ಮಣಿಪುರದ ಇಂಫಾಲ್ ಕಣಿವೆ, ಜಿರಿಬಾಮ್ ಜಿಲ್ಲೆಯ ಶಾಲೆಗಳು ಮತ್ತು ಕಾಲೇಜುಗಳು 13 ದಿನಗಳ ವಿರಾಮದ ನಂತರ ಶುಕ್ರವಾರ ತರಗತಿಗಳನ್ನು ಪುನರಾರಂಭಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಣಿವೆ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸುವುದರೊಂದಿಗೆ ರಾಜ್ಯದ ರಾಜಧಾನಿ ಇಂಫಾಲ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರದಲ್ಲಿ ಬಸ್‌ಗಳಿಗಾಗಿ ಕಾಯುತ್ತಿರುವುದು ಕಂಡುಬಂದಿದೆ.
ಶಾಲಾ ಶಿಕ್ಷಣ ನಿರ್ದೇಶನಾಲಯ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಗುರುವಾರ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಬಿಷ್ಣುಪುರ್, ಕಕ್ಚಿಂಗ್, ತೌಬಲ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ತರಗತಿಗಳನ್ನು ಪುನರಾರಂಭಿಸಲು ಆದೇಶಿಸಿದೆ.
ಸರ್ಕಾರಿ ಅಧಿಕಾರಿ ಕೆ ಬಿಕೆನ್ ಸಿಂಗ್, “ಶಾಲೆಗಳು ಪುನರಾರಂಭವಾಗಿರುವುದು ದೊಡ್ಡ ಸಮಾಧಾನವಾಗಿದೆ ಎಂದು ಹೇಳಿದ್ದಾರೆ. ಇಂಫಾಲ್‌ನ ಖಾಸಗಿ ಶಾಲೆಯಲ್ಲಿ 6 ಮತ್ತು 7 ನೇ ತರಗತಿಯಲ್ಲಿರುವ ಓದುತ್ತಿರುವ ನನ್ನ ಮಕ್ಕಳ ಅಂತಿಮ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಡಿಸೆಂಬರ್ ಎರಡನೇ ವಾರದಿಂದ ಪರೀಕ್ಷೆ ಪ್ರಾರಂಭವಾಗಲಿದೆ. ಆದರೆ ಪಠ್ಯಕ್ರಮದ ಭಾಗಗಳು ಇನ್ನೂ ಪೂರ್ಣಗೊಂಡಿಲ್ಲ, ಶಾಲೆಗಳ ಪುನರಾರಂಭವು ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಮಣಿಪುರ-ಅಸ್ಸಾಂನ ಜಿರಿ ಮತ್ತು ಬರಾಕ್ ನದಿಯಲ್ಲಿ ಜಿರಿಬಾಮ್‌ನಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳ ಮೃತದೇಹಗಳನ್ನು ವಶಪಡಿಸಿಕೊಂಡ ನಂತರ ಕಣಿವೆ ಜಿಲ್ಲೆಗಳು ಮತ್ತು ಜಿರಿಬಾಮ್‌ನಲ್ಲಿ ನವೆಂಬರ್ 16 ರಿಂದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.
ಈ ಮಧ್ಯೆ, ಅಧಿಕೃತ ಆದೇಶದ ಪ್ರಕಾರ ಜನರು ಅಗತ್ಯ ವಸ್ತುಗಳು ಮತ್ತು ಔಷಧಿಗಳನ್ನು ಖರೀದಿಸಲು ಅನುವು ಮಾಡಿಕೊಡಲು ಎಲ್ಲಾ ಐದು ಕಣಿವೆ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆ 5 ರಿಂದ ಸಂಜೆ 4 ರವರೆಗೆ ಕರ್ಫ್ಯೂ ಸಡಿಲಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
“ಜಿಲ್ಲೆಗಳಲ್ಲಿ ಸುಧಾರಿಸುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯಿಂದಾಗಿ, ಸಾರ್ವಜನಿಕರಿಗೆ ಔಷಧಿಗಳು ಮತ್ತು ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಕೂಲವಾಗುವಂತೆ ಜನರ ಸಂಚಾರದ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ಅವಶ್ಯಕತೆಯಿದೆ. ಜನರು ತಮ್ಮ ನಿವಾಸಗಳ ಹೊರಗೆ ಸಂಚಾರ ನಿರ್ಬಂಧವನ್ನು ಈ ಮೂಲಕ ತೆಗೆದುಹಾಕಲಾಗಿದೆ” ಎಂದು ಸರ್ಕಾರದ ಆದೇಶ ತಿಳಿಸಿದೆ.
ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಬಿಷ್ಣುಪುರ್, ಕಕ್ಚಿಂಗ್ ಮತ್ತು ತೌಬಲ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಪ್ರತ್ಯೇಕವಾಗಿ ಆದೇಶ ಹೊರಡಿಸಿದ್ದಾರೆ.
“ಆದರೂ, ಸಡಿಲಿಕೆಯು ಸಕ್ಷಮ ಪ್ರಾಧಿಕಾರದ ಮೂಲಕ ಅನುಮೋದನೆಯನ್ನು ಪಡೆಯದೆ ಯಾವುದೇ ಸಭೆ, ಧರಣಿ, ರ್ಯಾಲಿಯನ್ನು ಒಳಗೊಂಡಿರುವುದಿಲ್ಲ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನವೆಂಬರ್ 11 ರಂದು ಭದ್ರತಾ ಪಡೆಗಳು ಮತ್ತು ಶಂಕಿತ ಕುಕಿ-ಜೋ ಉಗ್ರಗಾಮಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 10 ಬಂಡುಕೋರರ ಸಾವಿಗೆ ಕಾರಣವಾದ ನಂತರ, ಜಿರಿಬಾಮ್‌ನ ಪರಿಹಾರ ಶಿಬಿರದಿಂದ ಮೈತೇಯಿ ಸಮುದಾಯಕ್ಕೆ ಸೇರಿದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾದ ಬಳಿಕ ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಂಡಿತು. ಆ ಆರು ಮಂದಿಯ ಶವಗಳು ನಂತರ ಪತ್ತೆಯಾಗಿವೆ.
ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈತೇಯಿ ಮತ್ತು ಪಕ್ಕದ ಬೆಟ್ಟಗಳ ಮೂಲದ ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ; ಫೆಂಗಲ್ ಚಂಡಮಾರುತ ಪರಿಣಾಮ; ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಮಳೆ, ಶಾಲಾ-ಕಾಲೇಜುಗಳು ಬಂದ್


