ತೃಣಮೂಲ ಕಾಂಗ್ರೆಸ್‌ನ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ದುಬೆ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ನಗದು ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದರು ಮತ್ತು ತೃಣಮೂಲ ಸಂಸದರ ವಿರುದ್ಧ ತನಿಖೆಗೆ ಒತ್ತಾಯಿಸಿದ್ದರು. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ತನ್ನ ಪತ್ರದಲ್ಲಿ ಮಹುವಾ ಮೊಯಿತ್ರಾ ಅವರು ಗಂಭೀರ ವಿಶೇಷಾಧಿಕಾರದ ಉಲ್ಲಂಘನೆ, ಸದನದ ಅವಹೇಳನ ಮಾಡಿದ್ದಾರೆ ಮತ್ತು ಐಪಿಸಿಯ ಸೆಕ್ಷನ್ 120A ಅಡಿಯಲ್ಲಿ ಕ್ರಿಮಿನಲ್ ಅಪರಾಧ ಎಸಗಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ಅದಾನಿ ಗ್ರೂಪ್ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಅವರಿಗೆ ನಗದು ಮತ್ತು ಉಡುಗೊರೆಗಳನ್ನು ಲಂಚವಾಗಿ ನೀಡಲಾಗಿದೆ ಎಂದು ದುಬೆ ಭಾನುವಾರ ಲೋಕಸಭೆಯ ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ. ದೆಹದ್ರಾಯಿಯಿಂದ ಈ ಬಗ್ಗೆ ಮಾಹಿತಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.
ದುಬೆ ಅವರ ಶೈಕ್ಷಣಿಕ ಅರ್ಹತೆಗಳ ಸತ್ಯಾಸತ್ಯತೆಯ ಬಗ್ಗೆ ಮೊಯಿತ್ರಾ ಅವರು ಇತ್ತೀಚೆಗೆ ಪ್ರಶ್ನೆಗಳನ್ನು ಕೇಳಿದ್ದರು ಮತ್ತು ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಮೊಯಿತ್ರಾ ಹೇಳಿದ್ದಾರೆ. ಇದಕ್ಕೆ ಅವರು ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಮೊಯಿತ್ರಾ ಮತ್ತು ವಕೀಲ ದೇಹದ್ರಾಯ್ ನಿಕಟ ಸ್ನೇಹಿತರಾಗಿದ್ದರು, ಆದರೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ನೋಟಿಸ್ ಹೇಳುತ್ತದೆ. ಮೊಯಿತ್ರಾ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಲು ಪತ್ರಕರ್ತರನ್ನು ಒತ್ತಾಯಿಸಲು ದೇಹದ್ರಾಯ್ ಪ್ರಯತ್ನಿಸಿದರು. ಆದರೆ ಪುರಾವೆಗಳ ಕೊರತೆಯಿಂದಾಗಿ ಯಾರಿಗೂ ಮನವರಿಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ನೊಟೀಸ್‌ನಲ್ಲಿ ಹೇಳಲಾಗಿದೆ.
ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಮೊಯಿತ್ರಾ ಮತ್ತು ಇತರ ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೊಯಿತ್ರಾ ಅವರು ಸಂಪೂರ್ಣವಾಗಿ ಆಧಾರರಹಿತ ಆರೋಪ ಎಂದಿದ್ದು, ಆರೋಪವನ್ನು ತಿರಸ್ಕರಿಸಿದ್ದಾರೆ. ಮೊಯಿತ್ರಾ ಅವರು ಸಂಸತ್ತಿನ ಸದಸ್ಯರಾಗಿ ತನ್ನ ಕರ್ತವ್ಯಗಳ ನಿರ್ವಹಣೆಗೆ ಯಾವುದೇ ರೀತಿಯ ಸಂಭಾವನೆ ಅಥವಾ ನಗದು ಅಥವಾ ಉಡುಗೊರೆ ಅಥವಾ ಪ್ರಯೋಜನವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.
ಸ್ಪೀಕರ್‌ಗೆ ಬರೆದ ಪತ್ರ ಮತ್ತು ಎಲ್ಲಾ ಆರೋಪಗಳನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಮೊಯಿತ್ರಾ ಅವರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ನೋಟಿಸ್‌ನಲ್ಲಿ ದುಬೆ ಮತ್ತು ದೇಹಾದ್ರಾಯ್ ಅವರಲ್ಲಿ ಆಗ್ರಹಿಸಲಾಗಿದೆ.
ಇದನ್ನು ಓದಿ: ಗಾಝಾವನ್ನು ರಕ್ಷಿಸಿ, ಸಾವಿರಾರು ಮಂದಿ ಸಾಯುತ್ತಾರೆ: ತುರ್ತು ಸಹಾಯಕ್ಕೆ ಮನವಿ ಮಾಡಿದ UNRWA ಸಿಬ್ಬಂದಿಗಳು


