ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ವೇಳೆ, ಅಂದರೆ ಮೇ 2023ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 20 ವರ್ಷದ ಕುಕಿ ಸಮುದಾಯದ ಯುವತಿ, ದೀರ್ಘಕಾಲದ ಅನಾರೋಗ್ಯದ ನಂತರ ಜನವರಿ 10ರಂದು ನಿಧನರಾದರು ಎಂದು ನ್ಯೂಸ್‌ಲಾಂಡ್ರಿ ಶನಿವಾರ (ಜ.17) ವರದಿ ಮಾಡಿದೆ.
ತನ್ನ ಮೇಲೆ ನಡೆದ ದೌರ್ಜನ್ಯದಿಂದ ಉಂಟಾದ ದೈಹಿಕ ಗಾಯ ಮತ್ತು ಮಾನಸಿಕ ಆಘಾತದಿಂದ ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ ಎಂದು ಕುಟುಂಬಸ್ಥರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಮೇ 15, 2023ರಂದು ಇಂಫಾಲದಲ್ಲಿ ಎಟಿಎಂನಿಂದ ಹಣ ಪಡೆಯಲು ತೆರಳಿದ್ದಾಗ ಯುವತಿಯನ್ನು ಅಪಹರಿಸಲಾಗಿತ್ತು. ಆಕೆಯ ಹೇಳಿಕೆಯ ಪ್ರಕಾರ, ಹಲವು ಗಂಟೆಗಳ ಕಾಲ ಇಂಫಾಲ ನಗರದ ಹಲವು ಕಡೆಗಳಲ್ಲಿ ಆಕೆಯ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ಗುಂಪು ಗುಂಪಾಗಿ ಪುರುಷರು ಆಕೆಯನ್ನು ಬಲವಂತವಾಗಿ ವಾಹನಕ್ಕೆ ಹತ್ತಿಸಿಕೊಂಡು ಹೋಗಿದ್ದರು. ಅವರಲ್ಲಿ ಕೆಲವರು, ತೀವ್ರಗಾಮಿ ಮೈತೆಯಿ ಸಂಘಟನೆಯಾದ ‘ಆರಂಬೈ ತೆಂಗೋಲ್’ಗೆ ಸಂಬಂಧಿಸಿದವರೆಂದು ಆರೋಪಿಸಲಾಗಿದೆ. ಕೊನೆಗೆ ಯುವತಿ ಒಬ್ಬರು ಆಟೋ-ರಿಕ್ಷಾ ಚಾಲಕನ ಸಹಾಯದಿಂದ ತಪ್ಪಿಸಿಕೊಂಡು ಬಂದಿದ್ದರು.
ಯುವತಿಯನ್ನು ಮೊದಲು ಕಾಂಗ್ಪೋಕ್ಪಿ ಜಿಲ್ಲೆಯ ಪರಿಹಾರ ಶಿಬಿರಗಳಿಗೆ ಕರೆದೊಯ್ಯಲಾಗಿತ್ತು. ನಂತರ ಮಣಿಪುರ ಮತ್ತು ನಾಗಾಲ್ಯಾಂಡ್‌ನ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ನಾವು ಸ್ವತಂತ್ರವಾಗಿ ಪರಿಶೀಲಿಸಿದ ಕೊಹಿಮಾದ ವೈದ್ಯಕೀಯ ವರದಿಯು ಆಕೆಯ ಗಾಯಗಳನ್ನು ‘ಆಕ್ರಮಣ ಮತ್ತು ಅತ್ಯಾಚಾರದ ಆರೋಪದ ಪ್ರಕರಣ’ ಎಂದು ದಾಖಲಿಸಿದೆ ಎಂದು scroll.in ವರದಿ ಮಾಡಿದೆ.
ಈ ಪ್ರಕರಣವನ್ನು ಮೊದಲು ಜೂನ್ 2023ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ವರದಿ ಮಾಡಲಾಗಿತ್ತು ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ.
ಜುಲೈ 2023ರಲ್ಲಿ ಯುವತಿ ಪೊಲೀಸ್ ಹೇಳಿಕೆಯನ್ನು ಸಲ್ಲಿಸಿದ್ದರು. ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ ವರ್ಗಾಯಿಸುವ ಮೊದಲು ಶೂನ್ಯ ಎಫ್‌ಐಆರ್ ದಾಖಲಿಸಲಾಗಿತ್ತು. ಅಪರಾಧ ಎಲ್ಲಿ ಸಂಭವಿಸಿದೆ ಎಂಬುವುದನ್ನು ಲೆಕ್ಕಿಸದೆ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಬಹುದು. ನಂತರ ಅದನ್ನು ಈ ವಿಷಯದ ಬಗ್ಗೆ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು.
ಘಟನೆ ನಡೆದು ಎರಡು ವರ್ಷಗಳಿಗೂ ಹೆಚ್ಚು ಸಮಯ ಕಳೆದರೂ, ಇದುವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ವರದಿಗಳು ಹೇಳಿವೆ.
ತನ್ನ ಮೇಲೆ ನಡೆದ ದೌರ್ಜನ್ಯದ ಆಘಾತದಿಂದಾಗಿ ನನ್ನ ಮಗಳು ಉಸಿರಾಟದ ತೊಂದರೆ, ನಿದ್ರಾಹೀನತೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಳು ಎಂದು ಸಂತ್ರಸ್ತೆಯ ತಾಯಿ ಲಿಂಗ್ನೆಯ್ ಹಾವೋಕಿಪ್ ಹೇಳಿದ್ದಾಗಿ ನ್ಯೂಸ್‌ಲಾಂಡ್ರಿ ವರದಿ ಮಾಡಿದೆ.
“ಕಳೆದ ಎರಡು ವರ್ಷಗಳಿಂದ ಆಕೆ ನಿರಂತರ ಭಯದಲ್ಲಿ ಬದುಕುತ್ತಿದ್ದಳು. ಆಕೆ ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ನನಗೆ ಹೇಳುತ್ತಿದ್ದಳು. ಒಮ್ಮೆ, ತನಗೆ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ. ಅದರಿಂದ ಆಕೆ ತುಂಬಾ ದುರ್ಬಲಳಾಗಿದ್ದಾಳೆಂದು ನನಗೆ ಹೇಳಿದ್ದಳು” ಎಂದು ಹಾವೋಕಿಪ್ ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.
ಯುವತಿಗೆ ಸಂತಾಪ ಸೂಚಿಸಿ ಕುಕಿ-ಝೋ ಸಮುದಾಯವು ಶನಿವಾರ ಚುರಚಂದಪುರದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿದೆ.
ಮಣಿಪುರದಲ್ಲಿ ಮೇ 2023ರಲ್ಲಿ ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ನಂತರ ಕನಿಷ್ಠ 260 ಜನರು ಸಾವನ್ನಪ್ಪಿದ್ದಾರೆ ಮತ್ತು 59,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.


