ವಿಧಾನಸಭೆ ಕಲಾಪ ವರದಿ ಮಾಡಲು ಬಂದ ಮಾಧ್ಯಮಗಳಿಗೆ ಸುವರ್ಣಸೌಧ ಪ್ರವೇಶಕ್ಕೆ ನಿರ್ಬಂಧ ಹೇರಿದ ಘಟನೆ ಬುಧವಾರ ಬೆಳಗಾವಿಯಲ್ಲಿ ನಡೆದಿದೆ. ಇದನ್ನು ವಿರೋಧಿಸಿ ಪತ್ರಕರ್ತರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಮಾಧ್ಯಮಗಳಿಗೆ ಸುವರ್ಣಸೌಧಕ್ಕೆ ಪ್ರವೇಶ ನಿರ್ಬಂಧ ಮಾಡಿರುವುದನ್ನು ವಿರೋಧಿಸಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಇದು ಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನ’ ಎಂದು ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಬಗ್ಗೆ ವರದಿ ಮಾಡಲು ತೆರಳಿದ್ದ ಮಾಧ್ಯಮಗಳ ಕ್ಯಾಮೆರಾಗಳನ್ನು ಸುವರ್ಣ ವಿಧಾನಸೌಧದ ಒಳಗಡೆ ತರದಂತೆ ಪೊಲೀಸರು ತಡೆದ್ದಾರೆ. ಆದರೆ ಇದನ್ನು ಪ್ರತಿಭಟಿಸಿ ಮಾಧ್ಯಮ ಪ್ರತಿನಿಧಿಗಳು ಸುವರ್ಣಸೌಧದ ಮುಖ್ಯದ್ವಾರದ ಬಳಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಸದನದಲ್ಲಿ ಮತಾಂತರ ನಿಷೇಧ ಮಸೂದೆಯ ಗದ್ದಲದ ವರದಿ ಮಾಡದಂತೆ ಮಾಧ್ಯಮಗಳನ್ನು ತಡೆಯುವ ಉದ್ದೇಶ ಇದಾಗಿದೆ ಎಂದು ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳು ದೂರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಇದನ್ನೂ ಓದಿ:ಬೆಳಗಾವಿ ಅಧಿವೇಶನ; ಚರ್ಚೆಯಾಗಬೇಕಾದ್ದೇನು? ಆಗುತ್ತಿರುವುದೇನು?
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, “ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಸರಕಾರ ನಾಡಿನ ಸಮಸ್ಯೆಗಳನ್ನು ʼವಿಷಯಾಂತರʼ ಮಾಡಲು ʼಮತಾಂತರʼ ಗುಮ್ಮವನ್ನು ತಂದು ನಿಲ್ಲಿಸಿದೆ. ನಾಡಿನ ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಜಕೀಯದ ಲಾಭದ ದುರಾಸೆಗೆ ರಾಜ್ಯದ ಸಾಮರಸ್ಯಕ್ಕೆ ಬೆಂಕಿ ಇಡುವ ಮತಾಂತರ ನಿಷೇಧ ಮಸೂದೆಯ ನಿಜಬಣ್ಣ ಎಲ್ಲಿ ಬಯಲಾಗುತ್ತದೋ ಎಂದು ಅಂಜಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ” ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
“ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಸಂವಿಧಾನದ ಒಂದು ಅಂಗ. ಈಗ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ‘ಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನ’ ಮಾಡಲಾಗುತ್ತಿದೆ. ಇದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ದರ್ಪದ ಹೆಜ್ಜೆಯಷ್ಟೇ. ಅವರ ದುರುದ್ದೇಶ ಸ್ಪಷ್ಟ” ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಈ ಮಧ್ಯೆ ಮಾಧ್ಯಮ ಪ್ರತಿನಿಧಿಗಳ ಪ್ರತಿಭಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ರೀತಿಯ ಯಾವುದೆ ನಿರ್ದೇಶವನ್ನು ತಾನು ನೀಡಿಲ್ಲ. ಯಾಕೆ ಈ ಗೊಂದಲ ಸೃಷ್ಟಿಯಾಗಿದೆಯೊ ಗೊತ್ತಿಲ್ಲ, ದಯಮಾಡಿ ಮಾಧ್ಯಮ ಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಿ ಎಂದು ಹೇಳಿದ್ದಾರೆ. ಇದರ ನಂತರ ಪತ್ರಕರ್ತರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಮಾಧ್ಯಮಗಳಿಗೆ ಸುವರ್ಣಸೌಧ ಪ್ರವೇಶಿಸದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ಬಂಧ ವಿಧಿಸಿದ್ದರು ಎಂದು ಪ್ರಜಾವಾಣಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.


