ದನ ಕಳ್ಳಸಾಗಣೆದಾರನೆಂದು ಶಂಕಿಸಿ 45 ವರ್ಷದ ವ್ಯಕ್ತಿಯೊಬ್ಬರಿಗೆ ‘ಸ್ವಘೋಷಿತ ಗೋರಕ್ಷಕ’ರ ಗುಂಪು ಥಳಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ದೆಹಲಿಯ ಸಫ್ದರ್ ಗಂಜ್ ಆಸ್ಪತ್ರೆಯಲ್ಲಿ ಭಾನುವಾರ (ಜ.26) ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಹರಿಯಾಣದ ಪಲ್ವಾಲ್ ಜಿಲ್ಲೆಯ ಮುಂಡ್ಕಟಿ ಪೊಲೀಸ್ ಠಾಣೆ ವ್ಯಾಪ್ತಿಯ ಘುದ್ಪುರ ಗ್ರಾಮದ ನಿವಾಸಿ ಯೂಸುಫ್ ಎಂದು ಗುರುತಿಸಲಾಗಿದೆ.
ಯೂಸುಫ್ ಅವರ ಸಾವಿಗೆ ಕಾರಣವಾದ ಮಾರಣಾಂತಿಕ ದಾಳಿಯ ಹಿಂದೆ ಸ್ವಘೋಷಿತ ‘ಗೋರಕ್ಷಕ’ರ ಕೈವಾಡವಿದೆ ಎಂದು ಆರೋಪಿಸಿ ಯೂಸುಫ್ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಮುಂಡ್ಕಟಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಯೂಸುಫ್ ದನ ಸಾಕುವವರಾಗಿದ್ದರು. ಅವರು ಹಾಲಿನ ವ್ಯಾಪಾರ ನಡೆಸುತ್ತಿದ್ದರು ಮತ್ತು ಅವರ ಮನೆಯಲ್ಲಿ ಸುಮಾರು 30 ಜಾನುವಾರುಗಳಿವೆ.
ಶುಕ್ರವಾರ (ಜ.24) ಸಂಜೆ, ಯೂಸುಫ್ ಅವರು ಪಲ್ವಾಲ್ ಜಿಲ್ಲೆಯ ನಾಗ್ಲಾ ಗ್ರಾಮದಿಂದ ಒಂದು ಹಾಲು ಕೊಡುವ ಹಸುವನ್ನು ಅದರ ಕರುವಿನ ಜೊತೆಗೆ ಖರೀದಿಸಿ ಟೆಂಪೋದಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದರು.
ಹಸು ಮತ್ತು ಅದರ ಕರುವನ್ನು ಟೆಂಪೋದಲ್ಲಿ ಕಳಿಸಿದ ಯೂಸುಫ್, ಬೈಕ್‌ನಲ್ಲಿ ಆ ಟೆಂಪೋವನ್ನು ಹಿಂಬಾಲಿಸುತ್ತಿದ್ದರು. ಟೆಂಪೋ ಮಿತ್ರೋಲ್ ಗ್ರಾಮಕ್ಕೆ ತಲುಪಿದಾಗ, ಕೆಲ ವ್ಯಕ್ತಿಗಳು ತಡೆದು ನಿಲ್ಲಿಸಿದ್ದು, ಹಸು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಟೆಂಪೋ ಚಾಲಕ ಕಳ್ಳಸಾಗಣೆ ಆರೋಪವನ್ನು ನಿರಾಕರಿಸಿದಾಗ, ದುಷ್ಕರ್ಮಿಗಳ ಗುಂಪು ಚಾಲಕನ ಮೂಲಕ ಯೂಸುಫ್ ಅವರಿಗೆ ಕರೆ ಮಾಡಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ನಂತರ ಸ್ಥಳದಲ್ಲೇ ತೀವ್ರವಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯೂಸುಫ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾಗಿ ವರದಿಗಳು ಹೇಳಿವೆ.
ಯೂಸುಫ್‌ಗೆ ಯಾರೊಂದಿಗೂ ಯಾವುದೇ ವಿವಾದವಿರಲಿಲ್ಲ. ಅವರು ಯಾವಾಗಲೂ ತನ್ನ ಕೆಲಸದಲ್ಲಿ ನಿರತನಾಗಿರುತ್ತಿದ್ದರು ಎಂದು ಘುದ್ಪುರ ಗ್ರಾಮದ ಗ್ರಾಮದ ಸರಪಂಚ್ ಹೇಳಿದ್ದಾರೆ.
ಘಟನೆ ಸಂಬಂಧ ಎಫ್‌ಐಆರ್ ದಾಖಲಾದ ನಂತರ ಕುಟುಂಬಸ್ಥರು ಭಾನುವಾರ ತಡರಾತ್ರಿ ಯೂಸುಫ್ ಅವರ ಅಂತ್ಯಕ್ರಿಯೆ ನಡೆಸಿದ್ದಾರೆ. ಯೂಸುಫ್ ಅವರು ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಸರ್ಕಾರ ಸೂಕ್ತ ಆರ್ಥಿಕ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹಿಮಾಚಲ ಪ್ರದೇಶದ ಕಸ್ಟಡಿಯಲ್ಲಿ ಸಾವು: ಮಾಜಿ ಐಜಿ ಜಹೂರ್, 7 ಪೊಲೀಸ್ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ


