ಚಿಕ್ಕಬಳ್ಳಾಪುರದಲ್ಲಿ ರೌಡಿಶೀಟರ್ ಒಬ್ಬ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದು ಸುಮಾರು 15 ಮಂದಿಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಭಾನುವಾರ ರಾತ್ರಿ 10 ಗಂಟೆಯ ಸಮಯದಲ್ಲಿ ಅರ್ಜುನ್ ಎಂಬ ವ್ಯಕ್ತಿ ಚಿಕ್ಕಬಳ್ಳಾಪುರದ ಬಿಬಿ ರಸ್ತೆ, ಕಾರ್ಖಾನೆ ಪೇಟೆ ಮತ್ತು ನಗರಸಭೆಯ ಸುತ್ತಾ ಸಿಕ್ಕ ಸಿಕ್ಕವರಿಗೆಲ್ಲ ಚಾಕುವಿನಿಂದ ಇರಿದು ಪರಾರಿಯಾಗಿದ್ದನು. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರಿಗೆ ಚಿಕ್ಕಬಳ್ಳಾಪುರದಲ್ಲಿಯೇ ಚಿಕತ್ಸೆ ನೀಡಲಾಗಿತ್ತು.
ಈ ಪ್ರಕರಣದಲ್ಲಿ ರೌಡಿ ಶೀಟರ್ ಆಗಿರುವ ಅರ್ಜುನ್ ಬಾಪೂಜಿನಗರದ ನಿವಾಸಿಯಾಗಿದ್ದು, ಗಾಂಜಾ ಸೇವಿಸಿದ್ದು, ತೀವ್ರ ಮತ್ತಿನಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಆತನನ್ನು ಮಧ್ಯರಾತ್ರಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ದೇವಾಲಯದ ಬಳಿ ಬಂಧಿಸಲಾಗಿದೆ. ಆತನ ಬಳಿಯಿದ್ದ ಚಾಕು, ಲಾಂಗ್ ಮತ್ತು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಸುಧಾಕರ್ ಮಾಹಿತಿ ನೀಡಿದ್ದು, “ಚಿಕ್ಕಬಳ್ಳಾಪುರ ನಗರದಲ್ಲಿ ನೆನ್ನೆ ರಾತ್ರಿ ನಡೆದ ಹಲ್ಲೆ ಪ್ರಕರಣದಲ್ಲಿ ದುಷ್ಕರ್ಮಿಯನ್ನು ಸಾಕ್ಷಿ ಸಮೇತ ಪತ್ತೆಹಚ್ಚಲಾಗಿದ್ದು ತಡರಾತ್ರಿ 3ಗಂಟೆ ಹೊತ್ತಿಗೆ ಬಂಧಿಸಲಾಗಿದೆ. ಹಲ್ಲೆಯಲ್ಲಿ ಗಾಯಗೊಂಡಿದ್ದ 6 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಪೈಕಿ ಒಬ್ಬರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
6 ಜನ ಗಾಯಾಳುಗಳು ಜೀವಾಪಾಯದಿಂದ ಪಾರಾಗಿದ್ದು ಅವರ ಚಿಕಿತ್ಸಾ ಜವಾಬ್ದಾರಿಯನ್ನು ನಾನು ಸಂಪೂರ್ಣವಾಗಿ ವಹಿಸಲು ನಿರ್ಧರಿಸಿದ್ದೇನೆ. ದುಷ್ಕರ್ಮಿಯನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಲು ರಾತ್ರಿಯಿಡೀ ಶ್ರಮಿಸಿದ ಎಸ್ಪಿ ನಾಗೇಶ್, ಡಿವೈಎಸ್ಪಿ ವಾಸುದೇವ್, ಸರ್ಕಲ್ ಇನ್ಸ್ಪೆಕ್ಟರ್ ರಾಜು ಮತ್ತು ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
6 ಜನ ಗಾಯಾಳುಗಳು ಜೀವಾಪಾಯದಿಂದ ಪಾರಾಗಿದ್ದು ಅವರ ಚಿಕಿತ್ಸಾ ಜವಾಬ್ದಾರಿಯನ್ನು ನಾನು ಸಂಪೂರ್ಣವಾಗಿ ವಹಿಸಲು ನಿರ್ಧರಿಸಿದ್ದೇನೆ.
ದುಷ್ಕರ್ಮಿಯನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಲು ರಾತ್ರಿಯಿಡೀ ಶ್ರಮಿಸಿದ ಎಸ್ಪಿ ನಾಗೇಶ್, ಡಿವೈಎಸ್ಪಿ ವಾಸುದೇವ್, ಸರ್ಕಲ್ ಇನ್ಸ್ಪೆಕ್ಟರ್ ರಾಜು ಮತ್ತು ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಧನ್ಯವಾದಗಳು.
2/2
— Dr Sudhakar K (@mla_sudhakar) August 1, 2022
ಇದನ್ನೂ ಓದಿ: ನೆರೆರಾಜ್ಯಗಳಲ್ಲಿಯೂ ಹೈನುಗಾರಿಕೆ ಬಿಕ್ಕಟ್ಟಿನಲ್ಲಿ…


