ಈ ತಿಂಗಳ ಆರಂಭದಲ್ಲಿ ಸಂಭವಿಸಿದ 27 ವರ್ಷದ ವ್ಯಕ್ತಿಯೊಬ್ಬರ ಕಸ್ಟಡಿ ಸಾವು ಖಂಡಿಸಿ ಮಣಿಪುರದಲ್ಲಿ ಹೋರಾಟಗಾರರ ಗುಂಪೊಂದು ಶುಕ್ರವಾರ (ಏ.25) ರಾಜ್ಯ ಬಂದ್‌ಗೆ ಕರೆ ನೀಡಿದೆ ಎಂದು ವರದಿಯಾಗಿದೆ.
ನಿಷೇಧಿತ ಸಂಘಟನೆಯಾದ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ (ನೊಂಗ್ಡ್ರೆನ್‌ಖೋಂಬಾ) ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಮಾರ್ಚ್ 31ರಂದು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಖೋಯಿಸ್ನಮ್ ಸನಾಜೋಬಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಅವರು ಏಪ್ರಿಲ್ 13 ರಂದು ಇಂಫಾಲ್‌ನ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ನಿಧನರಾಗಿದ್ದಾರೆ ಎಂದು ಇಂಡಿಯಾ ಟುಡೇ ಎನ್‌ಇ ವರದಿ ಮಾಡಿದೆ.
ಸನಾಜೋಬಾ ಅವರನ್ನು ಅವರು ಸಾವಿಗೀಡಾದ ದಿನವೇ ವೈದ್ಯಕೀಯ ಸಂಸ್ಥೆಗೆ ದಾಖಲಿಸಲಾಗಿತ್ತು. ಅವರನ್ನು ಏಪ್ರಿಲ್ 10 ರಂದು ಸಜಿವಾದಲ್ಲಿರುವ ಮಣಿಪುರ ಕೇಂದ್ರ ಕಾರಾಗೃಹಕ್ಕೆ ರಿಮಾಂಡ್ ಮಾಡಲಾಗಿತ್ತು.
ಸನಾಜೋಬಾ ಅವರಿಗೆ ನ್ಯಾಯ ದೊರಕಿಸಿಕೊಡಲು ರಚಿಸಲಾದ ಜಂಟಿ ಕ್ರಿಯಾ ಸಮಿತಿಯು ಅವರು ವಾಸ್ತವವಾಗಿ ‘ಗ್ರಾಮ ಸ್ವಯಂಸೇವಕ’ ಎಂದು ಹೇಳಿಕೊಂಡಿದ್ದು, ಅವರ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಸಮಿತಿಯ ಸದಸ್ಯರು ಸನಾಜೋಬಾ ಅವರಂತೆಯೇ ಇಂಫಾಲ್‌ನ ಖುರೈ ನಿಂಗ್‌ಥೌಬಂಗ್ ಲೈಕೈ ಪ್ರದೇಶದವರು.
ಮೇ 2023ರಲ್ಲಿ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ಭುಗಿಲೆದ್ದಾಗಿನಿಂದ ಗ್ರಾಮಗಳನ್ನು ಕಾಯುತ್ತಿರುವ ಸಶಸ್ತ್ರ ನಾಗರಿಕರಿಗೆ ‘ಗ್ರಾಮ ಸ್ವಯಂಸೇವಕರು’ ಎಂಬ ಪದವನ್ನು ಬಳಸಲಾಗುತ್ತಿದೆ.
ಸಾವಿಗೀಡಾದ ಸನಾಜೋಬಾ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅವರ ಹತ್ತಿರದ ಸಂಬಂಧಿಗೆ ಸರ್ಕಾರಿ ಉದ್ಯೋಗ ನೀಡಬೇಕು ಮತ್ತು ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪರೀಕ್ಷೆಯ ಕಚ್ಚಾ ವಿಡಿಯೋ ತುಣುಕನ್ನು ಸಾರ್ವಜನಿಕಗೊಳಿಸಬೇಕು ಎಂದು ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಮಣಿಪುರವು ಮೇ 2023ರಲ್ಲಿ ಭುಗಿಲೆದ್ದ ಮೈತೇಯಿ ಮತ್ತು ಕುಕಿ ಝೋ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷದ ಇದುವರೆಗೆ ಕನಿಷ್ಠ 258 ಜನರು ಸಾವನ್ನಪ್ಪಿದ್ದಾರೆ ಮತ್ತು 59,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ವಿವಿಧ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಈ ವರ್ಷದ ಫೆಬ್ರವರಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.
ಏಪ್ರಿಲ್ 19 ಮತ್ತು ಏಪ್ರಿಲ್ 21ರ ನಡುವೆ, ಮಣಿಪುರ ಪೊಲೀಸರು ರಾಜ್ಯದಲ್ಲಿ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷ (ನೊಂಗ್ಡ್ರೆನ್‌ಖೋಂಬಾ) ಸೇರಿದಂತೆ ಹಲವಾರು ನಿಷೇಧಿತ ಸಂಘಟನೆಗಳ ಕನಿಷ್ಠ 18 ಸದಸ್ಯರನ್ನು ಬಂಧಿಸಿದ್ದಾರೆ.
‘ಪಹಲ್ಗಾಮ್‌ನಲ್ಲಿ ಭದ್ರತಾ ಲೋಪವಾಗಿದೆ’: ಸರ್ವಪಕ್ಷ ಸಭೆಯಲ್ಲಿ ಒಪ್ಪಿಕೊಂಡ ಮೋದಿ ಸರ್ಕಾರ; ವರದಿ


