ಕಳೆದ ಒಂದು ವರ್ಷದಲ್ಲಿ ಛತ್ತೀಸ್‌ಗಢದ ದಟ್ಟ ಕಾಡುಗಳಲ್ಲಿ ಮತ್ತು ತೆಲಂಗಾಣ, ಒಡಿಶಾ ಮತ್ತು ಮಹಾರಾಷ್ಟ್ರದ ಗಡಿಗಳಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹಲವಾರು ಉನ್ನತ ಮಾವೋವಾದಿ ನಾಯಕರು ಮತ್ತು ಕೇಡರ್(ಕಾರ್ಯಕರ್ತ)ಗಳನ್ನು ಕಳೆದುಕೊಂಡಿರುವ ನಿಷೇಧಿತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ), ತನ್ನ ಬೌದ್ಧಿಕ ನೆಲೆ ಮತ್ತು ಸೈದ್ಧಾಂತಿಕ ಬಲವನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರ ಅಂಬೋಣವಾಗಿದೆ.
ಕಳೆದ ಎರಡು ದಶಕಗಳಲ್ಲಿ ಮಾವೋವಾದಿ (ನಕ್ಸಲ್) ಸಂಘಟನೆಯ ಮೇಲೆ ಪ್ರಾಬಲ್ಯ ಹೊಂದಿದ್ದ ತೆಲುಗು ರಾಜ್ಯಗಳಿಂದ ಉನ್ನತ ಮಟ್ಟದಲ್ಲಿ ಬೌದ್ಧಿಕ ನಾಯಕತ್ವವು ತ್ವರಿತವಾಗಿ ಕ್ಷೀಣಿಸುತ್ತಿರುವುದು ಇದರಲ್ಲಿಯ ಒಂದು ಪ್ರಮುಖ ಕಾರಣವಾಗಿದೆ. ಈ ನಕ್ಸಲ್ ಸಂಘಟನೆಯ ನಾಯಕತ್ವದ ಚುಕ್ಕಾಣಿ ಹಿಡಿದಿದ್ದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಅನೇಕ ಉನ್ನತ ನಾಯಕರು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಅಥವಾ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ ಮತ್ತು ಇನ್ನು ಮೇಲೆ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವವರು ವಯಸ್ಸಾಗುತ್ತಿದ್ದಾರೆ. ಇವರು ವಯಸ್ಸಿನ ಕಾರಣಕ್ಕಾಗಿ ದೇಶಾದ್ಯಂತ ಮಾವೋವಾದಿ ಸಿದ್ಧಾಂತವನ್ನು ಹರಡುವುದನ್ನು ಬಿಟ್ಟು, ಚಳುವಳಿಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ.
“ಪ್ರಸ್ತುತ ಮಾವೋವಾದಿ ಸಂಘಟನೆಯು ಅಳಿವು ಉಳಿವಿಗಾಗಿ ಹೋರಾಟ ನಡೆಸುತ್ತಿದೆ ಮತ್ತು ಛತ್ತೀಸ್‌ಗಢದ ದಟ್ಟ ಕಾಡುಗಳಲ್ಲಿ ಭದ್ರತಾ ಪಡೆಗಳೊಂದಿಗೆ ತೀವ್ರವಾದ ಯುದ್ಧದ ನಂತರ ಉನ್ನತ ನಾಯಕರು ಸುರಕ್ಷಿತ ವಲಯಗಳಿಗೆ ಸ್ಥಳಾಂತರಗೊಳ್ಳುವತ್ತ ಹೆಚ್ಚು ಗಮನಹರಿಸಿದ್ದಾರೆ. ಉನ್ನತ ನಾಯಕರು ಮಾವೋವಾದಿ ತತ್ವಶಾಸ್ತ್ರದ ಕುರಿತು ಕೇಡರ್‌ಗಳಿಗೆ ರಾಜಕೀಯ ತರಗತಿಗಳನ್ನು ನಡೆಸುತ್ತಿರುವ ಯಾವುದೇ ಸೂಚನೆಗಳಿಲ್ಲ ಎಂದು ತೆಲಂಗಾಣ ಪೊಲೀಸರ ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಚಿಸದೆ ತಿಳಿಸಿದ್ದಾರೆ.
ಸಿಪಿಐ (ಮಾವೋವಾದಿ) ಪಕ್ಷವನ್ನು ಸೆಪ್ಟೆಂಬರ್ 21, 2004ರಂದು ಆಗಿನ ಅವಿಭಜಿತ ಆಂಧ್ರಪ್ರದೇಶದಲ್ಲಿ ಪ್ರಮುಖ ಮಾವೋವಾದಿ ಪಕ್ಷವಾದ ಸಿಪಿಐ (ಮಾರ್ಕ್ಸವಾದಿ -ಲೆನಿನ್ ವಾದಿ) ಪೀಪಲ್ಸ್ ವಾರ್ ಮತ್ತು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನೆಲೆಗೊಂಡಿದ್ದ ಮಾವೋವಾದಿ ಕಮ್ಯುನಿಸ್ಟ್ ಸೆಂಟರ್ ಆಫ್ ಇಂಡಿಯಾ (ಎಂಸಿಐ) ವಿಲೀನದ ಮೂಲಕ ರಚಿಸಲಾಯಿತು.
ಈ ವಿಲೀನಕ್ಕಾಗಿ ಮಾತುಕತೆಗಳು 2003ರಲ್ಲಿಯೇ ಪ್ರಾರಂಭವಾದರೂ, ಪೀಪಲ್ಸ್ ವಾರ್‌ನ ಉನ್ನತ ನಾಯಕರು ದಿವಂಗತ ವೈಎಸ್ ರಾಜಶೇಖರ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶದ ಆಗಿನ ಕಾಂಗ್ರೆಸ್ ಸರ್ಕಾರದೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾಗ ಹೈದರಾಬಾದ್‌ನಲ್ಲಿ ಸಿಪಿಐ (ಮಾವೋವಾದಿ) ರಚನೆಯನ್ನು ಘೋಷಿಸಲಾಯಿತು.
ಮೇಲೆ ಉಲ್ಲೇಖಿಸಿದ ಅಧಿಕಾರಿಯ ಪ್ರಕಾರ, 2004ರಲ್ಲಿ ಅದರ ರಚನೆಯ ಸಮಯದಲ್ಲಿ ಸಿಪಿಐ-ಮಾವೋವಾದಿ ಪಕ್ಷವು 16 ಸದಸ್ಯರ ಬಲವಾದ ಪಾಲಿಟ್‌ಬ್ಯೂರೋವನ್ನು ಹೊಂದಿತ್ತು. ಇದು ಸಂಘಟನೆಯ ಅತ್ಯುನ್ನತ ಘಟ್ಟವಾಗಿದ್ದು, ಸಂಘಟನೆಯ ಪ್ರಮುಖ ನೀತಿ- ನಿರ್ಧಾರ ರೂಪಿಸುವ ಘಟಕವಾಗಿದೆ ಮತ್ತು ಇದು 34 ಸದಸ್ಯ ಬಲದ ಕೇಂದ್ರ ಸಮಿತಿಯನ್ನು ಹೊಂದಿತ್ತು, (ಎಲ್ಲಾ 16 ಪೊಲಿಟ್‌ಬ್ಯೂರೋ ಸದಸ್ಯರು ಮತ್ತು ಹೆಚ್ಚುವರಿ 18 ಸದಸ್ಯರನ್ನು ಒಳಗೊಂಡಿತ್ತು), ಇದು ಮಾವೋವಾದಿ ಸಂಘಟನೆಯಲ್ಲಿ ಎರಡನೇ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ.
ಸಿಪಿಐ (ಮಾವೋವಾದಿ) ರಚನೆಯ ಸಮಯದಲ್ಲಿ ಕೇಂದ್ರ ಸಮಿತಿಯ ಮತ್ತು ಪೊಲಿಟ್‌ಬ್ಯೂರೋದ ಅನೇಕ ಸದಸ್ಯರು ಆಂಧ್ರಪ್ರದೇಶದವರಾಗಿದ್ದರು. ಈ ಹಿಂದೆ ಪೀಪಲ್ಸ್ ವಾರ್‌ನ ನೇತೃತ್ವ ವಹಿಸಿದ್ದ ಕರೀಂನಗರದ ಮುಪ್ಪಲ್ಲ ಲಕ್ಷ್ಮಣ ರಾವ್ ಅವರನ್ನು ಅದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಈಗ ಇವರ ವಯಸ್ಸು ಸುಮಾರು 79 ಎಂದು ಹೇಳಲಾಗುತ್ತಿದೆ.
2004ರ ಸಮಯದಲ್ಲಿ ಮಾವೊವಾದಿ ಪಕ್ಷದ ಪ್ರಮುಖ ತೆಲುಗು ನಾಯಕರ ಹೆಸರುಗಳು ಹೀಗಿವೆ. ಚೆರುಕುರಿ ರಾಜ್‌ಕುಮಾರ್ ಅಲಿಯಾಸ್ ಆಜಾದ್, ಮಲ್ಲೋಜುಲ ಕೋಟೇಶ್ವರ್ ರಾವ್ ಅಲಿಯಾಸ್ ಕಿಶನ್ ಜಿ, ನಂಬಲ ಕೇಶವ ರಾವ್ ಅಲಿಯಾಸ್ ಗಂಗಣ್ಣ ಅಲಿಯಾಸ್ ಬಸವರಾಜ್, ಸಂದೆ ರಾಜಮೌಳಿ, ಕಟಕಂ ಸುದರ್ಶನ್ ಅಲಿಯಾಸ್ ಆನಂದ್, ಮಲ್ಲೋಜುಲ ವೇಣುಗೋಪಾಲ್ ಅಲಿಯಾಸ್ ಭೂಪತಿ ಅಲಿಯಾಸ್ ಸೋನು, ಮಲ್ಲಲಿಸ್ಕರ್ ರೆಡ್ಡಿ, ತಿಪ್ಪಾರ್ತಿ ರಾಜವ್ಜಿ ತಿರುಪತಿ. ರೆಡ್ಡಿ, ಅಕ್ಕಿರಾಜು ಹರಗೋಪಾಲ್ ಅಲಿಯಾಸ್ ಆರ್ ಕೆ, ಚಂದ್ರಮೌಳಿ, ವಾರಣಾಸಿ ಸುಬ್ರಹ್ಮಣ್ಯಂ ಅಲಿಯಾಸ್ ಶ್ರೀಕಾಂತ್, ರಾಮಚಂದ್ರರೆಡ್ಡಿ ಅಲಿಯಾಸ್ ಚಲಪತಿ, ಮಲ್ಲ ರಾಜಿ ರೆಡ್ಡಿ ಅಲಿಯಾಸ್ ಸತ್ತೆಣ್ಣ ಮತ್ತು ಕೋಬಡ್ ಗಾಂಧಿ ಅಲಿಯಾಸ್ ಸಲೀಂ.
ನಂತರದ ವರ್ಷಗಳಲ್ಲಿ ಜಿನುಗು ನರಸಿಂಹ ರೆಡ್ಡಿ ಅಲಿಯಾಸ್ ಜಂಪಣ್ಣ, ಮೋಡೆಮ್ ಬಾಲಕೃಷ್ಣ, ಕದರಿ ಸತ್ಯನಾರಾಯಣ ರೆಡ್ಡಿ ಅಲಿಯಾಸ್ ಕೋಸ, ಕಟ್ಟಾ ರಾಮಚಂದ್ರ ರೆಡ್ಡಿ ಅಲಿಯಾಸ್ ವಿಜಯ್ ಅಲಿಯಾಸ್ ರಾಜು, ಪುಲ್ಲೂರಿ ಪ್ರಸಾದ್ ರಾವ್, ಗಾಜರ್ಲ ರವಿ, ಪಾಕ ಹನುಮಂತು, ದೀಪಾಲಿ ರವಿಕೆ, ಗಾಜರ ರಾವ್, ದೀಪಾಲಿ ರವಿಕೆ ಉದಾಯಿ, ಗಾಜರ ರಾವ್, ದೀಪಾಲಿ ರವಿಕೆ ಉದಾಯಿ, ಜೀನುಗು ನರಸಿಂಹ ರೆಡ್ಡಿ ಅಲಿಯಾಸ್ ಜಂಪಣ್ಣ, ಮೋಡೆಮ್ ಬಾಲಕೃಷ್ಣ ತಕ್ಕಲ್ಲಪಲ್ಲಿ ವಾಸುದೇವ ರಾವ್, ಅನುರಾಧಾ ಗಾಂಧಿ ಮತ್ತು ಲಂಕಾ ಪಾಪಿ ರೆಡ್ಡಿ.
2021ರ ಗುಪ್ತಚರ ವರದಿಯ ಪ್ರಕಾರ, 2004ರಲ್ಲಿ ಮಾವೊವಾದಿ ಪ್ರಾರಂಭದಲ್ಲಿ 34 ಸದಸ್ಯರನ್ನು ಹೊಂದಿತ್ತು. ಆದರೆ ಈಗ ಅದು ಪೊಲಿಟ್‌ಬ್ಯೂರೋ ಸದಸ್ಯರನ್ನು ಒಳಗೊಂಡಂತೆ ಕೇಂದ್ರ ಸಮಿತಿಯು 21 ಸದಸ್ಯರನ್ನು ಒಳಗೊಂಡಿತ್ತು. ಅದರಲ್ಲಿ 10 ಜನರು ತೆಲಂಗಾಣದವರು ಮತ್ತು ಇಬ್ಬರು ಆಂಧ್ರಪ್ರದೇಶದವರಾಗಿದ್ದಾರೆ. “ಆದಾಗ್ಯೂ, ಈ ಅಂಕಿ-ಅಂಶ ಬದಲಾಗುತ್ತಿರುತ್ತದೆ ಮತ್ತು ಕೆಲವು ಕೆಳ ಹಂತದ ನಾಯಕರನ್ನು ಉನ್ನತ ನಾಯಕತ್ವವನ್ನು ಬಲಪಡಿಸಲು ಕೇಂದ್ರ ಸಮಿತಿಗೆ ಬಡ್ತಿ ನೀಡಲಾಗುತ್ತಿದೆ ಎಂಬ ಮಾಹಿತಿ ನಮಗಿದೆ” ಎಂದು ಮೇಲೆ ಉಲ್ಲೇಖಿಸಿದ ಗುಪ್ತಚರ ಅಧಿಕಾರಿ ಹೇಳುತ್ತಾರೆ.
ಹೆಚ್ಚಿನ ತೆಲುಗು ಮಾವೋವಾದಿ ನಾಯಕರು ಉನ್ನತ ಶಿಕ್ಷಣ ಪಡೆದವರು – ಸ್ನಾತಕೋತ್ತರ ಪದವೀಧರರು, ವಕೀಲರು ಮತ್ತು ಪಿಎಚ್‌ಡಿ ಪದವಿ ಪಡೆದವರಾಗಿದ್ದಾರೆ. ಇವರೆಲ್ಲಾ ಪಕ್ಷದ ಕೇಡರ್ ಗಳು ನಿಯಮಿತ ತರಬೇತಿ ತರಗತಿಗಳನ್ನು ನಡೆಸುವ ಮೂಲಕ ಮತ್ತು ನಾಯಕರು ಮತ್ತು ಕಾರ್ಯಕರ್ತರಲ್ಲಿ ಮಾರ್ಕ್ಸ್ ವಾದ, ಲೆನಿನ್‌ವಾದ ಮತ್ತು ಮಾವೋವಾದಿ ಸಿದ್ಧಾಂತವನ್ನು ಬೆಳೆಸುವ ಮೂಲಕ ಸಂಘಟನೆಗೆ ಬೌದ್ಧಿಕ ಶಕ್ತಿಯನ್ನು ಒದಗಿಸಿದ್ದಾರೆ. ಮಾವೋವಾದಿ ಚಳುವಳಿಗೆ ಸೇರುವ ಮೊದಲು ರವಿ ಶರ್ಮಾ ಎಂಬವರು 90ರ ದಶಕದಲ್ಲಿ ದೆಹಲಿಯಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ (ICAR) ಪಿಎಚ್‌ಡಿ ಪಡೆಯುತ್ತಿದ್ದ ಕೃಷಿ ವಿಜ್ಞಾನಿಯಾಗಿದ್ದರು. ನಂತರ ಅವರು ಮಾವೋವಾದಿ ಸಂಘಟನೆಯ ಬಿಹಾರ ಮತ್ತು ಜಾರ್ಖಂಡ್ ಘಟಕಗಳ ಮುಖ್ಯಸ್ಥರಾಗಿದ್ದರು. ಇವರನ್ನು 2009ರ ಅಕ್ಟೋಬರ್ 10ರಂದು ಬಂಧಿಸಲಾಗಿದೆ.
ಆದಾಗ್ಯೂ 2005 ಮತ್ತು 2009ರ ನಡುವೆ ತೆಲುಗು ರಾಜ್ಯಗಳಿಂದ ಮಾವೋವಾದಿ ಚಳುವಳಿಗೆ ಭಾರಿ ಹಿನ್ನಡೆಯಾಯಿತು, ವಿಶೇಷವಾಗಿ ಪೊಲೀಸ್ ಪಡೆಗಳು, ಗ್ರೇಹೌಂಡ್ಸ್ ಆಂಧ್ರಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಕಠಿಣ ಕ್ರಮಕೈಗೊಂಡವು. ಬಲವಾದ ಗುಪ್ತಚರ ಜಾಲದ ಬೆಂಬಲದೊಂದಿಗೆ ಭದ್ರತಾ ಪಡೆಗಳು ಒಬ್ಬರ ನಂತರ ಒಬ್ಬರಂತೆ ನಕ್ಸಲ್ ನಾಯಕರನ್ನು ಹೊಡೆದುರುಳಿಸಿ, ಎಲ್ಲಾ ಉನ್ನತ ನಾಯಕರು ಛತ್ತೀಸ್‌ಗಢದ ಕಾಡುಗಳಿಗೆ ಮತ್ತು ಕೆಲವರು ಒಡಿಶಾಕ್ಕೆ ಹಿಮ್ಮೆಟ್ಟುವಂತೆ ಮಾಡಿದವು.
“ನಗರ ಮತ್ತು ಗ್ರಾಮೀಣ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡರಲ್ಲೂ ತೀವ್ರ ದಮನದಿಂದಾಗಿ, ಮಾವೋವಾದಿ ಸಂಘಟನೆಗೆ ತೆಲುಗು ನಾಯಕರ ನೇಮಕಾತಿ ಕಡಿಮೆಯಾಗಿದೆ. ತೆಲುಗು ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಈಗ ನಕ್ಸಲರಿಗೆ ಸಂಬಂಧಿಸಿದ ವಿದ್ಯಾರ್ಥಿ ಸಂಘಗಳಿಲ್ಲವಾಗಿವೆ ಅಥವಾ ನಿಷೇಧಕ್ಕೊಳಗಾಗಿವೆ. ಇದರ ಪರಿಣಾಮವಾಗಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಯಾವುದೇ ಬೌದ್ಧಿಕ ಚರ್ಚೆಗಳಿಲ್ಲ” ಎಂದು ವೇಣುಗೋಪಾಲ್ ಹೇಳುತ್ತಾರೆ.
“ಕಳೆದ ಒಂದು ದಶಕದಲ್ಲಿ ತೆಲುಗು ರಾಜ್ಯಗಳಿಗೆ ಸೇರಿದ ಹಲವಾರು ಉನ್ನತ ಮಾವೋವಾದಿ ನಾಯಕರ ಹತ್ಯೆಗಳು ನಡೆದಿವೆ ಮತ್ತು ಇನ್ನೂ ಕೆಲವರು ಅನಾರೋಗ್ಯ ಮತ್ತು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ” ಎಂದು ಬಂಧಿತ ನಕ್ಸಲ್ ನಾಯಕ ರವಿ ಶರ್ಮಾ ಒಪ್ಪಿಕೊಂಡಿದ್ದಾರೆ. “ಆದರೆ ಇನ್ನೂ, ಆಂಧ್ರದ ಮಾವೋವಾದಿಗಳು ಕೇಂದ್ರ ಸಮಿತಿ, ಕೇಂದ್ರ ಮಿಲಿಟರಿ ಆಯೋಗ ಮತ್ತು ದಂಡಕಾರಣ್ಯ ವಿಶೇಷ ವಲಯ ಸಮಿತಿಯಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ” ಎಂದು ಅವರು ಹೇಳಿದರು.
ಎನ್ಕೌಂಟರ್ ಗಳಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ತೆಲುಗು ಮಾವೋವಾದಿ ನಾಯಕರಲ್ಲಿ ಸಂದೆ ರಾಜಮೌಳಿ, ಚೆರುಕುರಿ ರಾಜ್ ಕುಮಾರ್ ಅಲಿಯಾಸ್ ಆಜಾದ್, ಮಲ್ಲೊಜುಲ ಕೋಟೇಶ್ವರ ರಾವ್ ಅಲಿಯಾಸ್ ಕಿಶನ್ ಜೀ, ಪಟೇಲ್ ಸುಧಾಕರ್ ರೆಡ್ಡಿ ಮತ್ತು ರಾಮಚಂದ್ರ ರೆಡ್ಡಿ ಅಲಿಯಾಸ್ ಚಲಪತಿ ಸೇರಿದ್ದಾರೆ. ಬಡೇ ಚೊಕ್ಕ ರಾವ್ ಅಲಿಯಾಸ್ ದಾಮೋದರ್ ಮತ್ತು ಪಾಕಾ ಹನುಮಂತು ಅಲಿಯಾಸ್ ಗಣೇಶ್ ಉಯಿಕೆ ಅವರಂತಹ ಇತರ ಉನ್ನತ ನಾಯಕರು ಎನ್ಕೌಂಟರ್ ಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂಬ ವರದಿಗಳಿದ್ದರೂ, ಇವರನ್ನು ಸಾವಿನ ಕುರಿತು ಯಾವುದೇ ಅಧಿಕೃತ ವರದಿಗಳಿಲ್ಲ.
ಜಿನುಗು ನರಸಿಂಹ ರೆಡ್ಡಿ ಅಲಿಯಾಸ್ ಜಂಪಣ್ಣ, ನಾರ್ಲಾ ರವಿ ಶರ್ಮಾ, ವಾರಣಾಸಿ ಸುಬ್ರಹ್ಮಣ್ಯಂ, ಟಕ್ಕಲ್ಲಪಲ್ಲಿ ವಾಸುದೇವ ರಾವ್, ಲಂಕಾ ಪಾಪಿ ರೆಡ್ಡಿ ಮತ್ತು ಕೋಬಾಡ್ ಗಾಂಧಿ ಅವರಂತಹ ಇತರ ಕೆಲವು ಕೇಂದ್ರ ಸಮಿತಿ ಸದಸ್ಯರು ಶರಣಾಗಿದ್ದಾರೆ ಅಥವಾ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ.
ಜಂಪಣ್ಣ ಅವರ ಪ್ರಕಾರ, ಎನ್ಕೌಂಟರ್ ಹತ್ಯೆಗಳು, ಬಂಧನಗಳು ಮತ್ತು ಶರಣಾಗತಿಗಳಿಂದಾಗಿ ಉನ್ನತ ನಾಯಕತ್ವದಲ್ಲಿ ತೆಲುಗು ಜನರ ಉಪಸ್ಥಿತಿ ಕಡಿಮೆಯಾಗಿರಬಹುದು, ಆದರೆ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಅನೇಕ ತೆಲುಗು ಜನರು ಇನ್ನೂ ಇದ್ದಾರೆ ಎನ್ನುತ್ತಾರೆ.
“ಸೈದ್ಧಾಂತಿಕ ಬಲಕ್ಕೆ ಸಂಬಂಧಿಸಿದಂತೆ ತೆಲುಗು ನಾಯಕರು ನಕ್ಸಲ್ ಚಳವಳಿಗೆ ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ಇಲ್ಲಿಯವರೆಗೆ ಆಲೋಚನಾ ಕ್ರಮದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮಾವೋವಾದಿ ಸಂಘಟನೆಯು ತಮ್ಮ ಕಾರ್ಯತಂತ್ರಗಳನ್ನು ಪುನರ್ ರಚಿಸಲು ಯಾವುದೇ ಪ್ರಯತ್ನ ಮಾಡುತ್ತಿದೆಯೇ ಎಂದು ನನಗೆ ಖಚಿತವಿಲ್ಲ ಎಂದು ಜಂಪಣ್ಣ ಹೇಳುತ್ತಾರೆ.
ಛತ್ತೀಸ್‌ಗಢ ಪೊಲೀಸರ ಇತ್ತೀಚಿನ ದಾಖಲೆಯ ಪ್ರಕಾರ, ಸಂಘಟನೆಯ ಉನ್ನತ ನಾಯಕತ್ವದಲ್ಲಿ ಇನ್ನೂ 14 ತೆಲುಗು ನಾಯಕರಿದ್ದಾರೆ. ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜ್, ಮುಪ್ಪಲ್ಲ ಲಕ್ಷ್ಮಣ ರಾವ್ ಅಲಿಯಾಸ್ ಗಣಪತಿ, ಮಲ್ಲೊಜುಲ ವೇಣುಗೋಪಾಲ ರಾವ್ ಅಥವಾ ಅಲಿಯಾಸ್ ಅಭಯ್ ಅಲಿಯಾಸ್ ಸೋನು, ಮುರಳಿ, ತಿಪ್ಪಾರ್ಥಿ ತಿರುಪತಿ ಅಲಿಯಾಸ್ ದೇವ್‌ಜಿ, ಕದರಿ ಸತ್ಯನಾರಾಯಣ ರೆಡ್ಡಿ ಅಲಿಯಾಸ್ ಕೋಸಾ, ಮೋಡೆಮ್ ಬಾಲಕೃಷ್ಣ, ಪುಲ್ಲೂರಿ ಪ್ರಸಾದ ರಾವ್, ಗಜರ್ಲಾ ರವಿ ಅಲಿಯಾಸ್ ಉದಯ್, ಪಾಕ ಹನುಮಂತು ಅಲಿಯಾಸ್ ಗಣೇಶ್ ಉಯಿಕೆ, ಕೊಟ್ಟ ರಾಮಚಂದ್ರ ರೆಡ್ಡಿ ಅಲಿಯಾಸ್ ವಿಕಲ್ಪ್, ಟಿಎಲ್‌ಎನ್ ಚಲ್ಲಮ್ ಅಲಿಯಾಸ್ ಆನಂದ್ ಮತ್ತು ಪುಟುಲ ಕಲ್ಪನಾ ಅಲಿಯಾಸ್ ಸುಜಾತಾ ಇನ್ನು ಮುಂತಾದವರೆ ತೆಲುಗು ನಕ್ಸಲ್ ನಾಯಕರಾಗಿದ್ದಾರೆ.
ಆದಾಗ್ಯೂ, ಈ ಉನ್ನತ ನಾಯಕರಲ್ಲಿ ಹೆಚ್ಚಿನವರು ವಯಸ್ಸಾದವರಾಗಿದ್ದು, ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿರುವ (2018, ನವೆಂಬರ್ 10ರಿಂದ) ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜ್ (ಗಂಗಣ್ಣ) ಅವರಿಗೆ ಈಗ 70 ವರ್ಷ ವಯಸ್ಸಾಗಿದ್ದರೆ, ಮುಪ್ಪಲ್ಲ ಲಕ್ಷ್ಮಣ ರಾವ್ ಅಲಿಯಾಸ್ ಗಣಪತಿ ಅವರಿಗೆ 76ಕ್ಕೂ ಹೆಚ್ಚು ವರ್ಷ ವಯಸ್ಸಾಗಿದ್ದು, ಇವರುಗಳು ತಮ್ಮ ಅಡಗುತಾಣದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಸೋನು, ಬಾಲಕೃಷ್ಣ, ಪುಲ್ಲೂರಿ ಪ್ರಸಾದ ರಾವ್ ಮತ್ತು ರಾಮಚಂದ್ರ ರೆಡ್ಡಿ ಅವರಂತಹ ಇತರರು ಅರವತ್ತು ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇತರರು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.
“ಯುವ ನಾಯಕರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ, ಆದರೆ ಅವರಲ್ಲಿ ಯಾರೂ ತೆಲುಗು ರಾಜ್ಯಗಳಿಂದ ಬಂದಿಲ್ಲ. ಮುಂಬರುವ ವರ್ಷಗಳಲ್ಲಿ ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಸ್ಥಳೀಯ ನಾಯಕತ್ವ ಹೊರಹೊಮ್ಮಲಿದೆ” ಎಂದು ಜಂಪಣ್ಣ ಹೇಳುತ್ತಾರೆ.
ಕೃಪೆ: ಹಿಂದೂಸ್ಥಾನ್ ಟೈಮ್ಸ್
ಶ್ರೀನಿವಾಸರಾವ್ ಅಪ್ಪರಸು,
ಹೈದರಾಬಾದ್
ಜಾಮಿಯಾ ಮಿಲಿಯಾ ಹಿಂಸಾಚಾರ ಪ್ರಕರಣ; ಶಾರ್ಜೀಲ್ ಇಮಾಮ್ ವಿರುದ್ಧ ಆರೋಪ ರೂಪಿಸಲು ದೆಹಲಿ ನ್ಯಾಯಾಲಯ ಆದೇಶ


