ಧರ್ಮಸ್ಥಳ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ಕುಟುಂಬದ ವಿರುದ್ಧ ಅವಹೇಳನಕಾರಿ ವಿಷಯವನ್ನು ಪ್ರಕಟಿಸದಂತೆ ಯೂಟ್ಯೂಬ್ ಚಾನೆಲ್‌ಗೆ ವಿಧಿಸಿದ್ದ ನಿರ್ಬಂಧವನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ನಾಳೆ (ಆ.8) ಅರ್ಜಿ ವಿಚಾರಣೆ ನಡೆಸಲಿದೆ ಎಂದು livelaw.in ವರದಿ ಮಾಡಿದೆ.
ಧರ್ಮಸ್ಥಳ ದೇವಾಲಯದ ಅಧೀನ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಹರ್ಷೇಂದ್ರ ಕುಮಾರ್ ಡಿ ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿಶೇಷ ರಜಾ ಅವಧಿಯ ಅರ್ಜಿ ಸಲ್ಲಿಸಿದ್ದಾರೆ.
ಗುರುವಾರ (ಆ.7) ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ, ನ್ಯಾಯಮೂರ್ತಿಗಳಾದ ಎಸ್‌ಸಿ ಶರ್ಮಾ ಮತ್ತು ವಿನೋದ್ ಚಂದ್ರನ್ ಅವರ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದ ಹರ್ಷೇಂದ್ರ ಕುಮಾರ್ ಪರ ವಕೀಲ, “ಹಲವಾರು ಯೂಟ್ಯೂಬ್ ಚಾನೆಲ್‌ಗಳು ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ಕುಟುಂಬದ ವಿರುದ್ದ ಅವಹೇಳನಕಾರಿ ವಿಷಯ ಪ್ರಸಾರ ಮಾಡುತ್ತಿವೆ” ಎಂದು ಹೇಳಿದರು.
“8 ಸಾವಿರ ಯೂಟ್ಯೂಬ್ ಚಾನೆಲ್‌ಗಳು ದೇವಸ್ಥಾನದ ಆಡಳಿತದ ವಿರುದ್ದ ಅವಹೇಳನಕಾರಿ ವಿಷಯಗಳನ್ನು ಪ್ರಸಾರ ಮಾಡುತ್ತಿವೆ. ಆದ್ದರಿಂದ, ಅರ್ಜಿಯನ್ನು ನಾಳೆ ವಿಚಾರಣೆಗೆ ಪರಿಗಣಿಸಿ” ಎಂದು ವಕೀಲ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, “ಈ ವಿಷಯವನ್ನು ಈಗಾಗಲೇ ನಾಳೆಗೆ ಪಟ್ಟಿ ಮಾಡಲಾಗಿದೆ” ಎಂದರು.
ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ದೂರಿನ ತನಿಖೆಯನ್ನು ಎಸ್‌ಐಟಿ ತಂಡ ನಡೆಸುತ್ತಿದೆ. ಈ ವಿಷಯವನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ಕುಟುಂಬದ ವಿರುದ್ದ ಅವಹೇಳನಕಾರಿ ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಹರ್ಷೇಂದ್ರ ಕುಮಾರ್ ಡಿ ಬೆಂಗಳೂರಿನ ನ್ಯಾಯಾಲಯ ಮೊರೆ ಹೋಗಿದ್ದರು.
ನ್ಯಾಯಾಲಯ ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಮಾಧ್ಯಮಗಳು ಧರ್ಮಸ್ಥಳ ದೇವಾಲಯ ಮತ್ತು ಅದರ ಆಡಳಿತ ನೋಡಿಕೊಳ್ಳುತ್ತಿರುವ ಕುಟುಂಬದ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ನಿರ್ಬಂಧ (ಗ್ಯಾಗ್ ಆರ್ಡರ್) ವಿಧಿಸಿತ್ತು. ಈ ನಿರ್ಬಂಧವನ್ನು ಆಗಸ್ಟ್ 1ರಂದು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಬೆಂಗಳೂರು ನ್ಯಾಯಾಲಯದ ಆದೇಶದ ರದ್ದುಗೊಳಿಸುವ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು,”ವಿಚಾರಣಾ ನ್ಯಾಯಾಲಯವು ಯಾವುದೇ ಆಪಾದಿತ ಮಾನನಷ್ಟ ವಿಷಯವನ್ನು ಆಧರಿಸಿ ಆದೇಶ ನೀಡಿಲ್ಲ. ‘ಕಡ್ಡಾಯ ವ್ಯಾಪಕ ತಡೆಯಾಜ್ಞೆ ನೀಡಿದೆ’ ಎಂಬುವುದನ್ನು ಗಮನಿಸಿತ್ತು. ಈ ಆದೇಶವು ಎಷ್ಟು ವಿಶಾಲವಾಗಿದೆಯೆಂದರೆ, ಪ್ರತಿವಾದಿ ಹರ್ಷೇಂದ್ರ ಕುಮಾರ್ ಡಿ, ಅವರ ಕುಟುಂಬ ಅಥವಾ ಧರ್ಮಸ್ಥಳ ಸ್ಥಳದ ವಿರುದ್ಧ ಯಾವುದೇ ವಿಷಯಗಳನ್ನು ಮಾತನಾಡದಂತೆ ಬೆದರಿಕೆಯೊಡ್ಡುತ್ತದೆ” ಎಂದಿತ್ತು.
ನಿರ್ದಿಷ್ಟವಾಗಿ ‘ಕುಡ್ಲ ರಾಂಪೇಜ್’ ಯೂಟ್ಯೂಬ್ ಚಾನೆಲ್ ಮೇಲಿನ ನಿರ್ಬಂಧ ತೆರವು ಪ್ರಶ್ನಿಸಿ ಹರ್ಷೇಂದ್ರ ಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಆದರೆ, ಹರ್ಷೇಂದ್ರ ಕುಮಾರ್ ಪರ ವಕೀಲರು 8 ಸಾವಿರ ಯೂಟ್ಯೂಬ್ ಚಾನೆಲ್‌ಗಳು ಅವಹೇಳನಕಾರಿ ವಿಷಯ ಪ್ರಸಾರ ಮಾಡುತ್ತಿವೆ ಎಂದು ಸಿಜೆಐ ಪೀಠದ ಮುಂದೆ ಹೇಳಿದ್ದಾರೆ. ಹಾಗಾಗಿ, ಕುಡ್ಲ ರಾಂಪೇಜ್ ವಿರುದ್ದ ಮಾತ್ರ ಹರ್ಷೇಂದ್ರ ಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರಾ? ಎಲ್ಲಾ ಮಾಧ್ಯಮಗಳ ವಿರುದ್ದ ಅರ್ಜಿ ಸಲ್ಲಿಸಿದ್ದಾರಾ? ಎಂಬುವುದು ನಮಗೆ ಸ್ಪಷ್ಟವಾಗಿಲ್ಲ.
Courtesy : livelaw.in
ಸುಳ್ಳು ಸುದ್ದಿ ಪ್ರಸಾರ ಆರೋಪ: ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್ ವಿರುದ್ಧ ಎಫ್‌ಐಆರ್


