ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಲ್ಲಿ ಅಸುರಕ್ಷತೆಯನ್ನು ಮೂಡಿಸುವ ಮತ್ತು ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿರುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಕೂಡಲೇ ಹಿಂದೆಗೆಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಶನಿವಾರ ಒತ್ತಾಯಿಸಿದೆ. ಮಂಗಳೂರು
ರಾಜ್ಯದ ಖಾಝಿಗಳು ಹಾಗೂ ಮುಸ್ಲಿಂ ಧಾರ್ಮಿಕ ವಿಧ್ವಾಂಸರು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧೀನದಲ್ಲಿ ಮಂಗಳೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ 2024ನ್ನು ಹಿಂಪಡೆಯಲು ಆಗ್ರಹ ಕೇಳಿಬಂದಿದೆ. ಮಂಗಳೂರು
“ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯ ಭಾಗವಾಗಿ 2024ರ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರ ವಿರೋಧದ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಲಾಗಿತ್ತು. ಆದರೆ ಪ್ರಸ್ತುತ ಸಮಿತಿಯು ವಿರೋಧ ಪಕ್ಷಗಳ ಪ್ರತಿನಿಧಿಗಳು ಸೂಚಿಸಿದ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಮೊದಲಿಗಿಂತಲೂ ಅಪಾಯಕಾರಿ ಅಂಶಗಳನ್ನು ಸೇರಿಸಿ ಮಂಡಿಸಿದೆ” ಎಂದು ಸಮಿತಿ ಹೇಳಿದೆ.
“ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಲ್ಲಿ ಅಸುರಕ್ಷತೆಯನ್ನು ಮೂಡಿಸುವ ಮತ್ತು ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿರುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ಈ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಕೂಡಲೇ ಹಿಂದೆಗೆಬೇಕು” ಎಂದು ಸಮಿತಿ ಒತ್ತಾಯಿಸಿದೆ.
ಈ ತಿದ್ದುಪಡಿಗಳು ವಕ್ಫ್ ಆಸ್ತಿಗಳನ್ನು ಕಬಳಿಸುವ ಮತ್ತು ಅಳಿದುಳಿದ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲೂ ಸಮುದಾಯದ ನಿಯಂತ್ರಣವನ್ನು ತಪ್ಪಿಸುವ ಉದ್ದೇಶವನ್ನೇ ಹೊಂದಿದೆ ಎಂದು ಸಮಿತಿ ಹೇಳಿದೆ.
“ವಕ್ಫ್ ಎಂಬುದು ದೇವರ ಹೆಸರಿನಲ್ಲಿ ಸಮರ್ಪಿಸಲಾದ ದಾನವಾಗಿದ್ದು, ಯಾರಿಗೂ ಯಾವತ್ತೂ ಪರಭಾರೆ ಮಾಡಲಾಗದ, ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಗೆ ಮಾತ್ರ ಬಳಸಬಹುದಾದ ಸೊತ್ತು. ಇವುಗಳ ನಿರ್ವಹಣೆಗೆ 1913 ರಲ್ಲಿ ವಕ್ಫ್ ಕಾಯಿದೆಯನ್ನು ರೂಪಿಸಲಾಗಿತ್ತು. 1955ರಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ವಕ್ಫ್ ಬೋರ್ಡ್ ಅನ್ನು ಅಂಗೀಕರಿಸಿ, 1995 ರಲ್ಲಿ ಹಾಗೂ 2013 ರಲ್ಲಿ ಅಗತ್ಯ ತಿದ್ದುಪಡಿಗಳನ್ನು ತಂದು ವಕ್ಫ್ ಸ್ವತ್ತುಗಳನ್ನು ಸಂರಕ್ಷಿಸಲು ಪ್ರಯತ್ನಿಸಲಾಗಿತ್ತು.
ಮಂಗಳೂರು | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಖಾಝಿಗಳ ಸಭೆ
ಸುನ್ನಿ ಸಂಘಟನೆಗಳಾದ ಎಸ್ಸೆಸ್ಸೆಫ್ ಮತ್ತು ಎಸ್ಕೆಎಸ್ಸೆಸ್ಸೆಫ್ ಮಹತ್ವದ ಜಂಟಿ ಪತ್ರಿಕಾಗೋಷ್ಠಿ
ಸುದ್ದಿ➣➣ https://t.co/1CzyQpTdsm pic.twitter.com/TAQ8pzdEGu
— Naanu Gauri (@naanugauri) March 1, 2025
ಭಾರತದ ಸಂವಿಧಾನದಲ್ಲಿ ಆರ್ಟಿಕಲ್ 25, 26, 27 ಮತ್ತು 28 ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದಿದ್ದು, ಆರ್ಟಿಕಲ್ 26 ರ ಎ,ಬಿ,ಸಿ,ಡಿ ಕಲಮುಗಳು ಧಾರ್ಮಿಕ ಆಚರಣೆಯ ಭಾಗವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸಂಸ್ಥೆಗಳನ್ನು ಕಟ್ಟಿಕೊಳ್ಳುವ, ಧಾರ್ಮಿಕ ವಿಷಯದಲ್ಲಿ ಅದನ್ನು ತಮ್ಮ ಧರ್ಮಾನುಸಾರ ಪಾಲನೆಮಾಡುವ, ಸ್ಥಿರ ಹಾಗೂ ಚರಾಸ್ತಿಗಳನ್ನು ಹೊಂದುವ ಮತ್ತು ಅವನ್ನು ಕಾನೂನು ರೀತ್ಯ ನಿರ್ವಹಣೆ ಮಾಡುವ ಹಕ್ಕನ್ನು ಕೊಡುತ್ತದೆ.
ವಕ್ಫ್ ರೀತಿಯಲ್ಲೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಸೇರಿದಂತೆ ಎಲ್ಲಾ ಧರ್ಮೀಯರು ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿಕೊಂಡು ದೇಣಿಗೆಗಳನ್ನು ಸ್ವೀಕರಿಸುತ್ತಿದ್ದು, ಮುಸ್ಲಿಂ ಸಮುದಾಯದ ಧಾರ್ಮಿಕ ದಾನಗಳ ಆಚಾರಗಳನ್ನು ಮುನ್ನಡೆಸಲು ವಕ್ಫ್ ಬೋರ್ಡ್ ಕಾಯಿದೆಯನ್ನು ರೂಪಿಸಲಾಗಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರವು ವಕ್ಫ್ ಕಾಯಿದೆಗೆ ಅಮೂಲಾಗ್ರ ತಿದ್ದುಪಡಿ ಮಾಡಲು ಮುಂದಾಗಿದ್ದು, ಅದಕ್ಕಾಗಿ United Wakf -Management, Empowerment, Efficiency, Development- Act- UMEED- ಮಸೂದೆಯನ್ನು ಜಾರಿಗೆ ತರುತ್ತಿದೆ.
ಬಹುತೇಕ ವಕ್ಫ್ ಆಸ್ತಿಗಳಿಗೆ ನೂರಾರು ವರ್ಷಗಳ ಇತಿಹಾಸವಿದ್ದು, ಹೆಚ್ಚಿನವು ಮೌಖಿಕ ಒಡಂಬಡಿಕೆಯ ಮೂಲಕ ನೀಡಲಾಗಿದೆ. ನೂತನ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಆರು ತಿಂಗಳೊಳಗೆ ಕಾಗದ ಪತ್ರ ತೋರಿಸಿ ದಾಖಲಾಗದ ಯಾವುದೇ ವಕ್ಫ್ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ.
ಈವರೆಗೆ ವಕ್ಫ್ ಆಸ್ತಿಯನ್ನು ನಿಗದಿ ಪಡಿಸಲು ಸರ್ಕಾರವು ಇಸ್ಲಾಮಿಕ್ ಕಾನೂನು ಮತ್ತು ವಕ್ಫ್ ವಿಷಯಗಳಲ್ಲಿ ಪರಿಣಿತಿ ಇರುವ ಒಬ್ಬ ಸ್ವಾಯತ್ತ ಸರ್ವೆಯರ್ ಅನ್ನು ನೇಮಿಸುತ್ತಿತ್ತು. ಆದರೆ ನೂತನ ತಿದ್ದುಪಡಿ ಪ್ರಕಾರ ಆ ಎಲ್ಲಾ ಜವಾಬ್ದಾರಿಗಳನ್ನು ಒಬ್ಬ ಜಿಲಾಧಿಕಾರಿಗೆ ನೀಡಲಾಗಿದೆ.
ವಕ್ಫ್ ತಗಾದೆಗಳನ್ನು ಇತ್ಯರ್ಥ ಮಾಡುವ ವಕ್ಫ್ ಟ್ರಿಬ್ಯುನಲ್‌ಗೆ ನೇಮಕವಾಗುವ ಸರ್ಕಾರಿ ಅಧಿಕಾರಿ ಮುಸ್ಲಿಮನಾಗಿರಬೇಕೆಂಬ ಷರತ್ತನ್ನೂ ಹೊಸ ಮಸೂದೆ ತೆಗೆದು ಹಾಕಿದೆ. ಅಲ್ಲದೆ ವಕ್ಫ್ ಬೋರ್ಡಿನಲ್ಲಿ ಕಡ್ಡಾಯವಾಗಿ ಇಬ್ಬರು ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಿಸಲಾಗಿದೆ.
ಹಿಂದೂ ಅಥವಾ ಸಿಖ್ ದೇವಸ್ಥಾನಗಳ ನೇಮಕವಾಗುವ ಸರ್ಕಾರಿ ಅಧಿಕಾರಿಯು ಆಯಾ ಧರ್ಮೀಯರೇ ಅಗಿರಬೇಕೆಂಬ ಕಾನೂನು ಜಾರಿಯಲ್ಲಿದ್ದು, ವಕ್ಫ್ ನಿಂದ ಮಾತ್ರ ಈ ಕಾನೂನನ್ನು ಕೈ ಬಿಡುವ ಉದ್ದೇಶವೇನು? ಎಂದು ಸಮಿತಿ ಪ್ರಶ್ನಸಿದ್ದು, ಹೀಗೆ ತಿದ್ದುಪಡಿ ಮಸೂದೆಯು ಹಲವಾರು ಅನ್ಯಾಯಕಾರಿ ಅಂಶಗಳನ್ನು ಒಳಗೊಂಡಿದ್ದು, ಮುಸ್ಲಿಮರನ್ನು ದಮನಿಸುವ ಕೋಮುವಾದಿ ಉದ್ದೇಶವನ್ನಷ್ಟೇ ಹೊಂದಿದೆ ಎಂದು ಅದು ಹೇಳಿದೆ.
ಜಂಟಿ ಸಂಸದೀಯ ಸಮಿತಿಯ ಮುಂದೆ 98 ಲಕ್ಷದಷ್ಜು ಲಿಖಿತ ಮನವಿಗಳು ಬಂದಿದ್ದು, ಅದರಲ್ಲಿ ಬಹುಪಾಲು ಈ ತಿದ್ದುಪಡಿಗಳನ್ನು ವಿರೋಧಿಸುವುವೇ ಆಗಿತ್ತು. ಆದಾಗ್ಯೂ ಸರ್ಕಾರವು ವಿರೋಧ ಪಕ್ಷಗಳು ಸಲ್ಲಿಸಿದ್ದ ಆಕ್ಷೇಪಣೆಗಳನ್ನೂ ಅವಗಣಿಸಿ, ಸರ್ವಾಧಿಕಾರಿ ಪ್ರವೃತ್ತಿ ತೋರಿ ಮಸೂದೆಯನ್ನು ಉಭಯ ಸದನಗಳಲ್ಲಿ ಮಂಡಿಸಿದೆ ಎಂದು ಸಮಿತಿ ಹೇಳಿದೆ.
“ಈ ತಿದ್ದುಪಡಿಯು ವಕ್ಫ್ ಆಸ್ತಿಗಳನ್ನು ಸರ್ಕಾರ ಒತ್ತುವರಿ ಮಾಡುವ ಮತ್ತು ವಕ್ಫಿನ ಇಸ್ಲಾಮಿಕ್ ಧಾರ್ಮಿಕತೆಯನ್ನು ನಾಶಮಾಡುವ ದುರುದ್ದೇಶ ಪೂರಿತ ನಡೆಯಾಗಿದ್ದು, ಮುಸ್ಲಿಮರ ಅಸ್ತಿತ್ವ ಮತ್ತು ಅಸ್ಮಿತೆಯನ್ನು ನಾಶ ಮಾಡುವ ಉಗ್ರ ಕೋಮುವಾದಿತ್ವದ ಭಾಗವಾಗಿದೆ. ದೇಶದ ಅಲ್ಪಸಂಖ್ಯಾತ ಸಮಾಜಕ್ಕೆ ಸಂರಕ್ಷಣೆ ಒದಗಿಸುವುದು ಯಾವುದೇ ಸರ್ಕಾರದ ಜವಾಬ್ದಾರಿಯಾಗಿದ್ದು, ಅವರಿಗೆ ಸಂವಿಧಾನದಲ್ಲಿ ನೀಡಲಾಗಿರುವ ಧಾರ್ಮಿಕ ಹಕ್ಕಿನ ಮೇಲಿನ ದಾಳಿಯು ಸಂವಿಧಾನದ ಮೇಲಿನ ದಾಳಿಯೇ ಆಗಿದೆ. ಆದ್ದರಿಂದ ಸರ್ಕಾರವು ಪ್ರಸ್ತಾವಿತ ಮಸೂದೆಯನ್ನು ಹಿಂದೆಗೆಯಲೇ ಬೇಕು” ಎಂದು ಸಮಿತಿ ಒತ್ತಾಯಿಸಿದೆ.
ದೇಶದ ಸಂವಿಧಾನ, ಜಾತ್ಯತೀತ ಸಿದ್ಧಾಂತ ಮತ್ತು ಬಹುತ್ವ ಸಂಸ್ಕೃತಿಯಲ್ಲಿ ನಂಬಿಕೆ ಇರುವ ಎಲ್ಲ ಪ್ರಜ್ಞಾವಂತ ಭಾರತೀಯರು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಧ್ವನಿ ಎತ್ತಬೇಕು ಎಂದು ಕೂಡಾ ಸಮಿತಿ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ, ಖಾಝಿ ಅಹ್ಮದ್ ಮುಸ್ಲಿಯಾರ್ ತಾಖಾ ಉಸ್ತಾದ್, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಉಸ್ಮಾನುಲ್ ಫೈಝಿ ತೋಡಾರು, ಯು.ಕೆ. ಮುಹಮ್ಮದ್ ಸ ಅದಿ ವಳವೂರು, ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಎನ್.ಕೆ.ಎಂ. ಶಾಫಿ ಸಾದಿ ಬೆಂಗಳೂರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ನ, ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಪಿ.ಎಂ. ಉಸ್ಮಾನ್ ಸ ಅದಿ ಪಟ್ಟೋರಿ, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಟಿ.ಎಂ. ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ಅನೀಸ್ ಕೌಸರಿ, ಉಮರ್ ದಾರಿಮಿ ಸಾಲ್ಮಾರ, ಖಾಸಿಂ ದಾರಿಮಿ ಸವಣೂರು,
ಎಂ.ವೈ. ಅಬ್ದುಲ್ ಹಫೀಳ್ ಸಅದಿ ಕೊಡಗು, ಅಬೂಬಕ್ಕರ್ ಸಿದ್ದೀಖ್ ದಾರಿಮಿ ಕಡಬ, ಕೆ.ಕೆ.ಎಂ. ಕಾಮಿಲ್ ಸಖಾಫಿ ಸುರಿಬೈಲ್, ರಫೀಕ್ ಹುದವಿ ಕೋಲಾರ, ಕೆ.ಎಂ. ಅಬೂಬಕರ್ ಸಿದ್ದೀಖ್ ಮೊಂಟುಗೋಳಿ, ಹುಸೈನ್ ದಾರಿಮಿ ರೆಂಜಲಾಡಿ, ಎಂಪಿಎಂ ಅಶ್ರಫ್ ಸ ಅದಿ ಮಲ್ಲೂರು, ಅಬೂಸಾಲಿಹ್ ಫೈಝಿ ತುಂಬೆ, ಮುಹಮ್ಮದ್ ಅಲಿ ತುರ್ಕಲಿಕೆ, ಮುಹಮ್ಮದ್ ಮುಸ್ಲಿಯಾರ್ ಮುಂಡೋಲ ಭಾಗವಹಿಸಿದ್ದರು. ಗೋಷ್ಠಿಯಯನ್ನು ದ.ಕ. ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ದ. ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷರಾದ ಅಶ್ರಫ್ ಕಿನಾರ ಮಂಗಳೂರು ನಡೆಸಿಕೊಟ್ಟರು. ಮಂಗಳೂರು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಎಸ್ಸಿಎಸ್‌ಪಿ/ಟಿಎಸ್‌ಪಿ ಹಣದ ದುರ್ಬಳಕೆ ಯಾವುದೆ ಕಾರಣಕ್ಕೂ ಒಪ್ಪಲ್ಲ – ದಲಿತ ಹಕ್ಕುಗಳ ಹೋರಾಟಗಾರ ಎ. ನರಸಿಂಹ ಮೂರ್ತಿ
ಎಸ್ಸಿಎಸ್‌ಪಿ/ಟಿಎಸ್‌ಪಿ ಹಣದ ದುರ್ಬಳಕೆ ಯಾವುದೆ ಕಾರಣಕ್ಕೂ ಒಪ್ಪಲ್ಲ – ದಲಿತ ಹಕ್ಕುಗಳ ಹೋರಾಟಗಾರ ಎ. ನರಸಿಂಹ ಮೂರ್ತಿ

