ತೆಲಂಗಾಣದ ನಿಝಾಮಾಬಾದ್‌ನ ಸೈಬರ್ ಕ್ರೈಮ್ ಪೊಲೀಸರ ಕಸ್ಟಡಿಯಲ್ಲಿ ಅಲಕುಂಟ ಸಂಪತ್ ಎಂಬ 31 ವರ್ಷದ ಯುವಕ ಸಾವನ್ನಪ್ಪಿದ್ದು, ಪೊಲೀಸರ ಚಿತ್ರಹಿಂಸೆಯೇ ಸಾವಿಗೆ ಕಾರಣ ಎಂದು ಆರೋಪಿಸಿ ಆತನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಆದರೆ, ತಮ್ಮ ಮೇಲಿನ ಆರೋಪಗಳನ್ನು ಪೊಲೀಸರು ನಿರಾಕರಿಸಿದ್ದಾರೆ. “ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾದ ಸಂಪತ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ಬಂಧನದಿಂದ ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಕುಸಿದು ಬಿದ್ದರು ಎಂದು ನಿಝಾಮಾಬಾದ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಎಲ್. ರಾಜಾ ವೆಂಕಟ್ ರೆಡ್ಡಿ ಶುಕ್ರವಾರ (ಮಾರ್ಚ್ 14, 2025) ತಿಳಿಸಿದ್ದಾರೆ.
ಜಗತ್ಯಾಲ್‌ನಲ್ಲಿ ಮ್ಯಾನ್‌ಪವರ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ ಸಂಪತ್, ನಿರುದ್ಯೋಗಿ ಯುವಕರಿಗೆ ಉದ್ಯೋಗದ ಆಮಿಷವೊಡ್ಡಿ ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಲಾವೋಸ್‌ಗೆ ಕಳುಹಿಸುತ್ತಿದ್ದರು. ಅಲ್ಲಿಗೆ ಹೋದ ಯುವಕರನ್ನು ಉದ್ಯೋಗದಾತರು ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು ಎಂಬ ಆರೋಪಗಳಿದ್ದವು. ಸಂಪತ್‌ರಿಂದ ಈ ರೀತಿಯ ವಂಚನೆಗೊಳಗಾಗಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬರು ಸೈಬರ್ ಕ್ರೈಮ್ ಪೊಲೀಸರನ್ನು ಸಂಪರ್ಕಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ತನಿಖೆಯ ಫಲಿತಾಂಶಗಳ ಆಧಾರದ ಮೇಲೆ, ಸಂಪತ್ ಅವರನ್ನು ಮಾರ್ಚ್ 4ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ತನಿಖಾಧಿಕಾರಿಗಳು ಬುಧವಾರ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ತನಿಖೆಯ ಭಾಗವಾಗಿ, ಸೈಬರ್ ಕ್ರೈಮ್ ಪೊಲೀಸ್ ತಂಡಗಳು ಗುರುವಾರ ಸಂಪತ್ ಅವರನ್ನು ಜಗತ್ಯಾಲ್‌ಗೆ ಕರೆದೊಯ್ದಿದ್ದರು. ಶೋಧದ ಸಮಯದಲ್ಲಿ ಅವರಿಂದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರ ರಾತ್ರಿ ಅವರನ್ನು ನಿಝಾಮಾಬಾದ್‌ಗೆ ವಾಪಸ್ ಕರೆತರಲಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಅವರ ದೇಹದ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. “ಆಸ್ಪತ್ರೆಯೊಳಗೆ ವೈದ್ಯರ ಬಳಿಗೆ ಅವರು ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ವಿಡಿಯೋ ನಾವು ರೆಕಾರ್ಡ್ ಮಾಡಿದ್ದೇವೆ” ಎಂದು ಎಸಿಪಿ ಹೇಳಿದ್ದಾರೆ.
ಸಂಪತ್ ಅವರು ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ 10.25 ರ ಸುಮಾರಿಗೆ ಅವರು ಕುಸಿದು ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಪಿಆರ್ ಮೂಲಕ ಸಂಪತ್ ಅವರನ್ನು ಉಳಿಸಲು ಪ್ರಯತ್ನಿಸಲಾಯಿತು. ಆದರೆ, ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದರು. ಬಿಎನ್‌ಎಸ್‌ಎಸ್‌ನ ಸೆಕ್ಷನ್ 196ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ಗೆ ವಿಚಾರಣೆಗಾಗಿ ಮನವಿ ಸಲ್ಲಿಸಲಾಗಿದೆ. ವೈದ್ಯರ ತಂಡ ಶವಪರೀಕ್ಷೆ ನಡೆಸಿದೆ. ಮರಣೋತ್ತರ ಪರೀಕ್ಷೆಯ ವಿಡಿಯೊ-ರೆಕಾರ್ಡ್ ಮಾಡಲಾಗಿದೆ.
ಪೊಲೀಸರ ವಿರುದ್ದ ಚಿತ್ರಹಿಂಸೆ ಆರೋಪ
ಸಂಪತ್ ಸಾವಿಗೆ ಕೆಲವೇ ಗಂಟೆಗಳ ಮೊದಲು ತೀವ್ರ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದರು ಎಂದು ಅವರ ಕುಟುಂಬ ಆರೋಪಿಸಿದೆ. ಆದರೆ, ಇತ್ತೀಚೆಗೆ ಅನೇಕ ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದಿರುವ ಪೊಲೀಸರು, ತಮ್ಮ ಮೇಲಿನ ಆರೋಪ ಅಲ್ಲಗಳೆದಿದ್ದಾರೆ. ಆದರೆ, ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.
“ಮಾರ್ಚ್ 13ರ ಸಂಜೆ ತಾನು ಸಂಪತ್ ಅವರನ್ನು ಭೇಟಿಯಾಗಲು ಠಾಣೆಗೆ ಹೋದಾಗ ಪೊಲೀಸರು ಅವರ ಕಾಲಿಗೆ ಲಾಠಿಯಿಂದ ಹೊಡೆಯುತ್ತಿದ್ದರು. “ಪೊಲೀಸರು ನನ್ನ ಮೇಲೆ ಬಿದ್ದು ತೀವ್ರವಾಗಿ ಹೊಡೆಯುತ್ತಿದ್ದಾರೆ. ನನಗೆ ಸಹಿಸಲಾಗುತ್ತಿಲ್ಲ” ಎಂದು ಸಂಪತ್ ಹೇಳಿದರು. ಅವರು ನಡೆಯಲು ಕಷ್ಟಪಡುತ್ತಿದ್ದರು” ಎಂದು ಸಂಪತ್ ಸಹೋದರ ಹೇಳಿದ್ದಾಗಿ ವರದಿಯಾಗಿದೆ.
ಸಂಪತ್ ಹಿಂದುಳಿದ ವರ್ಗದ ವಡ್ಡೇರ ಸಮುದಾಯಕ್ಕೆ ಸೇರಿದವರು ಎಂದು ವರದಿಗಳು ಹೇಳಿವೆ.


