ಭಾರತೀಯ ಚುನಾವಣಾ ಆಯೋಗ ಕೈಗೊಂಡಿರುವ ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ದದ ಪ್ರತಿಭಟನೆಗಳು ಸದ್ದಿಲ್ಲದೆ ಕಾವು ಪಡೆದುಕೊಳ್ಳುತ್ತಿವೆ.
ಇತ್ತ ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷ ಎಸ್‌ಐಆರ್ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೆ, ಅತ್ತ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.
ಇಂದು (ನ.4) ತಮ್ಮ ಸೋದರಳಿಯ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿರುವ ಬಿ.ಆರ್. ಅಂಬೇಡ್ಕರ್ ಪ್ರತಿಮೆಯಿಂದ ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಮನೆಯಾದ ಜೋರಾಸಂಕೊ ಠಾಕೂರ್ ಬಾರಿವರೆಗೆ 3.8 ಕಿಮೀ ರ‍್ಯಾಲಿಯನ್ನು ಮಮತಾ ಬ್ಯಾನರ್ಜಿ ನಡೆಸಿದ್ದಾರೆ.
ಈ ಪ್ರತಿಭಟನಾ ರ‍್ಯಾಲಿಯಲ್ಲಿ ಟಿಎಂಸಿ ಪಕ್ಷದ ಹಲವು ನಾಯಕರು ಮತ್ತು ಭಾರೀ ಸಂಖ್ಯೆಯಲ್ಲಿ ಬೆಂಬಲಿಗರು ಪಾಲ್ಗೊಂಡಿದ್ದರು.
ರ‍್ಯಾಲಿ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ, “ಎಸ್ಐಆರ್ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಜೊತೆಗೂಡಿ ‘ಸದ್ದಿಲ್ಲದೆ, ಅದೃಶ್ಯವಾಗಿ ನಡೆಸುತ್ತಿರುವ ಮತಗಳ್ಳತನ’ ಎಂದು ಆರೋಪಿಸಿದ್ದಾರೆ.
ಅನೇಕ ಅಸಂಘಟಿತ ವಲಯದ ಕಾರ್ಮಿಕರು ಮತದಾರರ ಪಟ್ಟಿಯಿಂದ ತಮ್ಮ ಹೆಸರು ತೆಗೆದು ಹಾಕುವ ಆತಂಕದಲ್ಲಿದ್ದಾರೆ. ಬಂಗಾಳಿ ಭಾಷೆ ಮಾತನಾಡಿದ ತಕ್ಷಣ ಯಾರೂ ಬಾಂಗ್ಲಾದೇಶಿ ಆಗುವುದಿಲ್ಲ. ಹಿಂದಿ ಅಥವಾ ಪಂಜಾಬಿಯಲ್ಲಿ ಮಾತನಾಡುವವರು ಪಾಕಿಸ್ತಾನಿ ಆಗುವುದಿಲ್ಲ. ಬಂಗಾಳಿ ಭಾಷೆಯಲ್ಲಿ ಮಾತನಾಡುವವರನ್ನು ಬಾಂಗ್ಲಾದೇಶಿ ಎಂದು ಬ್ರಾಂಡ್ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ಮೂರ್ಖರು ಆ ರೀತಿ ಆರೋಪ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಿಜೆಪಿ ಎಲ್ಲಿತ್ತು? ಅದಕ್ಕಾಗಿಯೇ ಅವರಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಒಂದೇ ಆಗಿತ್ತು ಎಂಬುವುದು ಗೊತ್ತಿಲ್ಲ” ಎಂದಿದ್ದಾರೆ.
ಬಿಜೆಪಿ ಒಂದು ಲೂಟಿಕೋರ ಪಕ್ಷ. ಅವರು ಹಲವಾರು ಸಂಸ್ಥೆಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ, ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಆದರೆ, ಭವಿಷ್ಯದಲ್ಲಿ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎರಡು ದಿನಗಳಲ್ಲಿ ಇಷ್ಟು ದೊಡ್ಡ ರ್ಯಾಲಿಯನ್ನು ಏರ್ಪಡಿಸಲು ಸಾಧ್ಯವಾದರೆ, ನಾವು ದೆಹಲಿಗೆ ಪ್ರತಿಭಟನೆಗೆ ಹೋದರೆ ನಮ್ಮ ಜನಸಂದಣಿ ಎಷ್ಟಿರುತ್ತದೆ ಎಂದು ಬಿಜೆಪಿ ಯೋಚಿಸಬೇಕು. ನಾವು ದೆಹಲಿಯ ಜಮೀನ್ದಾರರಿಗೆ ತಲೆಬಾಗುವುದಿಲ್ಲ ಎಂದಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯ ಬಗೆಗಿನ ಭಯವು ಈಗಾಗಲೇ ಹಲವಾರು ಜೀವಗಳನ್ನು ಬಲಿ ಪಡೆದಿದೆ. ಕಳೆದ ಏಳು ದಿನಗಳಲ್ಲಿ, ಎಸ್‌ಐಆರ್ ಭಯದಿಂದ ಸಾವನ್ನಪ್ಪಿದವರ ಕುಟುಂಬ ಸದಸ್ಯರು ಇಂದಿನ ರ್ಯಾಲಿಯಲ್ಲಿ ನಮ್ಮೊಂದಿಗೆ ಇದ್ದಾರೆ. ಪ್ರಾಣ ಕಳೆದುಕೊಂಡ ಏಳು ಜನರೂ ತಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಭಯದಲ್ಲಿದ್ದರು ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ಅಳಿಸದಂತೆ ಬಿಜೆಪಿಗೆ ಎಚ್ಚರಿಕೆ ನೀಡಿದ ಅಭಿನಷೇಕ್ ಬ್ಯಾನರ್ಜಿ, ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರ ತನ್ನ ಹೆಸರನ್ನು ಕಳೆದುಕೊಂಡರೆ, ಟಿಎಂಸಿ ದೆಹಲಿಯಲ್ಲಿ ಬಂಗಾಳದ ಜನರ ಶಕ್ತಿಯನ್ನು ತೋರಿಸುತ್ತದೆ ಎಂದಿದ್ದಾರೆ. ಕೇಂದ್ರವು ಸಿಎಎ ಶಿಬಿರಗಳನ್ನು ಸ್ಥಾಪಿಸುವ ಮೂಲಕ ನಾಟಕ ಮಾಡುತ್ತಿದೆ ಎಂದು ಆರೋಪಿಸಿದ ಅವರು, ನೀವು ಅವರ ಬಲೆಗೆ ಬಿದ್ದರೆ, ಎನ್‌ಆರ್‌ಸಿಯಿಂದಾಗಿ ಅಸ್ಸಾಂನಲ್ಲಿ 12 ಲಕ್ಷ ಹಿಂದೂ ಬಂಗಾಳಿಗಳು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಂತೆ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ ಎಂದು ಜನರನ್ನು ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧರಾಗಿರಿ ಎಂದು ಕರೆಕೊಟ್ಟ ಅವರು, ಪ್ರಧಾನಿ ಮೋದಿ ತಮ್ಮ ಇಚ್ಛೆಯಂತೆ ಸಾಮಾನ್ಯ ಜನರಿಗೆ ನಿಯಮಗಳನ್ನು ನಿರ್ದೇಶಿಸುತ್ತಿದ್ದಾರೆ, ಅದು ನೋಟು ರದ್ದತಿಯಾಗಿರಲಿ ಅಥವಾ ಪೌರತ್ವಕ್ಕಾಗಿ ದಾಖಲೆಗಳನ್ನು ಕೇಳುವುದಾಗಿರಲಿ ಎಂದು ಹೇಳಿದ್ದಾರೆ.
ತೀವ್ರ ವಿರೋಧದ ನಡುವೆಯೂ ಎರಡನೇ ಹಂತದ ಎಸ್‌ಐಆರ್ ಪ್ರಾರಂಭಿಸಿದ ಚುನಾವಣಾ ಆಯೋಗ


