ಮಂಗಳೂರು ನಗರದ ಹೊರವಲಯದ ಕುಡುಪು ಸಮೀಪ ಭಾನುವಾರ (ಏ.26) ವ್ಯಕ್ತಿಯೊಬ್ಬರನ್ನು ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವುದು ದೃಢಪಟ್ಟಿದೆ. ಪ್ರಕರಣ ಸಂಬಂಧ 15 ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಮಂಗಳವಾರ (ಏ.29) ಮಧ್ಯಾಹ್ನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, “ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕುಡುಪು ಮತ್ತು ಸುತ್ತಮುತ್ತಲಿನ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಅಲ್ವಾರಿಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಭಾನುವಾರ (ಏ.27) ಅಪರಿಚಿತ ವ್ಯಕ್ತಿಯ ಮೃತದೇಹದ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅನುಮಾನದ ಆಧಾರದಲ್ಲಿ ಸೋಮವಾರ (ಏ.28) ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿಯಲ್ಲಿ, ಬೆನ್ನಿನ ಭಾಗ ಮತ್ತು ಗುಪ್ತಾಂಗಕ್ಕೆ ಬಲವಾದ ಹೊಡೆತದ ಗಾಯಗಳ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ವ್ಯಕ್ತಿಯ ಮರಣ ಸಂಭವಿಸಿರುವುದು ಕಂಡು ಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
“ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭ ಮೃತ ವ್ಯಕ್ತಿಯ ಯಾವುದೋ ಮಾತಿಗೆ ಸಂಬಂಧಿಸಿ ಸಚಿನ್ ಟಿ. ಎಂಬಾತ ಜಗಳಕ್ಕೆ ಮುಂದಾದಾಗ, ಆತನ ಸಹಚರರು ಕೂಡಾ ಜೊತೆ ಸೇರಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಓಡಿಹೋಗಲು ಯತ್ನಿಸಿದಾಗ ಸುಮಾರು 30 ಮಂದಿ ಸೇರಿ ಹಲ್ಲೆ ಥಳಿಸಿದ್ದಾರೆ”
“ಗುಂಪು ಸೇರಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಕಾಲಿನಿಂದ ತುಳಿದಿದ್ದಾರೆ. ಈ ಸಮಯ ಕೆಲವರು ತಡೆಯಲು ಯತ್ನಿಸಿದರೂ ನಿರಂತರ ಹಲ್ಲೆ ನಡೆಸಿದ ಕಾರಣ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ” ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ದೀಪಕ್ ಕುಮಾರ್ ಎಂಬವರು 19 ಜನರು ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 102 (2), 189 (2),191 (1), 191(3), 240 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಸುಮಾರು 30 ಮಂದಿ ಹಲ್ಲೆ ನಡೆಸಿದ್ದಾರೆ. ಪ್ರಸ್ತುತ 25 ಆರೋಪಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 15 ಜನರನ್ನು ಬಂಧಿಸಿದ್ದೇವೆ. ಬಿಎನ್‌ಎಸ್ ಕಾಯ್ದೆಯಡಿ ಗುಂಪು ಹತ್ಯೆಗೆ ಸಂಬಂಧಿಸಿದಂತೆ ಹೊಸದಾಗಿ ಸೇರ್ಪಡೆಯಾದ ಸೆಕ್ಷನ್ 103 (2) ಅಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆ ಕೋವಿಡ್ ಸಾವು ಪ್ರಕರಣ; ಈಡೇರದ ಸರ್ಕಾರದ ಭರವಸೆ


