ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿನ ಅಸ್ಪೃಶ್ಯತೆ ಆಚರಣೆ ಘಟನೆ ಹಿನ್ನೆಲೆಯಲ್ಲಿ ಗ್ರಾಮದ ದಲಿತ ಬಾಲಕನ ಕುಟುಂಬಕ್ಕೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ನಂಜೇಗೌಡ ಭೇಟಿ ನೀಡಿ ನೆರವಿನ ಭರವಸೆ ನೀಡಿದ್ದಾರೆ.
ದಲಿತ ಬಾಲಕನ ಮನೆಯಲ್ಲಿಯೇ ಊಟ ಮಾಡಿದ ಶಾಸಕರು ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ. ಬಾಲಕನ ತಾಯಿ ಶೋಭಾ ಅವರಿಗೆ ಸಾಂತ್ವಾನ ಮತ್ತು ಧೈರ್ಯ ಹೇಳಿದ ಅವರು ಉದ್ಯೋಗ ದೊರಕಿಸುವುದಾಗಿ ತಿಳಿಸಿದರು.
ಗ್ರಾಮಕ್ಕೆ ಹತ್ತಿರವಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಅಡುಗೆ ಸಹಾಯಕಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಕುಟುಂಬಕ್ಕೆ ನಿವೇಶನ ನೀಡುವುದಾಗಿ ತಿಳಿಸಿದ್ದಾರೆ.
ಆ ಕುಟುಂಬಕ್ಕೆ ನಿವೇಶನ ದೊರೆತಿದ್ದು, ಆ ಜಾಗವನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿದ್ದು, ಕಾಮಗಾರಿ ಮುಗಿದ ಕೂಡಲೇ ಕುಟುಂಬಕ್ಕೆ ಹಸ್ತಾಂತರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿಯವರ ನೇತೃತ್ವದಲ್ಲಿ ಉಳ್ಳೇರಹಳ್ಳಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದೆ. ಸವರ್ಣಿಯ ಕುಟುಂಬಗಳು ಈ ರೀತಿಯ ತಪ್ಪನ್ನು ಮುಂದುವರೆಸದಂತೆ ಎಚ್ಚರಿಕೆ ನೀಡಲಾಗಿದೆ.
ಘಟನೆಯ ಹಿನ್ನೆಲೆ
ಗ್ರಾಮದೇವತೆ ಭೂತಮ್ಮನ ಮೆರವಣಿಗೆಯ ವೇಳೆ ದಲಿತ ಬಾಲಕ ದೇವರಿಗೆ ಸಂಬಂಧಿಸಿದ ಗುಜ್ಜಕೋಲನ್ನು ಮುಟ್ಟಿದನೆಂದು ಆರೋಪಿಸಿ ಸವರ್ಣೀಯರು, ಬಾಲಕನ ಕುಟುಂಬಕ್ಕೆ 60 ಸಾವಿರ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರದ ಬೆದರಿಕೆ ಹಾಕಿದ್ದರು. ಸಂತ್ರಸ್ತ ಬಾಲಕನ ಈ ಕುರಿತು ಮಾಡಿದ ವಿಡಿಯೋ ವೈರಲ್ ಆಗಿ ಮಾಧ್ಯಮಗಳಲ್ಲಿ ಘಟನೆಯನ್ನು ಖಂಡಿಸಲಾಗಿತ್ತು.
ಸಾಮಾಜಿಕ ಬಹಿಷ್ಕಾರದ ಸುದ್ದಿ ವೈರಲ್ ಆದ ಬೆನ್ನಲ್ಲೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಗ್ರಾಮದ ಸವರ್ಣೀಯ ಸಮುದಾಯಕ್ಕೆ ಸೇರಿದ ಜಿ.ನಾರಾಯಣಸ್ವಾಮಿ ಬಿನ್ ಗೋಪಾಲಪ್ಪ, ಜಿ.ರಮೇಶ್, ಗೋಪಾಲಪ್ಪ, ವೆಂಕಟೇಶಪ್ಪ, ಕೋಟೆಪ್ಪ, ನಾರಾಯಣಸ್ವಾಮಿ, ಚಲಪತಿ, ಮೋಹನ್ ರಾವ್, ಚಿನ್ನಯ್ಯ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆಯ ಕಾಯ್ದೆ 1989 ಅಡಿ ಹಾಗೂ ಐಪಿಸಿ ಕಲಂ 143, 147, 148, 149 504, 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ (ಎಎಸ್‌ಎಸ್‌ಕೆ) ಸಂಘಟನೆಯ ಯುವಕರು ಕುಟುಂಬವನ್ನು ಭೇಟಿ ಮಾಡಿ ಧೈರ್ಯ ನೀಡಿದ್ದಲ್ಲದೆ ಅರಿವು ಮೂಡಿಸಿದ್ದಾರೆ. ಆ ನಂತರ ಕುಟುಂಬವು ತನ್ನ ಮನೆಯಲ್ಲಿದ್ದ ದೇವರ ಫೋಟೋಗಳನ್ನು ತೆರವು ಮಾಡಿ, ಆ ಸ್ಥಳದಲ್ಲಿ ಅಂಬೇಡ್ಕರ್ ಮತ್ತು ಬುದ್ದನ ಫೋಟೊ ಹಾಕಿತ್ತು. ಇದು ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
“ನಿಮ್ಮ ಮನೆಯಲ್ಲಿ ಇರಬೇಕಾದದ್ದು ಈ ದೇವರ ಫೋಟೋಗಳಲ್ಲ. ನಿಮಗೆ ನ್ಯಾಯ ದೊರಕಿಸಿಕೊಟ್ಟ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ” ಎಂದು ಎಎಸ್‌ಎಸ್‌ಕೆ ಸಂಘಟನೆಯ ಮುಖಂಡರು ಹೇಳಿದ್ದರು.
ಇದನ್ನೂ ಓದಿ: ಮಾಲೂರು: ದಲಿತ ಬಾಲಕ ದೇವರು ಮುಟ್ಟಿದನೆಂದು ಶೋಷಿತ ಕುಟುಂಬಕ್ಕೆ ಬಹಿಷ್ಕಾರ; 60 ಸಾವಿರ ರೂ. ದಂಡ


