Homeಕರ್ನಾಟಕಮರಕುಂಬಿ ತೀರ್ಪು: ದಲಿತರತ್ತ ತಿರುಗಿದ ನ್ಯಾಯದೇವತೆ

ಮರಕುಂಬಿ ತೀರ್ಪು: ದಲಿತರತ್ತ ತಿರುಗಿದ ನ್ಯಾಯದೇವತೆ

- Advertisement -
- Advertisement -

ಹಿಂದೂ ಧರ್ಮದ ಅಸ್ಪೃಶ್ಯತೆ ಎಂಬ ಅಮಾನವೀಯ ಹಾಗೂ ವಿಕೃತ ಆಚರಣೆಯಿಂದಾಗಿ ಸುಮಾರು 26 ಕೋಟಿ ಭಾರತೀಯರು ಅನುಭವಿಸುತ್ತಿರುವ ಸಂಕಷ್ಟ ವರ್ಣಿಸಲಾಗದಷ್ಟು ಘೋರವಾಗಿದೆ. ಹತ್ತಾರು ಶತಮಾನಗಳಿಂದ ಸಮಾಜ ಸುಧಾರಕರು ಇದರ ವಿರುದ್ಧ ಸಾಕಷ್ಟು ಪ್ರಚಾರ ಮಾಡಿದರೂ ಸಹ ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿಸಿರುವ ಬ್ರಾಹ್ಮಣ್ಯ ನೀತಿಯು ಶೋಷಿತರನ್ನೇ ಒಡೆದು ಆಳುತ್ತಿರುವುದು ಇತಿಹಾಸ. ಹಾಗಾಗಿ ಜಾತಿ ಏಣಿಶ್ರೇಣಿಯಲ್ಲಿ ಅತ್ಯಂತ ಕೆಳಸ್ತರದಲ್ಲಿರುವ ದಲಿತರು ಈ ವ್ಯವಸ್ಥೆಯ ಅತ್ಯಂತ ಶೋಷಿತರು ಮತ್ತು ದಮನಕ್ಕೆ ಒಳಗಾಗಿರುವವರು. ನಗರ ಹಾಗೂ ಗ್ರಾಮಗಳಲ್ಲಿ ಅತ್ಯಂತ ಹೆಚ್ಚು ತಾರತಮ್ಯಕ್ಕೆ ತುತ್ತಾಗುವವರು. ಆದ್ದರಿಂದ ಹಿಂದೂ ಧರ್ಮದ ಬ್ರಾಹ್ಮಣಶಾಹಿ ಸಿದ್ಧಾಂತವು ದಲಿತರ ಮೇಲಿನ ದೌರ್ಜನ್ಯಕ್ಕೆ ಧಾರ್ಮಿಕ ಅನುಮತಿ ನೀಡಿದೆ. ಇದನ್ನು ತಪ್ಪದೆ ಪರಿಪಾಲಿಸುವ ದಲಿತೇತರರು ದಲಿತರು ಇಡುವ ಒಂದೊಂದು ಹೆಜ್ಜೆಯನ್ನೂ ಕೂಲಂಕುಷವಾಗಿ ಗಮನಿಸಿ ತಮ್ಮ ಸಮಾನಕ್ಕೆ ಬರುವಷ್ಟರಲ್ಲಿ ಬೆರಳುಗಳನ್ನು ಕಡಿಯಲು ಖಡ್ಗಗಳನ್ನು ಝಳಪಿಸಿ ನಿಂತಿರುತ್ತಾರೆ.

ಭಾರತದ ಸಂವಿಧಾನವು ಜಾತಿಯ ಆಚರಣೆಯನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿಲ್ಲವಾದರೂ ಅಸ್ಪೃಶ್ಯತೆ ಆಚರಣೆಯನ್ನು ಅಪರಾಧವಾಗಿಸಿದೆ. ಆ ಕಾರಣಕ್ಕಾಗಿಯೇ ಹಲವು ದಲಿತಪರ ಹೋರಾಟಗಳು, ಸಂವಿಧಾನ ನಡಾವಳಿ ಹಾಗೂ ಸಂಸತ್ ಚರ್ಚೆಗಳಿಂದಾಗಿ ಮತ್ತು ಮುಖ್ಯವಾಗಿ ಅಂಬೇಡ್ಕರ್‌ರವರ ದೂರದೃಷ್ಟಿಯಿಂದಾಗಿ 1989ರಲ್ಲಿ ಅಟ್ರಾಸಿಟಿ ಕಾಯ್ದೆಯು ಜಾರಿಗೆ ಬಂದಿತು. ಅಲ್ಲಿಯವರೆಗ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳು ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಈ ಕಾಯ್ದೆಯ ನಂತರ ಸಿಕ್ಕ ಲೆಕ್ಕ ನೋಡಿ ಇಡೀ ದೇಶದ ಜನ ಭಯಭೀತರಾದರು!

ಹೌದು, ದಲಿತರ ಮೇಲಿನ ದೌರ್ಜನ್ಯ ಈ ನೆಲದ ಗುಣವೇನೋ ಎಂಬಂತೆ ಸಾಮಾನ್ಯವಾಗಿಬಿಟ್ಟಿದೆ. ದಲಿತರ ಮೇಲೆ ನಡೆಯುವ ಕೊಲೆ, ಅತ್ಯಾಚಾರ, ಅಪಹರಣ, ಅವಮಾನ, ಬಹಿಷ್ಕಾರಗಳು ಹೆಮ್ಮೆಯ ಸಂಗತಿಯಂತಾಗಿವೆ; ಈ ಅಮಾನವೀಯ ಕ್ರೌರ್ಯವನ್ನು ನಿಲ್ಲಿಸಲು ಯಾವುದೇ ಸರ್ಕಾರದ ಕೈಲೂ ಆಗಲಿಲ್ಲ. ದುರಂತವೆಂದರೆ ನ್ಯಾಯಾಲಯಗಳಿಂದಲೂ ಆಗಲಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಮರಕುಂಬಿ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ನೀಡಿರುವ ತೀರ್ಪು ಇಡೀ ದೇಶದ ದಲಿತರ ಆಶಾಕಿರಣವಾಗಿದೆ.

ದಲಿತರ ಮೇಲಿನ ದೌರ್ಜನ್ಯದ ಕಥೆ

ಎನ್.ಸಿ.ಆರ್.ಬಿ (ರಾಷ್ಟ್ರೀಯ ಅಪರಾಧ ವರದಿ ಸಂಸ್ಥೆ) ಪ್ರಕಾರ 2012ರಲ್ಲಿ ಪ್ರತಿ 18 ನಿಮಿಷಗಳಿಗೆ ಒಂದರಂತೆ ದಲಿತರ ಮೇಲೆ ದೌರ್ಜನ್ಯವಾಗುತ್ತಿತ್ತು. ಪ್ರತಿದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. ದಿನಕ್ಕೊಂದು ದಲಿತರ ಹತ್ಯೆಯಾಗುತ್ತಿತ್ತು. 2014ರ ನಂತರ ಕೋಮುವಾದಿ ರಾಜಕಾರಣ ’ಹಿಂದೂ ನಾವೆಲ್ಲ ಒಂದು’ ಎನ್ನುತ್ತಿದ್ದ ಸಂದರ್ಭದಲ್ಲಿ 2019ರ ಎನ್.ಸಿ.ಆರ್.ಬಿ ವರದಿ ಪ್ರಕಟಿಸಿದಂತೆ 15 ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯವಾಗುತ್ತಿತ್ತು. ಪ್ರತಿ ದಿನ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಆಗುವ ಘಟನೆಗಳು 6ಕ್ಕೆ ಏರಿತು. ಅವರಲ್ಲಿ ಇಬ್ಬರು ಹತರಾಗುತ್ತಿದ್ದರು. ಅಷ್ಟೇಅಲ್ಲ, ದಲಿತರ ಮೇಲೆ ಗುಂಪು ಹಲ್ಲೆಗಳು (ಲಿಂಚಿಂಗ್) ಹೆಚ್ಚಾದವು. ಇಂತಹ 28 ಗುಂಪು ಹಲ್ಲೆಗಳು ದಾಖಲಾಗಿದ್ದು, ಅದರಲ್ಲಿ 8 ದಲಿತರನ್ನು ಕೊಂದುಹಾಕಲಾಗಿದೆ. ಅದೇ ಎನ್.ಸಿ.ಆರ್.ಬಿಯ 2021ರ ವರದಿ ಪ್ರಕಾರ ಅದೊಂದು ವರ್ಷದಲ್ಲಿ 60,045 ದಲಿತರ ಮೇಲಿನ ದೌರ್ಜನ್ಯಗಳು ದಾಖಲಾಗಿವೆ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತಿಹೆಚ್ಚು. ಶೇ.25.82ರಷ್ಟು ದೌರ್ಜನ್ಯಗಳು ಉತ್ತರಪ್ರದೇಶ ಒಂದರಲ್ಲಿಯೇ ನಡೆದಿವೆ. ಕಣ್ಣು ಕೆಂಪಗಾಗಿಸುವ ಮತ್ತೊಂದು ಅಂಶವೆಂದರೆ ಒಟ್ಟಾರೆ ದೌರ್ಜನ್ಯಗಳಲ್ಲಿ ಶೇ.22.64 ರಷ್ಟು ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳಾಗಿವೆ. ಪ್ರತಿ 6 ನಿಮಿಷಕ್ಕೊಂದರಂತೆ ದಲಿತರ ಮೇಲೆ ಒಂದು ದೌರ್ಜನ್ಯವಾಗುತ್ತಿದೆ. ಪ್ರತಿದಿನ 14 ಅತ್ಯಾಚಾರಗಳು ನಡೆಯುತ್ತಿವೆ. ಅದರಲ್ಲಿ 4 ಅತ್ಯಾಚಾರಗಳು ದಲಿತ ಬಾಲಕಿಯರ ಮೇಲೆ ನಡೆಯುತ್ತಿದೆ! ಪ್ರತಿದಿನ 3 ದಲಿತರನ್ನು ಕೊಲ್ಲಲಾಗುತ್ತಿದೆ. ಇನ್ನು ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧವಾಗಿ ಭಾರತದ ನ್ಯಾಯಾಲಯಗಳು ಪ್ರಕಟಿಸಿರುವ ನ್ಯಾಯದ ಕತೆ ಹೇಳಲೆ?

ಕೇಳಿ, 2021ರಷ್ಟೊತ್ತಿಗೆ ಬರೋಬ್ಬರಿ 82,977 ಪ್ರಕರಣಗಳಲ್ಲಿ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿಲ್ಲ! 3,06,024 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ, ಅಂದರೆ ಶೇ.96ರಷ್ಟು ಪ್ರಕರಣಗಳು ಬಾಕಿ ಉಳಿದಿವೆ.

ದಲಿತರ ಮೇಲಿನ ದೌರ್ಜನ್ಯದಲ್ಲಿ ಕರ್ನಾಟಕವೇನು ಹಿಂದೆ ಬಿದ್ದಿಲ್ಲ. ದೇಶವನ್ನೇ ಬೆಚ್ಚಿಬೀಳಿಸಿದ ಕಂಬಾಲಪಲ್ಲಿ, ಬದನವಾಳು, ನಾಗಲಾಪಲ್ಲಿ ಮುಂತಾದ ನೂರಾರು ಗಂಭೀರ ಹತ್ಯಾಕಾಂಡಗಳು ನಡೆದದ್ದು ಇಲ್ಲಿಯೇ. ಅಷ್ಟು ಮಾತ್ರವಲ್ಲ, ದಲಿತರ ವಿರುದ್ಧ ನಡೆಸಿರುವ ದೌರ್ಜನ್ಯಗಳಿಗೆ ಶಿಕ್ಷೆ ನೀಡಿರುವ ಪ್ರಮಾಣದಲ್ಲಿ ಕರ್ನಾಟಕದ್ದು ದೇಶದಲ್ಲಿಯೇ ಅತ್ಯಂತ ಕಡಿಮೆಯಾಗಿದೆ. ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯು ಕ್ರೋಢೀಕರಿಸಿದಂತೆ 2005ರಿಂದ 2018ರವರೆಗೆ 14 ವರ್ಷಗಳಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳು 36,989. ಇದರಲ್ಲಿ ಕೊಲೆ 529, ಅತ್ಯಾಚಾರ 834. ಇದರರ್ಥ ಈ 14 ವರ್ಷಗಳಲ್ಲಿ ಒಂದು ದಿನಕ್ಕೆ ಸರಾಸರಿಯಾಗಿ 7 ದೌರ್ಜನ್ಯಗಳು ನಡೆದಿವೆ. 6 ದಿನಕ್ಕೊಂದು ಹತ್ಯೆ ಮಾಡಲಾಗಿದೆ. 10 ದಿನಕ್ಕೊಂದು ಅತ್ಯಾಚಾರ ಮಾಡಲಾಗಿದೆ. 2018ರಷ್ಟೊತ್ತಿಗೆ 6508 ದೌರ್ಜನ್ಯಗಳು ತನಿಖೆ ಹಾಗೂ ವಿಚಾರಣೆ ಹಂತದಲ್ಲಿಯೇ ಬಾಕಿ ಉಳಿದಿವೆ. ಕರ್ನಾಟಕದಲ್ಲಿ ಶಿಕ್ಷೆ ನೀಡಿರುವ ಪ್ರಮಾಣ ಕೇವಲ 4.23% ಇದೆ. ಇದು ದೇಶದಲ್ಲಿಯೇ ಅತಿ ಕಡಿಮೆಯಾಗಿದೆ. ಸುಮಾರು 80.40% ಪ್ರಕರಣಗಳನ್ನು ಸಾಕ್ಷಿ ಕೊರತೆಯಿಂದ, ವಿಚಾರಣೆ ಹಾಗೂ ತನಿಖೆ ಸರಿಯಾಗಿ ನಡೆಸದೆ ಖುಲಾಸೆಗೊಳಿಸಲಾಗಿದೆ. 2021ರ ಎನ್‌ಸಿಆರ್‌ಬಿ ವರದಿ ಪ್ರಕಾರ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ದಲಿತರ ಮೇಲೆ ದೌರ್ಜನ್ಯ ನಡೆಯುವ ಮಹಾನಗರ ಬೆಂಗಳೂರು! ಖಂಡಿತವಾಗಿಯೂ ಕರ್ನಾಟಕ ದಲಿತರ ಪಾಲಿಗೆ ಶಾಂತಿಯ ತೋಟವಾಗಿಲ್ಲ ಎಂಬುದು ಇದರಿಂದ ಕಂಡುಬರುತ್ತದೆ.

ಏನಿದು ಮರಕುಂಬಿ ಪ್ರಕರಣ

ಕರ್ನಾಟಕದ ದಲಿತರ ಪರಿಸ್ಥಿತಿ ಹೀಗಿರುವಾಗ ಮರಕುಂಬಿಯ ತೀರ್ಪು ಹೊರಬಿದ್ದಿದೆ. ಏನಿದು ಮರಕುಂಬಿ ಪ್ರಕರಣ? ಕರ್ನಾಟಕದಲ್ಲಿಯೇ ದಲಿತರ ಮೇಲಿನ ದೌರ್ಜನ್ಯಕ್ಕೆ ಅತ್ಯಂತ ಹೆಸರುವಾಸಿಯಾಗಿರುವ ಜಿಲ್ಲೆ ಕೊಪ್ಪಳ. ಇತ್ತೀಚೆಗೆ ತಾನೆ, ಈ ಹೆಚ್ಚುತ್ತಿರುವ ದಲಿತರ ಮೇಲಿನ ಹಿಂಸೆಯನ್ನು ವಿರೋಧಿಸಿ ಕೊಪ್ಪಳದಲ್ಲಿ ದಲಿತ ಸಂಘಟನೆಗಳು ಬೃಹತ್ ಹೋರಾಟವನ್ನೂ ಹಮ್ಮಿಕೊಂಡಿದ್ದವು. ಇಂತಹ ಭತ್ತದ ಕಣಜ ಕೊಪ್ಪಳದ ಗಂಗಾವತಿ ತಾಲ್ಲೂಕಿನ ಮರಕುಂಬಿ ಎಂಬ ಹಳ್ಳಿಯಲ್ಲಿ ನಡೆದ ಘಟನೆ ಈಗ ಮತ್ತೆ ಚರ್ಚೆಯಲ್ಲಿದೆ. ಈ ಹಳ್ಳಿಯ ಜನಸಂಖ್ಯೆಯಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿಯೇ ಇದ್ದಾರೆ. ಜೊತೆಗೆ ಈಡಿಗರು, ಲಿಂಗಾಯತರು, ಮಡಿವಾಳರು, ಕಬ್ಬೇರರು, ವಿಶ್ವಕರ್ಮ, ನಾಯಕ, ಭೋವಿ, ಲಂಬಾಣಿ ಜಾತಿಯವರೂ ವಾಸವಿದ್ದಾರೆ. ಈಡಿಗರು ಹಾಗೂ ಲಿಂಗಾಯತರು ಹೆಚ್ಚು ಸಂಖ್ಯೆಯಲ್ಲಿದ್ದು ಜಾತಿ ಏಣಿಶ್ರೇಣಿಯ ಮೇಲಿರುವ ಕಾರಣಕ್ಕೆ ಹಾಗೂ 1974ರ ಭೂಸುಧಾರಣೆಯಲ್ಲಿ ಭೂಮಿ ದೊರಕಿದ ಕಾರಣಕ್ಕೆ ಅಧಿಕಾರ ಕೇಂದ್ರದೊಂದಿಗೆ ಹತ್ತರಿವಿದ್ದು, ಮರಕುಂಬಿಯ ಮೇಲೆ ಒಂದು ರೀತಿಯ ಹಿಡಿತ ಸಾಧಿಸಿದ್ದಾರೆ. ಇಲ್ಲಿನ ದಲಿತರು ಇಡೀ ಉತ್ತರ ಕರ್ನಾಟಕದ ದಲಿತರಂತೆಯೇ ಕಡಿಮೆ ಸಾಕ್ಷರತೆ ಪ್ರಮಾಣ ಹೊಂದಿದ್ದು, ಕೃಷಿ ಕೂಲಿಗಳಾಗಿ ಕೆಲಸ ಮಾಡುತ್ತಾರೆ. ಬೆರಳೆಣಿಕೆಯಷ್ಟು ದಲಿತರು ತುಂಡು ಭೂಮಿಯನ್ನು ಹೊಂದಿದ್ದು, ಅವು ಬಹುತೇಕ ನೀರಾವರಿ ರಹಿತ ಭೂಮಿಯಾಗಿವೆ. ಈ ಊರಿಗೆ SCSP/TSP ಕಾಯ್ದೆಯ ನಂತರವೂ ಸರ್ಕಾರಿ ಸವಲತ್ತುಗಳು ದಲಿತರ ಕಾಲೋನಿಯ ಮುಖ ನೋಡಿಲ್ಲ.

ಹೀಗಿರುವ ಮರಕುಂಬಿಯಲ್ಲಿ 2003ರವರೆಗೆ ಎಲ್ಲವೂ ಸರಿ ಇತ್ತು. ಅಂದರೆ ದಲಿತರು ತಗ್ಗಿಬಗ್ಗಿ ನಡೆಯುವವರೆಗೆ ಎಲ್ಲವೂ ಸರಿ ಇತ್ತು. ಆದರೆ 2003ರಲ್ಲಿ ನಡೆದ ಆ ಒಂದು ಘಟನೆಯಿಂದಾಗಿ ’ದಲಿತರು ಹೆಚ್ಚಿಕೊಂಡರು’ ಎಂದು ದಲಿತೇತರರು ಅಂದುಕೊಳ್ಳುವಂತಾಯಿತು. ಆ ವರ್ಷ ಸುಗ್ಗಿಯ ನಂತರ ಈಡಿಗ ಸಮಾಜದ ಭೂಮಾಲೀಕರೊಬ್ಬರು ತಾವು ಬೆಳೆದ ಭತ್ತದ ಮೂಟೆಗಳನ್ನು ಶೇಖರಿಸಿಡಲು ದಲಿತರ ಸಮುದಾಯ ಭವನವನ್ನು ಪ್ರತಿ ವರ್ಷದಂತೆ ಬಳಸಿಕೊಂಡರು. ಈ ಭತ್ತವನ್ನು ದಲಿತ ಯುವಕರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಕಂಬಕ್ಕೆ ಕಟ್ಟಿ ಹಾಕಿ ದಲಿತ ಯುವಕರನ್ನು ರಾತ್ರಿ ಥಳಿಸಲಾಗಿದೆ. ಇದರ ವಿರುದ್ಧ ದಲಿತರು ಪೊಲೀಸ್ ದೂರು ನೀಡಿದಾಗ ದಲಿತೇತರರ ಕಣ್ಣು ಕೆಂಪಗಾಗಿವೆ. ಅಂಬೇಡ್ಕರ್‌ರವರು ಗುರುತಿಸುವಂತೆ ದಲಿತರ ಮೇಲೆ ಇಡೀ ಮೇಲ್ಜಾತಿಗಳೇ ಒಂದು ವರ್ಗವಾಗಿ ಶೋಷಣೆ ಮಾಡುತ್ತವೆ ಎಂಬಂತೆ ಅಂದಿನಿಂದ ದಲಿತರ ಪಾದಗಳು ಇಡುವ ಒಂದೊಂದು ಹೆಜ್ಜೆಯನ್ನೂ ಗಮನಿಸಲು ಆರಂಭಿಸಲಾಗಿದೆ.

ಹೀಗೆ ಅಲ್ಲಿಂದ 2014ರವರೆಗೂ ಒಂದಲ್ಲ ಒಂದು ಕಾರಣಕ್ಕೆ ದಲಿತರು ಮತ್ತು ದಲಿತೇತರರ ನಡುವೆ ವಾಗ್ವಾದಗಳಾಗಿವೆ. ಒಮ್ಮೆ ದಲಿತರಿಗೆ ಕ್ಷೌರ ಮಾಡದ ಕಾರಣಕ್ಕೆ ಪೊಲೀಸ್ ದೂರು ದಾಖಲಿಸಿದ ದಲಿತರಿಗೆ ಪ್ರತ್ಯೇಕ ಕಟಿಂಗ್ ಶಾಪ್‌ಅನ್ನೇ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿಕೊಟ್ಟಿದೆ. ಆದರೆ ಯಾವುದೇ ಕಾರಣಕ್ಕೂ ಮೇಲ್ಜಾತಿಗಳು ಬಳಸುವ ಕಟಿಂಗ್ ಶಾಪ್‌ನೊಳಗೆ ದಲಿತರಿಗೆ ಪ್ರವೇಶ ನೀಡಿಲ್ಲ. ಇಂತಹ ಅಮಾನವೀಯ ನಡೆಗಳು ದಲಿತ ಯುವಕರನ್ನೂ ಚಿಂತನೆಗೀಡು ಮಾಡಿವೆ. ಆಗಾಗ ದಲಿತೇತರರನ್ನು ಪ್ರಶ್ನಿಸಲು ಅನುವು ಮಾಡಿಕೊಟ್ಟಿವೆ. ಇದು ದಲಿತೇತರರ ನಿದ್ದೆಗೆಡಿಸಿದೆ. ’ದಲಿತರು ಮಡುಗಿದಂಗಿರುತ್ತಿಲ್ಲವಲ್ಲ’ ಎಂಬ ಚಿಂತೆ ಕಾಡುತ್ತಿರುವ ಸಂದರ್ಭದಲ್ಲಿಯೇ ಶಿವ ಸಿನೆಮಾ ಟಾಕೀಸಿನಲ್ಲಿ ಒಂದು ಘಟನೆ ನಡೆದಿದೆ.

ಆಗಸ್ಟ್ 28, 2014ರಂದು ಗಂಗಾವತಿಯ ಶಿವ ಸಿನೆಮಾ ಟಾಕೀಸಿಗೆ ಮರಕುಂಬಿಯ ಮೇಲ್ಜಾತಿ ಯುವಕರು ಸಿನೆಮಾ ನೋಡಲು ಹೋಗಿದ್ದರು. ಅಲ್ಲಿ ಈ ಹುಡುಗರಿಗೂ ಮತ್ತು ಬೇರೆ ಊರಿನ ಹುಡುಗರಿಗೂ ಗಲಾಟೆಯಾಗಿ ಹೊಡೆದಾಟವೂ ನಡೆದುಹೋಯಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಮರಕುಂಬಿ ದಲಿತ ಯುವಕರ ಮುಂದೆ ಅವಮಾನವಾದಂತೆ ಭಾವಿಸಿದ ಮೇಲ್ಜಾತಿ ಯುವಕರು, ಹೊಡೆದಾಟವಾಗಲು ದಲಿತ ಯುವಕರೇ ಕಾರಣವೆಂಬ ಸುಳ್ಳುಸುದ್ದಿ ಹರಡುತ್ತಾ ಊರಿಗೆ ಬಂದರು. ’ದಲಿತರಿಷ್ಟು ಕೊಬ್ಬಿಕೊಂಡರೆ’ ಎಂಬ ಭಾವನೆ ಜಾತಿಗ್ರಸ್ತ ಸಮಾಜದ ಮೇಲ್ಜಾತಿಗಳಿಗೆ ಉಂಟಾಗುವುದು ಸಹಜವೇ ಅಲ್ಲವೆ!? ಜೊತೆಗೆ ಈಗಾಗಲೇ ಹೇಳಿದಂತೆ ದಲಿತರ ಸಣ್ಣ ಪ್ರತಿರೋಧವೂ ಬಹುದೊಡ್ಡ ಅಪರಾಧದಂತೆ ಭಾವಿಸುವ ಮೇಲ್ಜಾತಿ ಮನಸ್ಸುಗಳು ಒಂದು ವರ್ಗವಾಗಿ ದಲಿತರಿಗೆ ’ಬುದ್ಧಿ ಕಲಿಸಲು’ ಮುಂದಾದರು. ಇದರ ಪರಿಣಾಮವಾಗಿಯೇ, ಅಂದು ದಲಿತ ಕೇರಿಯ ದೇವಸ್ಥಾನದ ಬಳಿ ಹೋದ ಸುಮಾರು 150ಕ್ಕೂ ಹೆಚ್ಚು ದಲಿತೇತರರು ದೊಣ್ಣೆ, ಕಬ್ಬಿಣದ ರಾಡ್‌ಗಳಿಂದ ಸಿಕ್ಕಸಿಕ್ಕವರನ್ನು ಥಳಿಸಲಾರಂಭಿಸಿದರು. ದಲಿತರ ಮನೆಗಳಿಗೆ ಬೆಂಕಿ ಇಟ್ಟರು. ದಲಿತರ ಪರವಾಗಿ ಕೆಲಸ ಮಾಡುತ್ತಿದ್ದ ಲಿಂಗಾಯತರ ಜಂಗಮ ಜಾತಿಯ ಎಡಪಂಥೀಯ ನಾಯಕನನ್ನೂ ಹಾಗೂ ಅವರ ಹೆಂಡತಿಯನ್ನೂ ಥಳಿಸಿದರು. ಅಲ್ಲಿ ಅಂದು ಬಹುದೊಡ್ಡ ಹಿಂಸಾಚಾರವೇ ನಡೆದುಹೋಯಿತು.

ಯಾವಾಗಲೂ ಸರ್ಕಾರ, ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ಮೇಲ್ಜಾತಿಯ ಪರವೇ ಇರುತ್ತದೆ ಎಂಬುದು ನಿಜವಾದರೂ ಮರಕುಂಬಿಯ ಪ್ರಕರಣದಲ್ಲಿ ತುಸು ಭಿನ್ನವಾಗಿಯೇ ವರ್ತಿಸಿವೆ. ಇದಕ್ಕೆ ಬಹುಮುಖ್ಯ ಕಾರಣ ಥಳಿತಕ್ಕೊಳಗಾದ ದಲಿತರ ಪರವಾದ ಸುಮಾರು 38 ಸಾಕ್ಷಿಗಳು ’ಸತ್ಯಕ್ಕೆ ಗಟ್ಟಿಯಾಗಿ ನಿಂತು ಸಾಕ್ಷ್ಯ ನುಡಿದಿರುವುದಾದರೆ, ಮತ್ತೊಂದು ದಲಿತರಿಗೆ ಬಹುದೊಡ್ಡ ಧೈರ್ಯ, ಭದ್ರತೆಯನ್ನು ಕೊಡುವಲ್ಲಿ ಸಫಲವಾದ ಎಡಪಂಥೀಯ ಸಂಘಟನೆಗಳು. ಹೌದು, 2003ರಲ್ಲಿ ಮರಕುಂಬಿಯಲ್ಲಿ ನಡೆದ ’ಭತ್ತ ಕಳವು’ ಪ್ರಕರಣದಿಂದ ದಲಿತರ ಬೆನ್ನಿಗೆ ನಿಂತ ಎಡಪಂಥೀಯ ಸಂಘಟನೆಗಳು, ದಲಿತರು ಎದೆಗುಂದದಂತೆ ನೋಡಿಕೊಂಡಿವೆ. ಮರಕುಂಬಿ ಪ್ರಕರಣ ನಡೆದ ಮೇಲಂತೂ ಜಿಲ್ಲಾಡಳಿತ ಹಾಗೂ ಪೊಲೀಸ್ ವ್ಯವಸ್ಥೆ ಕಾನೂನುಬದ್ಧವಾಗಿ ನಡೆದುಕೊಳ್ಳುವಂತೆ ದುಂಬಾಲು ಬಿದ್ದಿವೆ. ಇದಕ್ಕೆ ಬಹುಮುಖ್ಯ ಕಾರಣ ಮರಕುಂಬಿಯ ದಲಿತ ನಾಯಕ ಭೀಮೇಶ್ ದೊಡ್ಡಮನಿ ಹಾಗೂ ಎಡಪಂಥೀಯ ನಾಯಕ ಗಂಗಾಧರಸ್ವಾಮಿ. ಸ್ವತಃ ಥಳಿತಕ್ಕೊಳಗಾಗಿದ್ದ ಭೀಮೇಶ್ ದೊಡ್ಡಮನಿಯವರು ಒಂದು ವರ್ಷದ ಹಿಂದೆ ತೀರಿಕೊಂಡಿದ್ದಾರೆ. ಆದರೂ ಅಲ್ಲಿನ ದಲಿತರು ಅವರ ಹೆಸರನ್ನು ನೆನೆಯದೇ ದಿನನಿತ್ಯ ಕೆಲಸಗಳನ್ನು ಮಾಡಲಾರರು.

ಇಂತಹ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ನ್ಯಾಯಾಲಯವು 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮರಕುಂಬಿ ದಲಿತರ ಮನದಲ್ಲಿ ಒಂದು ಕಡೆ ಖುಷಿ ಮತ್ತೊಂದು ಕಡೆ ಆತಂಕ ಮನೆ ಮಾಡಿದೆ. ಹಳ್ಳಿಯಲ್ಲಿ ಪೊಲೀಸರ ಎರಡು ತುಕಡಿಗಳು ಬೀಡುಬಿಟ್ಟಿವೆ.

ಕಂಬಾಲಪಲ್ಲಿ, ನಾಗಲಾಪಲ್ಲಿಯಂತಹ ಪ್ರಕರಣಗಳಿಗೆ ಹೋಲಿಸಿಕೊಂಡರೆ ಮರಕುಂಬಿ ಪ್ರಕರಣದಲ್ಲಿ ಮುಖ್ಯವಾಗಿ ದಲಿತರ ವಿರುದ್ಧ ಪ್ರತ್ಯಾರೋಪ ಇರಲಿಲ್ಲ. ಅಷ್ಟೇಅಲ್ಲ, ದಲಿತರ ಸಾಕ್ಷಿಗಳು ಯಾವುದೇ ಆಮಿಷ, ಬೆದರಿಕೆಗೆ ಜಗ್ಗದೆ ಅಂದು ನಡೆದ ಸತ್ಯವನ್ನು ನ್ಯಾಯಾಲಯದಲ್ಲಿ ಬಿಚ್ಚು ಮನಸ್ಸಿನಿಂದ ಹೇಳಿದ್ದಾರೆ. ಪ್ರಕರಣದ ಆರಂಭದಿಂದಲೂ ಪೊಲೀಸರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಗಂಗಾವತಿ ಆಸ್ಪತ್ರೆಯಲ್ಲಿ ಪ್ರಕರಣ ನಡೆದ ರಾತ್ರಿ ದಲಿತರಿಗೆ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು (ಮಹಿಳೆಯರಿಗೆ ಪ್ರತ್ಯೇಕವಾಗಿ ವೈದ್ಯೆಯೊಬ್ಬರು ಚಿಕಿತ್ಸೆ ನೀಡಿದ್ದಾರೆ) ಯಾವುದೇ ಪೂರ್ವಾಗ್ರಹವಿಲ್ಲದೆ ಗಾಯಗಳನ್ನು ಹಾಗೂ ಚಿಕಿತ್ಸಾ ವಿವರಗಳನ್ನು ದಾಖಲಿಸಿ ದೃಢೀಕರಿಸಿದ್ದಾರೆ. ವಕೀಲರುಗಳು ಗಟ್ಟಿಯಾಗಿ ದಿಟ್ಟವಾಗಿ ವಾದಿಸಿದ್ದಾರೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ನ್ಯಾಯಾಧೀಶರಿಗೆ ಅಟ್ರಾಸಿಟಿ ಕಾಯ್ದೆಯ ಆಳ ಅಗಲ ತಿಳಿದಿದೆ. ನೀವೊಮ್ಮೆ ಜಡ್ಜ್‌ಮೆಂಟ್ ನೋಡಿದರೆ ಯಾವುದೇ ಉನ್ನತ ನ್ಯಾಯಾಲಯದ ತೀರ್ಪಿಗೂ ಕಡಿಮೆ ಇಲ್ಲದಂತೆ ಸವಿವರವಾಗಿ ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ವಿವರಿಸಲಾಗಿದೆ. ರಾಜಕೀಯ ಶಕ್ತಿಗಳು ಈ ಪ್ರಕರಣದಲ್ಲಿ ಹೆಚ್ಚಾಗಿ ಕೈಯ್ಯಾಡಿಸಿದಂತೆಯೂ ಕಂಡುಬರುವುದಿಲ್ಲ. ದುರಂತವೆಂದರೆ ಇದಾವುದೂ ಕಂಬಾಲಪಲ್ಲಿ, ನಾಗಲಾಪಲ್ಲಿ ಪ್ರಕರಣದಲ್ಲಿ ಕಂಡುಬಂದಿರಲಿಲ್ಲ.

ಈಗ ಮಾಧ್ಯಮಗಳಲ್ಲಿ ಕಣ್ಣೀರು ಹಾಕುತ್ತಿರುವ ಅಪರಾಧಿಗಳು ಹಾಗೂ ಕುಟುಂಬಸ್ಥರು ಎದ್ದು ಕಾಣುತ್ತಿದ್ದಾರೆ. ಆ ಕಣ್ಣೀರಿನ ಹಿಂದೆ ಅಪರಾಧಿಪ್ರಜ್ಞೆ ಇದ್ದರೆ ಸಮಾಜಕ್ಕೆ ಒಳಿತು. ಮುಂದಿನ ಜಾತೀವಾದಿಗಳಿಗೆ ಇದೊಂದು ಪಾಠವಾಗುತ್ತದೆ. ಕರುಳು ಹಿಂಡುವ ಮತ್ತೊಂದು ಸಂಗತಿಯೆಂದರೆ, ಮರಕುಂಬಿಯ ದಲಿತರೂ ಸಹ ಅಪರಾಧಿಗಳಿಗಾಗಿ ಮರುಗುತ್ತಿರುವುದಾಗಿದೆ. ಕಣ್ತಪ್ಪಿನಿಂದ ನಿರಪರಾಧಿಗಳೂ ಜೈಲುಶಿಕ್ಷೆ ಅನುಭವಿಸುತ್ತಿರಬಹುದೇ ಎಂಬ ಶಂಕೆ ಅವರನ್ನು ಕಾಡುತ್ತಿದೆ. ಈ ನಡುವೆ ದಲಿತರನ್ನು ಹೆಚ್ಚೂ ಕಡಿಮೆ ಬಹಿಷ್ಕರಿಸಿದ ವಾತಾವರಣವೇ ಅಲ್ಲಿದೆ. ಮೇಲ್ಜಾತಿಗಳವರ್‍ಯಾರೂ ದಲಿತರನ್ನು ಕೆಲಸಕ್ಕೆ ಕರೆಯುತ್ತಿಲ್ಲ. ಈ ಒಳಗುದಿ ಮುಂದೇನು ಮಾಡುವುದೋ ಎಂಬ ಭಯ ಮರಕುಂಬಿಯಲ್ಲಿ ಮನೆ ಮಾಡಿದೆ. ಜೊತೆಗೆ 98 ಅಪರಾಧಿಗಳ ಕುಟುಂಬಸ್ಥರು ದಲಿತರಿಗೆ ಒಳಗೊಳಗೇ ಶಾಪ ಹಾಕುತ್ತಿರುವುದೂ ಕಿವಿಗೆ ಕೇಳುತ್ತಿದೆ.

ಈ ಪ್ರಕರಣದಲ್ಲಿ ಕಾಡುವ ಮತ್ತೊಂದು ಸಂಗತಿಯೆಂದರೆ ದಲಿತರಂತೆಯೇ ತಳಜಾತಿಗಳಾಗಿರುವ ಭೋವಿ, ನಾಯಕ, ಮಡಿವಾಳ, ಮುಸ್ಲಿಮರು ಸಹ ಅಪರಾಧವೆಸಗಿರುವುದು ಹಾಗೂ ಇಬ್ಬರು ಅಪ್ರಾಪ್ತ ಯುವಕರೂ ಪಾಲ್ಗೊಂಡಿರುವುದಾಗಿದೆ.

ಅಪರಾಧಿಗಳು ಹೈಕೋರ್ಟಿಗೆ ಅರ್ಜಿ ಹಾಕುವುದು ಬಹುತೇಕ ಖಚಿತ. ಕಂಬಾಲಪಲ್ಲಿ, ನಾಗಲಾಪಲ್ಲಿ, ಖೈರ್ಲಾಂಜಿ, ಬದನವಾಳು ತೀರ್ಪುಗಳು ಮರುಕಳಿಸದಿರಲು ದಲಿತ-ಎಡಪಂಥೀಯ ಸಂಘಟನೆ ಒಟ್ಟಾಗಿ ಏನು ಮಾಡಬೇಕು ಎಂಬುದನ್ನು ಈಗಲಾದರೂ ಗಂಭೀರವಾಗಿ ಯೋಚಿಸಬೇಕಿದೆ. ಬಹಳ ದಿನಗಳ ನಂತರ ನ್ಯಾಯದೇವತೆ ದಲಿತರತ್ತ ತಿರುಗಿರುವುದನ್ನು ನಾವು ಕಡೆಗಣಿಸಬಾರದಾಗಿದೆ.

ಕೊನೆಯದಾಗಿ, ಜಾತಿಪದ್ಧತಿ ಎಂಬ ವಾಮನ ದಲಿತೇತರರು ಮಾಡಬಾರದ ಕೃತ್ಯಗಳನ್ನು ಮಾಡುವಂತೆ ಪ್ರೇರೇಪಿಸಿ, ಅವರನ್ನು ಪಾಪಿಗಳನ್ನಾಗಿಸುತ್ತಿರುವುದು ಖಂಡನೀಯ. ಮರಕುಂಬಿ ಪ್ರಕರಣದಲ್ಲಿ ಅಪರಾಧಿಗಳ ಕುಟುಂಬಸ್ಥರು ಹಾಕುತ್ತಿರುವ ಕಣ್ಣೀರು ಇದಕ್ಕೆ ಸಾಕ್ಷಿ. ಜಾತಿವಿನಾಶ ಹೋರಾಟಕ್ಕೆ ದಲಿತೇತರರು ಧುಮುಕಬೇಕೆಂಬುದನ್ನು ಇದು ಹೇಳುತ್ತಿದೆ. ದಲಿತರು ಜಾತಿವಿನಾಶ ಹೋರಾಟದಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...