ಮಣಿಪುರದಲ್ಲಿ ಹೇರಿದ್ದ ಮೊಬೈಲ್ ಇಂಟರ್ನೆಟ್ ಸೇವೆಗಳ ಸ್ಥಗಿತವನ್ನು ಏಳು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನಗಳವರೆಗೆ ರಾಜ್ಯ ಸರ್ಕಾರ ಬುಧವಾರ ವಿಸ್ತರಿಸಿದೆ ಎಂದು ವರದಿಯಾಗಿದೆ. ನವೆಂಬರ್ 16 ರಂದು ಸರ್ಕಾರವು ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಮಣಿಪುರ
ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವುದರಿಂದ ಹಾಗೂ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳನ್ನು ಸೃಷ್ಟಿಸುವ ವಿಷಯವನ್ನು ಸಾಮಾಜಿಕ ವಿರೋಧಿ ಜನರು ಹರಡುವುದನ್ನು ತಡೆಯಲು ಸರ್ಕಾರವು ನವೆಂಬರ್ 16 ರಂದು ಎರಡು ದಿನಗಳವರೆಗೆ ಇಂಟರ್‌ನೆಂಟ್‌ಗಳ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಸೋಮವಾರ ಮತ್ತೆ ಎರಡು ದಿನ ಅದನ್ನು ವಿಸ್ತರಿಸಿತ್ತು. ಮಣಿಪುರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಚಾಲ್ತಿಯಲ್ಲಿರುವ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ರಾಜ್ಯ ಸರ್ಕಾರವು ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಕಕ್ಚಿಂಗ್, ಬಿಷ್ಣುಪುರ್, ತೌಬಲ್, ಚುರಾಚಂದ್‌ಪುರ ಮತ್ತು ಮಣಿಪುರದ ಕಾಂಗ್‌ಪೋಕ್ಪಿಯ ಪ್ರಾದೇಶಿಕ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳ ಸ್ಥಗಿತವನ್ನು ಇನ್ನೂ ಮೂರು ದಿನಗಳವರೆಗೆ ಮುಂದುವರಿಸಲು ನಿರ್ಧರಿಸಿದೆ ಎಂದು ಅದು ಹೇಳಿದೆ.
ಆದಾಗ್ಯೂ, ಸಾಮಾನ್ಯ ಜನರ ಆರೋಗ್ಯ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಕಚೇರಿಗಳು ಎದುರಿಸುತ್ತಿರುವ ಕಷ್ಟಗಳನ್ನು ಪರಿಗಣಿಸಿ ಬ್ರಾಡ್‌ಬ್ಯಾಂಡ್ ಸೇವೆಗಳ ಮೇಲಿನ ನಿರ್ಬಂಧವನ್ನು ಮಂಗಳವಾರ ತೆಗೆದುಹಾಕಿದೆ.
ಏತನ್ಮಧ್ಯೆ, ಬೆಳಿಗ್ಗೆ 5 ರಿಂದ 10 ರವರೆಗೆ ಕರ್ಫ್ಯೂವನ್ನು ಸಡಿಲಿಕೆ ಮಾಡಿರುವುದರಿಂದ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಕಾಕ್ಚಿಂಗ್ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ವ್ಯಾಪಾರ ಚಟುವಟಿಕೆ ಪ್ರಾರಂಭವಾಗಿದೆ ಎಂದು ವರದಿಯಾಗಿದೆ. ಕರ್ಫ್ಯೂ ಸಡಿಲಿಕೆಯಿಂದ ಗಲಭೆ ಪೀಡಿತ ಪ್ರದೇಶಗಳ ಮಾರುಕಟ್ಟೆಗಳು ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ ಎಂದು ವರದಿಯಾಗಿವೆ.
ಅದಾಗ್ಯೂ, ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದವು. ಸುವ್ಯವಸ್ಥೆ ಕಾಪಾಡಲು ಅಪಾಯಕಾರಿ ಪ್ರದೇಶಗಳಲ್ಲಿ ಸೇನೆ, ಅರೆಸೇನಾ ಪಡೆ ಸಿಬ್ಬಂದಿ, ಪೊಲೀಸರು ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ರಾಜ್ಯದಲ್ಲಿ ಭುಗಿಲೆದ್ದ ವ್ಯಾಪಕ ಗುಂಪು ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ನವೆಂಬರ್ 16 ರಂದು ಅನಿರ್ದಿಷ್ಟವಾಗಿ ಕರ್ಫ್ಯೂ ವಿಧಿಸಲಾಗಿತ್ತು. ಈ ಸಮಯದಲ್ಲಿ ಸಚಿವರು ಸೇರಿದಂತೆ ಹನ್ನೆರಡು ಶಾಸಕರ ಮನೆಗಳು ಮತ್ತು ಆಸ್ತಿಗಳನ್ನು ಸುಟ್ಟುಹಾಕಿ ಧ್ವಂಸಗೊಳಿಸಲಾದ್ದು, ಲೂಟಿ ಕೂಡಾ ಮಾಡಲಾಗಿದೆ.
ಜಿರಿಬಾಮ್ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಆರು ನಾಗರಿಕರನ್ನು ಕೊಂದ ನಂತರ ರಾಜ್ಯದಲ್ಲಿ ಹೊಸದಾಗಿ ಹಿಂಸಾಚಾರ ಪ್ರಾರಂಭವಾಗಿತ್ತು. ಈ ಭೀಕರ ದಾಳಿಯು ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ದುಷ್ಕರ್ಮಿಗಳನ್ನು ಕಾನೂನಿನ ಕುಣಿಕೆಗೆ ತರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಘಟನೆಯನ್ನು ಬುಡಕಟ್ಟು ನಾಗಾ ಮಹಿಳಾ ಒಕ್ಕೂಟವು ಖಂಡಿಸಿದ್ದು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದಿಂದ ದೂರವಿರಲು ಮೈತೇಯಿ ಮತ್ತು ಕುಕಿ ಎರಡೂ ಸಮುದಾಯಗಳ ಸಶಸ್ತ್ರ ಗುಂಪುಗಳಿಗೆ ಕರೆ ನೀಡಿದೆ. ನಡೆಯುತ್ತಿರುವ ಸಂಘರ್ಷದ ನಡುವೆ ಎಲ್ಲಾ ಪಕ್ಷಗಳು ಮಾನವೀಯತೆಯನ್ನು ಎತ್ತಿಹಿಡಿಯುವ ಅಗತ್ಯವನ್ನು ಒತ್ತಿಹೇಳಿರುವ ಒಕ್ಕೂಟವು ಇಂತಹ ಕೃತ್ಯಗಳನ್ನು ನಿಲ್ಲಿಸುವಂತೆ ಮನವಿ ಮಾಡಿದೆ.


