ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಆಧರಿಸಿ ಎಫ್‌ಐಆರ್ ದಾಖಲಿಸುವಂತೆ ಕೇರಳ ಹೈಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಿ ಮಲಯಾಳಂ ನಟಿ ಮಾಲಾ ಪಾರ್ವತಿ ಶುಕ್ರವಾರ (ನ.29) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
“ಹೇಮಾ ಸಮಿತಿ ಮುಂದೆ ನಾನು ನೀಡಿರುವ ಹೇಳಿಕೆಗಳು ಸಂಪೂರ್ಣವಾಗಿ ‘ಶೈಕ್ಷಣಿಕ ಉದ್ದೇಶ’ವನ್ನು ಹೊಂದಿದೆ. ಅಲ್ಲದೆ, ಮುಂದೆ ಶಿಫಾರಸುಗಳನ್ನು ನೀಡಲು ಸಹಾಯವಾಗಲಿ ಎಂದು ನಾನು ಹೇಳಿಕೆ ನೀಡಿದ್ದೇನೆ. ಆದರೆ, ಈಗ ನನ್ನ ಹೇಳಿಕೆ ಆಧರಿಸಿ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುತ್ತಿದೆ. ಹೇಮಾ ಸಮಿತಿ ವರದಿ ಆಧರಿಸಿ ಎಫ್‌ಐಆರ್ ದಾಖಲಿಸುವಂತೆ ಆದೇಶಿಸುವ ಮೂಲಕ ಹೈಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ದಾಟಿದೆ” ಎಂದು ಮಾಲಾ ಪಾರ್ವತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
“ವರದಿ ಆಧರಿಸಿ ಎಫ್‌ಐಆರ್ ದಾಖಲಿಸಿ ಎಂಬ ಹೈಕೋರ್ಟ್ ಆದೇಶ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ನಡೆಸುವ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಆ ತಂಡದ ವಿವೇಚನೆಯನ್ನು ದುರ್ಬಲಗೊಳಿಸುತ್ತದೆ. ಸೂಕ್ತ ತನಿಖೆ ನಡೆಸದೆ ವರದಿ ಆಧರಿಸಿ ಎಫ್‌ಐಆರ್ ದಾಖಲಿಸುವುದು ಸರಿಯಲ್ಲ” ಎಂದು ಮಾಲಾ ಪಾರ್ವತಿ ವಾದಿಸಿದ್ದಾರೆ.
“ನಾನು ಹೇಮಾ ಸಮಿತಿ ಮುಂದೆ ನೀಡಿರುವ ಹೇಳಿಕೆಗಳು ಬೇರೆಯವರಿಂದ ಕೇಳಿದ್ದು, ಅವರು ನಂತರ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ. ಎಸ್‌ಐಟಿ ರಚನೆಯಾದ ಬಳಿಕ ಅಧಿಕಾರಿಗಳು ನನ್ನನ್ನು ಮತ್ತು ನನಗೆ ಮಾಹಿತಿ ನೀಡಿದವರನ್ನು ಭೇಟಿಯಾಗಿದ್ದಾರೆ. ನಮಗೆ ಕಾನೂನು ಕ್ರಮ ಮುಂದುವರಿಸಲು ಆಸಕ್ತಿಯಿಲ್ಲ. ಹೈಕೋರ್ಟ್ ಆದೇಶದ ಬಳಿಕ, ಬೇಡ ಅಂದರೂ ಎಸ್‌ಐಟಿ ಎಫ್‌ಐಆರ್ ದಾಖಲಿಸುತ್ತಿದೆ” ಎಂದಿದ್ದಾರೆ.
“ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಿಯಮಗಳನ್ನು ರೂಪಿಸುವ ಸಲುವಾಗಿ ಅಥವಾ ಈ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಸಲುವಾಗಿ ನಾನು ಹೇಮಾ ಸಮಿತಿ ಮುಂದೆ ಹೇಳಿಕೆಗಳನ್ನು ನೀಡಿದ್ದೇನೆ. ನನ್ನಿಂದ ಹೇಳಿಕೆ ಪಡೆಯುವಾಗಲೂ, ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಮಾ ಸಮಿತಿ ಭರವಸೆ ನೀಡಿದೆ. ಆದರೆ, ಈಗ ನನ್ನ ಹೇಳಿಕೆ ಆಧರಿಸಿ ಕ್ರಮಕ್ಕೆ ಮುಂದಾಗಿದ್ದಾರೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
“ಎಸ್‌ಐಟಿ ನನ್ನ ಹೇಳಿಕೆಯೊಂದಿಗೆ ಸಂಬಂಧ ಇಲ್ಲದವರನ್ನು ಕರೆದು ಕಿರುಕುಳ ನೀಡುತ್ತಿದೆ. ಇದು ನಟಿಯಾಗಿ ನನ್ನ ಸಮಗ್ರತೆಯನ್ನು ಹಾಳು ಮಾಡುತ್ತದೆ. ಸಮಿತಿಯ ಉದ್ದೇವನ್ನೂ ಕೆಡಿಸುತ್ತದೆ. ಸಿನಿಮಾ ರಂಗದಲ್ಲಿ ಸಮಸ್ಯೆ ಎದುರಿಸಿದವರು ಪಡೆಯುತ್ತಿರುವ ಬೆಂಬಲವನ್ನು ಕುಗ್ಗಿಸುತ್ತದೆ” ಎಂದು ಮಾಲಾ ಪಾರ್ವತಿ ಹೇಳಿದ್ದಾರೆ.
2017ರಲ್ಲಿ ಬಹುಭಾಷಾ ನಟಿಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನಡೆದ ಬಳಿಕ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿದ್ದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ತಂಡ, ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ ರಚಿಸುವಂತೆ ಕೋರಿತ್ತು.
ಈ ಮನವಿ ಪರಿಗಣಿಸಿದ ಸರ್ಕಾರ, ಕೇರಳ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಹೇಮಾ, ಚಲನಚಿತ್ರ ನಟಿ ಶಾರದ ಮತ್ತು ಮಾಜಿ ಐಎಎಸ್ ಅಧಿಕಾರಿ ಕೆ.ಬಿ.ವಲ್ಸಲಕುಮಾರಿ ಅವರ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯನ್ನು ‘ಹೇಮಾ ಸಮಿತಿ’ ಎಂದು ಕರೆಯಲಾಗುತ್ತದೆ.
ಸಮಿತಿ ಅಧ್ಯಯನ ನಡೆಸಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ನಟಿ ರಜಿನಿ ಅವರು ವರದಿ ಬಿಡುಗಡೆಗೆ ತಡೆ ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದ ಕಾರಣ ವರದಿ ಬಿಡುಗಡೆಯಾಗದೆ ಉಳಿದಿತ್ತು.
ಹೈಕೋರ್ಟ್ ರಜಿನಿಯವರ ಅರ್ಜಿಯನ್ನು ತಿರಸ್ಕರಿಸಿದ ಬಳಿಕ, ಕಳೆದ ಆಗಸ್ಟ್ 19ರಂದು ವರದಿ ಬಿಡುಗಡೆಯಾಗಿದೆ. ಅದರಲ್ಲಿ ಉಲ್ಲೇಖಿಸಿರುವ ‘ಸಿನಿಮಾದಲ್ಲಿ ಅವಕಾಶ ಬೇಕೇಂದರೆ ಮಹಿಳಾ ಕಲಾವಿದರು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಪುರುಷರ ಜೊತೆ ಲೈಂಗಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಅನೇಕ ಮಹಿಳಾ ಕಲಾವಿದರು ಈಗಾಗಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಬೆದರಿಕೆಯಿಂದ ಅದನ್ನು ಹೊರಗೆ ಹೇಳಿಕೊಳ್ಳುತ್ತಿಲ್ಲ, ದೂರು ದಾಖಲಿಸುತ್ತಿಲ್ಲ” ಎಂಬ ವಿಷಯ ದೇಶದಲ್ಲೇ ಸಂಚಲನ ಸೃಷ್ಟಿಸಿದೆ.
ವರದಿ ಬಿಡುಗಡೆ ಬಳಿಕ, ಅನೇಕ ನಟಿಯರು ಮಾಧ್ಯಮಗಳ ಮುಂದೆ ತಮಗಾದ ಕಿರುಕುಳ ಹೇಳಿಕೊಂಡಿದ್ದಾರೆ. ದೂರು ದಾಖಲಿಸಿದ್ದಾರೆ. ಕೇರಳ ಸರ್ಕಾರ ಹೇಮಾ ಸಮಿತಿಯ ವರದಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದೆ.
ವರದಿ ಬಿಡುಗಡೆಯಾದ ನಂತರ, ಮಲಯಾಳಂ ನಟ ಸಿದ್ದೀಕ್, ನಟ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಶಾಸಕ ಎಂ ಮುಖೇಶ್, ನಟ ಜಯಸೂರ್ಯ ಮತ್ತು ನಿರ್ದೇಶಕ ವಿಎ ಶ್ರೀಕುಮಾರ್ ಮೆನನ್ ಸೇರಿದಂತೆ ಮಲಯಾಳಂ ಚಿತ್ರರಂಗದ ಹಲವಾರು ಘಟಾನುಘಟಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ‘ಆಂತರಿಕ ಸಮಿತಿ’ ರಚಿಸುವಲ್ಲಿ ಫಿಲ್ಮ್ ಚೇಂಬರ್ ವಿಫಲ : ಜಿಲ್ಲಾಧಿಕಾರಿಗೆ ಪತ್ರ ಬರೆದ ಮಹಿಳಾ ಆಯೋಗ


