ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಮಾಧ್ಯಮಗಳಿಗೆ ಜಾಹೀರಾತು ನೀಡುವುದನ್ನು ಎರಡು ವರ್ಷಗಳ ಕಾಲ ತಡೆಹಿಡಿಯಬೇಕೆಂಬ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಶಿಫಾರಸ್ನನ್ನು ಅಸೋಸಿಯೇಷನ್ ಆಫ್ ರೇಡಿಯೋ ಆಪರೇಟರ್ಸ್ ಫಾರ್ ಇಂಡಿಯಾ (AROI) ವಿರೋಧಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊರೊನಾ ಕಾಲದಲ್ಲಿ ಸರ್ಕಾರ ಮಾಡಬೇಕಾದ 5 ಅಂಶಗಳ ಪಟ್ಟಿಯೊಂದಿಗೆ ಪತ್ರ ಬರೆದಿದ್ದರು. ಅವುಗಳಲ್ಲಿ ಒಂದು ಜಾಹೀರಾತುಗಳನ್ನು ಕಡಿತಗೊಳಿಸುವ ಮೂಲಕ ಹಣವನ್ನು ಉಳಿಸುವುದಾಗಿತ್ತು.
ದೇಶದ ಖಾಸಗಿ ಎಫ್‌ಎಂ ಚಾನೆಲ್‌ಗಳ ಸಂಸ್ಥೆಯಾದ AROI ಸೊನಿಯಾ ಗಾಂಧಿಯವರ ಈ ಅಂಶವನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. “ಕಳೆದ ವರ್ಷ ರೇಡಿಯೊಗೆ, ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿನ ರೇಡಿಯೊ ಕೇಂದ್ರಗಳಿಗೆ, ಸರ್ಕಾರದ ಜಾಹೀರಾತಿನಲ್ಲಿ ಭಾರಿ ಕುಸಿತ ಕಂಡುಬಂದಿದೆ” ಎಂದು ಅಸೋಸಿಯೇಷನ್ ಹೇಳಿದೆ.
ರೇಡಿಯೊ ವಲಯವು ಈಗಾಗಲೇ ಆಳವಾದ ಆರ್ಥಿಕ ಬಿಕ್ಕಟ್ಟಿನಲ್ಲಿದೆ, ಕಳೆದ ವರ್ಷದಲ್ಲಿ ರೇಡಿಯೊ ಉಧ್ಯಮದ ಜಾಹೀರಾತು ಆದಾಯವು 20% ರಷ್ಟು ಕುಸಿಯುವ ಮೂಲಕ ಕಠಿಣ ಹಂತದಲ್ಲಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಜಾಹೀರಾತು ಆದಾಯವು 80% ಕುಸಿದಿದೆ ಎನ್ನಲಾಗಿದೆ.
“ಭಾರತದಾದ್ಯಂತ 380 ಖಾಸಗಿ ಎಫ್‌ಎಂ ಕೇಂದ್ರಗಳ ಮೂಲಕ ಕೋವಿಡ್ -19 ವಿರುದ್ಧದ ಸಮರಕ್ಕೆ ಪೂರ್ಣ ಹೃದಯದಿಂದ ಬೆಂಬಲಿಸುತ್ತಿದೆ ಹಾಗೂ ರೇಡಿಯೊದಲ್ಲಿ ಜಾಹೀರಾತನ್ನು ಸಾಮಾನ್ಯ ಮಟ್ಟಕ್ಕೆ ಮರುಸ್ಥಾಪಿಸುವಂತೆ ಸರ್ಕಾರವನ್ನು ಕೋರಿದೆ” ಎಂದು AROI ಹೇಳಿಕೆಯಲ್ಲಿ ತಿಳಿಸಿದೆ.
“ಶ್ರೀಮತಿ ಸೋನಿಯಾ ಗಾಂಧಿಯವರು, ಅವರ ಸಲಹೆಯನ್ನು ದಯವಿಟ್ಟು ಪರಿಶೀಲಿಸಲು ಹಾಗೂ ಹಿಂತೆಗೆದುಕೊಳ್ಳಲು ನಾವು ವಿನಂತಿಸುತ್ತೇವೆ ಮತ್ತು ಆ ಮೂಲಕ ಪ್ರಜಾಪ್ರಭುತ್ವದ ನಿರ್ಣಾಯಕ ಸ್ತಂಭಗಳಲ್ಲಿ ಒಂದಾದ ಮಾಧ್ಯಮಕ್ಕೆ ತನ್ನ ಬೆಂಬಲವನ್ನು ಕೋರುತ್ತೇವೆ” ಎಂದು ಸಂಘ ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷರ ಸಲಹೆಯನ್ನು ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ (NBA) ಆಕ್ಷೇಪ ವ್ಯಕ್ತಪಡಿಸಿಸಿದೆ, ಅವರ ಸಲಹೆಯನ್ನು “ನಿರಾಶಾದಾಯಕ” ಎಂದು ಬಣ್ಣಿಸಿದೆ.
“ಮಾಧ್ಯಮ ಸಿಬ್ಬಂದಿಗಳು, ತಮ್ಮ ಜೀವ ಭಯವಿಲ್ಲದೆ, ಸಾಂಕ್ರಾಮಿಕ ರೋಗದ ಬಗ್ಗೆ ಸುದ್ದಿ ಪ್ರಸಾರ ಮಾಡುವ ಮೂಲಕ ತಮ್ಮ ರಾಷ್ಟ್ರೀಯ ಕರ್ತವ್ಯವನ್ನು ನಿರ್ವಹಿಸುತ್ತಿರುವ ಸಮಯದಲ್ಲಿ, ಕಾಂಗ್ರೆಸ್ ಅಧ್ಯಕ್ಷೆಯ ಈ ರೀತಿಯ ಹೇಳಿಕೆ ಹೆಚ್ಚು ನಿರಾಶಾದಾಯಕವಾಗಿದೆ” ಎಂದು NBA ಅಧ್ಯಕ್ಷ ರಜತ್ ಶರ್ಮಾ ಹೇಳಿದ್ದಾರೆ.
ಆರ್ಥಿಕ ಹಿಂಜರಿತದಿಂದಾಗಿ ಜಾಹೀರಾತು ಆದಾಯದಲ್ಲಿ ಕುಸಿತ ಕಂಡುಬಂದಿದೆ ಹಾಗೂ 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಮಾಧ್ಯಮವೂ ಆರ್ಥಿಕ ಹೊಡೆತಗಳನ್ನು ಅನುಭವಿಸುತ್ತಿದೆ ಎಂದು ಶರ್ಮಾ ಹೇಳಿದ್ದಾರೆ.


