ಮರಕುಂಬಿ- ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಈ ಗ್ರಾಮ, ಗ್ರಾಮದ ಮಾದಿಗ ಸಮುದಾಯದ ಮೇಲೆ ಸವರ್ಣೀಯರು ನಡೆಸಿದ ದೌರ್ಜನ್ಯದ ಕಾರಣಕ್ಕೆ 2014ರಲ್ಲಿ ರಾಜ್ಯಕ್ಕೆ ಪರಿಚಯವಾಯಿತು. ಈ ಪ್ರಕರಣದ ಕುರಿತು ಜಿಲ್ಲಾ ಸತ್ರ ನ್ಯಾಯಾಲಯ ಅಕ್ಟೋಬರ್ 24ರಂದು ನೀಡಿದ ಐತಿಹಾಸಿಕ ತೀರ್ಪಿನ ಕಾರಣಕ್ಕೆ ಈಗ ಇಡೀ ದೇಶದಲ್ಲೇ ಸುದ್ದಿಯಲ್ಲಿದೆ. ಗೂಗಲ್ ಸೇರಿದಂತೆ ಯಾವುದೇ ಸರ್ಚ್ ಇಂಜಿನ್‌ನಲ್ಲಿ ದಲಿತ ದೌರ್ಜನ್ಯದ ಕುರಿತು ಹುಡುಕಿದರೆ ಇದೇ ಸುದ್ದಿ ಮೊದಲಿಗೆ ಗೋಚರಿಸುತ್ತಿದೆ.
ಏಕೆಂದರೆ, ಇಡೀ ದೇಶದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ದಲಿತ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇರುತ್ತವೆಯಾದರೂ, ಅಲ್ಲೆಲ್ಲಾ ನ್ಯಾಯ ಎನ್ನುವುದು ಶೋಷಣೆಗೆ ಒಳಗಾದವರ ಪಾಲಿಗೆ ಮರೀಚಿಕೆಯಾಗಿದೆ. ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮತ್ತು ಬಹಿಷ್ಕಾರದಿಂದ ದಲಿತರ ಬದುಕು ದುಸ್ತರವಾಗಿದೆ. ಅತಿ ಕ್ರೂರವಾದ ಮಹಾರಾಷ್ಟ್ರದ ಖೈರ್ಲಾಂಜಿ ಪ್ರಕರಣ, ಕರ್ನಾಟಕದ ಕಂಬಾಲಪಲ್ಲಿ ಸೇರಿದಂತೆ ಇತರೆ ಯಾವುದೇ ಭೀಕರ ಹಿಂಸಾಚಾರದ ಪ್ರಕರಣಗಳಲ್ಲಿಯೂ ಕಾಣದ ನ್ಯಾಯದ ಸಣ್ಣ ಬೆಳಕೊಂದು ಮರಕುಂಬಿ ಪ್ರಕರಣದಲ್ಲಿ ಕಾಣಿಸಿದ್ದು, ದೇಶದ ದಲಿತರ ಪಾಲಿಗೆ ಇದೊಂದು ಐತಿಹಾಸಿಕ ತೀರ್ಪಾಗಿದೆ.
ಮಾದಿಗ ಸಮುದಾಯದ ಮೇಲೆ ದಬ್ಬಾಳಿಕೆ ಎಸಗಿದ, ಸಿಕ್ಕಸಿಕ್ಕವರನ್ನು ವಿನಾಕಾರಣ ಥಳಿಸಿದ 101 ಜನರನ್ನು ತಪ್ಪಿತಸ್ಥರೆಂದು ಘೋಷಿಸಿರುವ ಕೋರ್ಟ್, ’ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆಕಾಯ್ದೆ’ ಅಡಿಯಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕೃತ್ಯದಲ್ಲಿ ಪಾಲ್ಗೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೂವರಿಗೆ ಐದು ವರ್ಷದ ಜೈಲು ಶಿಕ್ಷೆಯ ಜೊತೆಗೆ, ದಂಡ ವಿಧಿಸಿದೆ.
2014ರ ಆಗಸ್ಟ್ 28ರಂದು ನಡೆದಿದ್ದ ದಲಿತರ ಮೇಲಿನ ಸಾಮೂಹಿಕ ಹಲ್ಲೆ ಹಾಗೂ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, 10 ವರ್ಷಗಳ ಕಾನೂನು ಹೋರಾಟದ ನಂತರ 101 ಅಪರಾಧಿಗಳಿಗೆ ಇದೀಗ ಶಿಕ್ಷೆಯಾಗಿದೆ. ಇವರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5000 ದಂಡ ವಿಧಿಸಲಾಗಿದೆ. ಪರಿಶಿಷ್ಟ ಸಮುದಾಯದ 3 ಜನರಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 2000 ದಂಡ ವಿಧಿಸಲಾಗಿದೆ. ಕೊಪ್ಪಳದ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2024ರ ಅಕ್ಟೋಬರ್ 24ರಂದು ಪ್ರಕಟಿಸಿದ ಮಹತ್ವದ ಈ ತೀರ್ಪು ಚರಿತ್ರಾರ್ಹವಾದುದು. ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿರುವುದು ಇದೇ ಮೊದಲು.
ಶೋಷಕರನ್ನೇ ಸಂತ್ರಸ್ತರನ್ನಾಗಿ ಬಿಂಬಿಸುತ್ತಿರುವ ಮಾಧ್ಯಮಗಳು!
ಸುತ್ತಲೂ ಹಸಿರು ಹೊದ್ದು ಮಲಗಿರುವ ಭತ್ತದ ಗದ್ದೆ. ಅಲ್ಲಲ್ಲಿ ಸಣ್ಣಗೆ ಸದ್ದು ಮಾಡುತ್ತಾ, ತಣ್ಣಗೆ ಹರಿಯುವ ತುಂಗಭದ್ರಾ ನದಿ ನೀರು. ಮರಕುಂಬಿಗೆ ಭೇಟಿ ಕೊಡುವ ಹೊಸಬರನ್ನು ಗ್ರಾಮದ ಬಾಹ್ಯ ಸೌಂದರ್ಯ ಸೆಳೆಯುತ್ತದೆ. ಆದರೆ, ಗ್ರಾಮ ಹೇಳಿಕೊಳ್ಳುವಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಿಲ್ಲ. ಗ್ರಾಮದ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳು ತುಂಬಿರುತ್ತದೆ. ಮೂಲಭೂತಸೌಕರ್ಯ ಅಭಿವೃದ್ಧಿಯಲ್ಲಿ ಇಷ್ಟೆಲ್ಲಾ ಹಿಂದುಳಿದಿರುವ ಗ್ರಾಮವು, ಜಾತಿ ತಾರತಮ್ಯದಲ್ಲಿ ಮಾತ್ರ ಸಾಕಷ್ಟು ಮುಂದಿದೆ. ’ಫ್ಯೂಡಲ್ ಜಾತಿ’ ಜನರು ಇಲ್ಲಿನ ಮಾದಿಗರನ್ನು ಮನುಷ್ಯರನ್ನಾಗಿಯೂ ನೋಡುವುದಕ್ಕೆ ತಯಾರಿಲ್ಲ. ಸವರ್ಣೀಯರ ಮನಸ್ಸಿನಲ್ಲಿರುವ ಅತಿಯಾದ ’ಊಳಿಗಮಾನ್ಯ ಮನಸ್ಥಿತಿಯೇ’ ಇಂದು ಅವರನ್ನು ಜೈಲಿಗೆ ಕಳುಹಿಸಿದೆ.
ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಜನ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಿದ್ದಂತೆಯೇ ಹಲವು ಮಾಧ್ಯಮಗಳು ಶೋಷಿತರನ್ನೇ ಸಂತ್ರಸ್ತರನ್ನಾಗಿ ಬಿಂಬಿಸುತ್ತಿವೆ. ವರದಿಗಾರರು ಪ್ರತಿಕ್ರಿಯೆ ಪಡೆಯುವಾಗಲೂ ಅಪರಾಧಿಗಳ ಕುಟುಂಬಸ್ಥರ ನೋವನ್ನೇ ತೋರಿಸುತ್ತಿದ್ದಾರೆ. ಆದರೆ, ಹತ್ತು ವರ್ಷಗಳ ಹಿಂದೆ, ಈ ಅಪರಾಧಿಗಳು ಇಡೀ ಮಾದಿಗ ಸಮುದಾಯದ ಗಂಡಸರು, ಹೆಂಗಸರು, ವೃದ್ಧರನ್ನು ಕೇರಿಯಲ್ಲೆಲ್ಲಾ ಅಟ್ಟಾಡಿಸಿ ಹೊಡೆದಿದ್ದು, ಮನೆಯಲ್ಲಿ ಅವಿತವರನ್ನೂ ಬಿಡದೆ ಹೊರಗೆಳೆದು ಥಳಿಸಿದ್ದೂ ಅಲ್ಲದೆ, ತರಗತಿಯಲ್ಲಿ ಪಾಠ ಕೇಳುತ್ತಿದ್ದ ಮಾದಿಗ ಸಮುದಾಯದ ಸಣ್ಣಮಕ್ಕಳ ಮೇಲೂ ದೌರ್ಜನ್ಯ ನಡೆಸಿದ್ದನ್ನು ನೆನೆಸಿಕೊಂಡು ಸಂತ್ರಸ್ತರೂ ಈಗಲೂ ಬೆಚ್ಚುತ್ತಾರೆ.
ಚಿತ್ರಮಂದಿರದಲ್ಲಿ ನಡೆದ ಗಲಾಟೆಯೊಂದೇ ದಲಿತ ಮೇಲಿನ ದೌರ್ಜನ್ಯಕ್ಕೆ ಕಾರಣವಲ್ಲ!
ಅಂದು, ನಟ ಪುನೀತ್ ರಾಜ್‌ಕುಮಾರ್ ಅಭಿನಯದ ’ಪವರ್’ ಸಿನಿಮಾ ನೋಡಲು ಮರಕುಂಬಿ ಗ್ರಾಮದ ಸವರ್ಣೀಯ ಯುವಕರು ಗಂಗಾವತಿಗೆ ತೆರಳಿದ್ದರು. ಅದೇ ಗ್ರಾಮದ ಮಾದಿಗ ಸಮುದಾಯದ ಯುವಕರ ಜೊತೆಗೆ ನಡೆದ ಜಗಳವೇ ದಾಳಿಗೆ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇದೊಂದೇ ಘಟನೆ ಅಂದಿನ ಸಾಮೂಹಿಕ ದಾಳಿಗೆ ಕಾರಣವಲ್ಲ. ದಾಳಿ ನಡೆಯುವುದಕ್ಕೂ ಮೊದಲೇ ಗ್ರಾಮದಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.
ಸಿನಿಮಾ ನೋಡಲು ಗಂಗಾವತಿಗೆ ತೆರಳಿದ್ದ ಸವರ್ಣೀಯ ಯುವಕರು ಟಿಕೆಟ್ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಯುವಕರೊಂದಿಗೆ ಜಗಳ ಮಾಡಿಕೊಂಡಿದ್ದರು. ಸಿನಿಮಾ ನೋಡಿ ಹೊರಗೆ ಬರುವಹೊತ್ತಿಗೆ, ಗ್ರಾಮದ ದಲಿತ ಯುವಕರೂ ಅವರಿಗೆ ಎದುರಾಗಿದ್ದಾರೆ. ಮಾದಿಗ ಯುವಕರೇ ನಮ್ಮ ವಿರುದ್ಧ ಸ್ಥಳೀಯ ಯುವಕರನ್ನು ಎತ್ತಿಕಟ್ಟಿ ಹೊಡೆಸಿದ್ದಾರೆ ಎಂದುಕೊಂಡ ಸವರ್ಣೀಯ ಯುವಕರು, ಊರಿಗೆ ಬರುತ್ತಿದ್ದಂತೆಯೇ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಅಂದು ತಮ್ಮ ಮೇಲೆ ಯಾವ ಕಾರಣಕ್ಕೆ ದಾಳಿ ನಡೆಯುತ್ತಿದೆ ಎಂಬುದೇ ಹಲ್ಲೆಗೊಳಗಾದವರಿಗೆ ಗೊತ್ತಿರಲಿಲ್ಲ!
ದಾಳಿಯಾಗುವುದಕ್ಕೂ ಮೊದಲೇ ಗ್ರಾಮದಲ್ಲಿ ಜಾರಿಯಲ್ಲಿದ್ದ ಅಸ್ಪೃಶ್ಯತೆ ಆಚರಣೆ ಹಾಗೂ ಸಾಮಾಜಿಕ ಬಹಿಷ್ಕಾರದ ವಿರುದ್ಧ ಯುವಕರು ಧ್ವನಿ ಎತ್ತಿದ್ದರು. ಮಾದಿಗರಿಗೂ ಕ್ಷೌರ ಮಾಡುವಂತೆ ಹಾಗೂ ಹೋಟೆಲ್‌ಗಳಲ್ಲಿ ತಮಗೆ ಪ್ರತ್ಯೇಕ ಲೋಟ ಇಡದಂತೆ ಪ್ರತಿಭಟಿಸಿ, ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಅಸ್ಪೃಶ್ಯತೆ ವಿರುದ್ಧ ದಮನಿತ ಸಮುದಾಯದ ಯುವಕರು ಧ್ವನಿ ಎತ್ತಿದ್ದರಿಂದ ಸಿಟ್ಟಿಗೆದ್ದಿದ್ದ ಸವರ್ಣೀಯರು, ಗಂಗಾವತಿಯಲ್ಲಿ ಚಿತ್ರಮಂದಿರದಲ್ಲಿ ನಡೆದ ಗಲಾಟೆ ಬಳಿಕ ಮತ್ತಷ್ಟು ಕೆರಳಿದ್ದರು. ಸುಮಾರು 150 ಜನ ಸವರ್ಣೀಯರು ಮರಕುಂಬಿಯ ದಲಿತ ಕಾಲೋನಿಗೆ ನುಗ್ಗಿ, ಮಹಿಳೆಯರು, ಮಕ್ಕಳು ವೃದ್ಧರೆನ್ನದೆ ಕೈಗೆ ಸಿಕ್ಕ ಎಲ್ಲರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಸಮುದಾಯದ ಒಂದಷ್ಟು ಜನ ಕೇರಿ ಪ್ರವೇಶ ದ್ವಾರದಲ್ಲಿ ದಾಳಿಕೋರರನ್ನು ಹಿಮ್ಮೆಟ್ಟಿಸುತ್ತಿದ್ದಾಗ, ಕೇರಿಯ ಹಿಂದಿನಿಂದ ಬಂದ ಕೆಲವರು ಗುಡಿಸಲುಗಳಿಗೆ ಬೆಂಕಿಯಿಟ್ಟು ಸುಟ್ಟು ಬೂದಿ ಮಾಡಿದರು. ಆದರೆ, ಚಿತ್ರಮಂದಿರದಲ್ಲಿ ನಡೆದ ಗಲಾಟೆಯಿಂದ ಸವರ್ಣೀಯರ ಮೇಲೆ ದಾಖಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ 10 ವರ್ಷಗಳ ನಂತರ ತೀರ್ಪು ಬಂದಿದೆ ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ 2002ರಿಂದಲೂ ಮಾದಿಗ ಸಮುದಾಯದ ಮೇಲೆ ಇತರೆ ಸಮುದಾಯಗಳು ಹೊಂದಿದ್ದ ಮತ್ತು ಪ್ರದರ್ಶಿಸುತ್ತಿದ್ದ ಅಸಹಿಷ್ಣುತೆಯ ಕಾರಣಕ್ಕೆ ಅಸಹನೆ ಹೊಗೆಯಾಡುತ್ತಲೇ ಇತ್ತು.
2014ಕ್ಕೂ ಮೊದಲು ಏನೆಲ್ಲಾ ನಡೆದಿತ್ತು?
ಇಂತಹದ್ದೊಂದು ಐತಿಹಾಸಿಕ ತೀರ್ಪು ಬರುವುದಕ್ಕೂ ಮೊದಲು ಮರಕುಂಬಿಯಲ್ಲಿ ಏನೆಲ್ಲಾ ನಡೆದಿತ್ತು ಎಂಬುದನ್ನು ಕೆದಕಿದರೆ, ಗ್ರಾಮದ ಮಾದಿಗ ಸಮುದಾಯದ ಪ್ರಮುಖ ಬೇಡಿಕೆಯಾದ ಸಾಮಾಜಿಕ ಸಮಾನತೆ, ಮೂಲಭೂತಸೌಕರ್ಯ ಹಾಗೂ ವಸತಿರಹಿತರ ನಿವೇಶನ ಬೇಡಿಕೆಗಳು ಪ್ರಮುಖವಾಗಿ ಗೋಚರಿಸುತ್ತವೆ. ತಮಗೆ ದಕ್ಕಬೇಕಾದ ಸಾಮಾಜಿಕ ಸವಲತ್ತುಗಳು ಮತ್ತು ಸಮಾನತೆಯನ್ನು ಆಗ್ರಹಿಸುತ್ತಲೇ ಈ ಸಮುದಾಯದ ಜನ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ.
ಇಡೀ ಮರಕುಂಬಿ ಪ್ರಕರಣವನ್ನು ’ಚಿತ್ರಮಂದಿರದಲ್ಲಿ ನಡೆದ ಸವರ್ಣೀಯ ಮತ್ತು ದಲಿತ ಯುವಕರ ನಡುವಿನ ಗಲಾಟೆ’ ಎಂಬಲ್ಲಿಗೆ ಮಾತ್ರ ಸೀಮಿತಗೊಳಿಸಬಾರದು. ಭಾರತದ ಹಳ್ಳಿಗಳಲ್ಲಿ ಸಾವಿರಾರು ವರ್ಷಗಳಿಂದ ಮಡುಗಟ್ಟಿರುವ ಅನಿಷ್ಟ ಜಾತಿಪದ್ಧತಿಯ ಒಂದು ಕರಾಳ ಮುಖವನ್ನಾಗಿ ಇದನ್ನು ನೋಡಬೇಕು.
400ಕ್ಕೂ ಹೆಚ್ಚು ಕುಟುಂಬಗಳಿರುವ ಮರಕುಂಬಿ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮಾದಿಗ ಕುಟುಂಬಗಳಿವೆ. ಇನ್ನುಳಿದಂತೆ ಹಲವು ಜಾತಿಗಳಿಗೆ ಸೇರಿದ ಸವರ್ಣೀಯರೂ ಇದ್ದಾರೆ. ಮರಕುಂಬಿ ಗ್ರಾಮದಲ್ಲಿನ ದಲಿತರಿಗಾಗಿ, ಅದೇ ಕೇರಿಗಳಲ್ಲಿ ಅವರ ಮದುವೆ, ಮತ್ತಿತರೆ ಸಮಾರಂಭಗಳಿಗೆ ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರ್ಕಾರಿ ಸಮುದಾಯ ಭವನವನ್ನು ನಿರ್ಮಿಸಲಾಗಿತ್ತು. ಸಮುದಾಯ ಭವನವನ್ನು ದಲಿತರು ಬಳಸಿಕೊಳ್ಳುವುದಕ್ಕೂ ಮೊದಲೇ ಗ್ರಾಮದ ಭೂಮಾಲೀಕನೊಬ್ಬ ತಾನು ಬೆಳೆದಿದ್ದ ನೂರಾರು ಭತ್ತದ ಮೂಟೆಗಳನ್ನು ಅಲ್ಲಿಟ್ಟು ಶೇಖರಿಸಿಟ್ಟಿದ್ದ. ವರ್ಷಾನುಗಟ್ಟಲೆ ಇಟ್ಟಿದ್ದ ಈ ದಾಸ್ತಾನನ್ನು ಖಾಲಿ ಮಾಡುವ ಯಾವ ಆಲೋಚನೆಯೂ ಆತನಿಗೆ ಇರಲೇ ಇಲ್ಲ.
ಈ ಬಗ್ಗೆ ಅಸಮಧಾನಗೊಂಡಿದ್ದ ದಲಿತ ಯುವಕರು ತಮ್ಮತಮ್ಮಲ್ಲೇ ಮಾತನಾಡಿಕೊಂಡು ಮತ್ತು ತಮ್ಮ ಹಿರಿಯರೊಂದಿಗೆ ಚರ್ಚಿಸಿ, ಸಮುದಾಯ ಭವನದಲ್ಲಿರುವ ಭತ್ತದ ಚೀಲಗಳನ್ನು ಖಾಲಿ ಮಾಡಿ, ದಲಿತರ ಸಮಾರಂಭಗಳಿಗೆ ಅನುವು ಮಾಡಿಕೊಡುವಂತೆ ಜಮೀನ್ದಾರರ ಬಳಿ ಮನವಿ ಮಾಡುವಂತೆ ಹಿರಿಯರನ್ನು ಕೇಳಿಕೊಂಡಿದ್ದರು. ಈ ವಿಷಯ ಹೇಗೋ ತಿಳಿದುಕೊಂಡಿದ್ದ ಆ ಜಮೀನ್ದಾರ ಕೋಪಗೊಂಡಿದ್ದ. ಸಮುದಾಯ ಭವನದಲ್ಲಿರುವ ಭತ್ತದ ಮೂಟೆಗಳು ಕಳವಾಗಿವೆ ಎಂದು ಐವರು ದಲಿತ ಯುವಕರ ಮೇಲೆ ಸುಳ್ಳು ದೂರು ನೀಡಿದ್ದ. ಮಾದಿಗ ಸಮುದಾಯದ ಪಾಂಡುರಂಗ, ಭೀಮೇಶ, ಬಸವರಾಜ, ಹನುಮೇಶ ಮತ್ತು ಗೌರೀಶ ಎಂಬ ಐವರು ದಲಿತ ಯುವಕರನ್ನು ಕರೆಸಿಕೊಂಡು, ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಅವರ ಮೇಲೆ ಜಾತಿನಿಂದನೆ ಮಾಡಿದ್ದು ಅಲ್ಲದೆ, ಕಳ್ಳತನ ಆರೋಪ ಕೂಡ ಹೊರಿಸಿದ್ದ.
ತಮ್ಮ ಮಕ್ಕಳ ಮೇಲಿನ ದೌರ್ಜನ್ಯ ಪ್ರಶ್ನಿಸಿದ ಯುವಕರ ತಾಯಂದಿರ ಮೇಲೆ ಜಮೀನ್ದಾರನ ಕಡೆಯವರು ಹಲ್ಲೆ ನಡೆಸಿದ್ದರು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಗ್ರಾಮದ ನಿವಾಸಿಗಳು ಹೇಳುತ್ತಾರೆ. ಅಂದಿನ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಐವರು ಯುವಕರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2014ರ ಸಾಮೂಹಿಕ ಹಲ್ಲೆ ನಡೆಯುವ ಮೊದಲು, ಅಂದರೆ, 2003ರಲ್ಲಿ 11 ವರ್ಷಗಳ ಮೊದಲೇ ಇಲ್ಲಿ ಜಾತಿದೌರ್ಜನ್ಯಗಳು ಎಗ್ಗಿಲ್ಲದೆ ನಡೆದಿದ್ದವು.
ದೌರ್ಜನ್ಯದ ವಿರುದ್ಧ ಒಟ್ಟಾಗಿದ್ದ ದಲಿತರು
ಭತ್ತ ಕಳ್ಳತನದ ಸುಳ್ಳು ಆರೋಪ, ತಮ್ಮ ಮೇಲೆ ನಡೆಸಿದ ಹಲ್ಲೆ ಹಾಗೂ ಅವಮಾನ ಮಾಡಿದ ಪ್ರಕರಣವನ್ನು ಮರಕುಂಬಿಯ ಮಾದಿಗ ಸಮುದಾಯ ಗಂಭೀರವಾಗಿ ತೆಗೆದುಕೊಂಡಿತ್ತು. ಸಂಘಟಿತರಾಗಬೇಕು ಎಂದು ನಿರ್ಧರಿಸಿದ ಅವರು, ’ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ’ದ ನಾಯಕರನ್ನು ಸಂಪರ್ಕಿಸಿ ಸಭೆ ನಡೆಸಿದರು. “ಅನುಸರಿಸಿಕೊಂಡು ಹೋಗಬೇಕು” ಎಂಬ ಹಿರಿಯರ ಸಲಹೆಯನ್ನು ತಿರಸ್ಕರಿಸಿದ ಯುವಕರು, “ದೌರ್ಜನ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು” ಎಂದು ಪಟ್ಟು ಹಿಡಿದಿದ್ದರು. ಆ ಬಳಿಕವೇ ತಮ್ಮ ಮೇಲಿನ ಹಲ್ಲೆ ವಿರುದ್ಧ ಗಂಗಾವತಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. 14 ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡುತ್ತಾರೆ.
ಪ್ರಕರಣದ ಗಂಭೀರತೆ ಅರಿತ ಅಂದಿನ ಕೊಪ್ಪಳ ಜಿಲ್ಲಾಧಿಕಾರಿ ನಾಗಾಂಬಿಕ ದೇವಿ ಮರುಕುಂಬಿಗೆ ಭೇಟಿ ನೀಡಿ, ಗ್ರಾಮದ ಎಲ್ಲ ಸಮುದಾಯದವರನ್ನು ಸೇರಿಸಿ ಸಭೆ ನಡೆಸುತ್ತಾರೆ. ಸರ್ಕಾರಿ ಸಮುದಾಯ ಭವನದಲ್ಲಿ ಭೂ ಮಾಲೀಕ ಅಕ್ರಮವಾಗಿ ಶೇಖರಿಸಿದ್ದ 713 ಚೀಲ ಭತ್ತವನ್ನು ವಶಪಡಿಸಿಕೊಂಡು ಎಪಿಎಂಸಿಗೆ ಕಳುಹಿಸುತ್ತಾರೆ. ಮುಂದಿನ ದಿನಗಳಲ್ಲಿ ಗ್ರಾಮದ ಯಾರೊಬ್ಬರೂ ಜಾತಿದೌರ್ಜನ್ಯ ನಡೆಸದಂತೆ ಎಚ್ಚರಿಕೆ ನೀಡಿ, ಮುನ್ನೆಚ್ಚರಿಕೆಯಾಗಿ ಪೊಲೀಸ್ ಭದ್ರತೆ ಏರ್ಪಡಿಸುತ್ತಾರೆ. ನಂತರದ ದಿನಗಳಲ್ಲಿ ಪ್ರಕರಣದ ಪ್ರಮುಖ ಆರೋಪಿ ಜಾಮೀನು ಪಡೆದು ಊರಿಗೆ ಮರಳುತ್ತಾನೆ.
ಚಿತ್ರಮಂದಿರದಲ್ಲಿ ನಡೆದಿದ್ದೇನು?
ಮರಕುಂಬಿಯಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ಪ್ರಕ್ಷುಬ್ಧತೆ ಇರುವಾಗಲೇ ಗಂಗಾವತಿಯ ಸ್ಥಳೀಯ ಯುವಕರ ಜೊತೆಗೆ ಮರಕುಂಬಿ ಸವರ್ಣೀಯ ಯುವಕರು ಸಿನಿಮಾ ನೋಡುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. 2014ರ ಆಗಸ್ಟ್ 27ರಂದೇ ಗಂಗಾವತಿಯ ಚಿತ್ರಮಂದಿರಕ್ಕೆ ಕಾಕತಾಳೀಯವಾಗಿ ಮರಕುಂಬಿಯ ದಲಿತ ಯುವಕರೂ ತೆರಳಿದ್ದರು. ಟಿಕೆಟ್ ಪಡೆಯುವ ವಿಚಾರದಲ್ಲಿ ಗಂಗಾವತಿ ಹಾಗೂ ಮರಕುಂಬಿ ಸವರ್ಣೀಯ ಯುವಕರ ನಡುವೆ ಗಲಾಟೆ ನಡೆಯುತ್ತದೆ. ಮರಕುಂಬಿಯ ದಲಿತ ಯುವಕರು ಗಂಗಾವತಿಯ ಸವರ್ಣೀಯ ಯುವಕರಿಂದ ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಅನುಮಾನಿಸಿದ ಮರಕುಂಬಿಯ ಸವರ್ಣೀಯ ಯುವಕರು, ಇಡೀ ಗ್ರಾಮದಲ್ಲಿ ಮಾದಿಗ ಸಮುದಾಯದ ಮೇಲೆ ಹಲ್ಲೆಗೆ ಪ್ರಚೋದನೆ ನೀಡುತ್ತಾರೆ.
ಮರುದಿನ, ಆಗಸ್ಟ್ 28ರಂದು ಸಂಜೆ 4 ಗಂಟೆಯ ಹೊತ್ತಿಗೆ ವಿವಿಧ ಜಾತಿಗಳ 150 ಜನ ಸವರ್ಣೀಯ ಗುಂಪು ಮರಕುಂಬಿಯ ಮಾದಿಗ ಕೇರಿಗೆ ಕಲ್ಲು, ದೊಣ್ಣೆಗಳೊಂದಿಗೆ ನುಗ್ಗುತ್ತಾರೆ (ಈ ಗುಂಪಿನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಭೋವಿ ಹಾಗೂ ವಾಲ್ಮೀಕಿ ಜನರೂ ಇರುತ್ತಾರೆ). ಹೋಟೆಲ್ ಪ್ರವೇಶ ಹಾಗೂ ಕ್ಷೌರದಂಗಡಿಯಲ್ಲಿ ಅವಕಾಶ ನೀಡುವಂತೆ ಮಾದಿಗರು ಮಾಡಿದ ಮನವಿಯಿಂದ ಕುಪಿತಗೊಂಡಿದ್ದ ಸವರ್ಣೀಯರು, ಚಿತ್ರಮಂದಿರ ಗಲಾಟೆಯನ್ನೇ ನೆಪವಾಗಿಟ್ಟುಕೊಂಡು ಹಲ್ಲೆಗೆ ಮುಂದಾಗುತ್ತಾರೆ. ಮಾದಿಗರ ಓಣಿಯಲ್ಲಿ ಸಿಕ್ಕಸಿಕ್ಕ ಹೆಂಗಸರು, ಮಕ್ಕಳು, ವೃದ್ಧರು ಎನ್ನುವುದನ್ನೂ ನೋಡದೆ ಎಲ್ಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಾರೆ. ಕೆಲವರನ್ನು ಮನೆಯಿಂದ ಹೊರಗೆಳೆದು ಹಲ್ಲೆ ನಡೆಸುತ್ತಾರೆ. ಜಾತಿ ಹೆಸರಿಡಿದು ನಿಂದನೆ ಮಾಡಿದ್ದಲ್ಲದೆ, “ನಿಮ್ಮನ್ನು ಜೀವಂತವಾಗಿ ಬಿಟ್ಟಿದ್ದಕ್ಕೆ ಭಾರಿ ಮೆರಿತೀರಿ, ನಿಮ್ಮನ್ನು ಜೀವಂತ ಸುಟ್ಟುಹಾಕುತ್ತೇವೆ” ಎಂದು 4 ಗುಡಿಸಲುಗಳಿಗೆ ಬೆಂಕಿಯಿಡುತ್ತಾರೆ. ಗ್ರಾಮದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಈ ಘಟನೆಗಳಿಗೆಲ್ಲಾ ಸಾಕ್ಷಿಯಾಗಿದ್ದರು. ದಲಿತರನ್ನು ಥಳಿಸದಂತೆ, ಗಲಾಟೆ ಮಾಡದಂತೆ ಪೊಲೀಸರು ಕೂಡ ಸವರ್ಣೀಯ ಗುಂಪಿನಲ್ಲಿ ಮನವಿ ಮಾಡಿದ್ದರು ಎಂದು ಹಲ್ಲೆಗೊಳಗಾದವರು ಹೇಳುತ್ತಾರೆ.
ಅಂದು, ವ್ಯಘ್ರಗೊಂಡಿದ್ದ ಸವರ್ಣೀಯರ ಹಲ್ಲೆಯಿಂದ ಯಾರೂ ಸಾವನ್ನಪ್ಪಲಿಲ್ಲ ಎನ್ನುವುದೇ ಆಶ್ಚರ್ಯ ಎನ್ನುತ್ತಾರೆ ಹಲ್ಲೆಗೊಳಗಾದ ಜನರು. ದಾಳಿಕೋರರನ್ನು ಕೇರಿಯಿಂದ ಹಿಮ್ಮೆಟ್ಟಿಸಲು, ಮಕ್ಕಳು, ವೃದ್ಧರನ್ನು ಅವರಿಂದ ಕಾಪಾಡಲು ಎಲ್ಲರೂ ಪೂರ್ವದಿಕ್ಕಿನ ಗುಡಿ ಕಡೆಗೆ ಬಂದಿದ್ದರು. ಎಲ್ಲರೂ ಮುಖ್ಯದ್ವಾರದ ಬಳಿ ಇದ್ದಾಗ, ಕೆಲ ಸವರ್ಣೀಯರು ಹಿಂದಿನಿಂದ ಬಂದು ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದಾರೆ. ಅದೃಷ್ಟವಶಾತ್ ಮನೆ ಸುಟ್ಟಿದ್ದು ಬಿಟ್ಟರೆ, ಯಾರಿಗೂ ಪ್ರಾಣಾಪಾಯವಾಗಲಿಲ್ಲ.
ಪೊಲೀಸರ ಮೇಲೂ ಕಲ್ಲು ತೂರಾಟ!
ಕ್ಷೌರ ಮತ್ತು ಹೋಟೆಲ್ ಸಮಸ್ಯೆಯ ಬಗ್ಗೆ ಶಾಂತಿಸಭೆ ನಡೆದ ನಂತರ ಕಮ್ಯುನಿಸ್ಟ್ ಮುಖಂಡರ ಮನೆ ಮೇಲಿನ ಕಲ್ಲು ತೂರಾಟದ ಪ್ರಕರಣದ ಬಳಿಕ, ಮುಂಜಾಗ್ರತಾ ಕ್ರಮವಾಗಿ ಊರಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆಗಸ್ಟ್ 28ರ ಗಲಭೆ ನಿಯಂತ್ರಿಸಲು ಯತ್ನಿಸಿದ ಪೊಲೀಸರ ಮೇಲೂ ಉದ್ರಿಕ್ತ ಗುಂಪು ಕಲ್ಲುತೂರಾಟ ನಡೆಸಿ ಹಲ್ಲೆ ಮಾಡುತ್ತಾರೆ. ಇದರಿಂದ ತಲೆಗೆ ಪೆಟ್ಟು ಬಿದ್ದು ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಳ್ಳುತ್ತಾರೆ. “ಶಾಲೆಗೆ ನುಗ್ಗಿ ನಮ್ಮ ಸಮುದಾಯದ ಸಣ್ಣ ಮಕ್ಕಳ ಮೇಲೂ ಹಲ್ಲೆ ನಡೆಸಿದ್ದರು” ಎಂದು ಅಂದಿನ ಘಟನೆ ಬಗ್ಗೆ ನೆನಪಿಸಿಕೊಳ್ಳುತ್ತಾರೆ ಅಲ್ಲಿನ ನಿವಾಸಿಯಾದ ಬಸವರಾಜ್. ಇನ್ನು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 27 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 15 ದಿನಗಳಿಗೂ ಹೆಚ್ಚಿನ ಕಾಲ ಅವರೆಲ್ಲಾ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.
ಮುಂದಿನ ಮೂರು ವರ್ಷ ಸಾಮಾಜಿಕ ಬಹಿಷ್ಕಾರ
ಆಗಸ್ಟ್ 28ರ ಘಟನೆ ನಡೆದ ಬಳಿಕ ಹಲವರನ್ನು ಪೊಲೀಸರು ಬಂಧಿಸಿದ್ದರು. ಮುಂದಿನ ಮೂರು ವರ್ಷಗಳು ಮಾದಿಗರ ಪಾಲಿಗೆ ಗ್ರಾಮ ಅಕ್ಷರಶಃ ನರಕವಾಗಿತ್ತು. ಇತರೆ ಸಮುದಾಯದ ಯಾರೂ ಇವರ ಜೊತೆಗೆ ಮಾತನಾಡುತ್ತಿರಲಿಲ್ಲ. ಕೂಲಿಗೆ ಕರೆಯದೆ ಅಘೋಷಿತವಾಗಿ ಸಾಮಾಜಿಕ ಬಹಿಷ್ಕಾರ ಹೇರಲಾಗಿತ್ತು. ದಿನಸಿ ಅಂಗಡಿಯಲ್ಲಿ ರೇಷನ್ ಕೊಡುತ್ತಿರಲಿಲ್ಲ. ಅತ್ಯಗತ್ಯ ವಸ್ತುಗಳ ಖರೀದಿಗೆ ಮೂರು ಕಿ.ಮೀ. ದೂರದ ಹಣವಾಳ ಮತ್ತು ಅಕ್ಕಪಕ್ಕದ ಊರುಗಳಿಗೆ ತೆರಳಬೇಕಿತ್ತು. ಕೂಲಿಗೂ ಇತರೆ ಊರುಗಳನ್ನೇ ಅವಲಂಬಿಸಿದ್ದರು. ಆರೋಪಿಗಳು ಮತ್ತೆ ಯಾವಾಗ ದಾಳಿ ಮಾಡುತ್ತಾರೋ ಎಂಬ ಭಯದಲ್ಲೇ ದಿನಕಳೆದಿದ್ದಾರೆ.
ಮರಕುಂಬಿಯ ಮಾದಿಗ ಸಮುದಾಯದ ಯಾರ ಬಳಿಯೂ ಒಂದು ಎಕರೆಗಿಂತಲೂ ಹೆಚ್ಚಿನ ಜಮೀನಿಲ್ಲ. ಬೆರಳೆಣಿಕೆಯಷ್ಟು ಜನರ ಬಳಿ ಮಾತ್ರ ಅರ್ಧ ಅಥವಾ ಒಂದು ಎಕರೆಯಷ್ಟು ಭೂಮಿ ಇದೆ. ಅದನ್ನು ನಂಬಿ ಜೀವನ ನಡೆಸುವುದು ಕಷ್ಟಕರವಾಗಿತ್ತು. ಕೂಲಿಯನ್ನೇ ನಂಬಿ ಬದುಕಿದ್ದ ದಲಿತ ಕೂಲಿಕಾರರಿಗೆ ಸವರ್ಣೀಯರು ತಮ್ಮ ಜಮೀನಿನಲ್ಲಿ ಕೂಲಿ ಕೆಲಸ ನೀಡಲಿಲ್ಲ. ಈ ಎಲ್ಲ ಘಟನೆಗಳಿಂದ ಬೇಸತ್ತಿದ್ದ ದಲಿತರು ಗ್ರಾಮಗಳನ್ನು ಬಿಡಲು ಆರಂಭಿಸಿದ್ದರು. ಹೊಟ್ಟೆಪಾಡಿಗಾಗಿ ಬೆಂಗಳೂರು ಸೇರಿದಂತೆ ಹಲವು ಪಟ್ಟಣಗಳಿಗೆ ವಲಸೆ ಹೋದರು. ಸವರ್ಣೀಯರ ದಾಳಿ ಬಳಿಕ ಕೆಲ ತಾಯಂದಿರು ತಮ್ಮ ಮಕ್ಕಳನ್ನು ಅವರು ಹುಟ್ಟಿ ಬೆಳೆದ ಭೂಮಿಯನ್ನು ಬಿಟ್ಟು ಪರ ಊರುಗಳಿಗೆ ಹೋಗಿ ನೆಲೆಸುವಂತೆ ಬಲವಂತಪಡಿಸಿದರು. ಇಡೀ ದಲಿತರ ಕೇರಿಯಲ್ಲಿ ದಾರುಣ ಸ್ಥಿತಿ ನಿರ್ಮಾಣವಾಯಿತು.
ಪ್ರತ್ಯಕ್ಷ ಸಾಕ್ಷಿ ವೀರೇಶ್ ಅನುಮಾನಾಸ್ಪದ ಸಾವು, ದೂರುದಾರ ಭೀಮೇಶ್ ನಿಧನ
ಸವರ್ಣೀಯರು ದಾಳಿ ನಡೆಸಿದ ದಿನ ಅವರಿಂದ ಥಳಿಸಿಕೊಂಡವರಲ್ಲಿ ಕಾರ್ಮಿಕ ಮುಖಂಡರಾದ (ಕೃಷಿ ಕೂಲಿ ಕಾರ್ಮಿಕರ ಸಂಘ) ವಿರೇಶ್ ಹಾಗೂ ಭೀಮೇಶ್ ಕೂಡ ಇದ್ದರು. ವೀರೇಶ್ ಪ್ರಕರಣದ ಪ್ರಮುಖ ಸಾಕ್ಷಿದಾರರಾಗಿದ್ದರು. 2015ರಲ್ಲಿ ಇವರ ರಕ್ತಸಿಕ್ತ ಶವ ಕೊಪ್ಪಳದ ರೈಲ್ವೇ ಹಳಿ ಪಕ್ಕದಲ್ಲಿ ಪತ್ತೆಯಾಗಿತ್ತು. ಸವರ್ಣೀಯರ ದಾಳಿಯಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಪ್ರಮುಖ ದೂರುದಾರ ಭೀಮೇಶ್ ಅವರಿಗೆ ಹೆಚ್ಚು ದಿನ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತೀವ್ರವಾಗಿ ಗಾಯಗೊಂಡಿದ್ದ ಅವರೂ ಕೂಡ 2015ರಲ್ಲಿ ಸಾವನ್ನಪ್ಪಿದ್ದರು. ಆ ಮೂಲಕ, ಪ್ರಕರಣದ ಪ್ರಮುಖ ಸಾಕ್ಷಿದಾರ ಹಾಗೂ ದೂರುದಾರ ಇಬ್ಬರೂ ಸಾವನ್ನಪ್ಪಿದ್ದು, ಹಲ್ಲೆಗೊಳಗಾದ ಸಮುದಾಯಕ್ಕೆ ಮತ್ತಷ್ಟು ಆತಂಕ ಉಂಟುಮಾಡಿತ್ತು.
ಮಾದಿಗ ಸಮುದಾಯದ ಗುಡಿಸಲಿಗೆ ಬೆಂಕಿಯಿಟ್ಟು, ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪಂಚನಾಮೆ ಸಾಕ್ಷಿದಾರರಾದ ವೀರೇಶಪ್ಪ, ಬಸವರಾಜು ಮತ್ತು ದೇವರಾಜು ಜಿಲ್ಲಾ ನ್ಯಾಯಾಲಯದಲ್ಲಿ ಹಾಜರಾಗಿ ಒಮ್ಮೆ ಸಾಕ್ಷಿ ನುಡಿದಿದ್ದರು.
ಆ ಸಂದರ್ಭದಲ್ಲಿ ಗಂಗಾವತಿ ಹಾಗೂ ಕೊಪ್ಪಳದ ದಲಿತ ಸಮುದಾಯ ಬೆಚ್ಚಿಬಿದ್ದಿತ್ತು. ಇದು ದ್ವೇಷದಿಂದಲೇ ನಡೆಸಿದ ಕೊಲೆಯಾಗಿದ್ದು, ಇದನ್ನು ಸೂಕ್ತ ತನಿಖೆಗೆ ಒಳಪಡಿಸಬೇಕೆಂದು, ಗ್ರಾಮದಲ್ಲಿ ಶಾಂತಿ ಹಾಗೂ ದಲಿತರ ರಕ್ಷಣೆಗಾಗಿ ಆಗ್ರಹಿಸಿ ಜಿಲ್ಲೆಯ ಗಂಗಾವತಿಯಲ್ಲಿ 2015ರ ಜುಲೈ 25ರಂದು ರಸ್ತೆ ತಡೆ ಮತ್ತು ಪ್ರತಿಭಟನೆ ಕೂಡ ನಡೆಸಲಾಗಿತ್ತು.
ಮಾದಿಗ ಸಮುದಾಯದ ರಾಜಿ-ಸಂಧಾನಕ್ಕೆ ಒಪ್ಪದ ಸವರ್ಣೀಯರು!
ಈ ಬಗ್ಗೆ ಮಾತನಾಡಿದ ಕೃಷಿ ಕೂಲಿ ಕಾರ್ಮಿಕ ಸಂಘ ಹಾಗೂ ಮರಕುಂಬಿ ಗ್ರಾಮದ ಮಾದಿಗ ಸಮುದಾಯದ ಮುಖಂಡರಾದ ಬಸವರಾಜ್ “ಘಟನೆ ನಡೆದ ಮೂರು ವರ್ಷದ ಬಳಿಕ ಗ್ರಾಮ ಸಹಜ ಸ್ಥಿತಿಗೆ ಮರಳಿತ್ತು. ಕ್ರಮೇಣ ಒಬ್ಬರಿಗೊಬ್ಬರು ಮಾತನಾಡಲು ಆರಂಭಿಸಿದ್ದರು. ಸವರ್ಣೀಯರು ಕೂಲಿ ಕೆಲಸಕ್ಕೆ ನಮ್ಮವರನ್ನು ಕರೆಯಲು ಆರಂಭಿಸಿದ್ದರು. ನಮ್ಮ ಕೇರಿಯಲ್ಲೆ ಇದ್ದ ದುರ್ಗಮ್ಮ ದೇವಿ ಜಾತ್ರೆಗೆ ಸವರ್ಣೀಯರನ್ನು ಆಹ್ವಾನಿಸಿದ್ದೆವು. ಜಾತ್ರೆ ಮಾತುಕತೆ ಸಂದರ್ಭದಲ್ಲೇ ನಾವು 2014ರ ಹಲ್ಲೆ ಪ್ರಕರಣದ ಕುರಿತು ಪ್ರಸ್ತಾಪಿಸಿದ್ದೆವು. ’ಅಂದು ಸುಖಾಸುಮ್ಮನೆ ನಮ್ಮ ಮೇಲೆ ದಾಳಿ ಮಾಡಿದ್ದು ಯಾಕೆ ಎಂದು ಚರ್ಚಿಸೋಣ. ನಂತರ, ಕೇಸ್ ರಾಜಿ ಮಾಡಿಕೊಳ್ಳೋಣ’ ಎಂದು ಹೇಳಿದ್ದೆವು. ’ಈಗ ಆಗದಿದ್ದರೆ, ಜಾತ್ರೆ ಮುಗಿದ ಮೇಲಾದರೂ ಮಾತನಾಡೋಣ’ ಎಂದು ಹೇಳಿದ್ದೆವು. ಆದರೆ, ನಮ್ಮ ಯಾವ ಮಾತಿಗೂ ಅವರು ಕಿವಿಗೊಡಲಿಲ್ಲ ಎಂದರು.
ಮಾತು ಮುಂದುವರಿಸಿದ ಬಸವರಾಜ್, “ಮುಂದೊಂದು ದಿನ ಈ ಪ್ರಕರಣದಲ್ಲಿ ತಮಗೆ ಶಿಕ್ಷೆಯಾಗುತ್ತದೆ ಎಂಬ ಯಾವ ಅರಿವೂ ಸವರ್ಣೀಯರಿಗೆ ಇರಲಿಲ್ಲ. ದೂರುದಾರ ಭೀಮೇಶ್, ಸಾಕ್ಷಿದಾರ ವೀರೇಶ್ ಇಬ್ಬರೂ ತೀರಿಕೊಂಡಿದ್ದಾರೆ. ಇನ್ನು ಉಳಿದವರಿಂದ ಏನು ಮಾಡಲು ಸಾಧ್ಯ? ನಾವ್ಯಾಕೆ ಮಾದಿಗರ ಜೊತೆಗೆ ರಾಜಿ ಮಾಡಿಕೊಳ್ಳಬೇಕು ಎಂಬ ಮನಸ್ಥಿತಿಯಲ್ಲಿದ್ದರು. ಅವರ ವಕೀಲರಿಗೂ ಅವರು ಸಹಕಾರ ನೀಡಲಿಲ್ಲ. ನಿಗದಿತ ದಿನಾಂಕದಂದು ಕೋರ್ಟಿಗೂ ಕೂಡ ಹಾಜರಾಗಲಿಲ್ಲ. ಅಕ್ಟೋಬರ್ 22ರಂದು ಕೋರ್ಟಿಗೆ ಸಹಿ ಮಾಡಲೆಂದು ಆಗಮಿಸಿದ್ದ ಯಾರಿಗೂ ತಾವು ಬಂಧನಕ್ಕೆ ಒಳಗಾಗುತ್ತೇವೆ ಎಂಬ ಬಗ್ಗೆ ಗೊತ್ತಿರಲಿಲ್ಲ ಎಂದು ವಿವರಿಸಿದರು.
ತೀರ್ಪಿನ ಬಗ್ಗೆ ಮಾತನಾಡಿದ ಬಸವರಾಜ್, ಜಿಲ್ಲಾ ನ್ಯಾಯಾಲಯದ ತೀರ್ಪಿನಿಂದ ನಮಗೆ ನ್ಯಾಯ ಸಿಕ್ಕಿದೆ. ಅಂದು ಇವರೆಲ್ಲಾ ನಮ್ಮವರನ್ನು ಮನೆಯಿಂದ ಹೊರಗೆಳೆದು ಹೊಡೆದಿದ್ದರು. ಮಕ್ಕಳು, ಹೆಂಗಸರು, ವೃದ್ಧರನ್ನೂ ಬಿಟ್ಟಿರಲಿಲ್ಲ. ಆದ್ದರಿಂದ, ಈ ತೀರ್ಪಿನಿಂದ ಅಂದು ಥಳಿಸಿಕೊಂಡವರಿಗೆ ನ್ಯಾಯ ಸಿಕ್ಕಂತಾಗಿದೆ. ಆದರೆ, ಗ್ರಾಮದ ಅಷ್ಟು ಜನರಿಗೆ ಜೀವಾವಧಿ ಶಿಕ್ಷೆಯಾಗಿರುವುದಕ್ಕೆ ನಮಗೂ ಹೆಚ್ಚಿನ ಸಂತೋಷವಾಗಿಲ್ಲ. ಶಿಕ್ಷೆಗೊಳಗಾದ ಹಲವರ ಮನೆಯಲ್ಲಿ ಸಮಸ್ಯೆಗಳಿವೆ” ಎಂದರು.
ಗುಡಿಸಲು ಕಳೆದುಕೊಂಡವರು ಹೇಳಿದ್ದೇನು?
2014ರಲ್ಲಿ ತಮ್ಮ ಗುಡಿಸಲುಗಳನ್ನು ಕಳೆದುಕೊಂಡಿದ್ದವರು ಈಗ ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಸರ್ಕಾರದ ನೆರವಿನಿಂದ ಹಾಗೂ ಸಾಲಸೋಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಅವರೂ ಕೂಡ ಈಗ ಶಿಕ್ಷೆಗೆ ಒಳಪಟ್ಟಿರುವವರ ಬಗ್ಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ನಡೆದು ವರ್ಷಗಳೇ ಕಳೆದಿವೆ. ಅವರೊಟ್ಟಿಗೆ ನಾವೆಲ್ಲರೂ ಈಗ ಚೆನ್ನಾಗಿದ್ದೇವೆ. ಈಗ ಈ ತೀರ್ಪು ಬಂದಿರುವುದು ನಮಗೂ ಆಶ್ಚರ್ಯ ತಂದಿದೆ ಎನ್ನುತ್ತಾರೆ.
ಈ ಬಗ್ಗೆ ಅಂದು ಗುಡಿಸಲು ಕಳೆದುಕೊಂಡಿದ್ದ ರೇಣುಕಮ್ಮ ಮಾತನಾಡಿ, “ಘಟನೆ ನಡೆದ ದಿನ ನಾವು ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದೆವು, ನಮ್ಮ ಇಬ್ಬರು ಗಂಡು ಮಕ್ಕಳು ದುಡಿಯಲು ಬೆಂಗಳೂರಿನಲ್ಲಿದ್ದರು. ನನ್ನ ಗಂಡ ಅಂಗವಿಕಲ ಆಗಿದ್ರಿಂದ ಅವರು ಗುಡಿಸಲಿನಲ್ಲೇ ಇದ್ದರು. ಅವರಿಗೆ ನಡೆದಾಡಲು ಕಷ್ಟವಾಗುತ್ತಿತ್ತು. ನಾವು ಮನೆಗೆ ಬಂದು ನೋಡುವಷ್ಟರಲ್ಲೇ ಮನೆ ಸುಟ್ಟುಹೋಗಿತ್ತು. ಊರು ಮುಂದೆ ಗಲಾಟೆ ನಡೆಯುತ್ತಿದೆ ಎನ್ನುವ ಕಾರಣಕ್ಕೆ ನಮ್ಮ ಪತಿ ಸಹ ಅಲ್ಲಿಗೆ ಕಷ್ಟಪಟ್ಟು ಹೋಗಿದ್ದಾರೆ. ಹಿಂದೆಯಿಂದ ಅವರು ಬಂದು ಬೆಂಕಿ ಹಚ್ಚಿದ್ದಾರೆ. ನನ್ನ ಅಂಗವಿಕಲ ಗಂಡನಿಗೂ ಕಲ್ಲಿನಿಂದ ಹೊಡೆದಿದ್ದರು. ಬಳಿಕ ಅವರನ್ನು ನಾವು ಆಸ್ಪತ್ರೆಗೆ ಕರೆದೊಯ್ದೆವು” ಎಂದರು.

ಅಂದು ನಿಮ್ಮ ಮನೆ ಸುಟ್ಟವರಿಗೆ ಇಂದು ಶಿಕ್ಷೆಯಾಗಿದೆ, ನಿಮಗೆ ಇದು ತೃಪ್ತಿ ತಂದಿದೆಯಾ ಎಂದು ಪ್ರಶ್ನಿಸಿದರೆ, “ಅಂದು ದಾಳಿ ಮಾಡಿದವರು ಇಪ್ಪತೈದರಿಂದ ಮೂವತ್ತು ಜನರಿರಬಹುದು; ಆದರೆ ಉಳಿದ ಮಂದಿಯನ್ನು ಬಂಧಿಸಿ ಎಂದು ನಾವ್ಯಾರೂ ಹೇಳಿಲ್ಲ. ಉಳಿದ ಮಂದಿ ಜೈಲಿಗೆ ಹೋಗಿರುವುದು ನಮಗೆ ಭಯ ಹುಟ್ಟಿಸಿದೆ. ಯಾಕೆಂದರೆ, ಕೃತ್ಯ ಮಾಡಿದವರೂ, ಮಾಡದವರೆಲ್ಲರೂ ಜೈಲಿಗೆ ಹೋಗಿದ್ದಾರೆ. ನಮಗೆ ಆವರ ಮೇಲೆ ಕೋಪ ಇಲ್ಲ. ಅಷ್ಟೆಲ್ಲಾ ನಡೆದರೂ, ನಾವು ಎಲ್ಲವನ್ನೂ ಮರೆತು ಒಂದಾಗಿದ್ದೆವು. ದುರ್ಗಮ್ಮನ ಜಾತ್ರೆಯನ್ನು ಎಲ್ಲರೂ ಒಟ್ಟಾಗಿ ಆಚರಿಸಿದ್ದೆವು. ಒಂದೇ ತಾಯಿಯ ಮಕ್ಕಳಾಗಿ ಇದ್ದೆವು. ಈಗ ಅವರು ಬಂಧನವಾಗಿರುವುದೇ ನಮಗೆ ಗೊತ್ತಿಲ್ಲ. ಕೇಸ್‌ಗಾಗಿ ಅವರು ಪ್ರತಿ ತಿಂಗಳೂ ಹೋಗುತ್ತಿದ್ದರು; ವಾಪಸ್ ಬರುತ್ತಿದ್ದರು. ಆದರೆ, ಈ ಬಾರಿ ಬಂಧನವಾಗಿದೆ” ಎಂದರು.
ಸುದೀರ್ಘ ವಿಚಾರಣೆ ಬಳಿಕ ಸಮಾಧಾನ ಕೊಟ್ಟ ತೀರ್ಪು
ತಮ್ಮ ಗುಡಿಸಲುಗಳನ್ನು ಸುಟ್ಟು, ತಮ್ಮವರನ್ನು ಥಳಿಸಿದ ಸವರ್ಣೀಯರ ಕೃತ್ಯವನ್ನು ಮರಕುಂಬಿ ಮಾದಿಗ ಸಮುದಾಯ ಕ್ರಮೇಣ ಮರೆತಿದ್ದರು. ಬೆಳಗಾಗೆದ್ದರೆ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳಬೇಕು ಎಂಬ ಕಾರಣಕ್ಕೆ ರಾಜಿಸಂಧಾನಕ್ಕೂ ಮುಂದಾಗಿದ್ದರು. ಆದರೆ, ಅಂದು ವಿನಾಕಾರಣ ಥಳಿಸಿಕೊಂಡಿದ್ದ ಕೆಲವರಿಗೆ ಸವರ್ಣೀಯರ ಮೇಲೆ ಸಿಟ್ಟಿತ್ತು. ಅಕ್ಟೋಬರ್ 24ರ ತೀರ್ಪು ಅವರಿಗೆ ಸಮಾಧಾನಕೊಟ್ಟಿದೆ. ಆದರೆ, ದಲಿತ ಸಮುದಾಯದವರ್‍ಯಾರೂ ವಿಜಯೋತ್ಸವ ಆಚರಣೆ ಮಾಡಿಲ್ಲ. ಬದಲಿಗೆ, ಶಿಕ್ಷೆಗೆ ಗುರಿಯಾಗಿರುವ ಕುಟಂಬದ ಸದಸ್ಯರ ಬಗ್ಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ.
ಗುಡಿಸಲುಗಳನ್ನು ಸುಟ್ಟ ಮತ್ತು ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ 2014ರಿಂದ ಕೊಪ್ಪಳದ ಜಿಲ್ಲಾ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಯುತ್ತಿತ್ತು. 117 ಜನರ ಮೇಲೆ ಆರೋಪ ಪಟ್ಟಿ ಹೊರಿಸಲಾಗಿತ್ತು. 117 ಜನರಲ್ಲಿ ಇಬ್ಬರ ಹೆಸರು ಎರಡು ಸಾರಿ, ಒಬ್ಬರ ಹೆಸರು ಅಸ್ತಿತ್ವದಲ್ಲಿ ಇಲ್ಲದ ಕೃತಕ ಹೆಸರಾಗಿತ್ತು. ಅಂತಿಮವಾಗಿ, ಆರೋಪ ಪಟ್ಟಿಯಲ್ಲಿ ದಾಖಲಾದ ವ್ಯಕ್ತಿಗಳ ಸಂಖ್ಯೆ 114 ಮಾತ್ರ. ವಿಚಾರಣೆಯ ಹಂತದಲ್ಲಿನ ಹತ್ತು ವರ್ಷಗಳಲ್ಲಿ 11 ಜನ ನಿಧನರಾಗಿದ್ದಾರೆ.
ಅಂತಿಮವಾಗಿ 101 ಜನರ ಮೇಲಿನ ಆರೋಪ ಸಾಬೀತಾಗಿದ್ದು, ಅದರಲ್ಲಿ ಪ್ರಬಲ ಜಾತಿಗಳ 98 ಜನರಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ 5000 ರೂ. ದಂಡ ವಿಧಿಸಲಾಗಿದೆ. ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಸೇರಿದ 3 ಜನಕ್ಕೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು ತಲಾ 2000 ರೂ. ದಂಡ ವಿಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತರು ಬಾಲ ನ್ಯಾಯಮಂಡಳಿ ವ್ಯಾಪ್ತಿಗೆ ಒಳಪಟ್ಟಿದ್ದರು. ಪೊಲೀಸರು, ವೈದ್ಯರು, ಪ್ರತ್ಯಕ್ಷದರ್ಶಿಗಳು ಸೇರಿದಂತೆ 27 ಜನರು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು.
ಶಿಕ್ಷೆ ಬಳಿಕ ಓರ್ವ ಅಪರಾಧಿ ಸಾವು
ಮರಕುಂಬಿಯಲ್ಲಿ ಮಾದಿಗ ಸಮುದಾಯದ ಮೇಲೆ ಹಲ್ಲೆ ನಡೆಸಿ, ಗುಡಿಸಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ 101 ಜನರಲ್ಲಿ ಓರ್ವ ಅಪರಾಧಿಗೆ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಸಾವನ್ನಪ್ಪಿದರು. ದೀರ್ಘ ಕಾಲದ ಆನಾರೋಗ್ಯದಿಂದ ಬಳಲುತ್ತಿದ್ದ ರಾಮ ಲಕ್ಷಣ ಭೋವಿ (44) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಇವರೂ ಕೂಡ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಪ್ರಕರಣದಲ್ಲಿ ಇವರಿಗೆ ಐದು ವರ್ಷ ಜೈಲು ಶಿಕ್ಷೆಯಾಗಿತ್ತು.
ಈ ಬಗ್ಗೆ ಮಾತನಾಡಿದ ಮರಕುಂಬಿ ಗ್ರಾಮದ ಬಸವರಾಜ್ ಮತ್ತು ಇತರೆ ಜನರು, “ರಾಮ ಲಕ್ಷಣ ಭೋವಿ ಅವರ ಕುಟುಂಬದ ಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ. ಸವರ್ಣೀಯರ ಪ್ರಚೋದನೆಯಿಂದ ಅಂದು ರಾಮ ಲಕ್ಷ್ಮಣ ಕೂಡ ತನ್ನದೇ ಸಹೋದರ ಜಾತಿಯ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರು. ನಂತರದ ದಿನಗಳಲ್ಲಿ ಇದೇ ಮಾದಿಗ ಸಮುದಾಯದ ಸದಸ್ಯರು, ಮೃತ ಅಪರಾಧಿಯ ಅನಾರೋಗ್ಯದ ಚಿಕಿತ್ಸೆಗೆ ನೆರವಾಗಿದ್ದರು” ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.
ಮರಕುಂಬಿ ಮಾದಿಗ ಸಮುದಾಯದ ಈಗಿನ ಸ್ಥಿತಿ ಹೇಗಿದೆ?
ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಸಮುದಾಯಕ್ಕೆ ನಿವೇಶನ ಹಾಗೂ ವಸತಿ ಬೇಕು ಎಂದು ಕೇಳುತ್ತಿರುವ ಮಾದಿಗ ಸಮುದಾಯದ ಬೇಡಿಕೆ, ಬೇಡಿಕೆಯಾಗಿಯೇ ಉಳಿದಿದೆ. ಎರಡು ದಶಕದ ಹಿಂದೆ ದಲಿತರು ತಮ್ಮ ನಿವೇಶನಕ್ಕಾಗಿ ಗುರುತಿಸಿದ ಪಟ್ಟಾ ಭೂಮಿಯೊಂದರ ವಿವಾದವೂ ಇವರ ಮೇಲಿನ ದಾಳಿಗೆ ಕಾರಣಗಳಲ್ಲೊಂದಾಗಿದೆ.
ನಾವು ಮರಕುಂಬಿಗೆ ಭೇಟಿ ನೀಡಿದಾಗ ಇಡೀ ಗ್ರಾಮ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಕಂಡುಬಂತು. ಜನರಿಗೆ ಅಗತ್ಯವಿರುವ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ಇಡೀ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯದ ಕುಟುಂಬಗಳು ಚಿಕ್ಕಚಿಕ್ಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ. 300ಕ್ಕೂ ಹೆಚ್ಚು ಜನರು ಸುಮಾರು ಅರವತ್ತು ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ.
2014ರಲ್ಲಿ ಮಾದಿಗರ ಮೇಲೆ ಹಲ್ಲೆಯಾದಾಗ ಸರ್ಕಾರ ಕೇವಲ 15 ಸಾವಿರ ರೂಪಾಯಿ ಹಣವನ್ನು ಪರಿಹಾರವನ್ನಾಗಿ ನೀಡಿದ್ದು ಬಿಟ್ಟರೆ, ಈವರೆಗೆ ಮತ್ಯಾವುದೇ ಸೌಲಭ್ಯಗಳನ್ನು ಇವರಿಗೆ ನೀಡಿಲ್ಲ. ಬಹುತೇಕರು ಭೂರಹಿತರಾಗಿದ್ದು, ಹಲವರು ವಸತಿರಹಿತರಾಗಿ ಜೀವನ ಮಾಡುತ್ತಿದ್ದಾರೆ.
ರಾಜ್ಯದಾದ್ಯಂತ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಹುಟ್ಟಿಸಿದೆ. ಕೊಪ್ಪಳ ಜಿಲ್ಲೆಯಲ್ಲೂ ಕಳೆದ ಒಂದು ದಶಕದಲ್ಲಿ ಪರಿಶಿಷ್ಟರ ಮೇಲಿನ ಹಲ್ಲೆ, ದೌರ್ಜನ್ಯ, ಕೊಲೆ ಹಾಗೂ ಅಸ್ಪೃಶ್ಯತೆ ಆಚರಣೆ ಪ್ರಕರಣಗಳು ಏರುಗತಿಯಲ್ಲಿವೆ. ’ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ’ ಅಡಿಯಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದರೂ ಶಿಕ್ಷೆ ಪ್ರಮಾಣ ಮಾತ್ರ ಕಡಿಮೆಯಿದೆ. ಇತ್ತೀಚಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಂಡುಬಂದ ಕೆಲ ಪ್ರಮುಖ ಪ್ರಕರಣಗಳನ್ನು ಇಲ್ಲಿ ದಾಖಲಿಸಲಾಗಿದೆ.
ದೇಗುಲ ಪ್ರವೇಶಿಸಿದ್ದಕ್ಕೆ 3 ವರ್ಷದ ದಲಿತ ಬಾಲಕನ ತಂದೆಗೆ ದಂಡ!
2021ರ ಸೆಪ್ಟೆಂಬರ್ 4 ರಂದು ಮೂರು ವರ್ಷದ ದಲಿತ ಬಾಲಕ ದೇಗುಲ ಪ್ರವೇಶಿಸಿದ್ದಕ್ಕಾಗಿ, ಗ್ರಾಮದ ಸವರ್ಣೀಯರು ಬಾಲಕನ ತಂದೆಗೆ ಶುದ್ಧೀಕರಣಕ್ಕೆ ಎಂದು ಹೇಳಿ ದಂಡ ವಿಧಿಸಿದ್ದರು. ಕೊಪ್ಪಳದ ಕುಷ್ಟಗಿ ತಾಲೂಕಿನ ಮಿಯಾಪೂರದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ಅವರ ದೂರು ಆಧರಿಸಿ ಗ್ರಾಮದ ಕನಕಪ್ಪ ಪೂಜಾರಿ, ಹನುಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ ಹಾಗೂ ಶರಣಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
2021ರ ಸೆಪ್ಟೆಂಬರ್ 4ರಂದು ತನ್ನ ಹುಟ್ಟುಹಬ್ಬ ಇದ್ದ ಕಾರಣ ನಾಲ್ಕು ವರ್ಷದ ಚೆನ್ನದಾಸರ ಸಮುದಾಯದ ಬಾಲಕ ತನ್ನ ತಂದೆಯೊಂದಿಗೆ ಗ್ರಾಮದ ದೇವಸ್ಥಾನಕ್ಕೆ ಬಂದಿದ್ದ. ತಂದೆ ಕಣ್ಣುಮುಚ್ಚಿ ಪ್ರಾರ್ಥಿಸುತ್ತಿದ್ದಾಗಲೇ ಮೂರು ವರ್ಷದ ಬಾಲಕ ಅಚಾನಕ್ಕಾಗಿ ದೇವಸ್ಥಾನ ಪ್ರವೇಶಿಸಿದ್ದ. ಇದರಿಂದ ಕುಪಿತಗೊಂಡಿದ್ದ ದೇವಸ್ಥಾನದ ಅರ್ಚಕ ಹಾಗೂ ಗ್ರಾಮಸ್ಥರು, ದೇವಾಲಯ ಶುದ್ಧೀಕರಣಕ್ಕೆಂದು 10 ಸಾವಿರ ಹಾಗೂ 25 ಸಾವಿರ ರೂಪಾಯಿಯಂತೆ ಎರಡು ಬಾರಿ ದಂಡ ಹಾಕಿದ್ದರು.
ಇದಾದಬಳಿಕ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಶಾಂತಿಸಭೆ ನಡೆಸಿದ್ದರು. ತಮ್ಮ ಮೇಲೆ ದೌರ್ಜನ್ಯವಾಗಿದ್ದರೂ, ಪ್ರಬಲ ಜಾತಿ ಜನರಿಗೆ ಹೆದರಿದ್ದ ಬಾಲಕನ ತಂದೆ ದೂರು ಕೊಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳು ದೂರು ದಾಖಲಿಸಿದ್ದರು. ಘಟನೆ ಬಳಿಕ ಮನನೊಂದಿದ್ದ ಕುಟುಂಬ, ಬಾಲಕನ ತಾಯಿಯ ಊರಿಗೆ ಸ್ಥಳಾಂತರವಾಗಿದ್ದರು.
ಗಂಡನ ಮನೆಯವರಿಂದ ಯುವತಿಗೆ ವಿಷವುಣಿಸಿ ಕೊಲೆ
ಪರಿಶಿಷ್ಟ ಪಂಗಡದ (ಎಸ್‌ಟಿ) ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಪರಿಶಿಷ್ಟ ಜಾತಿ (ಎಸ್‌ಸಿ) ಯುವತಿಯನ್ನು ಆಕೆಯ ಗಂಡನ ಮನೆಯವರೇ ವಿಷವುಣಿಸಿ ಕೊಂದಿದ್ದ ಘಟನೆ ಇದೇ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ಬೆಳಕಿಗೆ ಬಂದಿತ್ತು. “ತಮ್ಮ ಮಗಳನ್ನು ಗಂಡನ ಮನೆಯವರು ಮನಬಂದಂತೆ ಹಲ್ಲೆ ನಡೆಸಿ, ಬಳಿಕ ವಿಷ ಹಾಕಿ ಕೊಲೆಗೈದಿದ್ದಾರೆ” ಎಂದು ಮೃತ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ಈ ಘಟನೆ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ನಡೆದಿದೆ. ಮಾದಿಗ ಸಮುದಾಯಕ್ಕೆ ಸೇರಿದ ಮರಿಯಮ್ಮ (21) ಹಾಗೂ ವಾಲ್ಮೀಕಿ ಸಮುದಾಯದ ಹನುಮಯ್ಯ ಇಬ್ಬರೂ ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮರಿಯಮ್ಮ ಮೂಲತಃ ಅಗೋಲಿ ಗ್ರಾಮದವರು. ವಿಠಲಾಪುರ ಗ್ರಾಮದಲ್ಲಿ ಅಜ್ಜಿ ಮನೆ ಇರುವುದರಿಂದ ಆಗಾಗ ಅಲ್ಲಿಗೆ ಬಂದುಹೋಗುತ್ತಿದ್ದರು. ಈ ವೇಳೆ ಗ್ರಾಮದ ಯುವಕ ಹನುಮಯ್ಯ ಪರಿಚಯವಾಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
2023ರ ಏಪ್ರಿಲ್‌ನಲ್ಲಿ ತಮ್ಮ ಕುಟುಂಬದವರನ್ನು ಈ ಮದುವೆಗೆ ಒಪ್ಪಿಸಿದ್ದ ಹನುಮಯ್ಯ, ಗಂಗಾವತಿಯಲ್ಲಿ ಮರಿಯಮ್ಮರ ಜತೆ ರಿಜಿಸ್ಟರ್ ಮದುವೆಯಾಗಿದ್ದರು. ನಂತರ, ಯುವಕನ ಮನೆಯಲ್ಲಿ ಜಾತಿ ಸಂಬಂಧವಾಗಿ ಯುವತಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ, ವರದಕ್ಷಿಣೆ ತರುವಂತೆ ಕೂಡ ಪೀಡಿಸುತ್ತಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು.
ತನ್ನ ಮಗ ಮದುವೆಯಾಗಿರುವ ಯುವತಿ ಮಾದಿಗ ಸಮುದಾಯಕ್ಕೆ ಸೇರಿದವಳೆಂಬ ಕಾರಣಕ್ಕೆ ಇಬ್ಬರಿಗೂ ಮನೆಯ ಸಮೀಪವೇ ಪ್ರತ್ಯೇಕ ಶೆಡ್ ಹಾಕಿಕೊಟ್ಟಿದ್ದರು. ನಾವು ಯಾರೂ ನೀನು ಮಾಡಿದ ಅಡುಗೆ ತಿನ್ನಲಾರೆವು ಎಂದು ಅಸ್ಪೃಶ್ಯತೆ ಆಚರಣೆ ಮಾಡಿರುವುದಾಗಿ ತಿಳಿದುಬಂದಿದೆ. ಎಲ್ಲದಕ್ಕೂ ಜಾತಿಯ ಕಾರಣವೊಡ್ಡಿ ಕುಟುಂಬದಿಂದ ದೂರವಿಟ್ಟು, ಹಿಂಸೆ ನೀಡುತ್ತಿದ್ದರು ಎಂದು ಯುವತಿ ಮರಿಯಮ್ಮ ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ’ಯುವತಿಗೆ ಗಂಡನ ಮನೆಯವರು ಹಲ್ಲೆ ನಡೆಸಿದ್ದು, ಯುವತಿಯ ಸಾವಾಗಿದೆ. ಕೊಲೆ ಮಾಡಿದ ಬಳಿಕ ಯಾವುದೇ ಅನುಮಾನ ಬಾರದಿರಲು ವಿಷವುಣಿಸಿದ್ದಾರೆ’ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.
ಯುವತಿಯ ಕುಟುಂಬಕ್ಕೆ ಕರೆ ಮಾಡಿದ್ದ ಗಂಡನ ಮನೆಯವರು, “ನಿಮ್ಮ ಮಗಳು ಜಮೀನಿನಲ್ಲಿ ವಿಷ ಕುಡಿದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಅಲ್ಲಿ ಆಕೆಯ ಸಾವಾಗಿದೆ ಎಂದು ಕತೆ ಕಟ್ಟಿದ್ದರು” ಎಂದು ಆರೋಪಿಸಲಾಗಿದೆ.
ದಲಿತ ಯುವಕನನ್ನು ಕತ್ತರಿಯಿಂದ ಇರಿದು ಕೊಂದ ಕ್ಷೌರಿಕ
ದಲಿತ ಯುವಕನೊಬ್ಬ ತನಗೆ ಕ್ಷೌರ ಮಾಡಲು ಒತ್ತಾಯಿಸಿದ ನಂತರ, ಮಾತಿಗೆ ಮಾತು ಬೆಳೆದು ಕ್ಷೌರಿಕ ಕೊಲೆ ಮಾಡಿರುವ ಘಟನೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ನಡೆದಿದೆ. ಯಮನೂರಪ್ಪ ಬಂಡಿಹಾಳ (23) ಕೊಲೆಯಾದ ಮೃತ ದಲಿತ ಯುವಕನಾಗಿದ್ದಾನೆ.
ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಸಲೂನ್‌ಗೆ ಹೋಗಿದ್ದ ವೇಳೆ ಈ ಸಲೂನ್ ಮಾಲೀಕ ಮುದುಕಪ್ಪ ಅಂದಪ್ಪ ಹಡಪದ ಅವರು, ’ನೀನು ದಲಿತ. ಹಾಗಾಗಿ, ನಾವು ಕ್ಷೌರ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಇದನ್ನ ಯುವಕ ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಮುದುಕಪ್ಪ ಹಡಪದ ಕೈಯ್ಯಲ್ಲಿದ್ದ ಕತ್ತರಿಯಿಂದ ಯಮನೂರಪ್ಪ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಯುವಕ ಧರ್ಮರಾಜ್ ಮಾಹಿತಿ ನೀಡಿದ್ದಾರೆ.
ಸಂಗನಾಳ ಗ್ರಾಮದ ಇಡೀ ದಲಿತ ಸಮುದಾಯದವರಿಗೆ ಹೇರ್ ಕಟ್ಟಿಂಗ್ ಮಾಡಿಸಲು ಅವಕಾಶ ನೀಡುತ್ತಿಲ್ಲ. ಯಲಬುರ್ಗಾ ತಾಲೂಕಿಗೆ ಹೋಗಿ ಹೇರ್ ಕಟ್ ಮಾಡಿಸುತ್ತಾ ಬಂದಿದ್ದೇವೆ. ದಲಿತರೆಂಬ ಕಾರಣಕ್ಕೆ ಅಸ್ಪೃಶ್ಯತೆ ಆಚರಣೆ ನಡೆಯುತ್ತಿದೆ ಎಂದು ಗ್ರಾಮದ ದಲಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವಾರು ಸಮುದಾಯಗಳ ಜನರ ಕ್ಷೌರ ಮಾಡಲಾಗುತ್ತದೆ. ಆದರೆ, ದಲಿತ ಸಮುದಾಯದವರಿಗೆ ಮಾತ್ರ ಮಾಡಲ್ಲ. ಯಾವ ಕಾರಣಕ್ಕೆ ಅಂತ ಪ್ರಶ್ನಿಸಿದರೆ, ಕೊಲೆ ಮಾಡುವ ಹಂತಕ್ಕೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಂಬಾಣಿ ಯುವತಿಯನ್ನು ಪ್ರೀತಿಸಿದ್ದಕ್ಕೆ ಭೋವಿ ಯುವಕನ ಹತ್ಯೆ?
ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ, ಲಂಬಾಣಿ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಭೋವಿ ಸಮುದಾಯದ ಯುವಕನ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು ಕೊಲೆಯಾದ ಯುವಕನ ಪೋಷಕರು 2021ರ ಜುಲೈನಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವತಿ ಸೇರಿದಂತೆ 6 ಜನರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಮೃತನ ಸಹೋದರ ಪರಶುರಾಮ ಭೋವಿ ಎಂಬುವವರು ದೂರು ದಾಖಲಿಸಿದ್ದರು.
ಲಂಬಾಣಿ ಹಾಗೂ ಭೋವಿ ಎರಡೂ ಸಹ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಸೇರಿದ್ದು, ಕೊಲೆ ಪ್ರಕರಣದಲ್ಲಿ ಸಂಗಾಪುರ ಗ್ರಾಮದ ಕೋತಿಸ್ವಾಮಿ, ಲಕ್ಷ್ಮೀಬಾಯಿ ಗಂಗಾಧರ, ರವಿ ಹನುಮಂತಪ್ಪ, ಯುವತಿ ಅನಿತಾ ಹಾಗೂ ಹಿರೇಜಂತಕಲ್ ರಾಜು ವಿರುಪಣ್ಣ ಎಂಬುವವರು ಎಫ್‌ಐಆರ್ ದಾಖಲಿಸಲಾಗಿತ್ತು.
ಭೋವಿ ಸಮುದಾಯ ಹನುಮೇಶ ಎಂಬ ಯುವಕನ ಮೃತದೇಹ ಗ್ರಾಮದ ಮಾವಿನ ತೋಟವೊಂದರಲ್ಲಿ ಪತ್ತೆಯಾಗಿತ್ತು. ಲಂಬಾಣಿ ಸಮುದಾಯದ ಅನಿತಾ ಎಂಬ ಯುವತಿಯನ್ನು ಕಳೆದ ಹಲವು ವರ್ಷದಿಂದ ಈ ಯುವಕ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಪಾಲಕರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎನ್ನಲಾದ ರವಿ ಹನುಮಂತ ಕೂಡ ಭಾಗಿಯಾಗಿದ್ದಾನೆ ಎಂದು ಮೃತನ ಸಹೋದರ ದೂರು ನೀಡಿದ್ದರು.
ಕುರುಬ ಜಾತಿ ಯುವತಿಯನ್ನು ಪ್ರೀತಿಸಿದ್ದಕ್ಕೆ ಮಾದಿಗ ಯುವಕನ ಹತ್ಯೆ
2021ರ ಜೂನ್ ತಿಂಗಳು, ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ಪ್ರಬಲ ಜಾತಿ ಯುವತಿಯ ಜೊತೆಗಿನ ಸ್ನೇಹದ ಕಾರಣಕ್ಕೆ 23 ವರ್ಷದ ದಲಿತ ಯುವಕನನ್ನು ಹತ್ಯೆ ಮಾಡಲಾಗಿತ್ತು. ಕುರುಬ ಸಮುದಾಯದ ಸುನೀತಾ ಜತೆಗಿನ ಸಂಬಂಧದ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ದಾನಪ್ಪ ಅವರನ್ನು ಜೂನ್ 22 ರಂದು ಬರಗೂರು ಗ್ರಾಮದಲ್ಲಿ ಪ್ರಬಲ ಕುರುಬ ಜಾತಿಗೆ ಸೇರಿದ ವ್ಯಕ್ತಿಗಳು ಕೊಲೆ ಮಾಡಿದ್ದರು ಎಂಬ ಆರೋಪದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಸುನೀತಾ ಅವರ ಪೋಷಕರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು.
ಬರಗೂರು ಗ್ರಾಮದಲ್ಲಿ ಸಹ ದಲಿತ ಪುರುಷರಿಗೆ ಕ್ಷೌರ ಮಾಡುತ್ತಿರಲಿಲ್ಲ. ಎಸ್‌ಸಿ ಸಮುದಾಯದ ಸದಸ್ಯರು ದೇವಸ್ಥಾನದ ಹೊರಗೆ ನಿಂತು ಪ್ರಾರ್ಥನೆ ಸಲ್ಲಿಸಬೇಕು. ಹಳ್ಳಿಯ ಉಪಾಹಾರ ಗೃಹದಲ್ಲಿ ಊಟ ಮಾಡಲು ಅನುಮತಿಸಲಾಗುವುದಿಲ್ಲ ಎಂದು ದಾನಪ್ಪ ಕೊಲೆ ಸಂದರ್ಭದಲ್ಲಿ ಚರ್ಚೆಯಾಗಿತ್ತು.
ಜಾತಿನಿಂದನೆಗೈದು ದಲಿತ ಯುವಕನ ಮೇಲೆ ಹಲ್ಲೆ
ದಲಿತ ಯುವಕನಿಗೆ ಜಾತಿನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕೆ ಕಾಟಾಪುರ ಗ್ರಾಮದಲ್ಲಿ ಇದೇ ವರ್ಷದ ಅಕ್ಟೋಬರ್‌ನಲ್ಲಿ ನಡೆದಿದೆ.
ಮಾದಿಗ ಸಮುದಾಯಕ್ಕೆ ಸೇರಿದ ಹನುಮಂತ ಎಂಬಾತ ಹಲ್ಲೆಗೊಳಗಾದ ಯುವಕ. ಗ್ರಾಮದ ನಿವಾಸಿಗಳಾದ ಮಂಜಪ್ಪ, ಬರೆಪ್ಪ, ಮೌನೇಶ್, ದುರುಗೇಶಪ್ಪ, ಪ್ರಕಾಶ ಹಲ್ಲೆ ಮಾಡಿದವರು ಎಂದು ಪ್ರಕರಣ ದಾಖಲಿಸಲಾಗಿದೆ. ಹನುಮಂತ ಹೊಲದಿಂದ ಮನೆ ಕಡೆಗೆ ಹೋಗುವ ಮಾರ್ಗದಲ್ಲಿ ಗ್ರಾಮದ ಯುವಕರು ಮದ್ಯಪಾನ ಸೇವಿಸಿ ಕುಳಿತಿದ್ದರು. ಏಕಾಏಕಿ ಇವನ ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆ ಮಾಡುತ್ತಿದ್ದ ಯುವಕ ಕೂಗಾಡುತ್ತಿದ್ದ. ಈ ವೇಳೆ ಹೊಲದಲ್ಲಿದ್ದ ಹನುಮಂತನ ಸಹೋದರ ಧ್ವನಿ ಕೇಳಿಸಿಕೊಂಡು ಜಗಳ ಬಿಡಿಸಲು ಬಂದಿದ್ದಾನೆ. ಈ ವೇಳೆ ಅಣ್ಣನ ಮೇಲೆಯೂ ಹಲ್ಲೆ ಮಾಡಿದ್ದಾರೆ.
ಮಾದಿಗ ಯುವಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ
ಇದೇ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಮದ್ಯ ಸೇವಿಸಿದ ಬಳಿಕ ದುಷ್ಕರ್ಮಿಗಳ ಗುಂಪೊಂದು ಮಾದಿಗ ಎಂಬ ಕಾರಣಕ್ಕೆ ಯುವಕನೋರ್ವನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿತ್ತು.
ಕೊಪ್ಪಳ ತಾಲೂಕಿನ ಬೋಚನ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಮಾದಿಗ ಸಮುದಾಯದ ಯುವಕನನ್ನು ಗುಡದಪ್ಪ ಮುಳ್ಳಣ್ಣ (21) ಎಂದು ಗುರುತಿಸಲಾಗಿದೆ. ಗ್ರಾಮದ ನಾಗನಗೌಡ, ಯಲ್ಲಪ್ಪ, ಭೀಮಪ್ಪ, ಹನುಮಗೌಡ, ಪ್ರಜ್ವಲ್ ಹಾಗೂ ನವೀನ್ ಆರೋಪಿಗಳು ಎನ್ನಲಾಗಿದೆ.
“ಸೆ.9ರಂದು ಬೆಳಗ್ಗೆ ಗ್ರಾಮದ ಕಟ್ಟೆಯ ಮೇಲೆ ಕುಳಿತುಕೊಂಡು ಸಿಗರೇಟ್ ಸೇದುತ್ತಿದ್ದೆ. ಸ್ವಲ್ಪ ದೂರದಲ್ಲಿ ವಾಲ್ಮೀಕಿ ಸಮುದಾಯದ ಯುವಕರು ಮದ್ಯ ಸೇವಿಸಿ ಬಂದು ಸಿಗರೇಟ್ ಸೇದಬಾರದು ಎಂದು ನನ್ನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾದರು. ಆಗ ಭಯಗೊಂಡು ನಾನು ಅಲ್ಲಿಂದ ಮನೆ ಕಡೆಗೆ ಹೋದೆ” ಎಂದು ಸಂತ್ರಸ್ತ ಯುವಕ ಘಟನೆ ಬಗ್ಗೆ ಹೇಳಿದ್ದರು.
“ಅದೇದಿನ ಸಂಜೆ ಗಣಪತಿ ವಿಸರ್ಜನೆ ವೀಕ್ಷಿಸಲು ಹೋದಾಗ ಅದೇ ಯುವಕರ ಗುಂಪು ನನ್ನ ಮೇಲೆ ಹಲ್ಲೆ ಮಾಡಿ, ತಲೆಗೆ ಹೊಡೆದಿದ್ದಾರೆ. ಬಳಿಕ ನಾನು ತೊಟ್ಟಿದ್ದ ಬಟ್ಟೆಯನ್ನು ಬಿಚ್ಚಿಸಿದ್ದಾರೆ. ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕೈಗೆ ಸಿಕ್ಕ ಬಡಿಗೆ, ಚಪ್ಪಲಿಯಲ್ಲಿ ಹೊಡೆದಿದ್ದಾರೆ” ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಸಂತ್ರಸ್ತ ಯುವಕ ಗುಡದಪ್ಪ ವಿವರಿಸಿದ್ದಾರೆ. ಈ ಸಂಬಂಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ; ಅಧಿಕಾರಿಗಳಿಂದ ಸಂಧಾನ
ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದ ಘಟನೆ ಇದೇ ವರ್ಷದ ಫೆಬ್ರವರಿಯಲ್ಲಿ ನಡೆದಿತ್ತು. ಅಲ್ಲದೆ, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ದಲಿತರನ್ನು ಕರೆದುಕೊಂಡು ದೇವಸ್ಥಾನ ಪ್ರವೇಶ ಮಾಡಿಸಿದ್ದರು.
ಹಾಲವರ್ತಿ ಗ್ರಾಮದಲ್ಲಿ ದಲಿತರು ಹೋಟೆಲ್ ಪ್ರವೇಶಿಸಿದರೆ ಹೋಟೆಲ್ ಬಂದ್ ಮಾಡಲಾಗುತ್ತಿತ್ತು. ಕ್ಷೌರದ ಅಂಗಡಿ, ದೇವಸ್ಥಾನ ಹಾಗೂ ಕೆರೆ ಪ್ರವೇಶಕ್ಕೆ ನಿರ್ಬಂಧವಿತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಬಳಿಕ, ಜಾತಿದೌರ್ಜನ್ಯ ಎಸಗಿದ್ದ ಕ್ಷೌರದ ಅಂಗಡಿಯ ಯಂಕೋಬಾ ಹಡಪದ, ಅಂಜಿನಪ್ಪ ಮತ್ತು ಹೋಟೆಲ್ ಮಾಲೀಕ ಸಂಜೀವಪ್ಪ ಗುಳದಳ್ಳಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಮಾದಿಗರಿಗೆ ಹೋಟೆಲ್ ಪ್ರವೇಶ, ಕ್ಷೌರಕ್ಕೆ ನಿರಾಕರಣೆ
2014ಕ್ಕೂ ಮೊದಲು ಮರಕುಂಬಿಯ ಹೋಟೆಲ್‌ಗಳಲ್ಲಿ ಎರಡು (ಮಾದಿಗರಿಗೆ ಪ್ರತ್ಯೇಕ) ಲೋಟದ ವ್ಯವಸ್ಥೆ ಇತ್ತು (ಈಗಲೂ ಇದೆ). ಕ್ಷೌರದ ಅಂಗಡಿಗಳಲ್ಲಿ ಮಾದಿಗ ಸಮುದಾಯಕ್ಕೆ ಕ್ಷೌರ ಮಾಡುತ್ತಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಅಂಗಡಿಗಳಲ್ಲಿ ದಲಿತರಿಗೆ ದಿನಸಿ ಸಾಮಾನು ನೀಡುವುದನ್ನು ನಿರಾಕರಿಸಲಾಗಿತ್ತು.
ಈ ಬಗ್ಗೆ ಮಾದಿಗ ಸಮುದಾಯದ ಎಲ್ಲರೂ ಒಟ್ಟಿಗೆ ಸೇರಿ, ಜೂನ್ 23, 2014ರಂದು ಕೂಲಿಕಾರರ ಸಂಘ ಮತ್ತು ಸಿಪಿಐಎಂ ಮುಖಂಡರ ನೇತೃತ್ವದಲ್ಲಿ ಗಂಗಾವತಿ ತಹಸೀಲ್ದಾರ್‌ರನ್ನು ಭೇಟಿಮಾಡಿ ದೂರು ಕೊಟ್ಟಿದ್ದರು. ಜುಲೈ 25ರಂದು ಮರಕುಂಬಿಗೆ ಆಗಮಿಸಿದ್ದ ತಹಸಿಲ್ದಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರ ಅಧಿಕಾರಿಗಳು ಗ್ರಾಮದಲ್ಲಿ ಶಾಂತಿಸಭೆ ನಡೆಸಿದ್ದರು. ಹೋಟೆಲ್‌ಗಳಲ್ಲಿ ಚಾಲ್ತಿಯಲ್ಲಿದ್ದ ಎರಡು ಲೋಟ ಪದ್ಧತಿಯನ್ನು ಕೂಡಲೇ ನಿಲ್ಲಿಸಬೇಕು, ಯಾವುದೇ ಕಾರಣಕ್ಕೂ ಜಾತಿ ತಾರತಮ್ಯ ಮಾಡಬಾರದು ಎಂದು ತಾಕೀತು ಮಾಡಿದ್ದರು. ಜೊತೆಗೆ, ದಲಿತರಿಗೂ ಕ್ಷೌರ ಮಾಡಬೇಕು ಎಂದು ಅಧಿಕಾರಿಗಳು ಸಭೆಯಲ್ಲಿ ಸೂಚಿಸಿದ್ದರು.
ಆದರೆ, ದಲಿತರಿಗೆ ಪ್ರವೇಶ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಹೋಟೆಲ್ ಮತ್ತು ಕ್ಷೌರದ ಅಂಗಡಿಯನ್ನೇ ಬಂದ್ ಮಾಡಿಸಿದ ಸವರ್ಣೀಯರು, ಅಧಿಕಾರಿಗಳ ಯಾವ ಮಾತುಗಳಿಗೂ ಸೊಪ್ಪು ಹಾಕಲಿಲ್ಲ. ಸಾಲದ್ದಕ್ಕೆ, ಗ್ರಾಮದ ಸವರ್ಣೀಯ ಜಾತಿಗೆ ಸೇರಿದ ಎಡ ಚಳವಳಿ ಮುಖಂಡರಾದ ಗಂಗಾಧರಯ್ಯ ಅವರ ಮನೆಯ ಮೇಲೆ ಇದೇ ಜಾತಿವಾದಿಗಳು ಕಲ್ಲು ತೂರಾಟ ನಡೆಸುತ್ತಾರೆ. ಈ ಘಟನೆ ದಲಿತರಲ್ಲಿ ಅಭದ್ರತೆ ಉಂಟುಮಾಡಿತ್ತು. ಸವರ್ಣೀಯರು ಮಾದಿಗ ಸಮುದಾಯದ ಮೇಲೆ ಅಘೋಷಿತ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಬಳಿಕ, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಇದನ್ನೂ ಓದಿ: ವಿರೋಧ ಲೆಕ್ಕಿಸದೆ ದೇಗುಲ ಪ್ರವೇಶಿಸಿದ ದಲಿತರು; ದೇವರನ್ನೇ ಹೊರತಂದ ಸವರ್ಣೀಯರು


