HomeಚಳವಳಿNRBC_5A ಜಾರಿಗಾಗಿ 4 ಗ್ರಾ.ಪಂ ಚುನಾವಣೆ ಬಹಿಷ್ಕಾರ: ಉಪ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲರನ್ನು ಸೋಲಿಸಲು...

NRBC_5A ಜಾರಿಗಾಗಿ 4 ಗ್ರಾ.ಪಂ ಚುನಾವಣೆ ಬಹಿಷ್ಕಾರ: ಉಪ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲರನ್ನು ಸೋಲಿಸಲು ರೈತರ ನಿರ್ಧಾರ

30 ಗ್ರಾಮಗಳ 77 ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಒಂದೂ ನಾಮಪತ್ರ ಸಲ್ಲಿಸದೆ ಗ್ರಾಮಸ್ಥರು ಸರ್ವಾನುಮತದಿಂದ ಚುನಾವಣೆ ಬಹಿಷ್ಕಾರ ಮಾಡಿ ಸಾಂವಿಧಾನಿಕ ಬಿಕ್ಕಟ್ಟು ಉಂಟು ಮಾಡಿದ್ದಾರೆ.

- Advertisement -
- Advertisement -

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಲವಾರು ಗ್ರಾಮಗಳು ಬರಪೀಡಿತವಾಗಿದ್ದು, ನೀರಾವರಿ ಸೌಲಭ್ಯಕ್ಕಾಗಿ ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಕೃಷ್ಣಾ ನೀರಿನ ನಾರಾಯಣಪುರ ಬಲದಂಡೆ 5ಎ ವಿತರಣಾ ಕಾಲುವೆ ಯೋಜನೆ (NRBC_5A ನಾಲಾ ಯೋಜನೆ) ಅನುಷ್ಠಾನಕ್ಕಾಗಿ ನೂರಾರು ಪ್ರತಿಭಟನೆ – ಧರಣಿ ನಡೆಸಿದ್ದಾರೆ. ಕೊನೆಗೂ ಈ ರೈತರ ಹೋರಾಟಕ್ಕೆ ಸ್ಪಂದಿಸಿ ಇಂದು ಬೆಂಗಳೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮಂಡಳಿಯ ವತಿಯಿಂದ ಯೋಜನೆಯ ತಾಂತ್ರಿಕ ಕಾರ್ಯಸಾಧ್ಯತೆಯ ಪರಿಶೀಲನಾ ಸಮಿತಿ ಸಭೆ ಕರೆಯಲಾಗಿತ್ತು. ಆದರೆ ಇದು ಕಾಟಾಚಾರದ ಸಭೆ ಎಂದು ಆರೋಪಿಸಿರುವ ರೈತ ಮುಖಂಡರು ಸಭೆಯಿಂದ ಹೊರನಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಾರಾಯಣಪೂರ ಬಲದಂಡೆ ಕಾಲುವೆ 5(ಎ) ಪಾಮನ ಕಲ್ಲೂರು ಶಾಲಾ ಕಾಲುವೆ ಯೋಜನೆಯ ತಾಂತ್ರಿಕ ಕಾರ್ಯಸಾಧ್ಯತೆಯ ಪರಿಶೀಲಾನ ಸಮಿತಿಯ ಇಂದಿನ ಸಭೆಗೆ ಇಬ್ಬರು ಪ್ರಮುಖ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಅಲ್ಲದೇ ಉಳಿದ ಅಧಿಕಾರಿಗಳು ಸಹ ಯೋಜನೆಯ ಅನುಷ್ಠಾನದ ಬಗ್ಗೆ ಚರ್ಚಿಸದೆ ನಂದವಾಡಗಿ ಎರಡನೇ ಹಂತ ಮತ್ತು ಹನಿ ನೀರಾವರಿ ಪದ್ಧತಿ ಪರ ವಾದ ಮಂಡಿಸುತ್ತಿರುವುದನ್ನು ವಿರೋಧಿಸಿ ಸಭೆ ಧಿಕ್ಕರಿಸಲಾಯಿತು ಎಂದು ರೈತರು ತಿಳಿಸಿದ್ದಾರೆ.

ಏನಿದು NRBC_5A ಯೋಜನೆ?

ಮಸ್ಕಿ ತಾಲ್ಲೂಕಿನ ಬರಪೀಡಿತ 58 ಹಳ್ಳಿಗಳ ಗ್ರಾಮಸ್ಥರು, ರೈತರು ಕಳೆದ 12 ವರ್ಷಗಳಿಂದ ತಮ್ಮ ಗ್ರಾಮಕ್ಕೆ ನೀರಾವರಿ ಯೋಜನೆ ಬೇಕೆಂದು ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ. ಕರ್ನಾಟಕ ನೀರಾವರಿ ಸಂಘ ಕಟ್ಟಿ ತಮ್ಮೂರಿಗೆ ಕಾಲುವೇ ನೀರು ಬಿಡಬೇಕೆಂದು ನೂರಾರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈ 12 ವರ್ಷಗಳ ಅವಧಿಯಲ್ಲಿ ನಾಲ್ಕು ಸರ್ಕಾರಗಳು ಬದಲಾಗಿವೆ. ಎಲ್ಲಾ ಸರ್ಕಾರಗಳು ಭರವಸೆ ನೀಡಿವೆಯೇ ಹೊರತು ಒಬ್ಬರು ಕಾರ್ಯರೂಪಕ್ಕೆ ತಂದಿಲ್ಲ ಎಂದು ರೈತರು ಆರೋಪಿಸುತ್ತಾರೆ.

ಈ ಬಾರಿ 4 ಗ್ರಾಮ ಪಂಚಾಯ್ತಿಗಳಲ್ಲಿ ಚುನಾವಣೆ ಬಹಿಷ್ಕಾರ

ಹೋರಾಟವನ್ನು ತೀವ್ರಗೊಳಿಸುವ ಸಲುವಾಗಿ 2020ರ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಇಡೀ ರಾಜ್ಯವೇ ಉತ್ಸಾಹದಿಂದ ಭಾಗವಹಿಸಿದರೆ ಮಸ್ಕಿ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆಯೇ ನಡೆಯಲಿಲ್ಲ! 30 ಗ್ರಾಮಗಳ 77 ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಒಂದೂ ನಾಮಪತ್ರ ಸಲ್ಲಿಕೆಯಾಗಲಿಲ್ಲ. ಅಷ್ಟೋಂದು ತೀವ್ರವಾಗಿ ಈ ಗ್ರಾಮಗಳ ಜನರು ಸರ್ವಾನುಮತದಿಂದ ಚುನಾವಣೆ ಬಹಿಷ್ಕಾರ ಮಾಡಿ ಸಾಂವಿಧಾನಿಕ ಬಿಕ್ಕಟ್ಟು ಉಂಟು ಮಾಡಿದ್ದಾರೆ.

ಉಪ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲರನ್ನು ಸೋಲಿಸುತ್ತೇವೆ

ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಇದುವರೆಗೂ ಹಾಲಿ ಸಚಿವ ಪ್ರತಾಪ್ ಗೌಡ ಪಾಟೀಲರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಪ್ರತಿಬಾರಿಯೂ ರೈತ ವಿರೋಧಿಯಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ರೈತರು ಈ ಬಾರಿ ಅವರನ್ನು ಸೋಲಿಸಲು ಕರೆ ನೀಡಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ NRBC_5A ಯೋಜನೆ ಜಾರಿ ಹೋರಾಟ ಸಮಿತಿಯ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ “ನಾವು ಕಳೆದ 58 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಗ್ರಾಮ ಪಂಚಾಯ್ತಿ ಚುನಾವಣೆಯನ್ನೇ ಬಹಿಷ್ಕರಿಸಿದ್ದೇವೆ. ಚುನಾವಣೆ ನಡೆಸಲು ಎಸಿ, ತಹಶೀಲ್ದಾರ್ ಸೇರಿ ಎಲ್ಲರೂ ಏನೇ ಪ್ರಯತ್ನ ಮಾಡಿದರೂ ಈ 30 ಗ್ರಾಮಗಳ ಜನರ ಒಗ್ಗಟ್ಟು ಮುರಿಯಲಾಗಿಲ್ಲ. ನಾಲೆಗೆ ನೀರು ಹರಿಯಬೇಕು ಎಂಬುದು ನಮ್ಮ ಹಕ್ಕೊತ್ತಾಯ. ಅದು ಕಾರ್ಯಸಾಧ್ಯವಾದುದು. ಆದರೆ ಈ ವಿಚಾರದಲ್ಲಿ ನಮ್ಮ ಶಾಸಕರು ನಮಗೆ ದ್ರೋಹ ಮಾಡಿದ್ದಾರೆ. ಹಾಗಾಗಿ ನಾವು ಈ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಿಲ್ಲ, ಬದಲಿಗೆ ಪ್ರತಾಪ್‌ ಗೌಡ ಪಾಟೀಲರನ್ನು ಸೋಲಿಸುತ್ತೇವೆ ಮತ್ತು ಹೋರಾಟ ಮುಂದುವರೆಸುತ್ತೇವೆ” ಎಂದಿದ್ದಾರೆ.

NRBC_5A ಯೋಜನೆ ಜಾರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಬಸವರಾಜಪ್ಪಗೌಡ ಹರ್ನಾಪೂರ ಮಾತನಾಡಿ “ನಾಲ್ಕು ಜನ ಮುಖ್ಯಮಂತ್ರಿಗಳು ಸುಳ್ಳು ಭರವಸೆ ನೀಡಿದ್ದಾರೆ. ನಾವು ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಕರಿಸಿ ಹೋರಾಟ ನಡೆಸಿದ್ದರಿಂದ ಇಂದು ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ನಂದವಾಡಗಿ ಏತನೀರಾವರಿ ಯೋಜನೆ ಜಾರಿಗೊಳಿಸುವುದರ ಬಗ್ಗೆ ಮತ್ತು ಹನಿ ನೀರಾವರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳು ನಮಗೆ ಉಪದೇಶ ನೀಡುತ್ತಿದ್ದಾರೆ. ನಂದವಾಡಗಿ ಯೋಜನೆಯಿಂದ ನಮ್ಮ ಗ್ರಾಮಗಳಿಗೆ ನೀರು ಬರುವುದಿಲ್ಲ. ಹಾಗಾಗಿ ಎನ್‌ಆರ್‌ಬಿಸಿ 5ಎ ಯೋಜನೆ ಜಾರಿಗೊಳಿಸಿ ಎಂದು ಪಟ್ಟು ಹಿಡಿದ ನಾವು ಸಭೆ ಬಹಿಷ್ಕರಿಸಿದ್ದೇವೆ. ನಮ್ಮ ಹೋರಾಟ ಮುಂದುವರೆಸುತ್ತೇವೆ. ಉಪಚುನಾವಣೆಯಲ್ಲಿ ರಾಜಕಾರಣಿಗಳು ಓಟು ಕೇಳಿಕೊಂಡು ಬರಲಿ ಬುದ್ದಿ ಕಲಿಸುತ್ತೇವೆ” ಎಂದರು.

ಒಟ್ಟಿನಲ್ಲಿ ಮಳೆಯೂ ಬಾರದೆ, ಕೃಷಿಯೂ ಸಾಗದೇ ನೀರಾವರಿ ಯೋಜನೆಗಾಗಿ 12 ವರ್ಷದಿಂದ ಹೋರಾಡುತ್ತಿರುವ ಈ ಭಾಗದ ರೈತರಿಗೆ ಇಂದು ಸಹ ಅನ್ಯಾಯವಾಗಿದೆ. ಅವರು ಹೋರಾಟ ಮುಂದುವರೆಸುವುದಾಗಿ ಘೋಷಿಸಿದ್ದಾರೆ.


ಇದನ್ನೂ ಓದಿ: ತಪ್ಪೊಪ್ಪಿಕೊಂಡು ಕಾಯ್ದೆ ಹಿಂಪಡೆಯಿರಿ: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರಿಂದ ಪ್ರಧಾನಿಗೆ ಪತ್ರತಪ್ಪೊಪ್ಪಿಕೊಂಡು, ಕಾಯ್ದೆ ಹಿಂಪಡೆಯಲು ಸುಗ್ರೀವಾಜ್ಞೆ ಹೊರಡಿಸಿ: ಪ್ರಧಾನಿಗೆ ಪತ್ರ ಬರೆದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...