ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶ ದ್ವಾರದಲ್ಲಿ ಶಿರೋಮಣಿ ಅಕಾಲಿದಳದ (ಎಸ್‌ಎಡಿ) ನಾಯಕ ಸುಖಬೀರ್ ಸಿಂಗ್ ಬಾದಲ್ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಇಂದು (ಡಿ.4) ಬೆಳಿಗ್ಗೆ ನಡೆದಿದೆ.
ತಕ್ಷಣ ಸ್ಥಳದಲ್ಲಿದ್ದ ಜನರು ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಪೊಲೀಸರ ಪ್ರಕಾರ, ದಾಳಿ ನಡೆಸಿದ ವ್ಯಕ್ತಿಯನ್ನು ನಾರಾಯಣ ಸಿಂಗ್ ಚೌರಾ ಎಂದು ಗುರುತಿಸಲಾಗಿದ್ದು, ಆತನನ್ನು ತಕ್ಷಣ ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾಳಿಯ ಉದ್ದೇಶ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾದಲ್ ಅವರು ಸ್ವರ್ಣ ಮಂದಿರದ ಪ್ರವೇಶ ದ್ವಾರದಲ್ಲಿ ನೀಲಿ ಸಮವಸ್ತ್ರ ಧರಿಸಿ ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡು ಕುತ್ತಿಗೆಗೆ ಫಲಕ ನೇತುಹಾಕಿ, ಕೈಯಲ್ಲಿ ಈಟಿ ಹಿಡಿದುಕೊಂಡು ‘ತನ್ಖಾ’ ಎಂದು ಕರೆಯಲ್ಪಡುವ ಧಾರ್ಮಿಕ ಶಿಕ್ಷೆಯನ್ನು ಅನುಭವಿಸುತ್ತಿದ್ದರು.
ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿಯಾಗಿರುವ ಸುಖ್‌ಬೀರ್ ಸಿಂಗ್ ಬಾದಲ್ ಅವರು ನಿನ್ನೆಯೂ (ಮಂಗಳವಾರ) ಸ್ವರ್ಣ ಮಂದಿರದ ಮುಂಭಾಗದಲ್ಲಿ ಸೇವಾದಾರನಾಗಿ (ಸೇವಕ) ಕರ್ತವ್ಯ ನೆರವೇರಿಸಿದ್ದರು.
ಅಕಾಲಿದಳದ ಮತ್ತೊಬ್ಬ ಹಿರಿಯ ನಾಯಕ ಸುಖ್‌ದೇವ್ ಸಿಂಗ್ ಢೀಂಡಸಾ ಅವರೂ, ಬಾದಲ್ ಜೊತೆ ಸೇವಾದಾರನಾಗಿ ಶಿಕ್ಷೆ ಅನುಭವಿಸುತ್ತಿದ್ದರು. ಮಾಜಿ ಸಚಿವ ವಿಕ್ರಂ ಸಿಂಗ್ ಮಜೀಠಿಯಾ ಅವರು ನಿನ್ನೆ ಸಮುದಾಯ ಭವನದಲ್ಲಿ ಪಾತ್ರೆಗಳನ್ನು ತೊಳೆದಿದ್ದರು.
ಪಂಜಾಬ್‌ನಲ್ಲಿ 2007–2017ರ ನಡುವೆ ‘ಎಸ್‌ಎಡಿ ಸರ್ಕಾರ’ದ ಅವಧಿಯಲ್ಲಿ ಪ್ರಮಾದಗಳನ್ನು ಎಸಗಿದ್ದಕ್ಕಾಗಿ, ಸುಖ್‌ಬೀರ್ ಸಿಂಗ್ ಬಾದಲ್ ಹಾಗೂ ಇತರ ನಾಯಕರಿಗೆ ಅಕಾಲ್ ತಖ್ತ್‌ನ ಜಾಥೇದಾರರು (ಸಿಖ್ ಧರ್ಮದ ಪರಮೋಚ್ಚ ಗುರು) ಸೋಮವಾರ ತನ್ಖಾ(ಧಾರ್ಮಿಕ ಶಿಕ್ಷೆ) ಪ್ರಕಟಿಸಿದ್ದರು.
ಶಿಕ್ಷೆ ಅನುಸಾರ, ಸುಖ್‌ಬೀರ್ ಹಾಗೂ ಎಸ್‌ಎಡಿಯ ಇತರ ನಾಯಕರು ಸ್ವರ್ಣಮಂದಿರದಲ್ಲಿ ಸೇವಾದಾರನಾಗಿ ಕೆಲಸ ಮಾಡಬೇಕು. ಒಂದು ಗಂಟೆ ಕೀರ್ತನೆಗಳನ್ನು ಆಲಿಸಬೇಕು, ಪಾತ್ರೆಗಳು ಹಾಗೂ ಭಕ್ತರ ಬೂಟುಗಳನ್ನು ಸ್ವಚ್ಛಗೊಳಿಸಬೇಕೆಂದು ಅಕಾಲ್ ತಖ್ತ್‌ನ ಜಾಥೇದಾರ ಜ್ಞಾನಿ ರಘ್‌ಬೀರ್ ಸಿಂಗ್ ಅವರು ಸೋಮವಾರ ಸೂಚಿಸಿದ್ದರು.
ಇದನ್ನೂ ಓದಿ : ಯುಪಿ ಪೊಲೀಸರ ಎಫ್ಐಆರ್ ಪ್ರಶ್ನಿಸಿ ಪತ್ರಕರ್ತ ಝುಬೈರ್ ಅರ್ಜಿ : ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ಪೀಠ


