ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಭಾನುವಾರ (ಸೆ.22) ಆಯ್ಕೆಯಾಗಿದ್ದಾರೆ.
ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಒಕ್ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿಸ್ಸನಾಯಕೆ ಅವರು, 57,40,179 ಅಥವಾ 42.3% ಮತಗಳನ್ನು ಪಡೆದ್ದಾರೆ. ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು 45,30,902 ಅಥವಾ 32.8% ಮತಗಳ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.
ದೇಶದ ಆರ್ಥಿಕತೆ ಕುಸಿದ ನಂತರ, ಎರಡು ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಶೇ.20ಕ್ಕಿಂತ ಕಡಿಮೆ ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ನೂತನ ಅಧ್ಯಕ್ಷರ ಪ್ರಮಾಣವಚನಕ್ಕೂ ಮುನ್ನ, ಇಂದು (ಸೆ.23) ಪ್ರಧಾನಿ ದಿನೇಶ್ ಗುಣವರ್ಧನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಭಾನುವಾರ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕೊನೆಗೊಂಡಾಗ ಇಬ್ಬರು ಪ್ರಮುಖ ಅಭ್ಯರ್ಥಿಗಳಲ್ಲಿ ಯಾರೂ ಅಗತ್ಯವಿರುವ ಶೇ.50ರಷ್ಟು ಮತಗಳನ್ನು ಪಡೆದಿರಲಿಲ್ಲ. ಹಾಗಾಗಿ, ಎರಡನೇ ಸುತ್ತಿನ ಮತ ಎಣಿಕೆ ನಡೆಸಿ, ದಿಸ್ಸನಾಯಕೆ ಅವರ ಗೆಲುವನ್ನು ಘೋಷಿಸಲಾಯಿತು ಎಂದು ವರದಿಗಳು ಹೇಳಿವೆ.
ಶ್ರೀಲಂಕಾದ ಚುನಾವಣಾ ವ್ಯವಸ್ಥೆಯ ಅಡಿಯಲ್ಲಿ, ಮತದಾರರು ಮೂರು ಪ್ರಾಶಸ್ತ್ಯದ ಮತಗಳನ್ನು ಹಾಕುತ್ತಾರೆ. ಮೊದಲ ಎಣಿಕೆಯಲ್ಲಿ ಯಾವುದೇ ಅಭ್ಯರ್ಥಿಯು 50% ಮತಗಳನ್ನು ಗಳಿಸದಿದ್ದಲ್ಲಿ, ಅಗ್ರ ಎರಡು ಅಭ್ಯರ್ಥಿಗಳ ನಡುವೆ ಎರಡನೇ ಸುತ್ತಿನ ಎಣಿಕೆಯನ್ನು ನಡೆಸಲಾಗುತ್ತದೆ.
ಶನಿವಾರ (ಸೆ.21) ನಡೆದ ಚುನಾವಣೆಯಲ್ಲಿ ಶೇ.75ರಷ್ಟು ಮತದಾನವಾಗಿತ್ತು.
ತನ್ನ ಅಭೂತಪೂರ್ವ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ದಿಸ್ಸನಾಯಕೆ ಅವರು “ಈ ಸಾಧನೆಯು ಯಾವುದೇ ಒಬ್ಬ ವ್ಯಕ್ತಿಯ ಕೆಲಸದ ಫಲಿತಾಂಶವಲ್ಲ. ಇದು ಲಕ್ಷಾಂತರ ಜನರ ಸಾಮೂಹಿಕ ಪ್ರಯತ್ನ. ನಿಮ್ಮ ಬದ್ಧತೆ ನಮ್ಮನ್ನು ಇಲ್ಲಿಯವರೆಗೆ ತಂದಿದೆ. ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಗೆಲುವು ನಮ್ಮೆಲ್ಲರದ್ದು” ಎಂದು ಹೇಳಿದ್ದಾರೆ.
The dream we have nurtured for centuries is finally coming true. This achievement is not the result of any single person’s work, but the collective effort of hundreds of thousands of you. Your commitment has brought us this far, and for that, I am deeply grateful. This victory… pic.twitter.com/N7fBN1YbQA
— Anura Kumara Dissanayake (@anuradisanayake) September 22, 2024
ವಿಡಿಯೋ ಹೇಳಿಕೆಯಲ್ಲಿ ನಿರ್ಗಮಿತ ಅಧ್ಯಕ್ಷ ವಿಕ್ರಮಸಿಂಘೆ ಅವರು ದಿಸ್ಸನಾಯಕೆ ಅವರನ್ನು ಅಭಿನಂದಿಸಿದ್ದು, ದೇಶದ ಆರ್ಥಿಕತೆಯನ್ನು ಅಭಿವೃದ್ದಿಪಡಿಸುವ ಪ್ರಯತ್ನಗಳನ್ನು ಅವರು ಮುಂದುವರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.
ದಿಸ್ಸನಾಯಕೆ ಯಾರು?
ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಅವರ ಪಕ್ಷವು ಶ್ರೀಲಂಕಾ ಸಂಸತ್‌ನಲ್ಲಿ ಮೂರು ಸ್ಥಾನಗಳನ್ನು ಹೊಂದಿದೆ. ದಿಸ್ಸನಾಯಕೆ ಅವರು ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರೆಮುನಾ (ಜೆವಿಪಿ) ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.
ದಿಸ್ಸನಾಯಕೆ ಅವರ ಪಕ್ಷ ಸರ್ಕಾರದ ಜನರ ವಿರೋಧಿ ತೆರಿಗೆ ಮತ್ತು ಆರ್ಥಿಕ ನೀತಿಗಳ ವಿರುದ್ಧ ಹೋರಾಟ ನಡೆಸಿ ಶ್ರೀಲಂಕಾ ಜನತೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ.
2022ರಲ್ಲಿ ಶ್ರೀಲಂಕಾದಲ್ಲಿ ತೀವ್ರ ಅರ್ಥಿಕ ಬಿಕ್ಕಟ್ಟು ಉಂಟಾಗಿ ಹಣದುಬ್ಬರ ಗಗನಕ್ಕೇರಿತ್ತು. ಜನರಿಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗಿ ಪರದಾಡುವಂತಾಗಿತ್ತು. ಆಗ ಸರ್ಕಾರದ ವಿರುದ್ದ ಹೋರಾಟ ರೂಪಿಸಿದ್ದರ ಹಿಂದೆ ದಿಸ್ಸನಾಯಕೆ ಅವರ ಪಾತ್ರ ದೊಡ್ಡದಿತ್ತು. ಅವರು ನೇರವಾಗಿ ಹೋರಾಟದ ನೇತೃತ್ವದ ವಹಿಸದಿದ್ದರೂ, ಜನರು ಹೋರಾಟ ಕೈಗೊಂಡಿದ್ದರ ಹಿಂದೆ ಅವರ ಪ್ರೇರೇಪಣೆಯಿತ್ತು ಎಂದು ವರದಿಗಳು ಹೇಳಿವೆ.
ರಾಜಪಕ್ಸೆ ಅವರ ರಾಜೀನಾಮೆಯ ನಂತರ ಉಂಟಾದ ನಾಯಕತ್ವದ ಕೊರತೆಯು ದಿಸ್ಸನಾಯಕೆಗೆ ಮತ್ತು ಅವರ ಪಕ್ಷಕ್ಕೆ ದೊಡ್ಡ ಅವಕಾಶ ಮಾಡಿ ಕೊಟ್ಟಿತು. ಭ್ರಮನಿರಸನಗೊಂಡ ನಾಗರಿಕರ ಜೊತೆ ನಿಂತ ದಿಸ್ಸನಾಯಕೆ, ಸಾಮಾಜಿಕ ನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಕೈಗೊಂಡಿದ್ದರು. ಅವೆಲ್ಲವೂ, ಈ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಗೊಂಡಂತಿದೆ.
ಇದನ್ನೂ ಓದಿ : ಜಮ್ಮು ಕಾಶ್ಮೀರ | ಅತಂತ್ರ ವಿಧಾನಸಭೆ ತಪ್ಪಿಸಲು ಕಾಂಗ್ರೆಸ್ ಜೊತೆ ಮೈತ್ರಿ: ಒಮರ್ ಅಬ್ದುಲ್ಲಾ


