ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯಲ್ಲಿ ಒಡಿಶಾ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಶನಿವಾರ (ಅ.11) ವರದಿಯಾಗಿದೆ.
ಶುಕ್ರವಾರ (ಅ. 10) ರಾತ್ರಿ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜು ಆವರಣದ ಹೊರಗೆ ಎರಡನೇ ವರ್ಷದ ವಿದ್ಯಾರ್ಥಿನಿ ತನ್ನ ಸ್ನೇಹಿತರೊಬ್ಬರ ಜೊತೆ ಊಟಕ್ಕೆ ಹೋಗಿದ್ದಾಗ ದೌರ್ಜನ್ಯ ನಡೆದಿದೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.
ಒಡಿಶಾದ ಜಲೇಶ್ವರ ಮೂಲದ ಸಂತ್ರಸ್ಥೆ ವಿದ್ಯಾರ್ಥಿನಿ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
“ವಿದ್ಯಾರ್ಥಿನಿಯ ಕುಟುಂಬ ಸದಸ್ಯರು ನೀಡಿದ ದೂರಿನ ಆಧರಿಸಿ ನಾವು ತನಿಖೆ ಪ್ರಾರಂಭಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯ ಪೋಷಕರು, “ನಮ್ಮ ಮಗಳ ಸ್ನೇಹಿತರಿಂದ ಕರೆ ಬಂದ ನಂತರ ಇಂದು ಬೆಳಿಗ್ಗೆ ದುರ್ಗಾಪುರ ತಲುಪಿದ್ದೇವೆ” ಎಂದು ಹೇಳಿದ್ದಾರೆ.
ಶುಕ್ರವಾರ (ಅಕ್ಟೋಬರ್ 10) ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮಗಳು ಕಾಲೇಜು ಕ್ಯಾಂಪಸ್‌ನಿಂದ ಸ್ನೇಹಿತೆಯೊಬ್ಬಳೊಂದಿಗೆ ಊಟಕ್ಕೆ ಹೋಗಿದ್ದಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ತಾಯಿ ಹೇಳಿಕೊಂಡಿದ್ದಾರೆ.
“ನಾವು ಇಂದು ಬೆಳಿಗ್ಗೆ ಇಲ್ಲಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದೇವೆ. ಕಾಲೇಜು ಶೈಕ್ಷಣಿಕವಾಗಿ ಉತ್ತಮವಾಗಿದೆ ಎಂದು ನಾವು ಕೇಳ್ಪಟ್ಟಿದ್ದೆವು. ಹಾಗಾಗಿ, ನಾವು ನಮ್ಮ ಮಗಳನ್ನು ಇಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಕಳುಹಿಸಿದ್ದೇವೆ” ಎಂದು ವಿದ್ಯಾರ್ಥಿನಿಯ ತಂದೆ ತಿಳಿಸಿದ್ದಾರೆ.
ಶುಕ್ರವಾರ (ಅಕ್ಟೋಬರ್ 10) ರಾತ್ರಿ 8-8.30 ರ ನಡುವೆ ವಿದ್ಯಾರ್ಥಿನಿ ತನ್ನ ಸ್ನೇಹಿತೆಯೊಂದಿಗೆ ಕ್ಯಾಂಪಸ್ ಹೊರಗೆ ಹೋಗಿದ್ದರು. ಈ ವೇಳೆ ಮೂವರು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಸ್ನೇಹಿತೆ ಆಕೆಯನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಆ ವ್ಯಕ್ತಿಗಳು ಆಕೆಯ ಫೋನ್ ಕಸಿದುಕೊಂಡು ಕ್ಯಾಂಪಸ್ ಹೊರಗಿನ ಕಾಡಿಗೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಆರೋಪಿಗಳು ವಿದ್ಯಾರ್ಥಿನಿ ಮೊಬೈಲ್ ಫೋನ್ ಹಿಂತಿರುಗಿಸಲೂ ಹಣಕ್ಕೆ ಬೇಡಿಕೆ ಇಟ್ಟಿದ್ದರು. ವಿದ್ಯಾರ್ಥಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ತಂಡವು ಸಂತ್ರಸ್ತೆ ಮತ್ತು ಆಕೆಯ ಪೋಷಕರನ್ನು ಭೇಟಿ ಮಾಡಲು ದುರ್ಗಾಪುರಕ್ಕೆ ತೆರಳುತ್ತಿದೆ. “ಬಂಗಾಳದಲ್ಲಿ ಮಹಿಳೆಯರ ಮೇಲಿನ ಅಪರಾಧ ಹೆಚ್ಚುತ್ತಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದು ತುಂಬಾ ದುರದೃಷ್ಟಕರ. ಇಂತಹ ಅಪರಾಧಗಳ ಹೆಚ್ಚಳವನ್ನು ತಡೆಯಲು ಒಟ್ಟಾಗಿ ಕೆಲಸ ಮಾಡಲು ಮುಖ್ಯಮಂತ್ರಿಗಳು ಮುಂದೆ ಬರಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಎನ್‌ಸಿಡಬ್ಲ್ಯು ಸದಸ್ಯೆ ಅರ್ಚನಾ ಮಜುಂದಾರ್ ಹೇಳಿದ್ದಾಗಿ ವರದಿಗಳು ವಿವರಿಸಿವೆ.
ಪಶ್ಚಿಮ ಬಂಗಾಳ ರಾಜ್ಯ ಆರೋಗ್ಯ ಇಲಾಖೆ ಶನಿವಾರ (ಅಕ್ಟೋಬರ್ 11) ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನಿಂದ ವರದಿ ಕೇಳಿದೆ ಎಂದು ವರದಿಯಾಗಿದೆ.
ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣ: ರೋಹ್ಟಕ್ ಎಸ್‌ಪಿ ನರೇಂದ್ರ ಬಿಜಾರ್ನಿಯಾ ವಜಾ


