ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟದ ನಂತರ ಹಲವಾರು ಉತ್ತರ ರಾಜ್ಯಗಳಾದ್ಯಂತ ಕಾಶ್ಮೀರಿ ವಿದ್ಯಾರ್ಥಿಗಳು ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘ (ಜೆಕೆಎಸ್‌ಎ) ಸೋಮವಾರ ಆರೋಪಿಸಿದೆ. ಸಾಮೂಹಿಕ ನಿಂದನೆ ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕವಾಗಿ ಮಧ್ಯಪ್ರವೇಶಿಸಬೇಕು ಎಂದು ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಕೆಎಸ್‌ಎ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಹೇಹಾಮಿ, “ದಾಳಿಯ ನಂತರ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲಾಗುತ್ತಿದೆ. ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ದೆಹಲಿ ರಾಜ್ಯಗಳಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಕಿರುಕುಳಕ್ಕೊಳಗಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
“ಕಾಶ್ಮೀರ ವಿದ್ಯಾರ್ಥಿಗಳು ಭಯೋತ್ಪಾದನೆಯಲ್ಲಿ ಅಲ್ಲ, ಭಾರತದ ಪ್ರಜಾಪ್ರಭುತ್ವ ಮತ್ತು ಮುಖ್ಯವಾಹಿನಿಯಲ್ಲಿ ನಂಬಿಕೆ ಇಡುತ್ತಾರೆ. ಆದರೆ ಅವರನ್ನು ಅಧಿಕಾರಿಗಳು ಮತ್ತು ರಾಜ್ಯಗಳಾದ್ಯಂತ ಸ್ಥಳೀಯ ಜನರು ನಿಂದಿಸುತ್ತಿದ್ದಾರೆ. ಅನೇಕ ಮನೆಮಾಲೀಕರು ಕಾಶ್ಮೀರಿ ಬಾಡಿಗೆದಾರರನ್ನು ತಮ್ಮ ಕೊಠಡಿಗಳನ್ನು ಖಾಲಿ ಮಾಡುವಂತೆ ಕೇಳಿಕೊಂಡಿದ್ದಾರೆ, ಇದರಿಂದಾಗಿ ಹಲವಾರು ವಿದ್ಯಾರ್ಥಿಗಳು ಭಯದಿಂದ ಮನೆಗೆ ಮರಳಬೇಕಾಯಿತು” ಎಂದು ಖುಹೇಹಾಮಿ ಹೇಳಿದರು.
ಸ್ಫೋಟದ ಬಗ್ಗೆ ಯಾವುದೇ ತನಿಖೆಗೆ ತಮ್ಮ ಸಂಘಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಕೇಂದ್ರವು ಕಾಶ್ಮೀರಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕವಾಗಿ ಎದ್ದಿರುವ ಸಾಮೂಹಿಕ ಅನುಮಾನವನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು.
“ಪ್ರಧಾನ ಮಂತ್ರಿಗಳು ಸಾರ್ವಜನಿಕ ಹೇಳಿಕೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ಕಾಶ್ಮೀರಿಗಳು ಇತರ ನಾಗರಿಕರಂತೆ ಈ ದೇಶದ ಭಾಗ” ಎಂದು ಅವರು ಹೇಳಿದರು.
ಕೆಂಪು ಕೋಟೆಯ ಹೊರಗೆ ನಡೆದ ಸ್ಫೋಟವನ್ನು ಜೆಕೆಎಸ್ಎ ತೀವ್ರ ಪದಗಳಲ್ಲಿ ಖಂಡಿಸಿ, ನ್ಯಾಯಯುತ ತನಿಖೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿತು.
ನವೆಂಬರ್ 10 ರಂದು ಕೆಂಪು ಕೋಟೆಯ ಬಳಿ 13 ಜನರ ಸಾವಿಗೆ ಕಾರಣವಾದ ಕಾರು ಸ್ಫೋಟವು ದೆಹಲಿ ಪೊಲೀಸ್ ವಿಶೇಷ ಕೋಶ, ಎನ್‌ಐಎ ಮತ್ತು ಅಪರಾಧ ಶಾಖೆಯನ್ನು ಒಳಗೊಂಡ ವ್ಯಾಪಕ, ಬಹು-ಸಂಸ್ಥೆ ತನಿಖೆಗೆ ನಾಂದಿ ಹಾಡಿದೆ. ತನಿಖೆಯ ಭಾಗವಾಗಿ ಹರಿಯಾಣದ ಅಲ್ ಫಲಾ ವಿಶ್ವವಿದ್ಯಾಲಯದ ಇಬ್ಬರು ವೈದ್ಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಯುಜಿಸಿ ಮತ್ತು ಎನ್‌ಎಎಸಿ ಗುರುತಿಸಿದ ನಿಯಂತ್ರಕ ಉಲ್ಲಂಘನೆಗಳ ನಂತರ ಪೊಲೀಸರು ಅಲ್ ಫಲಾ ವಿಶ್ವವಿದ್ಯಾಲಯದ ವಿರುದ್ಧ ವಂಚನೆ ಮತ್ತು ನಕಲಿ ಆರೋಪದ ಅಡಿಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಪರಿಶೀಲನೆಯಲ್ಲಿರುವ ವ್ಯಕ್ತಿಗಳ ವಿವರಗಳನ್ನು ಸಂಗ್ರಹಿಸಲು ಪೊಲೀಸ್ ತಂಡ ಶನಿವಾರ ವಿಶ್ವವಿದ್ಯಾಲಯದ ಓಖ್ಲಾ ಕಚೇರಿಗೆ ಭೇಟಿ ನೀಡಿತು.
ಬಂಧಿತ ವೈದ್ಯರಾದ ಮೊಹಮ್ಮದ್ ಮತ್ತು ಮುಸ್ತಕೀಮ್, ಸ್ಫೋಟಗೊಂಡ ಕಾರಿನ ಚಾಲಕ ಡಾ. ಉಮರ್ ನಬಿಗೆ ಪರಿಚಿತರಾಗಿದ್ದರು. ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲ್ಪಟ್ಟಿದ್ದ ಡಾ. ಮುಜಮ್ಮಿಲ್ ಗನೈ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶಾಲವಾದ ಪಿತೂರಿಯಲ್ಲಿ ಅವರ ಸಂಭಾವ್ಯ ಪಾತ್ರವನ್ನು ನಿರ್ಣಯಿಸಲು ಅವರ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ.
ರಸಗೊಬ್ಬರವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಹೊತ್ತಿರುವ ಫರಿದಾಬಾದ್ ಮೂಲದ ವ್ಯಕ್ತಿಯ ಪಾತ್ರದ ಬಗ್ಗೆಯೂ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಏಕೆಂದರೆ, ಎನ್‌ಪಿಕೆ ರಸಗೊಬ್ಬರ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಪಡೆಯಲು ಮಾಡ್ಯೂಲ್ ಸುಮಾರು 26 ಲಕ್ಷ ರೂ.ಗಳನ್ನು ಸಂಗ್ರಹಿಸಿದೆ ಎಂದು ಪುರಾವೆಗಳಿಂದ ಕಂಡುಬಂದಿದೆ.
ಸ್ಫೋಟದ ನಂತರ, ಹೆಚ್ಚಿನ ಭದ್ರತಾ ಕ್ರಮಗಳ ಭಾಗವಾಗಿ ಫರಿದಾಬಾದ್‌ನಲ್ಲಿ ಮಾತ್ರ ಜಮ್ಮು ಮತ್ತು ಕಾಶ್ಮೀರದಿಂದ 500 ಕ್ಕೂ ಹೆಚ್ಚು ಜನರನ್ನು ಪೊಲೀಸರು ಪರಿಶೀಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭಿಕ ಯುಎಪಿಎ ಎಫ್‌ಐಆರ್ ಅನ್ನು ತನಿಖಾ ಸಂಸ್ಥೆಗೆ ವರ್ಗಾಯಿಸಿದ ನಂತರ ಎನ್‌ಐಎ ಈಗ ವ್ಯಾಪಕ ಪಿತೂರಿಯನ್ನು ತನಿಖೆ ಮಾಡುತ್ತಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ: ಉಗ್ರರ ಬಗ್ಗೆ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಣೆ


