ಕೇಂದ್ರದ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್) ಕಾಯ್ದೆ, 2025 (ವಿಬಿ-ಜಿ ರಾಮ್ ಜಿ) ವಿರುದ್ದ ತಮಿಳುನಾಡಿನ ಆಡಳಿತರೂಢ ಡಿಎಂಕೆ ಮೈತ್ರಿಕೂಟವು ಬುಧವಾರ (ಡಿ.24) ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದೆ.
ರಾಜ್ಯದ 389 ಸ್ಥಳಗಳಲ್ಲಿ ದಿನಗೂಲಿ ಕಾರ್ಮಿಕರು ಪ್ರತಿಭಟಿಸಿದ್ದಾರೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮಾಹಿತಿ ನೀಡಿದ್ದಾರೆ. ಚೆನ್ನೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಕೇಂದ್ರದ ಕ್ರಮ ಮಹಾತ್ಮಾ ಗಾಂಧಿಯವರ ಪರಂಪರೆಯನ್ನು ನರೇಗಾದಿಂದ ಅಳಿಸಿಹಾಕುವ ಪ್ರಯತ್ನ ಎಂದು ಕಿಡಿಕಾರಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಡಿಎಂಕೆ ಅಧ್ಯಕ್ಷ ಕೆ. ವೀರಮಣಿ, ನರೇಗಾ ಯೋಜನೆಯ ಹೆಸರು ಬದಲಿಸಿರುವುದನ್ನು ಟೀಕಿಸಿದರು. ಶಾಸಕಾಂಗದ ಮೂಲಕ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದರು. ಗಾಂಧಿಯನ್ನು ಜನರ ಹೃದಯದಿಂದ ತೆಗೆದುಹಾಕಲು ಸಾಧ್ಯವಿಲ್ಲ. ಅವರ ಆಲೋಚನೆಗಳು, ತತ್ವಗಳು ಮತ್ತು ತ್ಯಾಗಗಳು ಭಾರತೀಯ ಸಮಾಜದಲ್ಲಿ ಆಳವಾಗಿ ಹುದುಗಿವೆ” ಎಂದು ಹೇಳಿದರು.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ವೀರಮಣಿ, ವಿಶಾಲ ಸಂಘ ಪರಿವಾರದೊಳಗೆ ಭಿನ್ನಾಭಿಪ್ರಾಯಗಳಿವೆ ಎಂದು ಆರೋಪಿಸಿದರು. ಅವರು ನಾಟಕೀಯ ಜನರು. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕತ್ವದ ನಡುವೆ ಶೀತಲ ಸಮರ ನಡೆಯುತ್ತಿದೆ. ನೀವು ಸಾಲುಗಳ ನಡುವೆ ಓದಬೇಕು. ಕೇಂದ್ರದಲ್ಲಿ ಆಡಳಿತ ನಡೆಸುವ ಸಂಸ್ಥೆಯೊಳಗೆ ಸೈದ್ಧಾಂತಿಕ ವಿರೋಧಾಭಾಸಗಳು ಹೊರಹೊಮ್ಮುತ್ತಿವೆ ಎಂದರು.
ದೇಶದ ಅತ್ಯಂತ ಮಹತ್ವದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಿಂದ ಗಾಂಧಿಯವರ ಹೆಸರನ್ನು ತೆಗೆದುಹಾಕುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅದನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ವಿಸಿಕೆ ಮುಖ್ಯಸ್ಥ ಮತ್ತು ಸಂಸದ ತೋಲ್. ತಿರುಮಾವಲವನ್ ಆರೋಪಿಸಿದರು.
ಗಾಂಧಿ ಹೆಸರಿನ ಈ ಯೋಜನೆಯನ್ನು ನಿರ್ಮೂಲನೆ ಮಾಡಲು ಅಥವಾ ತೆಗೆದುಹಾಕಲು ಬಿಜೆಪಿ ಸರ್ಕಾರ ಸಿದ್ಧವಾಗಿದೆ. ಈ ಕಾರ್ಯಕ್ರಮವು ಗ್ರಾಮೀಣ ಬಡವರಿಗೆ ಸಾಮಾಜಿಕ ನ್ಯಾಯ ಮತ್ತು ಉದ್ಯೋಗ ಭದ್ರತೆಯನ್ನು ಸಂಕೇತಿಸುತ್ತದೆ ಎಂದು ಹೇಳಿದರು.
ತಿರುಮಾವಲವನ್ ಅವರು ಈ ವಿಷಯದ ಬಗ್ಗೆ ತಮಿಳುನಾಡು ಸರ್ಕಾರದ ನಿಲುವಿಗೆ ತಮ್ಮ ಪಕ್ಷದ ಬೆಂಬಲವನ್ನು ಪುನರುಚ್ಚರಿಸಿದರು. ಕೇಂದ್ರದ ಕ್ರಮಗಳನ್ನು ಬೆಂಬಲಿಸುತ್ತಿರುವ ಎಐಎಡಿಎಂಕೆ ಮತ್ತು ಬಿಜೆಪಿಯನ್ನು ಖಂಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ತಮಿಳುನಾಡು ಸರ್ಕಾರವನ್ನು ನಾವು ಬೆಂಬಲಿಸುತ್ತೇವೆ ಎಂದರು.


