ಪ್ರಸ್ತುತ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿನಯ್ ಕುಮಾರ್ ಸಕ್ಸೇನಾ 2001ರಲ್ಲಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಮತ್ತು ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿ ದೆಹಲಿಯ ನ್ಯಾಯಾಲಯ ಆದೇಶಿಸಿದೆ.
ದೆಹಲಿಯ ಸಾಕೇತ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮ್ ಅವರು ಪಾಟ್ಕರ್ ಅವರಿಗೆ ಶಿಕ್ಷೆ ಪ್ರಕಟಿಸಿದ್ದು, ವಿ.ಕೆ ಸಕ್ಸೇನಾಗೆ 10 ಲಕ್ಷ ರೂಪಾಯಿ ಪಾವತಿಸುವಂತೆಯೂ ಸೂಚಿಸಿದ್ದಾರೆ.
A Delhi Court on Monday sentenced Narmada Bachao Andolan leader and activist Medha Patkar to 5 months simple imprisonment in the criminal defamation case lodged against her by Vinai Kumar Saxena in 2001.
Read more: https://t.co/QkCHmBwYpX pic.twitter.com/vQoUg3rG3v
— Live Law (@LiveLawIndia) July 1, 2024
ಆದರೆ, ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 389 (3) ರ ಅಡಿಯಲ್ಲಿ ಮೇಧಾ ಪಾಟ್ಕರ್ ಅವರ ಶಿಕ್ಷೆಯನ್ನು ಆಗಸ್ಟ್ 1 ರವರೆಗೆ ತಡೆ ಹಿಡಿಯಲಾಗಿದೆ.
ಷರತ್ತಿನ ಮೇಲೆ ತನ್ನನ್ನು ಬಿಡುಗಡೆ ಮಾಡಬೇಕೆಂಬ ಪಾಟ್ಕರ್ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶರು, “ವಾಸ್ತವಾಂಶಗಳು, ವಯಸ್ಸು ಮತ್ತು ಅನಾರೋಗ್ಯವನ್ನು ಪರಿಗಣಿಸಿ, ನಾನು ಹೆಚ್ಚಿನ ಶಿಕ್ಷೆ ನೀಡಲು ಭಯಸುವುದಿಲ್ಲ” ಎಂದಿದ್ದಾರೆ.
ನ್ಯಾಯಾಲಯದ ಆದೇಶದ ಕುರಿತು ಪ್ರತಿಕ್ರಿಯಿಸಿದ ಪಾಟ್ಕರ್, “ಸತ್ಯವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ನಾವು ಯಾರನ್ನೂ ದೂಷಿಸಲು ಪ್ರಯತ್ನಿಸಿಲ್ಲ. ನಾವು ನಮ್ಮ ಕೆಲಸವನ್ನು ಮಾತ್ರ ಮಾಡುತ್ತೇವೆ. ನಾವು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುತ್ತೇವೆ” ಎಂದು ಹೇಳಿದ್ದಾರೆ.
ಕಳೆದ ಮೇ 24ರಂದು ಸಾಕೇತ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಅವರು ಭಾರತೀಯ ದಂಡ ಸಂಹಿತೆ 1860ರ ಸೆಕ್ಷನ್ 500ರ ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟದ ಅಪರಾಧಕ್ಕಾಗಿ ಪಾಟ್ಕರ್ ಅವರನ್ನು ದೋಷಿ ಘೋಷಿಸಿದ್ದರು.
2001ರಲ್ಲಿ ಸಕ್ಸೇನಾ ಪಾಟ್ಕರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆಗ ಅವರು ಅಹಮದಾಬಾದ್ ಮೂಲದ ಎನ್‌ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್‌ನ ಮುಖ್ಯಸ್ಥರಾಗಿದ್ದರು.
ನವೆಂಬರ್ 25, 2000ದಲ್ಲಿ “ದೇಶಭಕ್ತನ ನಿಜವಾದ ಮುಖ”ಎಂಬ ಶೀರ್ಷಿಕೆಯಡಿಯಲ್ಲಿ ಪಾಟ್ಕರ್ ಅವರು ನೀಡಿದ್ದ ಪತ್ರಿಕಾ ಪ್ರಕಟನೆಯ ವಿರುದ್ಧ ಮಾನಹಾನಿ ಆರೋಪ ಮಾಡಿ ಸಕ್ಸೇನಾ ಪ್ರಕರಣ ದಾಖಲಿಸಿದ್ದರು.
“ಹವಾಲಾ ವಹಿವಾಟಿನಲ್ಲಿ ಮುಳುಗಿರುವ ವಿಕೆ ಸಕ್ಸೇನಾ, ಸ್ವತಃ ಮಾಲೆಗಾಂವ್‌ಗೆ ಬಂದು ಎನ್‌ಬಿಎಯನ್ನು ಹೊಗಳಿ ರೂ. 40,000ರ ಚೆಕ್ ಅನ್ನು ನೀಡಿದ್ದಾರೆ. ಲೋಕ ಸಮಿತಿಯು ತ್ವರಿತವಾಗಿ ರಸೀದಿ ಮತ್ತು ಪತ್ರವನ್ನು ಕಳುಹಿಸಿದೆ. ಅದು ಪ್ರಾಮಾಣಿಕತೆ ಮತ್ತು ಉತ್ತಮ ದಾಖಲೆ ಇಟ್ಟುಕೊಳ್ಳುವುದನ್ನು ತೋರಿಸುತ್ತದೆ. ಆದರೆ, ಚೆಕ್ ನಗದೀಕರಿಸಿಲ್ಲ, ಬೌನ್ಸ್ ಆಗಿದೆ. ವಿಚಾರಣೆಯಲ್ಲಿ, ಖಾತೆಯು ಅಸ್ತಿತ್ವದಲ್ಲಿಲ್ಲ ಎಂದು ಬ್ಯಾಂಕ್ ವರದಿ ಮಾಡಿದೆ” ಎಂದು ಪಾಟ್ಕರ್ ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದರು.
ಪಾಟ್ಕರ್ ಅವರ ಪ್ರಕಟಣೆ ದುರುದ್ದೇಶಪೂರಿತವಾಗಿದ್ದು, ಸಕ್ಸೇನಾ ಅವರ ಒಳ್ಳೆಯ ಹೆಸರನ್ನು ಹಾಳುಮಾಡುವ ಗುರಿಯನ್ನು ಹೊಂದಿತ್ತು. ಇದರಿಂದ ಅವರ ಸ್ಥಾನಮಾನ ಮತ್ತು ಕ್ರೆಡಿಟ್‌ಗೆ ಗಣನೀಯ ಹಾನಿಯುಂಟಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದರು.
“ಆರೋಪಿಯ ಹೇಳಿಕೆಗಳು ದೂರುದಾರರನ್ನು ಹೇಡಿ, ದೇಶಪ್ರೇಮಿ ಅಲ್ಲ ಮತ್ತು ಹವಾಲಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದೆ. ಇದು ಮಾನಹಾನಿಕರ ಮಾತ್ರವಲ್ಲದೆ, ದೂರದಾರರ ಬಗ್ಗೆ ನಕಾರಾತ್ಮಕ ಭಾವನೆ ಹುಟ್ಟಿಸುತ್ತದೆ”ಎಂದಿದ್ದರು.
ಇದನ್ನೂ ಓದಿ : ಮಾನನಷ್ಟ ಮೊಕದ್ದಮೆ: ₹50 ಲಕ್ಷ ಪಾವತಿಸುವಂತೆ ಟಿಎಂಸಿ ಸಂಸದನಿಗೆ ದೆಹಲಿ ಹೈಕೋರ್ಟ್ ಆದೇಶ


