Homeಮುಖಪುಟಮಣಿಪುರ ಹಿಂಸಾಚಾರ: ಬಂಡಾಯ ಗುಂಪುಗಳೊಂದಿಗೆ ಮಾತುಕತೆ ನಡೆಸದೆ ಸಂವಾದ ಸಾಧ್ಯವಿಲ್ಲ ಎಂದ ಕುಕಿ ಗುಂಪುಗಳು 

ಮಣಿಪುರ ಹಿಂಸಾಚಾರ: ಬಂಡಾಯ ಗುಂಪುಗಳೊಂದಿಗೆ ಮಾತುಕತೆ ನಡೆಸದೆ ಸಂವಾದ ಸಾಧ್ಯವಿಲ್ಲ ಎಂದ ಕುಕಿ ಗುಂಪುಗಳು 

- Advertisement -
- Advertisement -

ಸಂಘರ್ಷ ಪೀಡಿತ ಮಣಿಪುರದಲ್ಲಿರುವ ಮೈತೇಯಿ ಗುಂಪನ್ನು ಕೆರಳಿಸುವ ಬೆಳವಣಿಗೆಯಲ್ಲಿ, ಕುಕಿ ಬಂಡಾಯ ಗುಂಪುಗಳೊಂದಿಗೆ ‘ಸಮರ್ಪಕ ರಾಜಕೀಯ ಸಂವಾದ’ ಪುನರಾರಂಭವಾಗುವವರೆಗೆ ಸರ್ಕಾರದೊಂದಿಗೆ ಸಂವಾದದಲ್ಲಿ ಭಾಗವಹಿಸುವುದಿಲ್ಲ ಎಂದು ಕುಕಿ ಗುಂಪುಗಳು ಮತ್ತು ಸಮುದಾಯವನ್ನು ಪ್ರತಿನಿಧಿಸುವ ಶಾಸಕರು ಶುಕ್ರವಾರ ಕುಕಿ ಸಂಘಟನೆಗಳು ಕಾರ್ಯಾಚರಣೆಗಳ ಅಮಾನತು (ಎಸ್‌ಒಎಸ್‌) ಒಪ್ಪಂದ ಸಭೆಯಲ್ಲಿ ನಿರ್ಧರಿಸಿದರು.

ಎಸ್‌ಒಎಸ್‌ ಗುಂಪುಗಳ ನಾಯಕರು, ಕುಕಿ-ಝೋ ಶಾಸಕರು ಮತ್ತು ಕುಕಿ-ಝೋ-ಹ್ಮರ್ ಸಮುದಾಯಗಳ ನಾಗರಿಕ ಸಮಾಜ ಸಂಘಟನೆಗಳ ಅತ್ಯುನ್ನತ ಸಂಸ್ಥೆಯಾದ ಕುಕಿ ಝೋ ಕೌನ್ಸಿಲ್ (ಕೆಝಡ್‌ಸಿ) ಭಾಗವಹಿಸಿದ್ದ ಸಭೆಯಲ್ಲಿ ಇದನ್ನು ನಿರ್ಧರಿಸಲಾಯಿತು. ಗುವಾಹಟಿಯ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ನಡೆದ ಸಭೆ ಸುಮಾರು ಆರು ಗಂಟೆಗಳ ಕಾಲ ನಡೆಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಎಸ್ಒಎಸ್‌ ಗುಂಪುಗಳು ಭವಿಷ್ಯದ ಮಾತುಕತೆಗಳಲ್ಲಿ ನೇತೃತ್ವ ವಹಿಸುತ್ತವೆ ಎಂದು ಸಭೆ ನಿರ್ಧರಿಸಿತು.

“ಇನ್ನು ಮುಂದೆ, ಎಸ್‌ಒಎಸ್‌ ಗುಂಪುಗಳು ಮಾತುಕತೆಯಲ್ಲಿ ಕುಕಿ-ಝೋ ಸಮುದಾಯಗಳನ್ನು ಪ್ರತಿನಿಧಿಸುತ್ತವೆ ಎಂದು ನಾವು ಶೀಘ್ರದಲ್ಲೇ ಕೇಂದ್ರಕ್ಕೆ ಅಧಿಕೃತವಾಗಿ ತಿಳಿಸುತ್ತೇವೆ” ಎಂದು ಸಭೆಯಲ್ಲಿ ಭಾಗವಹಿಸಿದ್ದ ಕುಕಿ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್‌ ಪತ್ರಿಕೆ ವರದಿ ಮಾಡಿದೆ. 10 ಕುಕಿ-ಝೋ ಶಾಸಕರಲ್ಲಿ ಆರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಇಲ್ಲಿಯವರೆಗೆ, ಏಪ್ರಿಲ್ 5 ರಂದು ನವದೆಹಲಿಯಲ್ಲಿ ನಡೆದ ಮಾತುಕತೆ ಸೇರಿದಂತೆ ಕೆಝಡ್‌ಸಿ ಮಾತುಕತೆಗಳಲ್ಲಿ ಮುಂದಾಳತ್ವ ವಹಿಸಿದೆ. ಮೇ 2023 ರಲ್ಲಿ ಸಂಘರ್ಷ ಪ್ರಾರಂಭವಾದ ನಂತರ ಕುಕಿ ಮತ್ತು ಮೈತೇಯಿ ಸಮುದಾಯಗಳನ್ನು ಪ್ರತಿನಿಧಿಸುವ ಸಂಘಟನೆಗಳು ಮೊದಲ ಬಾರಿಗೆ ಭೇಟಿಯಾದವು.

ಕುಕಿ ರಾಷ್ಟ್ರೀಯ ಸಂಸ್ಥೆ ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ ಬ್ಯಾನರ್ ಅಡಿಯಲ್ಲಿ ಕನಿಷ್ಠ 25 ಬಂಡಾಯ ಗುಂಪುಗಳು 2008 ರಿಂದ ಸರ್ಕಾರದೊಂದಿಗೆ ಎಸ್‌ಒಎಸ್‌ ಅಡಿಯಲ್ಲಿವೆ. 2,100 ಕ್ಕೂ ಹೆಚ್ಚು ಕಾರ್ಯಕರ್ತರು ನಿಗದಿಪಡಿಸಿದ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಈ ಕ್ರಮವು ಮೈತೇಯಿ ಗುಂಪುಗಳನ್ನು ಕೆರಳಿಸುವ ಸಾಧ್ಯತೆಯಿದೆ, ಅವರು ಕುಕಿ ಬಂಡಾಯ ಗುಂಪುಗಳೊಂದಿಗಿನ ಎಸ್‌ಒಎಸ್‌ ಒಪ್ಪಂದವನ್ನು ರದ್ದುಗೊಳಿಸಬೇಕು, ಮಾತುಕತೆಗಳನ್ನು ಮುಂದುವರಿಸುವ ಮೊದಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಎಸ್‌ಒಎಸ್‌ ಗುಂಪುಗಳು ನಮ್ಮೊಂದಿಗೆ ಸಂಘರ್ಷದಲ್ಲಿ ತೊಡಗಿವೆ ಎಂದು ಮೈತೇಯಿಗಳು ಹೇಳಿಕೊಳ್ಳುತ್ತಾರೆ. “ಅವರು ತಮ್ಮ ಬೇಡಿಕೆಯನ್ನು ಬಹಿರಂಗಗೊಳಿಸಲಿ, ನಂತರ ನಾವು ಪ್ರತಿಕ್ರಿಯಿಸುತ್ತೇವೆ. ನಮ್ಮ ನಿಲುವು ಸ್ಪಷ್ಟವಾಗಿದೆ, ಯಾವುದೇ ಸಂದರ್ಭದಲ್ಲಿ ನಾವು ದಂಗೆಕೋರ ಗುಂಪುಗಳೊಂದಿಗೆ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ” ಎಂದು ಮೈತೇಯಿ ನಾಯಕರೊಬ್ಬರು ಹೇಳಿದರು.

ಬಿಜೆಪಿ ಅಥವಾ ಕೇಂದ್ರವು ಮಣಿಪುರದ ಹೊಸ ಸರ್ಕಾರಕ್ಕೆ ಸೇರಲು 10 ಕುಕಿ-ಝೋ ಶಾಸಕರನ್ನು ವಿನಂತಿಸಿದರೆ ಕೆಲವು ಷರತ್ತುಗಳನ್ನು ಹಾಕಲು ಸಭೆಯು ನಿರ್ಧರಿಸಿತು. ಆದರೂ, ನಾಯಕ ಷರತ್ತುಗಳ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು. ಹೊಸ ಸರ್ಕಾರ ರಚಿಸಲು ಕೆಲವು ಬಿಜೆಪಿ ಶಾಸಕರು ಕ್ರಮ ಕೈಗೊಂಡಿದ್ದಾರೆ ಎಂಬ ವರದಿಗಳನ್ನು ಗಮನಿಸಿದರೆ ಈ ನಿಲುವು ಮಹತ್ವದ್ದಾಗಿದೆ.

ಫೆಬ್ರವರಿಯಲ್ಲಿ ಎನ್. ಬಿರೇನ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಣಿಪುರ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ. ಹೊಸ ಸರ್ಕಾರ ರಚನೆಗಾಗಿ ಕೋರಿ ಇತ್ತೀಚೆಗೆ ಕನಿಷ್ಠ 21 ಶಾಸಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಸಂಘರ್ಷವನ್ನು ಕೊನೆಗೊಳಿಸಲು ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಮೇ 2023 ರಲ್ಲಿ ಭುಗಿಲೆದ್ದ ಮೈತೇಯಿ ಮತ್ತು ಕುಕಿಗಳನ್ನು ಒಳಗೊಂಡ ಸಂಘರ್ಷದಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ 4 ವರ್ಷದ ಬಾಲಕ ಅನುಮಾನಾಸ್ಪದ ಸಾವು: ಶಿಕ್ಷಕರಿಂದ ಹಲ್ಲೆ ಶಂಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -