ಇತ್ತೀಚೆಗೆ ಸುಮಾರು 700 ಉದ್ಯೋಗಿಗಳನ್ನು (ಕೆಲ ವರದಿಗಳು 400-500 ಎಂದಿವೆ) ಏಕಾಏಕಿ ವಜಾಗೊಳಿಸಿದ ಪ್ರಕರಣದಲ್ಲಿ ಇನ್ಫೋಸಿಸ್ ಕಂಪನಿಗೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಕ್ಲೀನ್ ಚಿಟ್ ಕೊಟ್ಟಿದೆ ಎಂದು ವರದಿಯಾಗಿದೆ.
ಈ ಕುರಿತು ತನಿಖೆ ನಡೆಸಿದ ಕಾರ್ಮಿಕ ಇಲಾಖೆ ಇನ್ಫೋಸಿಸ್ ಕಂಪನಿ ಉದ್ಯೋಗಿಗಳ ವಜಾ ವೇಳೆ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಏಕೆಂದರೆ ‘ವಜಾಗೊಂಡವರು ಖಾಯಂ ನೌಕರರು ಅಲ್ಲ, ಬದಲಾಗಿ ತರಬೇತಿಯಲ್ಲಿದ್ದವರು’ ಎಂದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ನಮ್ಮ ತನಿಖೆಯಲ್ಲಿ ಇನ್ಫೋಸಿಸ್ ಕಂಪನಿ ಯಾವುದೇ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿಲ್ಲ. ಮೊದಲನೆಯದಾಗಿ ವಜಾಗೊಂಡವರು ಮತ್ತು ಕಂಪನಿ ನಡುವೆ ಉದ್ಯೋಗಿ ಮತ್ತು ಉದ್ಯೋಗದಾತ ಎಂಬ ಸಂಬಂಧವೇ ಇರಲಿಲ್ಲ. ವಜಾಗೊಂಡವರನ್ನು ನೌಕರರು ಎಂದು ಕರೆಯಲು ನೇಮಕಾತಿ ಪತ್ರಗಳನ್ನೂ ನೀಡಿರಲಿಲ್ಲ. ಅವರು ಮೂರು ತಿಂಗಳ ಕಾಲ ತರಬೇತಿಯಲ್ಲಿದ್ದರು. ಅದಕ್ಕೆ ಸ್ಟೈಫಂಡ್ ನೀಡಲಾಗಿದೆ. ಅಲ್ಲದೆ ಅವರು ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮದ ಭಾಗವಾಗಿದ್ದರು” ಎಂದು ಸರ್ಕಾರಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾಗಿ ವರದಿ ವಿವರಿಸಿದೆ.
ಕಳೆದ ಫೆಬ್ರವರಿ 7ರಂದು ಇನ್ಫೋಸಿಸ್ ಕಂಪನಿ ಸುಮಾರು 700 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. (ಕೆಲ ವರದಿಗಳು 400-500 ಎಂದಿವೆ). ವಜಾಗೊಂಡವರು ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಆಯ್ಕೆಯಾಗಿ ಎರಡೂವರೆ ವರ್ಷ ಕಾದಿದ್ದರು. ಕೊನೆಗೂ ಸೆಪ್ಟೆಂಬರ್ 2024ರಲ್ಲಿ ಇವರು ಮೈಸೂರು ಕ್ಯಾಂಪಸ್‌ನಲ್ಲಿ ಕೆಲಸ ಆರಂಭಿಸಿದ್ದರು. ಇದಾಗಿ 6 ತಿಂಗಳಿಗೆ ‘ಆಂತರಿಕ ಪರೀಕ್ಷೆಯಲ್ಲಿ ವಿಫಲ’ ಎಂಬ ಕಾರಣ ನೀಡಿ ವಜಾಗೊಳಿಸಲಾಗಿದೆ. ವಜಾಗೊಂಡವರು ಮನೆಗೆ ಮರಳಲು ಟ್ಯಾಕ್ಸಿ, ಬಸ್ ಬುಕ್ ಮಾಡಲೂ ಪರದಾಡಿದ್ದರು. ಕೆಲವರು ಈ ವಿಚಾರವನ್ನು ಮನೆಯವರೆಗೆ ಹೇಗೆ ತಿಳಿಸುವುದು ಎಂಬ ಚಿಂತೆಯಲ್ಲಿದ್ದರು ಎಂದು ಮಾಧ್ಯಮ ವರದಿಗಳು ಹೇಳಿತ್ತು.
ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ಐಟಿ ಉದ್ಯೋಗಿಗಳ ಒಕ್ಕೂಟವಾದ ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (ಎನ್‌ಐಟಿಇಎಸ್) ಫೆಬ್ರವರಿ 10ರ ವೇಳೆಗೆ ಆರೋಪಿಸಿತ್ತು.
ಈ ವಿಚಾರ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಫೆಬ್ರವರಿ 13ರಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಗೆ ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಅದರಂತೆ ತನಿಖೆ ನಡೆಸಿದ ಕಾರ್ಮಿಕ ಇಲಾಖೆ, ಇನ್ಫೋಸಿಸ್‌ಗೆ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿದೆ.
ಕರ್ನಾಟಕ ಕಾರ್ಮಿಕ ಇಲಾಖೆ ತನ್ನ ಮಧ್ಯಂತರ ವರದಿಯಲ್ಲಿ, ಖಾಸಗಿ ಕಂಪನಿಗಳ ಆಯ್ಕೆ ಅಥವಾ ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲಸದಿಂದ ವಜಾಗೊಂಡ ತರಬೇತಿದಾರರಿಗೆ ಔಟ್‌ಪ್ಲೇಸ್‌ಮೆಂಟ್ ಸೇವೆಗಳು, ಬೇರ್ಪಡಿಕೆ ವೇತನ ಮತ್ತು ಕೌನ್ಸೆಲಿಂಗ್ ನೀಡುವ ಮೂಲಕ ಇನ್ಫೋಸಿಸ್ ತನ್ನ ನೀತಿಗಳಿಗೆ ಬದ್ಧವಾಗಿದೆ ಎಂಬುವುದಾಗಿದೆ ತಿಳಿಸಿದೆ ಎಂದು ವರದಿ ಹೇಳಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮೈಸೂರು ಮತ್ತು ಬೆಂಗಳೂರಿನಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ಗಳ ಪರಿಶೀಲನೆಗೆ ಆದೇಶಿಸಿದ್ದರು. ಇದನ್ನು ಜಿ ಮಂಜುನಾಥ್ ನೇತೃತ್ವದ ತಂಡ ನಡೆಸಿದೆ. ನೇಮಕಾತಿ ದಾಖಲೆಗಳ ಪರಿಶೀಲನೆಯು 2022ರ ಬ್ಯಾಚ್‌ನ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂದುವರಿದರೆ, 329 ಜನರು ಅಗತ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಬಹಿರಂಗಪಡಿಸಿದೆ. ಸರ್ಕಾರಿ ಅಧಿಕಾರಿಗಳು ಇನ್ಫೋಸಿಸ್‌ನ ಪರಿಭಾಷೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಕ್ಲೀನ್ ಚಿಟ್ ಕುರಿತು ಪ್ರತಿಕ್ರಿಯಿಸಿರುವ ಎನ್‌ಐಟಿಇಎಸ್, ತನಿಖೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ ಮತ್ತು ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಐಟಿ ವಲಯದಲ್ಲಿ ತರಬೇತಿ ಪಡೆಯುವವರು ಮತ್ತು ಉದ್ಯೋಗಿಗಳಿಗೆ ರಕ್ಷಣೆ ಒದಗಿಸುವಂತೆ ಎನ್‌ಐಟಿಇಎಸ್ ಆಗ್ರಹಿಸಿದೆ. ನೇಮಕಾತಿ ಮತ್ತು ಮೌಲ್ಯಮಾಪನ ಪದ್ಧತಿಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆ ಒತ್ತಾಯಿಸಿದೆ.
ಎಸ್ಸಿಎಸ್‌ಪಿ/ಟಿಎಸ್‌ಪಿ ಹಣದ ದುರ್ಬಳಕೆ ಯಾವುದೆ ಕಾರಣಕ್ಕೂ ಒಪ್ಪಲ್ಲ – ದಲಿತ ಹಕ್ಕುಗಳ ಹೋರಾಟಗಾರ ಎ. ನರಸಿಂಹ ಮೂರ್ತಿ


