ಮಸ್ಕಿಯಲ್ಲಿ ಅಭ್ಯರ್ಥಿಗಳು ಅದಲು ಬದಲು, ಜೆಡಿಎಸ್ ಕ್ಯಾಂಡಿಡೆಟೇ ಇಲ್ಲ- ಈ ಪಾಲಿಟಿಕಲ್ ಕತೆಯ ಆಚೆ ಹೋಗೋಣ. ಮುಖ್ಯವಾಹಿನಿ ಮಾಧ್ಯಮಗಳೆಲ್ಲ ಕಾಟಾಚಾರಕ್ಕೆ ಎಂಬಂತೆ ಇಲ್ಲಿನ ಒಂದು ‘ಪುಟ್ಟ’ ನೀರಾವರಿ ಹೋರಾಟದ ಬಗ್ಗೆ ಬರೆದಿವೆ. ಅದು ಕೇವಲ ಕೊಪ್ಪಳ-ರಾಯಚೂರು ಸುದ್ದಿ ಎಂಬಂತೆ ಅವು ವರ್ತಿಸಿವೆ.
ದೆಹಲಿ ಗಡಿಗಳನ್ನು ಮೀರಿ ಕರ್ನಾಟಕಕ್ಕೂ ತಲುಪಿದ ರೈತ ಹೋರಾಟದ ಸಂದರ್ಭದಲ್ಲಿ ಇಲ್ಲಿ ನಮ್ಮದೇ ಮಾದರಿಯ ರೈತ ಚಳವಳಿ ಕಟ್ಟುವ ಮಾತು ಕೇಳಿ ಬಂದಿವೆ. ಇಂತಹ ಚಳುವಳಿ ನೀರಿಗಾಗಿ 100 ದಿನ ದಾಟಿ ನಡೆದಿರುವ ಈ ಪುಟ್ಟ ಹೋರಾಟವನ್ನು ಗಣನೆಗೆ ತೆಗೆದುಕೊಳ್ಳಬೇಕು. ಕೃಷಿ ಸಚಿವ ಬಿ.ಸಿ ಪಾಟೀಲರ ಕೇತ್ರದ ರಟ್ಟಿಹಳ್ಳಿಯಲ್ಲಿ ಒಂದು ರೈತ ಹೋರಾಟ ಇನ್ನೂ ಜೀವಂತವಾಗಿದೆ. ಅವರು ನೀರು ಕೇಳುತ್ತಿಲ್ಲ, ಬದಲಿಗೆ ಶಿವಮೊಗ್ಗದ ಭೂಮಿಗೆ ನೀರು ಒದಗಿಸಲು ತಮ್ಮ ಜಮೀನನ್ನು ಸ್ವಾಧೀನ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆ ವಿರುದ್ಧ ಅವರ ಹೋರಾಟವಿದೆ.

ನೀರು ಬೇಕು, ಭೂಮಿ ಉಳಿಯಬೇಕು ಎಂಬ ಈ ಎರಡು ರೈತ ಹೋರಾಟಗಳಲ್ಲಿ ವೈಪರೀತ್ಯ ಕಾಣಿಸಬಹುದು. ಆದರೆ, ಎರಡೂ ಬದುಕಿಗಾಗಿ ನಡೆಯುತ್ತಿರುವ ಹೋರಾಟಗಳೇ ಅಲ್ಲವೇ? ಕರ್ನಾಟಕ ಮಾದರಿಯ ರೈತ ಚಳುವಳಿ ಕಟ್ಟುವಾಗ ಈ ಪುಟ್ಟ ಹೋರಾಟದ ತೊರೆಗಳನ್ನು, ಇಲ್ಲಿನ ‘ಮೇಲ್ನೋಟದ’ ವೈಪರೀತ್ಯಗಳನ್ನು ಗಮನಿಸಬೇಕು…
ಮತ್ತೆ ಮಸ್ಕಿಗೆ ಬರೋಣ, ಆದರೆ ಅದು ಸಿಂಧನೂರು ಮೂಲಕವೇ ಬರಬೇಕು! ಈ ಉಪ ಚುನಾವಣೆಯಲ್ಲಿ ಈ ನೀರಾವರಿ ಹೋರಾಟ ಒಂದು ಗುಪ್ತಗಾಮಿನಿಯ ರಭಸದಂತೆ ಹರಿಯುತ್ತಿದೆ. ಅದು ತಮ್ಮೂರ ಹೊಲಗಳಿಗೆ ನೀರನ್ನು ಬೇಡುತ್ತಿದೆ. ಚುನಾವಣೆ ಇರುವ ಮತಕ್ಷೇತ್ರದ 107 ಗ್ರಾಮಗಳು, ಅದರಲ್ಲೂ ಮುಖ್ಯವಾಗಿ 58 ಗ್ರಾಮಗಳು ಈಗ ಹೋರಾಟಕ್ಕೆ ನಿಂತಿವೆ. ಅವೇನೂ ಬೇರೆಯವರ ಪಾಲಿನ ನೀರು ಕೇಳುತ್ತಿಲ್ಲ. ಆಂಧ್ರಪ್ರದೇಶದ ಭೂಮಿಗೆ ಸೇರಬೇಕಾದ ನೀರನ್ನು ಕಬಳಿಸಲು ಯತ್ನಿಸುತ್ತಿಲ್ಲ. ಸುಖಾಸುಮ್ಮನೇ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಅವರು ನಮ್ಮ ಹೊಲಕ್ಕ ಕೊಡ್ರಿ ಅನ್ನುತ್ತಿದ್ದಾರೆ.
ಏನಿದು NRBC_5A ಯೋಜನೆ?
ಮಸ್ಕಿ ತಾಲ್ಲೂಕಿನ ಬರಪೀಡಿತ 58 ಹಳ್ಳಿಗಳ ಗ್ರಾಮಸ್ಥರು, ರೈತರು ನಾರಾಯಣಪೂರ ಬಲದಂಡೆ ಕಾಲುವೆ 5(ಎ) ಪಾಮನ ಕಲ್ಲೂರು ಶಾಲಾ ಕಾಲುವೆ ಯೋಜನೆಯ ಮೂಲಕ ತಮ್ಮ ಗ್ರಾಮಗಳಿಗೆ ನೀರಾವರಿ ಯೋಜನೆ ಬೇಕೆಂದು ಆಗ್ರಹಿಸಿ ಕಳೆದ 12 ವರ್ಷಗಳಿಂದ ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ನೀರಾವರಿ ಸಂಘ ಕಟ್ಟಿ ತಮ್ಮೂರಿಗೆ ಕಾಲುವೇ ನೀರು ಬಿಡಬೇಕೆಂದು ನೂರಾರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈ 12 ವರ್ಷಗಳ ಅವಧಿಯಲ್ಲಿ ನಾಲ್ಕು ಸರ್ಕಾರಗಳು ಬದಲಾಗಿವೆ. ಎಲ್ಲಾ ಸರ್ಕಾರಗಳು ಭರವಸೆ ನೀಡಿವೆಯೇ ಹೊರತು ಒಬ್ಬರು ಕಾರ್ಯರೂಪಕ್ಕೆ ತಂದಿಲ್ಲ ಎಂದು ರೈತರು ಆರೋಪಿಸುತ್ತಾರೆ.
ಮಸ್ಕಿ ಮತ ಕ್ಷೇತ್ರ
ಮಸ್ಕಿ ಕೇತ್ರವೇ ಭೌಗೋಳಿಕವಾಗಿ ಒಂದು ವೈಪರೀತ್ಯಗಳ ಕ್ಷೇತ್ರ. ಮಸ್ಕಿ ಮತ್ತು ಸಿಂಧನೂರು ತಾಲೂಕುಗಳ ನೂರಾರು ಗ್ರಾಮಗಳು ಸೇರಿ ಮಸ್ಕಿ ಮತಕ್ಷೇತ್ರವಾಗಿದೆ. ಆದರೆ ಹರಿವ ನೀರಿಗೆ ಈ ಭೌಗೋಳಿಕ ಬಾರ್ಡರ್‌ಗಳು ಇಲ್ಲ.
1.72 ಲಕ್ಷ ಹೆಕ್ಟೇರ್ ಭೂಮಿಗೆ ಕೃಷ್ಣಾ ನೀರು ಕೊಡಿ ಎಂಬುದು 107 ಹಳ್ಳಿಗಳ, ಮುಖ್ಯವಾಗಿ 58 ಹಳ್ಳಿಗಳ ಹಕ್ಕೊತ್ತಾಯ. ನೆನಪಿಡಿ, ಇಲ್ಲಿ ತುಂಗಭದ್ರಾ ನೀರನ್ನು ಅವರು ಕೇಳುತ್ತಿಲ್ಲ. ಈ ಮಾತು ಏಕೆ ಹೇಳಬೇಕಿದೆ ಎಂದರೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಹೆಸರಲ್ಲಿ ಸರ್ಕಾರ ವಂಚನೆ ಮಾಡುತ್ತಿದೆ. ಮತ್ತೊಮ್ಮೆ ಪಕ್ಕಾ ಮಾಡಿಕೊಳ್ಳಿ, ತುಂಗಭದ್ರೆಯಲ್ಲ, ಇಲ್ಲಿಗೆ ಬೇಕಿರುವುದು ಕೃಷ್ಣೆ.

ಮಸ್ಕಿ-ಲಿಂಗಸುಗೂರು ಹೆದ್ದಾರಿಯಲ್ಲಿ ಬರುವ ಪಾಮನ ಕಲ್ಲೂರು ಎಂಬ ಗ್ರಾಮದಲ್ಲಿ ನೀರಿಗಾಗಿ ಈ ಹೋರಾಟ ನಡೆದಿದೆ, ಅದೀಗ 125 ದಿನ ದಾಟಿದೆ ಕೂಡ. ಈ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಚಂದ್ರಶೇಖರ್ ಗೋರಬಾಳ ನಾನುಗೌರಿ.ಕಾಂ ಜೊತೆ ಮಾತನಾಡಿ, ‘ಈ ಹೋರಾಟ ನೂರಾರು ಹಳ್ಳಿಗಳ ಜನರ ಜೀವನ್ಮರಣದ ಪ್ರಶ್ನೆ. ಹೋರಾಟವೇ ಬೇರೆ ರಾಜಕೀಯವೇ ಬೇರೆ ಎನ್ನಲೂ ಆಗದು. ಈ ಸಲದ ಚುನಾವಣಾ ಫಲಿತಾಂಶದಲ್ಲಿ ಈ ಹೋರಾಟವೇ ಡಿಸೈಡಿಂಗ್ ಫ್ಯಾಕ್ಟರ್ ಆಗಲಿದೆ, ಆಗಲೇಬೇಕು- ಡೆಮಾಕ್ರಸಿಯ ಹಿತಕ್ಕಾಗಿ’ ಎಂದಿದ್ದಾರೆ.
- ಮಲ್ಲನಗೌಡರ್ ಪಿ.ಕೆ
ಇದನ್ನೂ ಓದಿ: NRBC_5A ಜಾರಿಗಾಗಿ 4 ಗ್ರಾ.ಪಂ ಚುನಾವಣೆ ಬಹಿಷ್ಕಾರ: ಉಪ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲರನ್ನು ಸೋಲಿಸಲು ರೈತರ ನಿರ್ಧಾರ
ಇದನ್ನೂ ಓದಿ: ಮಸ್ಕಿ ಉಪಚುನಾವಣೆ| ಅಭ್ಯರ್ಥಿಗಳು ಅದಲು-ಬದಲು: ಮೀಸಲು ಕ್ಷೇತ್ರದಲ್ಲಿ ‘ಗೌಡರ’ ಸ್ಪರ್ಧೆ!


