ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಬುಧವಾರ (ಆ.20) ಬೆಳಿಗ್ಗೆ ಸಿವಿಲ್ ಲೈನ್ಸ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಜನರ ಅಹವಾಲು ಆಲಿಸಲು ಆಯೋಜಿಸಿದ್ದ ‘ಜನ್ ಸುನ್ವೈ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ಅವರ ಮೇಲೆ ಹಲ್ಲೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಅಂದಾಜು 30 ವರ್ಷ ವಯಸ್ಸಿನ ವ್ಯಕ್ತಿ ಮನವಿ ಸಲ್ಲಿಸುವ ನೆಪದಲ್ಲಿ ಮುಖ್ಯಮಂತ್ರಿ ಬಳಿಗೆ ಬಂದಿದ್ದರು. ಮನವಿ ಕೊಟ್ಟ ಬಳಿಕ, ಅವರು ಸಿಎಂಗೆ ಕಪಾಳಮೋಕ್ಷ ಮಾಡಿದ್ದಾರೆ. ತಕ್ಷಣ ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎಂದು ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಘಟನೆ ನಡೆದ ಬಳಿಕ ದೆಹಲಿ ನಗರ ಪೊಲೀಸ್ ಆಯುಕ್ತ, ಉತ್ತರ ವಿಭಾಗದ ಡಿಸಿಪಿ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸಿಎಂ ನಿವಾಸಕ್ಕೆ ಧಾವಿಸಿದ್ದಾರೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನು ಗುಜರಾತ್‌ನ ರಾಜ್‌ಕೋಟ್ ನಿವಾಸಿ ರಾಜೇಶ್ ಭೈಜಿ ಎಂದು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿದ್ದಾಗಿ ವರದಿಯಾಗಿದೆ.
“ಇಂದು ‘ಜನ್ ಸುನ್ವೈ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾರೆ. ದೆಹಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ” ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಹಲ್ಲೆ ನಡೆಸಿದ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ದೆಹಲಿ ಪೊಲೀಸರು ಗುಜರಾತ್ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಸಿಎಂ ಸುತ್ತ ಭದ್ರತಾ ಸಿಬ್ಬಂದಿ ಇದ್ದರೂ ಈ ಘಟನೆ ನಡೆದಿದೆ ವರದಿಯಾಗಿದೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಮುಖ್ಯಮಂತ್ರಿ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮುಖ್ಯಮಂತ್ರಿಯನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚ್‌ದೇವ, ಘಟನೆಯಿಂದ ಸಿಎಂ ಗುಪ್ತಾ ಬೆಚ್ಚಿ ಬಿದ್ದಿದ್ದಾರೆ. ಪ್ರಸ್ತುತ ಅವರು ಆರೋಗ್ಯವಾಗಿದ್ಧಾರೆ ಎಂದು ಹೇಳಿದ್ದಾರೆ.
ಘಟನೆಯ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ಧಾರೆ.
ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಅತಿಶಿ ಅವರು ಸಿಎಂ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಅವರು, “ಪ್ರಜಾಪ್ರಭುತ್ವದಲ್ಲಿ, ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗೆ ಅವಕಾಶವಿದೆ. ಆದರೆ, ಹಿಂಸಾಚಾರಕ್ಕೆ ಅವಕಾಶವಿಲ್ಲ” ಎಂದಿದ್ದಾರೆ.


