ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಸೋಮವಾರ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಬಿಎಸ್‌ಪಿಯ ಎಲ್ಲ ಪ್ರಮುಖ ಹುದ್ದೆಗಳಿಂದ ಅವರನ್ನು ತೆಗೆದುಹಾಕಲಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
“ಅತ್ಯಂತ ಗೌರವಾನ್ವಿತ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಸ್ವಾಭಿಮಾನ, ಸ್ವಾಭಿಮಾನ ಚಳವಳಿಯ ಹಿತಾಸಕ್ತಿ ಮತ್ತು ಕಾನ್ಶಿರಾಮ್ ಅವರ ಶಿಸ್ತಿನ ಸಂಪ್ರದಾಯವನ್ನು ಅನುಸರಿಸಿ, ಆಕಾಶ್ ಆನಂದ್ ಅವರನ್ನು ಅವರ ಮಾವನಂತೆ ಪಕ್ಷ ಮತ್ತು ಚಳವಳಿಯ ಹಿತದೃಷ್ಟಿಯಿಂದ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದು ಮಾಯಾವತಿ ಎಕ್ಸ್‌ನಲ್ಲಿ ಘೋಷಿಸಿದರು.
ಮಾಯಾವತಿ ಭಾನುವಾರ ಆನಂದ್ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ತೆಗೆದುಹಾಕಿದರು. ಅವರ ತಂದೆ ಆನಂದ್ ಕುಮಾರ್ ಮತ್ತು ರಾಜ್ಯಸಭಾ ಸಂಸದ ರಾಮ್‌ಜಿ ಗೌತಮ್ ಅವರನ್ನು ಅವರ ಸ್ಥಾನದಲ್ಲಿ ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಿದರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೂಡ ತಮ್ಮ ಜೀವಿತಾವಧಿಯಲ್ಲಿ ಉತ್ತರಾಧಿಕಾರಿಯನ್ನು ಹೆಸರಿಸುವುದಿಲ್ಲ ಎಂದು ಹೇಳಿದರು.
ಸೋಮವಾರ ಆಕಾಶ್ ಆನಂದ್ ಅವರು ಪಕ್ಷದ ಮುಖ್ಯಸ್ಥೆ ಮಾಯಾವತಿಯವರ ಪ್ರತಿಯೊಂದು ನಿರ್ಧಾರವನ್ನು ಗೌರವಿಸುತ್ತೇನೆ. ಅವರನ್ನು ‘ಪತ್ತರ್ ಕಿ ಲೇಕರ್’ ಅಥವಾ ಕಲ್ಲಿನಲ್ಲಿ ಕೆತ್ತಿದವರಂತೆ ಪರಿಗಣಿಸುತ್ತೇನೆ ಎಂದು ಹೇಳಿದರು.
ಈ ನಿರ್ಧಾರವು ತನ್ನ ಮೇಲೆ ಭಾವನಾತ್ಮಕ ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಆದರೆ, ಅದನ್ನು ಸವಾಲಾಗಿ ತೆಗೆದುಕೊಂಡಿದ್ದ, ತನ್ನ ಮುಂದೆ ದೀರ್ಘ ಹೋರಾಟವಿದೆ ಎಂದು ಪ್ರತಿಪಾದಿಸಿದರು.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆನಂದ್, “ಪಕ್ಷದ ಈ ನಿರ್ಧಾರದಿಂದಾಗಿ ನನ್ನ ರಾಜಕೀಯ ಜೀವನ ಮುಗಿದಿದೆ ಎಂದು ವಿರೋಧ ಪಕ್ಷದ ಕೆಲವರು ಭಾವಿಸುತ್ತಿದ್ದಾರೆ. ಬಹುಜನ ಚಳುವಳಿಯು ವೃತ್ತಿಜೀವನವಲ್ಲ, ಬದಲಾಗಿ ಕೋಟ್ಯಂತರ ದಲಿತರು, ಶೋಷಿತರು, ವಂಚಿತರು ಮತ್ತು ಬಡ ಜನರ ಸ್ವಾಭಿಮಾನಕ್ಕಾಗಿ ಹೋರಾಟವಾಗಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು” ಎಂದು ಬರೆದುಕೊಂಡಿದ್ದಾರೆ.
ಮಾಯಾವತಿಯವರ ನಾಯಕತ್ವದಲ್ಲಿ ತ್ಯಾಗ, ನಿಷ್ಠೆ ಮತ್ತು ಸಮರ್ಪಣೆಯ ಅಮೂಲ್ಯ ಪಾಠಗಳನ್ನು ಕಲಿತಿದ್ದೇನೆ, ಈ ತತ್ವಗಳನ್ನು ಕೇವಲ ಒಂದು ಕಲ್ಪನೆಯಾಗಿ ಪರಿಗಣಿಸುವುದಿಲ್ಲ. ಆದರೆ, ಜೀವನ ವಿಧಾನವೆಂದು ಆಕಾಶ್ ಆನಂದ್ ಹೇಳಿದರು.
ಮಾಯಾವತಿ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವು ಬದ್ಧವಾಗಿದೆ ಎಂದು ಅವರು ಒಪ್ಪಿಕೊಂಡರು. ನಾನು ಪ್ರತಿಯೊಂದನ್ನು ಗೌರವಿಸಿ, ಬೆಂಬಲಿಸುತ್ತೇನೆ ಎಂದರು.
“ಇದು ಒಂದು ಕಲ್ಪನೆ, ಚಳುವಳಿ, ಇದನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಲಕ್ಷಾಂತರ ಆಕಾಶ್ ಆನಂದರು ಈ ಜ್ಯೋತಿಯನ್ನು ಉರಿಯುತ್ತಲೇ ಇಡಲು ಮತ್ತು ಅದಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಯಾವಾಗಲೂ ಸಿದ್ಧರಿದ್ದಾರೆ” ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ದಲಿತರ ಮೇಲೆ ಹೆಚ್ಚುತ್ತಿರುವ ದಬ್ಬಾಳಿಕೆ; ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿ ಪ್ರತಿಭಟನೆ


