ಮಸ್ಕಿ ಉಪಚುನಾವಣೆ ಎಲ್ಲ ಚುನಾವಣೆಗಳಂತೆ ಜಾತಿ ಲೆಕ್ಕಾಚಾರ, ಆಡಳಿತ ಪಕ್ಷದ ಲಾಭಕರ ಅಂಶ, ಅಭ್ಯರ್ಥಿಗಳ ‘ಜನಪ್ರಿಯತೆ’ ಆಧರಿಸಿಯೇ ನಡೆಯಲಿದೆ. ಆದರೆ ಈ ಸಲ ಇಲ್ಲಿ ಒಂದಿಷ್ಟು ಟ್ವಿಸ್ಟ್‌ಗಳು ಈ ಚುನಾವಣೆಯ ಅಂತಿಮ ಫಲಿತಾಂಶವನ್ನು ನಿರ್ಧರಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂದಂತೆ ಮೀಸಲು ಕ್ಷೇತ್ರವಾದ ಇಲ್ಲಿ ‘ಗೌಡರ’ ಸ್ಪರ್ಧೆ ನಡೆಯುತ್ತಿದೆ, ಇದೇನೂ ಆಶ್ಚರ್ಯಕರವಲ್ಲ ಇಲ್ಲಿನ ಜನರಿಗೆ!
ಇಲ್ಲಿ ಈಗ ಮತದಾರರು ಮೇಲ್ನೋಟಕ್ಕೆ ತಟಸ್ಥರಂತೆ ಕಾಣುತ್ತಿದ್ದಾರೆ. ಆದರೆ ಅಭ್ಯರ್ಥಿಗಳು ಅದಲ್-ಬದಲ್ ಆಗಿರುವುದು ಅವರಿಗೇನೂ ಗೊಂದಲ ಮೂಡಿಸಿದಂತೆ ಕಾಣುತ್ತಿಲ್ಲ. ಕಳೆದ ಸಲ ಕಾಂಗ್ರೆಸ್‌ನಿಂದ ಗೆದ್ದಿದ್ದ ಪ್ರತಾಪಗೌಡ ಪಾಟೀಲರು ಆಪರೇಷಮ್ ಕಮಲಕ್ಕೆ ಒಳಗಾದ ಕಾರಣ ‘ಸಾಂವಿಧಾನಿಕ ಪ್ರಕ್ರಿಯೆ’ ಮೂಲಕ ಬಿಜೆಪಿ ಸೇರಿ ಅನರ್ಹಗೊಂಡವರು. ಈ ಅನರ್ಹತೆ ತೊಳೆದು ಹಾಕಲು-ಸುಪ್ರೀಂಕೋರ್ಟ್ ಅಭಿಮತದಂತೆ- ಅವರೀಗ ಉಪ ಚುನಾವಣೆ ಗೆಲ್ಲಬೇಕಿದೆ. ಈಗ ಅವರು ಬಿಜೆಪಿ ಅಭ್ಯರ್ಥಿ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ತುರವಿಹಾಳ ಬಸನಗೌಡ ಈಗ ಕಾಂಗ್ರೆಸ್ ಅಭ್ಯರ್ಥಿ… ಈಗ ಇವರಿಬ್ಬರ ಹಿಂಬಾಲಕರು ತಮ್ಮ ನಾಯಕರ ಹಿಂದೆಯೇ ನಿಂತಿದ್ದಾರೆಯೇ ಹೊರತು ಅವರಿಗೆ ಪಕ್ಷ ಮುಖ್ಯವಾಗಿಲ್ಲ.
ಅಂದಂತೆ ಎರಡೂ ಕಡೆ ‘ಗೌಡರು’ ನಿಂತಿದ್ದಾರೆ ಎಂದರೆ ಸಹಜವಾಗಿ ಅದು ಲಿಂಗಾಯತ ರೆಡ್ಡಿ ಗೌಡರೇ, ಒಕ್ಕಲಿಗ ಗೌಡರೆ ಅಂತಾ ನಿಮಗೆ ಅನಿಸಬಹುದು. ಸಾರಿ, ಇದು ಪರಿಶಿಷ್ಟ ಪಂಗಡ ಮೀಸಲು ಕೇತ್ರ. ಎಸ್‌ಟಿ ಪಂಗಡದವರು ಗೌಡ ಪದ ಸೇರಿಸಿಕೊಂಡಿದ್ದಾರೆ. ಹಾಗಾಗಿ ಅವರ ಹೆಸರುಗಳು ಗೌಡ ಎಂಬಲ್ಲಿಗೆ ಅಂತ್ಯವಾಗುತ್ತವೆ.
ಆದರೆ ಮತದಾರ ‘ಪೊಸಿಷನ್’ ಚೇಂಜ್ ಮಾಡಿದ್ದಾನೋ, ಅಥವಾ ಏಟು ಕೊಡಲು ಕಾಯ್ತಾ ಇದ್ದಾನೋ ಎಂಬುದು ಗೊತ್ತಿಲ್ಲ. ಸುತ್ತಮುತ್ತಲ ಕ್ಷೇತ್ರಗಳಲ್ಲಿ ಪ್ರಭಾವ ಇರುವ, ಕೆಲ ಜನಪ್ರತಿನಿಧಿಗಳನ್ನೂ ಹೊಂದಿರುವ ಜೆಡಿಎಸ್ ಇಲ್ಲಿ ಕ್ಯಾಂಡಿಡೇಟ್ ಹಾಕಿಲ್ಲ! ಫೆಬ್ರವರಿ 14 ರಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ, ಬಿಜೆಪಿಗೆ ಅನುಕೂಲ ಮಾಡಿಕೊಡುವುದಿಲ್ಲ ಎಂದಿದ್ದರು. ಆದರೆ ಈಗ ಇಲ್ಲಿ ಅಭ್ಯರ್ಥಿ ಹಾಕದೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಯಾರ ಜೊತೆ ಎಂಬುದನ್ನು ವಿವರಿಸಬೇಕಿಲ್ಲ! ಅದು ಯಡಿಯೂರಪ್ಪರ ಜೊತೆ ಎಂದು ಪ್ರಾಸಂಗಿಕವಾಗಿ ಹೇಳಬಹುದಾದರೂ, ಇಲ್ಲಿನ ಎರಡೂ ಪಕ್ಷಗಳ ಕೆಲವು ನಾಯಕರು ಇದು ವಿಜಯೇಂದ್ರ ಮತ್ತು ಎಚ್‌ಡಿಕೆ ನಡುವಿನ ಒಪ್ಪಂದವೆಂದು ಮಾತನಾಡಿಕೊಳ್ಳುತ್ತಿದ್ದಾರೆ.
ರಾಜಕೀಯದ ಈ ಮಜಲಿನಾಚೆಗೆ ಇಲ್ಲಿ ಕೆಲವು ಪ್ರಮುಖ ಅಂಶಗಳು ಈ ಚುನಾವಣೆಯ ಫಲಿತಾಂಶದ ದಿಕ್ಕನ್ನೇ ಬದಲಿಸಬಲ್ಲವು. ಅದರಲ್ಲಿ 100 ದಿನ ದಾಟಿದ NRBC_5A ನೀರಾವರಿ ಹೋರಾಟವೂ ಒಂದು. 58 ಗ್ರಾಮಗಳ ಜನ ನೀರಾವರಿ ವ್ಯವಸ್ಥೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಸೆಟೆದು ನಿಂತಿದ್ದಾರೆ.
ಇದನ್ನೂ ಓದಿ: NRBC_5A ಜಾರಿಗಾಗಿ 4 ಗ್ರಾ.ಪಂ ಚುನಾವಣೆ ಬಹಿಷ್ಕಾರ: ಉಪ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲರನ್ನು ಸೋಲಿಸಲು ರೈತರ ನಿರ್ಧಾರ
- ಮಲ್ಲನಗೌಡರ್ ಪಿ.ಕೆ
ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ: ಮೂರೂ ಪಕ್ಷಗಳಿಂದ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ


