿಯನ್ನು ಹುಟ್ಟುಹಾಕಲು ಪ್ರಾಮಾಣಿಕವಾಗಿ ಶ್ರಮಿಸಬೇಕು.

ಏನಿದು ‘ಜುವೆನೈಲ್ ಜಸ್ಟೀಸ್’ ಆಕ್ಟ್ 2000?

2 ಅಕ್ಟೋಬರ್ 1987 ರಂದು ದೆಹಲಿಯ ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ಬಂದ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2000, ನಿಂದನೆ, ಶೋಷಣೆ ಮತ್ತು ಸಾಮಾಜಿಕ ಅಸಮರ್ಪಕ ಸನ್ನಿವೇಶಗಳಲ್ಲಿ ಮಕ್ಕಳಿಗೆ ನ್ಯಾಯದ ಬಗ್ಗೆ ಸಮಗ್ರವಾದ ವಿಧಾನವನ್ನು ಕಲ್ಪಿಸುತ್ತದೆ. ಜುವೆನೈಲ್ ಜಸ್ಟಿಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2000 ರ ಅಡಿಯಲ್ಲಿ, ನಿರ್ಲಕ್ಷಿತ ಮತ್ತು ಅಪರಾಧಿ ಬಾಲಾಪರಾಧಿಗಳ ಆರೈಕೆ, ರಕ್ಷಣೆ, ಚಿಕಿತ್ಸೆ, ಅಭಿವೃದ್ಧಿ ಮತ್ತು ಪುನರ್ವಸತಿಗಾಗಿ ಈ ಕೆಳಗಿನ ಶಾಸನಬದ್ಧ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಮಕ್ಕಳ ಕಲ್ಯಾಣ ಅಡಿಯಲ್ಲಿ, 14 ಶಾಸನಬದ್ಧ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ, ಅವುಗಳಲ್ಲಿ 09 ಸಂಸ್ಥೆಗಳು ಗಂಡು ಮತ್ತು 05 ಬಾಲಕಿಯರಿಗಾಗಿ ಕಾರ್ಯನಿರ್ವಹಿಸುತ್ತಿವೆ. ನಿರ್ಲಕ್ಷಿತ ಅಥವಾ ತಪ್ಪಿತಸ್ಥ ಬಾಲಾಪರಾಧಿಗಳ ಆರೈಕೆ, ರಕ್ಷಣೆ, ಚಿಕಿತ್ಸೆ, ಅಭಿವೃದ್ಧಿ ಮತ್ತು ಪುನರ್ವಸತಿಗಾಗಿ ಮತ್ತು ಅಪರಾಧಿ ಬಾಲಾಪರಾಧಿಗಳಿಗೆ ಸಂಬಂಧಿಸಿದ ಕೆಲವು ವಿಷಯಗಳ ತೀರ್ಪುಗಾಗಿ ಮತ್ತು ವಿಲೇವಾರಿಗಾಗಿ ಬಾಲಾಪರಾಧ ನ್ಯಾಯ ಕಾಯಿದೆ, 1986 (1986 ರ 53) ಅನ್ನು ಸಂಸತ್ತು ಜಾರಿಗೊಳಿಸಿತು. ಸಂವಿಧಾನದ ಹಲವಾರು ನಿಬಂಧನೆಗಳು (15) ವಿಧಿ (15), ಕಲಂ (ಇ) ಮತ್ತು (ಎಫ್) ವಿಧಿ 39, ಅನುಚ್ಛೇದ 45 ಮತ್ತು 47 ಸೇರಿದಂತೆ ಮಕ್ಕಳ ಎಲ್ಲಾ ಅಗತ್ಯಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳುವ ಪ್ರಾಥಮಿಕ ಜವಾಬ್ದಾರಿಯನ್ನು ರಾಜ್ಯಕ್ಕೆ ವಿಧಿಸುತ್ತವೆ ಮತ್ತು ಅವರ ಮೂಲಭೂತ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ.

2000 ರ ಕಾಯಿದೆ 56

ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಸೂದೆಯು ಸಂಸತ್ತಿನ ಉಭಯ ಸದನಗಳಿಂದ ಅಂಗೀಕರಿಸಲ್ಪಟ್ಟ ನಂತರ 30 ಡಿಸೆಂಬರ್ 2000 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಿತು. ಇದು ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯಾಗಿ ಪ್ರತಿಮೆ ಪುಸ್ತಕದಲ್ಲಿ ಬಂದಿತು.

ಇದನ್ನೂ ಓದಿ; ವಾಲ್ಮೀಕಿ ನಿಗಮದಲ್ಲಿನ ಹಗರಣ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...