ಮಥುರಾದ ಕರ್ನವಾಲ್‌ನಲ್ಲಿರುವ ದಲಿತ ಕುಟುಂಬದ ಇಬ್ಬರು ಸಹೋದರಿಯರು ಶುಕ್ರವಾರ ಮತ್ತೊಮ್ಮೆ ತಮ್ಮ ಮದುವೆಯ ಸಂಭ್ರಮದಲ್ಲಿ ಭಾಗಿಯಾದರು. ಪ್ರಬಲ ಜಾತಿಗೆ ಸೇರಿದ ಕನಿಷ್ಠ 15 ಜನರು ರಸ್ತೆ ಅಪಘಾತದಲ್ಲಿ ಉಂಟಾದ ಜಗಳದಲ್ಲಿ ದಲಿತ ಸಹೋದರಿಯರು ಮತ್ತು ಅವರ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ, ಪಾರ್ಲರ್‌ನಿಂದ ಬರುತ್ತಿದ್ದ ನವ ವದುಗಳ ಮೇಲೆ ಕೆಸರು ಎರಚಿ ವಿಕೃತಿ ಮೆರೆದಿದ್ದರು. ದಾಳಿಯಿಂದ ಹೆದರಿದ್ದ ವರನ ಕಡೆಯವರು ಮದುವೆ ರದ್ದುಗೊಳಿಸಿದ್ದರು.
ಫೆಬ್ರವರಿ 21 ಕ್ಕೆ ಹೋಲಿಸಿದರೆ ಮದುವೆ ಸಿದ್ಧತೆಗಳು ಸಂಪೂರ್ಣವಾಗಿ ಭಿನ್ನವಾಗಿದ್ದವು. ಹಿಂಸಾತ್ಮಕ ಘರ್ಷಣೆಯ ಸಮಯದಲ್ಲಿ ಗೈರುಹಾಜರಾಗಿದ್ದ ಪೊಲೀಸ್ ಸಿಬ್ಬಂದಿ ನಿನ್ನೆ ನಡೆದ ‘ಬರಾತ್’ಗೆ ಪೂರ್ಣ ಬೆಂಗಾವಲು ನೀಡಿದರು. ಸಮಾಜ ಕಲ್ಯಾಣ ಸಚಿವ (ಸ್ವತಂತ್ರ ಉಸ್ತುವಾರಿ) ಅಸಿಮ್ ಅರುಣ್ ಅವರು ಕೂಡ ಸಹೋದರಿಯರ ವಿವಾಹದಲ್ಲಿ ಭಾಗವಹಿಸಿದ್ದರು.
ಕಳೆದ ಗುರುವಾರ, ರಾಜ್ಯಸಭಾ ಸದಸ್ಯ ಮತ್ತು ಸಮಾಜವಾದಿ ಪಕ್ಷದ ನಾಯಕ ರಾಮ್‌ಜಿಲಾಲ್ ಸುಮನ್ ನೇತೃತ್ವದ ನಿಯೋಗವು ಕುಟುಂಬಕ್ಕೆ ₹2 ಲಕ್ಷದ ಚೆಕ್ ನೀಡಲು ಕರ್ನವಾಲ್‌ನಲ್ಲಿತ್ತು. ಕಾಂಗ್ರೆಸ್ ಮತ್ತು ಆಜಾದ್ ಸಮಾಜ ಪಕ್ಷದ ನಾಯಕರು ಸಹ ದಲಿತ ಸಹೋದರಿಯರ ಮದುವೆಗೆ ತಮ್ಮ ಕೊಡುಗೆಗಳನ್ನು ನೀಡಿದರು.
“ಫೆಬ್ರವರಿ 21 ರಂದು, ಈ ಘಟನೆಯಿಂದಾಗಿ ಪದಮ್ ಸಿಂಗ್ ಅವರ ಹೆಣ್ಣುಮಕ್ಕಳ ವಿವಾಹಗಳನ್ನು ರದ್ದುಗೊಳಿಸಲಾಯಿತು ಎಂಬುದು ದುರದೃಷ್ಟಕರ. ಬಜೆಟ್ ಅಧಿವೇಶನ ನಡೆಯುತ್ತಿರುವಾಗ, 15 ಆರೋಪಿಗಳನ್ನು ಬಂಧಿಸುವಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳು ನನ್ನನ್ನು ಇಲ್ಲಿಗೆ ಕಳುಹಿಸಿದರು. ನಾನು ಮದುವೆಗೆ ಹಾಜರಾಗುವುದಾಗಿ ಭರವಸೆ ನೀಡಿದ್ದೆ, ಇಂದು ಇಲ್ಲಿದ್ದೇನೆ” ಎಂದು ಸಚಿವ ಅರುಣ್ ಹೇಳಿದರು.
ಶನಿವಾರ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿವಾಹ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಎಸ್‌ಪಿ (ನಗರ) ಅರವಿಂದ್ ಕುಮಾರ್ ಕೂಡ ಗ್ರಾಮದಲ್ಲಿದ್ದರು.
ಘಟನೆ ಹಿನ್ನೆಲೆ:
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ರಿಫೈನರಿ ಪ್ರದೇಶದಲ್ಲಿ ನಡೆದ ಸಣ್ಣ ಅಪಘಾತವು ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿತ್ತು. ಈ ಘಟನೆಯಲ್ಲಿ ದಲಿತ ಕುಟುಂಬದ ಇಬ್ಬರು ಸಹೋದರಿಯರ ವಿವಾಹವೆ ರದ್ದಾಗಿದ್ದು, ಹಲವಾರು ಅತಿಥಿಗಳಿಗೆ ಗಾಯಗೊಂಡಿದ್ದರು.
ಬ್ಯೂಟಿ ಪಾರ್ಲರ್‌ನಿಂದ ಇಬ್ಬರು ಸಹೋದರಿಯರು ತಮ್ಮ ಸಂಬಂಧಿಕರೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ ಅವರ ಕಾರು ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಂತರ, ಮೋಟಾರ್‌ಸೈಕಲ್‌ನಲ್ಲಿದ್ದ ಕರ್ಣವಾಲ್ ಗ್ರಾಮದ ನಿವಾಸಿಗಳಾದ ಲೋಕೇಶ್, ರೋಹ್ತಾಶ್ ಮತ್ತು ಸತೀಶ್ ಕಾರಿನ ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿದರು. ಮೂವರು ಪುರುಷರು ಮಹಿಳೆಯರನ್ನು ಕಾರಿನಿಂದ ಹೊರಗೆಳೆದು, ಅವರ ಮೇಲೆ ಹಲ್ಲೆ ನಡೆಸಿ, ಅವರ ಮುಖಕ್ಕೆ ಕೆಸರು ಎರಚಿದ್ದಾರೆ ಎಂದು ಆರೋಪಿಸಲಾಗಿದೆ.
ವಧುವಿನ ಕುಟುಂಬ ಸದಸ್ಯರಿಗೆ ದಾಳಿಯ ಬಗ್ಗೆ ತಿಳಿದಾಗ, ಅವರು ಸ್ಥಳಕ್ಕೆ ಧಾವಿಸಿದರು. ಶಂಕಿತ ದಾಳಿಕೋರರು ಸಹ ಪ್ರತಿಯಾಗಿ ತಮ್ಮ ಸಂಬಂಧಿಕರನ್ನು ಕರೆದರು. ನಂತರ ನಡೆದ ಘರ್ಷಣೆಯಲ್ಲಿ, ವಧುವಿನ ತಂದೆ ಸೇರಿದಂತೆ ಹಲವಾರು ಜನರು ಗಾಯಗೊಂಡರು, ಅವರ ತಲೆಗೆ ಗಾಯವಾಗಿತ್ತು.
ಮೀರತ್| ಅತ್ಯಾಚಾರದ ವಿಡಿಯೊ ತೋರಿಸಿ ದಲಿತ ಯುವತಿಯ ವಿವಾಹ ಮುರಿದ ದುರುಳ


