ನಿದ್ದೆಯಲ್ಲಿ ಮನುಷ್ಯ ಮಗುವಾಗುತ್ತಾನೆ
ನಿದ್ದೆಯಲಿ ತಬ್ಬಿದ ತಲೆದಿಂಬನು ಇನ್ನಷ್ಟು ಅವುಚಿಕೊಳ್ಳುತ್ತಾನೆ
ಧರ್ಮ ವ್ಯಾಧಿ ಜನರು ಬಂದರೆಂಬ ಭಯದಲಿ
ಅಂಟಿರುವ ಮತದ ಕೊಚ್ಚೆಯ ತೊಳೆಯಲು ರಚ್ಚೆಯಿಡುತ್ತಾನೆ
ಮನದೀ ಮತವಿಲ್ಲದ ಮತಾಪು ಹಚ್ಚಿ ದ್ವೇಷ ದಹಿಸುತ್ತಾನೆ
ಭರವಸೆಯ ಆಗಸಬುಟ್ಟಿ ಕಟ್ಟಿ
ಬಾಳು ಸಿಂಗರಿಸುತ್ತಾನೆ
ಅದೋ ಎಲ್ಲರ ಸೂರ್ಯ ಬಂದನೆಂದು ಚಪ್ಪಾಳೆ ತಟ್ಟುತ್ತಾನೆ
ದ್ವೇಷದ ಉರಿಯ ಕಂಡು ಬೆಚ್ಚುತ್ತಾನೆ
ಒಳಗೊಳಗೆ ಸೂರ್ಯನ ದ್ವೇಷಿಸುತ್ತಾನೆ
ಬಣ್ಣದ ಬೆಳಕು ಕಂಡು
ಅಚ್ಚರಿಯಾಗುತ್ತಾನೆ
ಅದೇ ಬೆಳಕ ಬೆರಗು ಕಂಡು ಕಣ್ಣಾಗುತ್ತಾನೆ
ಬೆಳಕು ಕಿಡಿಯಾಗಿ ಬೆಂಕಿಯಾಗಿ ಮನುಷ್ಯರ ಸುಡುವಾಗ;
ಕಣ್ಣೀರಾಗಿ ಬೆಳಕಿಗೆ ಕಣ್ಣು ಮುಚ್ಚುತ್ತಾನೆ
ಇದ್ದಕಿದ್ದಂತೆ ಹಾಸಿಗೆ ಒದ್ದೆ ಮಾಡಿಕೊಳ್ಳುತ್ತಾನೆ
ತನ್ನವರ ಕಣ್ಣುಗಳು ಶತಶತಮಾನದಿಂದಲೂ ಒದ್ದೆಯಾಗಿರುವುದ ಕಂಡು ಹೌಹಾರುತ್ತಾನೆ
ಒದ್ದೆ ಹಾಸಿಗೆಯನ್ನೆ ಅಮ್ಮ ಸರಿಪಡಿಸಬೇಕು
ನಾನೆಲ್ಲಿ ನನ್ನವರ ಕಣ್ಣೀರೋರೆಸುವುದೆಂದು
ಹಾಸಿಗೆಯಲ್ಲಿ ನಿಟ್ಟಿಸಿರಾಗುತ್ತಾನೆ
ಇದೀಗ ಕೈ ಕಾಲು ಆಡಿಸುತ್ತಾನೆ
ಎದ್ದು ಬರುವೆನೆಂಬ ಹಂಬಲದೀ
ಎದ್ದೇಳಾಗುತ್ತಿಲ್ಲ
ಮತ ಧರ್ಮದ ಕಟ್ಟುಗಳು ಬಿಗಿಯಾಗಿವೆ
‘ಅಮ್ಮ ….’ ಎನ್ನುತ್ತಾನೆ
ಅಮ್ಮನೋ ಸಂಸಾರಕ್ಕಿಂತಲೂ ಹಲವು ಕಟ್ಟು ಬಿಗಿದುಕೊಂಡಿದ್ದಾಳೆ
ಬಾಳುವೆಯೇ ಬರ್ಬರ
ಇನ್ನು ಅವಳು ಬರುವುದೆಂತೋ
ನನ್ನೊಳಗಿನ ಮಾತುಗಳ ಕೇಳುವಳೋ..ಎಂಬ ಅನುಮಾನ
ಮಗುವಾಗುವುದೇ ಮನುಷ್ಯನಾಗುವುದಕ್ಕಿಂತ ಒಳಿತು ಎಂದು;
ಮಗು ಮತ್ತೇ ಮಗ್ಗಲು ಬದಲಿಸಿದೆ
ಹೊರಗೆ ಜೈಹಿಂದ್ ಘೋಷಣೆ
ತ್ರಿವರ್ಣ ಧ್ವಜ ಪಟಿಪಟಿಸಿದೆ
ಮಗುವಿಗೆ ಇದೀಗ ಯಾವ ಬಣ್ಣವೂ ಕಾಣುತ್ತಿಲ್ಲ;
ಬಿಳಿಯ ಬಣ್ಣವನ್ನೊಂದನ್ನು ಬಿಟ್ಟು
ಕವಿ ಮಧುಸೂದನ ಮದ್ದೂರು ಅವರು, ಮಂಡ್ಯಜಿಲ್ಲೆಯ ಮದ್ದೂರು ತಾಲೂಕಿನ ಆಲೂರು ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


