ಚಳಿಗಾಲ ಅಧಿವೇಶನ ರದ್ದುಗೊಳಿರುವ ಮಣಿಪುರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದ್ದು, ಕಾನೂನು ಸಚಿವ ಬಸಂತ ಕುಮಾರ್ ಸಿಂಗ್ ಅವರು ಪ್ರತಿಪಕ್ಷದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ‘ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ನಡೆಸದೆ ಯಾವುದೇ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಚಳಿಗಾಲದ ಅಧಿವೇಶನ ನಡೆಸದೆ ರಾಜ್ಯ ಸರ್ಕಾರ ಸಂವಿಧಾನವನ್ನು ಉಲ್ಲಂಘಿಸುತ್ತಿದೆ ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಓ ಇಬೋಬಿ ಸಿಂಗ್ ಹೇಳಿದ್ದರು.
ಮಂಗಳವಾರ (ಡಿಸೆಂಬರ್ 24) ಇಂಫಾಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಸಂತ ಕುಮಾರ್ ಸಿಂಗ್, ಸಂವಿಧಾನ ಮತ್ತು ಮಣಿಪುರ ವಿಧಾನಸಭೆಯ ಕಡ್ಡಾಯ ನಿಬಂಧನೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಯಾವಾಗಲೂ ‘ಸಂಪೂರ್ಣ ಪ್ರಯತ್ನಗಳನ್ನು’ ಮಾಡುತ್ತದೆ ಎಂದು ಹೇಳಿದರು.
ಸಂವಿಧಾನದ 174 ನೇ ವಿಧಿಯ ಪ್ರಕಾರ, ವಿಧಾನಸಭೆಯು ಪ್ರತಿ ವರ್ಷ ಕನಿಷ್ಠ ಎರಡು ಸಭೆಗಳನ್ನು ನಡೆಸಬೇಕು. ಎರಡೂ ಅಧಿವೇಶನಗಳ ನಡುವೆ ಆರು ತಿಂಗಳ ಅಂತರ ಇರಬಾರದು ಎಂದು ಅವರು ಹೇಳಿದರು.
ಮಣಿಪುರ ವಿಧಾನಸಭೆಯ ಪರಿಚ್ಛೇದ 17ಎ ಅಡಿಯಲ್ಲಿ, ಸಂವಿಧಾನದ 174 ನೇ ವಿಧಿಗೆ ಒಳಪಟ್ಟು ಸದನವು ವಾರ್ಷಿಕವಾಗಿ ಮೂರು ಅಧಿವೇಶನಗಳನ್ನು ನಡೆಸುವ ಅಗತ್ಯವಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮಣಿಪುರ ವಿಧಾನಸಭೆಯ ನಿಯಮಗಳು ಮತ್ತು ಕಾರ್ಯವಿಧಾನಗಳು ಸಂವಿಧಾನದ 174 ನೇ ವಿಧಿಗೆ ಒಳಪಟ್ಟಿರುವುದರಿಂದ, ವಿಧಾನಸಭೆಯ 17 ಎ ಪರಿಚ್ಛೇದಕ್ಕಿಂತ ಇದು ಪ್ರಾಶಸ್ತ್ಯವನ್ನು ಪಡೆಯುತ್ತದೆ. ಹಾಗಾಗಿ, ರಾಜ್ಯ ಸರ್ಕಾರ ಎರಡು ಬಾರಿ ವಿಧಾನಸಭೆ ಅಧಿವೇಶನ ನಡೆಸಿದ್ದು, ಸಂವಿಧಾನದ ಉಲ್ಲಂಘನೆಯಾಗುವುದಿಲ್ಲ ಎಂದರು.
ಸರ್ಕಾರವು 2017 ರಿಂದ 2020 ರವರೆಗೆ ವಿಧಾನಸಭೆಯ ಮೂರು ಅಧಿವೇಶನಗಳನ್ನು ನಡೆಸಿದೆ ಎಂದು ಸಿಂಗ್ ಹೇಳಿದರು. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ಮೂರು ಅಧಿವೇಶನಗಳನ್ನು ನಡೆಸಲಾಗಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಕಳೆದ ವರ್ಷ ಅಧಿವೇಶನಗಳನ್ನು ನಡೆಸಲಾಗಿಲ್ಲ.
ನಮ್ಮ ವಿರುದ್ಧ ಆರೋಪ ಮಾಡುವ ಮೊದಲು ಸಂವಿಧಾನವನ್ನು ಅರ್ಥಮಾಡಿಕೊಳ್ಳಿ ಎಂದು ಸಿಂಗ್ ಹೇಳಿದ್ದಾರೆ.
ಮಣಿಪುರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ವಿಧಾನಸಭೆಯ ಎರಡು ಅಧಿವೇಶನಗಳನ್ನು ನಡೆಸುವ ಅಭ್ಯಾಸವನ್ನು ಅನೇಕ ಬಾರಿ ಅನುಸರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. 2003, 2007, 2008, 2009 ಮತ್ತು 2016 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅಡಿಯಲ್ಲಿ ಕೇವಲ ಎರಡು ಅಧಿವೇಶನಗಳು ನಡೆದ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು.
ಇದನ್ನೂ ಓದಿ; ‘ಶ್ರೀಲಂಕಾ ಬಂಧಿಸಿರುವ ಮೀನುಗಾರರ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಿ..’; ವಿದೇಶಾಂಗ ಸಚಿವರಿಗೆ ಸಿಎಂ ಸ್ಟಾಲಿನ್ ಪತ್ರ


