ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಹೊರವಲಯದ ರೆಸಾರ್ಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮಂಗಳೂರು ನಗರದ ಹೊರವಲಯ ಸೋಮೇಶ್ವರ ಬಳಿಯ ಪೆರಿಬೈಲ್ ಬಟ್ಟಪ್ಪಾಡಿ ಕ್ರಾಸ್‌ನ ಸಾಯಿರಾಮ್ ವಾಸ್ಕೋಸ್ ರೆಸಾರ್ಟ್‌ನಲ್ಲಿ ತಂಗಿದ್ದ ಮೈಸೂರಿನ ಮೂವರು ಯುವತಿಯರು, ಅಲ್ಲಿನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ (ನ.17) ಬೆಳಿಗ್ಗೆ ನಡೆದಿದೆ.
ಮೈಸೂರಿನ ಜಿಎಸ್‌ಎಸ್ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ 5ನೇ ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಕೀರ್ತನಾ ಎನ್ (21), ನಿಶಿತಾ ಎಂ.ಡಿ (21) ಮತ್ತು ಪಾರ್ವತಿ ಎಸ್ ಮೃತಪಟ್ಟವರು.
ಮಂಗಳೂರಿಗೆ ಭೇಟಿ ನೀಡಿದ್ದ ಇವರು ವಾಸ್ಕೋಸ್ ಬೀಚ್ ರೆಸಾರ್ಟ್‌ನಲ್ಲಿ ತಂಗಿದ್ದರು. ಭಾನುವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮೂವರೂ ಈಜುಕೊಳಕ್ಕೆ ಇಳಿದಿದ್ದರು. ಈ ವೇಳೆ ಒಬ್ಬಾಕೆ ಈಜುಕೊಳದ ಮಧ್ಯಕ್ಕೆ ತೆರಳಿ ಮುಳುಗಿದ್ದಾರೆ. ಆಕೆಯನ್ನು ರಕ್ಷಿಸಲು ಹೋದ ಇನ್ನಿಬ್ಬರು ಕೂಡ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದುರಂತ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಘಟನೆ ಸಂಬಂಧ ರೆಸಾರ್ಟ್ ಮಾಲೀಕ ಮನೋಹರ್ ಎಂಬವರನ್ನು ಬಂಧಿಸಿರುವ ಪೊಲೀಸರು, ರೆಸಾರ್ಟ್‌ಗೆ ಬೀಗ ಜಡಿದಿದ್ದಾರೆ. ರೆಸಾರ್ಟ್‌ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಿಗೆಯನ್ನು ಅಮಾನತಿನಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.
ತನಿಖೆ ನಡೆಸಿ ವರದಿ ನೀಡಲು ಸೂಚನೆ
ಮೂವರು ಯುವತಿಯರ ಸಾವಿಗೆ ಸಂತಾಪ ಸೂಚಿಸಿರುವ ವಿಧಾನಸಭಾ ಸ್ಪೀಕರ್ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್, ಘಟನೆಯ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ : ಮಣಿಪುರ | ಮುಂದುವರಿದ ಹಿಂಸಾಚಾರ : ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಎನ್‌ಪಿಪಿ


