ಒಂದೆಡೆ ಆಪಾದಿತ ಕುಕಿ ಬಂಡುಕೋರರ ಬೆದರಿಕೆ ಮತ್ತೊಂದೆಡೆ ಮೈತೇಯಿ ಗುಂಪಿನ ಹಿಂಸಾತ್ಮಕ ಪ್ರತಿಭಟನೆಯಿಂದ ಕಣಿವೆ ರಾಜ್ಯ ಮಣಿಪುರದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.
ನವೆಂಬರ್ 11 ರಂದು ಕುಕಿ ಬಂಡುಕೋರರಿಂದ ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾದ ಮೈತೇಯಿ ಗುಂಪಿನ ಆರು ಮಂದಿಯ ಮೃತದೇಹಗಳು ಕಳೆದ ಶುಕ್ರವಾರದಿಂದ-ಭಾನುವಾರದ ನಡುವೆ ಪತ್ತೆಯಾಗಿವೆ. ಇದರಿಂದ ರೊಚ್ಚಿಗೆದ್ದಿರುವ ಮೈತೇಯಿ ಗುಂಪು ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದೆ.
ಕರ್ಫ್ಯೂ ಆದೇಶ ಉಲ್ಲಂಘಿಸಿ ಸೋಮವಾರ (ನ.18) ಇಂಫಾಲ ಜಿಲ್ಲೆಯಲ್ಲಿ ಬೀದಿಗಿಳಿದಿದ್ದ ಮೈತೇಯಿ ಗುಂಪು, ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿದೆ. ಹಿಂಸಾಚಾರದ ಕೇಂದ್ರ ಬಿಂದುವಾದ ಜಿರಿಬಾಮ್ ಜಿಲ್ಲೆಯಲ್ಲಿ ಉದ್ರಿಕ್ತರು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದ್ದಾರೆ. ಇದನ್ನು ತಡೆಯುವವ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷ ನಡೆದಿದೆ.
ಭಾನುವಾರ (ನ.17) ರಾತ್ರಿ ಪೊಲೀಸರೊಂದಿಗಿನ ಘರ್ಷಣೆ ವೇಳೆ ಜಿರಿಬಾಮ್ ಜಿಲ್ಲೆಯಲ್ಲಿ ಮೈತೇಯಿ ಗುಂಪಿನ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಭದ್ರತಾ ಪಡೆಗಳ ಗುಂಡಿಗೆ ಅವರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಶಾಲೆ, ಚರ್ಚ್, ಮನೆಗಳಿಗೆ ಬೆಂಕಿ
ಕುಕಿ ಬಂಡುಕೋರರು ತಮ್ಮ ಸಮುದಾಯದವರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿರುವ ಮೈತೇಯಿ ಸಮುದಾಯ, ಕುಕಿಗಳ ಶಾಲೆ, ಚರ್ಚ್ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದೆ ಎಂದು ವರದಿಗಳು ಹೇಳಿವೆ.
ಐದು ಚರ್ಚ್, ಶಾಲೆ, ಪೆಟ್ರೋಲ್ ಬಂಕ್ ಮತ್ತು 14 ಮನೆಗಳಿಗೆ ಮೈತೇಯಿ ಗುಂಪು ಬೆಂಕಿ ಹಚ್ಚಿದೆ ಎಂದು ಕುಕಿ ಝೋ ಬುಡಕಟ್ಟು ಸಂಘಟನೆ ಇಂಡೀಜನಸ್ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್‌ಎಫ್) ಆರೋಪಿಸಿದೆ.
ಕಳೆದ ವಾರ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದವರು ಭಯೋತ್ಪಾದಕರಲ್ಲ. ಭದ್ರತಾ ಪಡೆಗಳನ್ನು ಕುಕಿಗಳನ್ನು ಗುರಿಯಾಗಿಸಿದೆ ಎಂದು ಕುಕಿ ಸಂಘಟನೆಗಳು ಹೇಳಿವೆ.
ಮೂರು ಪ್ರಕರಣಗಳ ಎನ್‌ಐಎ ತನಿಖೆ
ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನವೆಂಬರ್ 13 ರಂದು ಮೂರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದೆ ಎಂದು ತಿಳಿದು ಬಂದಿದೆ.
ಹೆಚ್ಚುವರಿ ಪಡೆಗಳ ರವಾನೆ
ಮಣಿಪುರದಲ್ಲಿ ಇತ್ತೀಚೆಗೆ ಮತ್ತೆ ಹಿಂಸಾಚಾರ ಭುಗಿಲೆದ್ದ ಬಳಿಕ ಕೇಂದ್ರ ಗೃಹ ಸಚಿವಾಲಯ 20 ಸಿಎಪಿಎಫ್ ಕಂಪನಿಗಳನ್ನು (ಸಿಆರ್‌ಪಿಎಫ್‌ನ 15 ಮತ್ತು ಬಿಎಸ್‌ಎಫ್‌ನ 5) ರವಾನಿಸಿತ್ತು. ಈಗ ಹೆಚ್ಚುವರಿಯಾಗಿ 50 ಕಂಪನಿಗಳನ್ನು ಈ ವಾರಾಂತ್ಯದೊಳಗೆ ಮಣಿಪುರ ತಲುಪಲಿವೆ. 35 ಸಿಆರ್‌ಪಿಎಫ್ ಮತ್ತು ಇನ್ನುಳಿದ ಕಂಪನಿಗಳನ್ನು ಬಿಎಸ್‌ಎಫ್‌ನಿಂದ ರವಾನಿಸಲಾಗುತ್ತದೆ.
ಇದನ್ನೂ ಓದಿ : ಮತಗಟ್ಟೆಗಳಲ್ಲಿ ಮೊಬೈಲ್ ನಿಷೇಧ | ಚುನಾವಣೆ ಆಯೋಗದ ಆದೇಶ ಎತ್ತಿಹಿಡಿದ ಬಾಂಬೆ ಹೈಕೋರ್ಟ್


