ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಭಾನುವಾರ (ಆ.3) ಪ್ಯಾಲೆಸ್ತೀನ್ ಪರ ಅಥವಾ ಗಾಝಾ ಜನತೆಯ ಪರ ಬೃಹತ್ ಪ್ರತಿಭಟನೆ ನಡೆಯಿತು. ಲಕ್ಷಾಂತರ ಜನರು ಐತಿಹಾಸಿಕ ಹಾರ್ಬರ್ ಬ್ರಿಡ್ಜ್ ಮೇಲೆ ರ್‍ಯಾಲಿ ನಡೆಸಿದರು.
ಆಸ್ಟ್ರೇಲಿಯಾದ ಸುಪ್ರೀಂ ಕೋರ್ಟ್ ಹಾರ್ಬರ್ ಬ್ರಿಡ್ಜ್ ಮೇಲೆ ರ್‍ಯಾಲಿ ನಡೆಸಲು ಅನುಮತಿ ನೀಡಿದ ಮರು ದಿನವೇ ಈ ಬೃಹತ್ ಪ್ರತಿಭಟನೆ ನಡೆದಿದೆ. ಆಯೋಜಕರು ಸುಪ್ರೀಂ ಕೋರ್ಟ್ ಆದೇಶ ‘ಐತಿಹಾಸಿಕ’ ಎಂದು ಕರೆದಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧ ಖಂಡಿಸಿ, ಗಾಝಾ ಜನತೆಗೆ ಆಹಾರ ಅಗತ್ಯ ಸಾಮಾಗ್ರಿಗಳು ಸಿಗದಂತೆ ದಿಗ್ಬಂಧನ ವಿಧಿಸಿರುವುದನ್ನು ವಿರೋಧಿಸಿ ರ್‍ಯಾಲಿ ಆಯೋಜಿಸಲಾಗಿತ್ತು.
ಸಿಡ್ನಿ ಹಾರ್ಬರ್ ಬ್ರಿಡ್ಜ್ ಮೇಲೆ ಕೊನೆಯದಾಗಿ 2023ರಲ್ಲಿ ಸುಮಾರು 50 ಸಾವಿರ ಜನರು ‘ವರ್ಲ್ಡ್ ಪ್ರೈಡ್’ ಮೆರವಣಿಗೆ ನಡೆಸಿದ್ದರು. ಆ ಬಳಿಕ ಬ್ರಿಡ್ಜ್ ಮೇಲೆ ರ್‍ಯಾಲಿ ನಡೆಸುವುದನ್ನು ನಿಷೇಧಿಸಲಾಗಿತ್ತು.
ಭಾನುವಾರ ಸಿಡ್ನಿಯಲ್ಲಿ ಭಾರೀ ಮಳೆಯಾಗುತ್ತಿದ್ದರೂ ಲೆಕ್ಕಿಸದೆ ಲಕ್ಷಾಂತರ ಜನರು ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡಿರುವುದು ಮಾನವೀಯತೆ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಸಾಕ್ಷಿ ಎಂದು ಕೆಲ ಮಾಧ್ಯಮ ವರದಿಗಳು ಬಣ್ಣಿಸಿವೆ.
ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ. ಫೆಡರಲ್ ಎಂಪಿ ಎಡ್ ಹುಸಿಕ್ ಮತ್ತು ಮಾಜಿ ಎನ್‌ಎಸ್‌ಡಬ್ಲ್ಯೂ ಪ್ರೀಮಿಯರ್ ಬಾಬ್ ಕಾರ್ ಕೂಡ ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸಿರುವುದು ಗಮನಾರ್ಹ ಎಂದು ಬಿಬಿಸಿ ವರದಿ ಮಾಡಿದೆ.
“ಶೇಮ್ ಶೇಮ್ ಇಸ್ರೇಲ್, ಶೇಮ್ ಶೇಮ್ ಅಮೆರಿಕ”. “ನಮಗೆ ಗಾಝಾದಲ್ಲಿ ಕದನ ವಿರಾಮ ಬೇಕು, ಅದು ಯಾವಾಗ ಆಗುತ್ತದೆ?”. “ಫ್ರೀ ಪ್ಯಾಲೆಸ್ಟೈನ್” ಇತ್ಯಾದಿ ಘೋಷಣೆಗಳನ್ನು ರ್‍ಯಾಲಿಯಲ್ಲಿ ಭಾಗವಹಿಸಿದ್ದ ಜನ ಸಮೂಹ ಕೂಗುತ್ತಿತ್ತು ಎಂದು ವರದಿಗಳು ಹೇಳಿವೆ.
ಜನರು ಕುಟುಂಬ ಸಮೇತರಾಗಿ, ತಮ್ಮ ಪುಟ್ಟ ಕಂದಮ್ಮಗಳೊಂದಿಗೆ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅಲೆಕ್ ಬೆವಿಲ್ಲೆ ಎಂಬ ವ್ಯಕ್ತಿ,”ನಾವಿರೋದು ಭೂಮಿಯ ಇನ್ನೊಂದು ಬದಿ. ಗಾಝಾಕ್ಕಿಂತ ತುಂಬಾ ದೂರ ಎಂದು ನನಗೆ ಗೊತ್ತಿದೆ. ಆದರೆ, ಅಲ್ಲಿನ ಯುದ್ಧ ನಮ್ಮ ಮೇಲೂ ಪರಿಣಾಮ ಬೀರುತ್ತದೆ” ಎಂದಿದ್ದಾರೆ. ಅವರು ಗಾಝಾದ ಮಕ್ಕಳನ್ನು ತಮ್ಮ ಮೂರು ವರ್ಷದ ಮಗ ಫ್ರಾಂಕಿಗೆ ಹೋಲಿಸುತ್ತಾರೆ. ನಾವು ಇನ್ನೂ ಹೆಚ್ಚಿನ ಸಹಾಯ ಅವರಿಗೆ ಮಾಡಬಹುದು” ಎಂದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಪ್ರತಿಭಟನಾ ರ್‍ಯಾಲಿ ಆರಂಭಗೊಂಡು ಎರಡು ಗಂಟೆಗಳ ನಂತರ ನ್ಯೂ ಸೌತ್ ವೇಲ್ (ಎನ್‌ಎಸ್‌ಡಬ್ಲ್ಯು) ಪೊಲೀಸರು ಒಂದು ಪಠ್ಯ ಸಂದೇಶ ಕಳುಹಿಸಿದರು. ಅದರಲ್ಲಿ, “ಆಯೋಜಕರೊಂದಿಗೆ ಸಮಾಲೋಚಿಸಿ, ಸಾರ್ವಜನಿಕ ಸುರಕ್ಷತೆಯ ದೃಷ್ಠಿಯಿಂದ ಮೆರವಣಿಗೆಯನ್ನು ನಿಲ್ಲಿಸಬೇಕಾಗಿದೆ ಮತ್ತು ಮುಂದಿನ ಸೂಚನೆಗಳಿಗಾಗಿ ಕಾಯಬೇಕಾಗಿದೆ” ಎಂದು ಬರೆಯಲಾಗಿತ್ತು.
ಸೇತುವೆಯ ಮೇಲಿದ್ದ ಪ್ರತಿಯೊಬ್ಬರೂ ಉತ್ತರಕ್ಕೆ ನಡೆಯುವುದನ್ನು ನಿಲ್ಲಿಸಿ ‘ನಿಯಂತ್ರಿತ’ ರೀತಿಯಲ್ಲಿ ನಗರದ ಕಡೆಗೆ ಹಿಂದಿರುಗಿ ಎಂದು ಅದರಲ್ಲಿ ಮನವಿ ಮಾಡಲಾಗಿತ್ತು ಎಂದು ವರದಿಗಳು ವಿವರಿಸಿವೆ.
ಪ್ರತಿಭಟನಾ ರ್‍ಯಾಲಿಯಲ್ಲಿ ಸುಮಾರು 90 ಸಾವಿರ ಜನರು ಪಾಲ್ಗೊಂಡಿದ್ದರು ಎಂದು ಎನ್‌ಎಸ್‌ಡಬ್ಲ್ಯು ಪೊಲೀಸರು ಅಂದಾಜಿಸಿದ್ದಾರೆ. ಆದರೆ, ಪ್ರತಿಭಟನೆ ಆಯೋಜಸಿದ್ದ ‘ಪ್ಯಾಲೆಸ್ಟೈನ್ ಆಕ್ಷನ್ ಗ್ರೂಪ್ ಸಿಡ್ನಿ’ಯ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುಮಾರು 300,000 ಜನರು ಭಾಗವಹಿಸಿದ್ದರು ಎಂದು ಹೇಳಲಾಗಿದೆ.
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಷರತ್ತುಗಳೊಂದಿಗೆ ಫ್ರಾನ್ಸ್, ಕೆನಡಾ ಮತ್ತು ಯುಕೆ ಪ್ರತ್ಯೇಕವಾಗಿ ಪ್ಯಾಲೆಸ್ತೀನ್‌ಗೆ ರಾಷ್ಟ್ರದ ಸ್ಥಾನಮಾನ ನೀಡಲು ಮುಂದಾಗಿವೆ. ಹಾಗಾಗಿ, ಆಸ್ಟ್ರೇಲಿಯಾ ಕೂಡ ಪ್ಯಾಲೆಸ್ತೀನ್ ಪ್ರತ್ಯೇಕ ರಾಷ್ಟ್ರ ಎಂದು ಪರಿಗಣಿಸಲು ಆಗ್ರಹ ಹೆಚ್ಚಾಗಿದೆ.
ಇಸ್ರೇಲ್‌ನಿಂದ 22,000ಕ್ಕೂ ಹೆಚ್ಚು ನೆರವಿನ ಟ್ರಕ್‌ಗಳು ನಿರ್ಬಂಧ: ಗಾಜಾ ಸರ್ಕಾರ


