ಆರ್‌ಎಸ್‌ಎಸ್ ಕುರಿತು ಪ್ರಶ್ನೆಗಳನ್ನು ಸಿದ್ಧಪಡಿಸಿದ ಮೀರತ್ ಕಾಲೇಜಿನ ಹಿರಿಯ ಪ್ರಾಧ್ಯಾಪಕರೊಬ್ಬರನ್ನು, ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ತನ್ನ ಎಲ್ಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಕೆಲಸಗಳಿಂದ ಜೀವಮಾನದವರೆಗೆ ನಿಷೇಧಿಸಿದೆ. ಸಂಘಪರಿವಾರದ ಒತ್ತಡದ ಮೇರೆಗೆ ಪ್ರಾಧ್ಯಾಪಕರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪ್ರತಿಭಟನೆ ನಡೆಸಿದ ನಂತರ ಸರ್ಕಾರಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊಫೆಸರ್ ಸೀಮಾ ಪನ್ವರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆ ನಡೆದ ಎರಡು ದಿನಗಳ ನಂತರ ಶುಕ್ರವಾರ ಎಬಿವಿಪಿ ಪ್ರತಿಭಟಿಸಿದೆ.
ಏಪ್ರಿಲ್ 2ರಂದು ನಡೆದ ಎರಡನೇ ಸೆಮಿಸ್ಟರ್ ರಾಜ್ಯಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ “ಧಾರ್ಮಿಕ ಮತ್ತು ಜಾತಿ ಆಧಾರಿತ ರಾಜಕೀಯದ ಬೆಳವಣಿಗೆಗೆ ಆರೆಸ್ಸೆಸ್ ಕೊಡುಗೆ” ಕುರಿತು ಪ್ರಶ್ನಿಸಲಾಗಿತ್ತು. ನಕ್ಸಲಿಯರು ಮತ್ತು ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್‌ನಂತಹ ಸಂಘಟನೆಗಳ ಜೊತೆಗೆ ಆರೆಸ್ಸೆಸ್ ಅನ್ನು ಅದೇ ಪ್ರಶ್ನೆಯಲ್ಲಿ ಉಲ್ಲೇಖಿಸಲಾಗಿತ್ತು. ಇದು ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ ಎಂದು ವರದಿಗಳು ಹೇಳಿವೆ.
ಪ್ರೊಫೆಸರ್ ಸೀಮಾ ಪನ್ವರ್ ಅವರನ್ನು ವಿಶ್ವವಿದ್ಯಾಲಯದ ಎಲ್ಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಕೆಲಸಗಳಿಂದ ಜೀವನಪರ್ಯಂತ ನಿಷೇಧಿಸಲಾಗಿದೆ ಎಂದು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಧೀರೇಂದ್ರ ಕುಮಾರ್ ವರ್ಮಾ ಹೇಳಿದ್ದಾರೆ. ವಿವಾದದ ಬಗ್ಗೆ, ಸೀಮಾ ಪನ್ವಾರ್ ಅವರು ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ. “ಯಾರನ್ನೂ ನೋಯಿಸುವ ಉದ್ದೇಶದಿಂದ ತಾನು ಇದನ್ನು ಮಾಡಿಲ್ಲ” ಎಂದು ಅವರು ಲಿಖಿತವಾಗಿ ಹೇಳಿದ್ದಾರೆ ಎಂದು ವರ್ಮಾ ತಿಳಿಸಿದ್ದಾರೆ.
ನಕ್ಸಲಿಯರು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್‌ನಂತಹ ಸಂಘಟನೆಗಳ ಜೊತೆಗೆ ಆರ್‌ಎಸ್‌ಎಸ್ ಹೆಸರನ್ನು ಸೇರಿಸಿದ್ದಕ್ಕಾಗಿ ಪ್ರೊಫೆಸರ್ ಸೀಮಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಬಿವಿಪಿ ಸದಸ್ಯರು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿ ರಿಜಿಸ್ಟ್ರಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಮುಸ್ಲಿಮರ ಮೇಲಿನ ದಾಳಿ ನಂತರ ಆರ್‌ಎಸ್‌ಎಸ್ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿದೆ: ರಾಹುಲ್ ಗಾಂಧಿ


