MANIPUR ELECTION RESULTS | 60 ವಿಧಾನಸಭಾ ಕ್ಷೇತ್ರಗಳಿರುವ ಮಣಿಪುರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸರಳ ಬಹುಮತ ಗಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅತಿದೊಡ್ಡ ಸೋಲನ್ನು ಅನುಭವಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಎನ್. ಲೋಕೇನ್ ಸಿಂಗ್ ಅವರು ನಂಬೋಲ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ತೌನೊಜಾಮ್ ಬಸಂತ ಕುಮಾರ್ ಸಿಂಗ್ ವಿರುದ್ಧ ಸೋಲು ಕಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಬಿರೆನ್ ಸಿಂಗ್ ಅವರು ಹೈಂಗಾಗ್ ಕ್ಷೇತ್ರದಲ್ಲಿ ಜಯಗಳಿಸಿದ್ದರೆ, ಉಪಮುಖ್ಯಮಂತ್ರಿ ವೈ. ಜಯ್‌ಕುಮಾರ್ ಸಿಂಗ್ ಅವರು ಉರಿಪೋಕ್‌ನಲ್ಲಿ ಬಿಜೆಪಿಯ ಖ್ವೈರಕ್‌ಪಂ ರಘುಮಣಿ ಸಿಂಗ್ ವಿರುದ್ಧ ಸೋತಿದ್ದು, ಈ ಮೂಲಕ ಎನ್‌ಪಿಪಿಗೂ ಹೊಡೆತ ಬಿದ್ದಿದೆ. ಒಟ್ಟು 60 ಕ್ಷೇತ್ರಗಳ ಮಣಿಪುರದಲ್ಲಿ ಆಡಳಿತ ನಡೆಸಲು 31 ಕ್ಷೇತ್ರಗಳ ಅಗತ್ಯವಿದೆ.
ಬಿಜೆಪಿ ರಾಜ್ಯದಲ್ಲಿ 32 ಕ್ಷೇತ್ರಗಳನ್ನು ಗೆದ್ದುಕೊಂಡು ಸರಳ ಬಹುಮತವನ್ನು ಪಡೆದುಕೊಂಡಿದೆ. ಈ ಹಿಂದಿನ ಅತ್ಯಂತ ದೊಡ್ಡ ಪಕ್ಷವಾದ ಕಾಂಗ್ರೆಸ್ 5 ಕ್ಷೇತ್ರವನ್ನು ಮಾತ್ರ ಗೆದ್ದುಕೊಂಡಿದ್ದು, ಹೀನಾಯ ಸೋಲನ್ನು ಅನುಭವಿಸಿದೆ.
ಈ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು 6 ಕ್ಷೇತ್ರಗಳಲ್ಲಿ ಜಯಗಳಿಸಿದೆ.
ಬಿಜೆಪಿಯ ಜೊತೆಗೆ ಹಿಂದೆ ಮೈತ್ರಿ ಮಾಡಿಕೊಂಡಿದ್ದ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (NPF) ಈಗಾಗಲೇ 5 ಕ್ಷೇತ್ರವನ್ನು ಗೆದ್ದುಕೊಂಡಿದೆ. ನ್ಯಾಶನಲ್ ಪೀಪಲ್ಸ್ ಪಾರ್ಟಿ (NPP) 7 ಕ್ಷೇತ್ರವನ್ನು ಗೆದ್ದುಕೊಂಡಿದ್ದು ರಾಜ್ಯದ ಎರಡನೆ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಪ್ರಮುಖ ವಿರೋಧ ಪಕ್ಷವಾಗಿ ಆಯ್ಕೆಯಾಗಿದೆ. ಈ ಹಿಂದೆ ಈ ಎರಡೂ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
2017ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಬಿಜೆಪಿ 21 ಕ್ಷೇತ್ರಗಳನ್ನು ಗೆದ್ದುಕೊಂಡರೆ, NPF ಮತ್ತು NPP ತಲಾ ನಾಲ್ಕು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಪಕ್ಷೇತರ ಮತ್ತು ಇತರೆ ಪಕ್ಷಗಳು ಮೂರು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
ಮಣಿಪುರದ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಕೆಳಗಿನಂತಿದೆ.
ರಾಜ್ಯದಲ್ಲಿ 60 ಕ್ಷೇತ್ರಗಳಿದ್ದು, ಬಹುಮತಕ್ಕೆ 31 ಸ್ಥಾನಗಳ ಸಾಕಾಗುತ್ತವೆ.
- ಬಿಜೆಪಿ – 32 ಗೆಲುವು
- NPP – 7 ಗೆಲುವು
- NPF – 5 ಗೆಲುವು
- ಕಾಂಗ್ರೆಸ್ – 5 ಗೆಲುವು
- JDU – 6 ಗೆಲುವು
- ಪಕ್ಷೇತರ – 3 ಗೆಲುವು
- KPA – 2 ಗೆಲುವು
ಇದನ್ನೂ ಓದಿ: ವಿಶ್ಲೇಷಣೆ: ಮತ್ತೊಂದು ಆತ್ಮ ವಿಮರ್ಶೆಯ ಹೊಸ್ತಿಲಲ್ಲಿರುವ ಕಾಂಗ್ರೆಸ್ ಸೋತದ್ದೆಲ್ಲಿ?


