ಮಂಗಳೂರಿನಲ್ಲಿ ಸಲೂನ್‌ಗೆ ನುಗ್ಗಿ ದಾಂಧಲೆ ನಡೆಸಿ, ಸಿಬ್ಬಂದಿಗೆ ಬೆದರಿಕೆ ಹಾಕಿದ್ದ ಹಿಂದುತ್ವ ಸಂಘಟನೆ ರಾಮಸೇನಾದ 14 ಮಂದಿಯನ್ನು ಗುರುವಾರ (ಜ.23) ಪೊಲೀಸರು ಬಂಧಿಸಿದ್ದಾರೆ.
ಫರಂಗಿಪೇಟೆಯ ಹರ್ಷರಾಜ್ ಅಲಿಯಾಸ್ ಹರ್ಷಿತ್, ವಾಮಂಜೂರು ಮೂಡುಶೆಡ್ಡೆಯ ಮೋಹನದಾಸ್ ಅಲಿಯಾಸ್ ರವಿ, ಕಾಸರಗೋಡು ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ಉಳಾಯಿಬೆಟ್ಟುವಿನ ರವೀಶ್, ಬೆಂಜನಪದವು ಶಿವಾಜಿನಗರದ ಸುಕೇಶ್, ವಾಮಂಜೂರಿನ ಅಂಕಿತ್, ಮೂಡುಶೆಡ್ಡೆ ಶಿವಾಜಿನಗರದ ಕಲಿ ಮುತ್ತು, ದೀಪಕ್, ಪ್ರದೀಪ್ ಪೂಜಾರಿ, ಬೊಂಡಂತಿಲ ತಾರಿಗುಡ್ಡೆಯ ಅಭಿಲಾಷ್, ನೀರುಮಾರ್ಗ ಪೆದಮಲೆ ಸರಿಪಲ್ಲದ ವಿಘ್ನೇಶ್, ನಗರದ ಮಂಕಿಸ್ಟ್ಯಾಂಡ್‌ನ ಶರಣ್‌ರಾಜ್ (ಕ್ಯಾಮರಾಮ್ಯಾನ್) ಹಾಗೂ ನಗರದ ನಿದ್ದಲೆಯ ಪ್ರಸಾದ್ ಅತ್ತಾವರ ಬಂಧಿತರು.
ಇವರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329(2) (ಅಕ್ರಮ ಪ್ರವೇಶ), ಸೆಕ್ಷನ್ 324(5) (ಸೊತ್ತುಗಳ ನಾಶ), ಸೆಕ್ಷನ್ 74 (ಮಹಿಳೆಯರ ಮೇಲೆ ಹಲ್ಲೆ, ಮಾನಭಂಗಯತ್ನ), ಸೆಕ್ಷನ್ 351 (3) (ಕ್ರಿಮಿನಲ್ ಬೆದರಿಕೆ ಒಡ್ಡುವುದು), ಸೆಕ್ಷನ್ 115 (2) (ಹಲ್ಲೆ ನಡೆಸುವುದು), ಸೆಕ್ಷನ್ 109 (ಕೊಲೆಯತ್ನ), ಸೆಕ್ಷನ್ 352 (ಅಪಮಾನಗೊಳಸಿ ಶಾಂತಿಭಂಗ ಮಾಡುವುದು) ಹಾಗೂ ಸೆಕ್ಷನ್ 190ರ (ಅಕ್ರಮ ಕೂಟ ರಚಿಸಿ ಅಪರಾಧ ಕೃತ್ಯ ನಡೆಸುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಗುರುವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಕಲರ್ಸ್ ಯುನಿಸೆಕ್ಸ್ ಸಲೂನ್‌ಗೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ವೇಳೆ ಮಹಿಳೆಯರು ಸೇರಿದಂತೆ ಸಲೂನ್‌ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಸಲೂನ್‌ನ ಮಾಲೀಕ ನಗರದ ಆನೆಗುಂಡಿಯ ಸುಧೀರ್ ಶೆಟ್ಟಿ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಬರ್ಕೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕ್ಯಾಮರಾಮ್ಯಾನ್ ಬಂಧನ : ಆರೋಪಿಗಳು ದಾಳಿ ಮಾಡಲು ತೆರಳಿದ್ದ ವೇಳೆ ಅವರ ಜೊತೆ ಸ್ಥಳೀಯ ಟಿವಿ ವಾಹಿನಿಯೊಂದರ ಕ್ಯಾಮರಾಮ್ಯಾನ್ ಶರಣ್‌ರಾಜ್‌ನನ್ನೂ ಕರೆದುಕೊಂಡು ಹೋಗಿದ್ದರು. ಆತ, ದಾಳಿಯ ವಿಡಿಯೊ ಚಿತ್ರೀಕರಿಸಿದ್ದಾನೆ. ಆತನನ್ನೂ ಬಂಧಿಸಲಾಗಿದೆ. ಈ ಹಿಂದೆ ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ ಪ್ರಕರಣದಲ್ಲೂ ಈತ ಬಂಧನಕ್ಕೊಳಗಾಗಿದ್ದ. ಆ ಪ್ರಕರಣದಲ್ಲಿ ದೋಷಮುಕ್ತನಾಗಿದ್ದ ಎಂದು ವರದಿಯಾಗಿದೆ.
ಮಂಗಳೂರು ಸಲೂನ್ ದಾಳಿ ಪ್ರಕರಣ | ಪ್ರಮುಖ ಆರೋಪಿ ಪ್ರಸಾದ್ ಅತ್ತಾವರ ಬಂಧನ


