ವಿಚಾರಣೆ ಬಾಕಿ ಇರುವಾಗ ಆರೋಪಿಯನ್ನು ಅಪರಾಧಿ ಅಥವಾ ನಿರಪರಾಧಿ ಎಂದು ಘೋಷಿಸುವ ಮಾಧ್ಯಮಗಳ ಹೇಳಿಕೆಗಳು ಸಂವಿಧಾನದಲ್ಲಿ ಸಂರಕ್ಷಿತ ವಾಕ್ ಸ್ವಾತಂತ್ರ್ಯದಡಿ ಬರುವುದಿಲ್ಲ ಎಂದು ಕೇರಳ ಹೈಕೋರ್ಟ್ ಗುರುವಾರ (ನ.5) ಹೇಳಿದೆ.
ಆರೋಪಿಗಳು ತಮ್ಮ ಘನತೆಯ ಹಕ್ಕನ್ನು ಮಾಧ್ಯಮಗಳು ಉಲ್ಲಂಘಿಸಿವೆ ಎಂದು ಭಾವಿಸಿದರೆ, ಅವರು ಸಾಂವಿಧಾನಿಕ ನ್ಯಾಯಾಲಯದ ಮುಂದೆ ಪರಿಹಾರ ಪಡೆಯಬಹುದು ಎಂದು ಐವರು ನ್ಯಾಯಾಧೀಶರ ಪೀಠ ತಿಳಿಸಿದೆ.
ಮೇ 24, 2018 ರಂದು, ಹೈಕೋರ್ಟ್‌ನ ಪೂರ್ಣ ಪೀಠವು ಐವರು ನ್ಯಾಯಾಧೀಶರ ಪೀಠದ ಮುಂದೆ ಕಾನೂನು ಪ್ರಶ್ನೆಗಳ ಗುಚ್ಚವೊಂದನ್ನು ಉಲ್ಲೇಖಿಸಿತ್ತು. ಈ ಪ್ರಶ್ನೆಗಳು ಸಾಂವಿಧಾನಿಕ ತತ್ವಗಳ ಪ್ರಕಾರ ಮಾಧ್ಯಮವನ್ನು ನಿಯಂತ್ರಿಸಲು ಅಸ್ತಿತ್ವದಲ್ಲಿರುವ ನಿಯಮಗಳು ಸಾಕೇ? ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕು ನಾಗರಿಕರಿಗೆ ಇರುವ ರೀತಿಯಲ್ಲಿ ಮಾಧ್ಯಮಗಳಿಗೆ ಲಭ್ಯವಿದೆಯೇ? ಎಂಬುವುದನ್ನು ಒಳಗೊಂಡಿತ್ತು.
ಸಮರ್ಥ ಶಾಸಕಾಂಗ ಸಂಸ್ಥೆ ಮಾಡಿದ ಕಾನೂನನ್ನು ಹೊರತುಪಡಿಸಿ ಮಾಧ್ಯಮದ ವಾಕ್ ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿಯೂ ಸಂವಿಧಾನದ 19 (2) ಪರಿಚ್ಛೇದದಲ್ಲಿ ಉಲ್ಲೇಖಿಸಲಾದ ಆಧಾರದ ಮೇಲೆ ಮಾತ್ರ ಹಕ್ಕನ್ನು ನಿರ್ಬಂಧಿಸಬಹುದು ಎಂದು ಐವರು ನ್ಯಾಯಾಧೀಶರ ಪೀಠ ಹೇಳಿದೆ.
ವಿಧಿ 19(2) ಪ್ರಕಾರ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವ, ವಿದೇಶಗಳೊಂದಿಗೆ ಸೌಹಾರ್ದ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿ ಕಾರಣಗಳಿಗೆ ಸರ್ಕಾರವು ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದು. ಆದರೂ, ವಿಚಾರಣಾಧೀನ ಆರೋಪಿಯನ್ನು ಅಪರಾಧಿ ಅಥವಾ ನಿರಪರಾಧಿ ಎಂದು ಘೋಷಿಸುವ ಮಾಧ್ಯಮಗಳ ಹೇಳಿಕೆಗಳೂ ಕೂಡ ಸಂವಿಧಾನ ವಿಧಿ 19(1) (ಎ) ಅಡಿ ಖಾತರಿಪಡಿಸಿರುವ ರಕ್ಷಣೆಯನ್ನು ಪಡೆಯುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಅಪರಾಧಿ ಅಥವಾ ನಿರಪರಾಧಿ ಎಂಬ ಆದೇಶವನ್ನು ನ್ಯಾಯಾಂಗ ಪ್ರಾಧಿಕಾರ ಮಾತ್ರ ನೀಡಬೇಕು ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ನೇತೃತ್ವದ ಪೀಠವು, ಶಂಕಿತರ ವಿರುದ್ಧ ಆರೋಪ ಹೊರಿಸುವ ಮುನ್ನವೇ ಮಾಧ್ಯಮಗಳ ವಿಚಾರಣೆ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತದೆ ಎಂದು ಹೇಳಿದೆ. ಇತ್ತೀಚಿನ ದಿನಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಹಾಲಿ ನಡೆಯುವ ಕ್ರಿಮಿನಲ್ ತನಿಖೆಗಳು ಮತ್ತುಬಾಕಿ ಉಳಿದಿರುವ ಸಾರ್ವಜನಿಕ ಹಿತಾಸಕ್ತಿ ಕ್ರಿಮಿನಲ್ ವಿಚಾರಣೆಗಳ ಕುರಿತು ಪ್ರೈಮ್ ಟೈಮ್‌ನಲ್ಲಿ ತೀವ್ರವಾದ ಚರ್ಚೆಗಳನ್ನು ಪ್ರಾರಂಭಿಸುವುದನ್ನು ನಾವು ನೋಡುತ್ತಿದ್ದೇವೆ. ಆರೋಪಿ ಅಪರಾಧಿ ಎಂದು ಸಾಬೀತಾಗುವವರೆಗೆ ಆತ ನಿರಪರಾಧಿ ಎಂಬ ಕಾನೂನಿನ ಪರಿಗಣನೆಯನ್ನು ಕಡೆಗಣಿಸುವುದು ಮಾಧ್ಯಮಗಳಿಗೆ ಅಭ್ಯಾಸವಾಗಿಬಿಟ್ಟಿದೆ ಎಂದಿದೆ.
ಇದನ್ನೂ ಓದಿ : ‘ಕೆಫಿಯಹ್’ ಧರಿಸಿ ಫುಟ್ಬಾಲ್ ವೀಕ್ಷಿಸಲು ತೆರಳಿದ್ದ ನಾಲ್ವರನ್ನು ವಶಕ್ಕೆ ಪಡೆದ ಕೇರಳ ಪೊಲೀಸರು!


