ಮೇದಕ್‌ನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.
ಬಿಜೆಪಿ ಮೇದಕ್ ಜಿಲ್ಲಾಧ್ಯಕ್ಷ ಗದ್ದಂ ಶ್ರೀನಿವಾಸ್, ಮೇದಕ್ ಟೌನ್ ಅಧ್ಯಕ್ಷ ಎಂ ನಯಮ್ ಪ್ರಸಾದ್ ಮತ್ತು ಕೋಮು ಘರ್ಷಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಏಳು ಮಂದಿ ಬಂಧಿತರು.
ಮೇದಕ್ ಪಟ್ಟಣದ ಮಿನ್‌ಹಾಜುನ್ ಉಲೂಮ್ ಮದ್ರಸದ ಆಡಳಿತ ಸಮಿತಿಯು ಜಾನುವಾರೊಂದನ್ನು ಖರೀದಿಸಿತ್ತು. ಜೂನ್ 15ರಂದು ಸಂಜೆ ಅದನ್ನು ಮದ್ರಸದ ಆವರಣದೊಳಗೆ ತಂದ ಬೆನ್ನಲ್ಲೇ, ಅಲ್ಲಿ ಜಮಾಯಿಸಿದ ಸಂಘ ಪರಿವಾರದ ಸಂಘಟನೆಯೊಂದರ ಸದಸ್ಯರು, ಜಾನುವಾರು ಹತ್ಯೆ ಮಾಡಲಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಗುಂಪು ಚುದುರಿಸಿದ್ದರು.
ಒಂದು ಗಂಟೆಯ ಬಳಿಕ ಮತ್ತೆ ಸ್ಥಳಕ್ಕೆ ಆಗಮಿಸಿದ್ದ ಗುಂಪು ಮದ್ರಸಾ ಮೇಲೆ ದಾಳಿ ನಡೆಸಿತ್ತು. ಆಸ್ಪತ್ರೆಯ ಮೇಲೆ ಕಲ್ಲು ತೂರಾಟ ನಡೆಸಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಲಾಠಿಚಾರ್ಜ್ ನಡೆಸಿ ಜನರನ್ನು ಚದುರಿಸಿದ್ದಾರೆ.
ಮದ್ರಸಾ ಮೇಲಿನ ದಾಳಿಯ ನಂತರ, ಗುಂಪು ಘರ್ಷಣೆಯಲ್ಲಿ ಗಾಯಗೊಂಡ ಜನರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಹಿಂದೂ ವಾಹಿನಿ ಮತ್ತು ಬಿಜೆಪಿ ಸದಸ್ಯರು ಮೇದಕ್ ಪೊಲೀಸ್ ಠಾಣೆ ಬಳಿಯ ಆಸ್ಪತ್ರೆಯನ್ನು ಸುತ್ತುವರಿದು ದಾಂಧಲೆ ನಡೆಸಿದ್ದಾರೆ ಎಂದು ಕಾರವಾನ್ ಶಾಸಕ ಕೌಸರ್ ಮೊಹಿಯುದ್ದೀನ್ ಹೇಳಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ನವೀನ್, “ಘರ್ಷಣೆಯ ನಂತರ ಮಾನವೀಯತೆಯ ಆಧಾರದಲ್ಲಿ ಗಾಯಗೊಂಡ ಜನರಿಗೆ ನಾವು ಚಿಕಿತ್ಸೆ ನೀಡುತ್ತಿದ್ದೆವು. ಈ ವೇಳೆ ಗುಂಪೊಂದು ದಾಳಿ ನಡೆಸಿದ್ದು, ಇದರಿಂದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಗುಂಪು ವೈದ್ಯರ ಕಾರನ್ನೂ ಜಖಂಗೊಳಿಸಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಪಟ್ಟಣದಾದ್ಯಂತ ಹಬ್ಬಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಘರ್ಷಣೆಯ ವೇಳೆ ಬಿಜೆಪಿ ಮೇದಕ್ ಜಿಲ್ಲಾಧ್ಯಕ್ಷ ಗದ್ದಂ ಶ್ರೀನಿವಾಸ್ ಶಸ್ತ್ರಾಸ್ತ್ರದೊಂರಿಗೆ ಕಾಣಿಸಿಕೊಂಡಿದ್ದ. ಅಲ್ಲದೆ ಎರಡು ಗುಂಪುಗಳು ಘರ್ಷಣೆಯಲ್ಲಿ ಭಾಗಿಯಾಗಿವೆ. ಹಾಗಾಗಿ ಎರಡೂ ಕಡೆಯವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಬಿಜೆಪಿ ಸದಸ್ಯರು ಮತ್ತು ಮುಸ್ಲಿಂ ಸಮುದಾಯದ ಜನರನ್ನು ಬಂಧಿಸಿದ್ದೇವೆ. ಎರಡೂ ಗುಂಪಿನ ಇಬ್ಬರಂತೆ ನಾಲ್ವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಂತಿ ಕಾಪಾಡಲು ಕಾಮರೆಡ್ಡಿ, ಸಿದ್ದಿಪೇಟೆಯಿಂದ ಹೆಚ್ಚುವರಿ ಪಡೆಯನ್ನು ನಿಯೋಜಿಸಿದ್ದೇವೆ” ಎಂದು ಮೇದಕ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಮಹೇಂದರ್ ಮಾಹಿತಿ ನೀಡಿದ್ದಾರೆ.
ಶಾಸಕ ರಾಜಾ ಸಿಂಗ್ ವಶಕ್ಕೆ
ಮುನ್ನೆಚ್ಚರಿಕಾ ಕ್ರಮವಾಗಿ ಹೈದರಾಬಾದ್‌ನ ಗೋಶಮಹಲ್ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಶಂಶಾಬಾದ್‌ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಾ ಸಿಂಗ್ ಹಿಂಸಾಚಾರ ನಡೆದಿರುವ ಮೇದಕ್‌ಗೆ ಭೇಟಿ ನೀಡಲು ಮುಂದಾಗಿದ್ದರು.
Arrested by Telangana Police at the airport while on the way to Medak to meet @BJP4Telangana Karyakartas who were attacked by goons.@narendramodi @AmitShah https://t.co/oikZn0K4m8 pic.twitter.com/qY0csXAxpg
— Raja Singh (@TigerRajaSingh) June 16, 2024
ಇದನ್ನೂ ಓದಿ : ಮಧ್ಯಪ್ರದೇಶ: ಫ್ರಿಡ್ಜ್‌ನಲ್ಲಿ ಗೋಮಾಂಸ ಪತ್ತೆ ನಂತರ 11 ಮನೆಗಳನ್ನು ಕೆಡವಿದ ಪೊಲೀಸರು


